Kodagu: ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನವನ್ನೂ ಗಳಿಸೊಲ್ಲ: ಈರಣ್ಣ ಕಡಾಡಿ
ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಕನಿಷ್ಠ ವಿರೋಧ ಪಕ್ಷದಲ್ಲಿ ಕೂರುವಷ್ಟೂ ಸ್ಥಾನಗಳಲ್ಲಿ ಗೆಲ್ಲುವುದಿಲ್ಲ ಎಂದು ಬಿಜೆಪಿ ರೈತ ಘಟಕದ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ವರದಿ : ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಮಾ.29): ಡಬಲ್ ಎಂಜಿನ್ ಸರ್ಕಾರದ ಲಾಭಗಳನ್ನು ಯಾರು ತಿರಸ್ಕಾರ ಮಾಡುವುದಿಲ್ಲ. ಬಿಜೆಪಿ ಅಥವಾ ದೇಶ ಅಷ್ಟೇ ಅಲ್ಲ, ಇಡೀ ವಿಶ್ವವೇ ಪ್ರಧಾನಿ ಮೋದಿಜಿ ಅವರನ್ನು ಒಪ್ಪಿಕೊಳ್ಳುತ್ತಿದೆ. ಆದ್ದರಿಂದ ಮೋದಿಜಿ ಅವರ ಕೈಯನ್ನು ಬಲಪಡಿಸುವುದಕ್ಕಾಗಿ ರಾಜ್ಯದಲ್ಲಿ 150 ಸ್ಥಾನಗಳನ್ನು ಪಡೆದುಕೊಂಡು ಮತ್ತೊಮ್ಮೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಆದರೆ, ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನವನ್ನು ಗಳಿಸುವಷ್ಟು ಸ್ಥಾನ ಗಳಿಸುವುದಿಲ್ಲ ಎಂದು ಬಿಜೆಪಿ ರೈತ ಮೋರ್ಚಾದ ರಾಜ್ಯ ಘಟಕ ಅಧ್ಯಕ್ಷ ಈರಣ್ಣ ಕಡಾಡಿ ಹೇಳಿದರು.
ರಾಜ್ಯ ವಿಧಾನ ಸಭಾ ಚುನಾವಣೆಗೆ ದಿನಾಂಕ ಘೋಷಣೆ ಆಗಿದ್ದು, ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಮೂರ್ನಾಡಿನಲ್ಲಿ ಬಿಜೆಪಿ ರೈತ ಮೋರ್ಚಾ ಸಮಾವೇಶ ನಡೆಯಿತು. ಕೊಡವ ಸಮಾಜದಲ್ಲಿ ನಡೆದ ಸಮಾವೇಶದಲ್ಲಿ ಜಿಲ್ಲೆಯ ನೂರಾರು ರೈತರು ಭಾಗವಹಿಸಿದ್ದರು. ಈ ಸಂದರ್ಭ ಮಾತನಾಡಿದ ಸಂಸದ ಹಾಗೂ ರೈತ ಮೋರ್ಚಾದ ರಾಜ್ಯ ಘಟಕದ ಅಧ್ಯಕ್ಷ ಈರಣ್ಣ ಕಡಾಡಿ ಜಿಲ್ಲೆಯಲ್ಲಿ ಈಗಾಗಲೇ ಐದು ಬಾರಿ ಶಾಸಕರಾಗಿ ಆಯ್ಕೆ ಆಗಿರುವ ಅಪ್ಪಚ್ಚು ರಂಜನ್ ಅವರನ್ನು ಹಾಗೂ ನಾಲ್ಕು ಬಾರಿ ಗೆದ್ದಿರುವ ಕೆ.ಜಿ. ಬೋಪಯ್ಯ ಅವರನ್ನು ಮತ್ತೆ ಗೆಲ್ಲಿಸಿ ವಿಧಾನಸೌಧಕ್ಕೆ ಕಳಿಸುವಂತೆ ಜನರಲ್ಲಿ ಮನವಿ ಮಾಡಿದರು.
ಕಾಂಗ್ರೆಸ್ ಸೋತರೆ ಡಿ.ಕೆ.ಶಿವಕುಮಾರ್ ಬಿಜೆಪಿ ಮೇಲೆ ದೂರು ಕೊಡ್ತಾರೆ: ಸಿಟಿ ರವಿ
ಮಧ್ಯವರ್ತಿಗಳ ಪಾಲು ತಪ್ಪಿಸಿದ ಪ್ರಧಾನಿ ಮೋದಿ: ನಾಗರಿಕ ಸಮಾಜದ ಬೆಳವಣಿಗೆಗೆ ರೈತರೇ ಬುನಾದಿ ಆಗಿದ್ದಾರೆ. ಆದರೆ, ಈ ಹಿಂದೆ ರೈತರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದರು. ಅವರ ಆದಾಯದಲ್ಲಿ ತೀವ್ರ ಕೊರತೆ ಇತ್ತು. ಯಾವುದೇ ಸಬ್ಸಿಡಿಗಳು ಸಿಗುತ್ತಿರಲಿಲ್ಲ. ಅವರು ಬೆಳೆದ ಬೆಳೆಗಳಿಗೂ ಸರಿಯಾದ ಬೆಲೆ ಸಿಗುತ್ತಿರಲಿಲ್ಲ. ರೈತರಿಗೆ ಅಥವಾ ಜನರಿಗೆ ಸರ್ಕಾರ ಯಾವುದಾದರು ಯೋಜನೆ ಆರಂಭಿಸಿದರೆ ಅದರಲ್ಲಿ ಕಾಲು ಭಾಗದಷ್ಟು ತಲುಪುತ್ತಿರಲಿಲ್ಲ. ಎಲ್ಲವೂ ಮಧ್ಯವರ್ತಿಗಳ ಪಾಲಾಗುತ್ತಿತ್ತು. ಇದನ್ನು ಸ್ವತಃ ಕಾಂಗ್ರೆಸ್ ನಿಂದ ಪ್ರಧಾನಿಯಾಗಿದ್ದ ನೆಹರು ಅವರೇ ಹೇಳುತ್ತಿದ್ದರು. ಆದರೆ ಮೋದಿಜಿ ಅವರು ಪ್ರಧಾನಿಯಾದ ಮೇಲೆ ಒಂದೇ ಒಂದು ಪೈಸೆ ಮಧ್ಯವರ್ತಿಗಳ ಪಾಲಾಗದೆ ಸಂಪೂರ್ಣ, ರೈತರು ಮತ್ತು ಜನರ ಖಾತೆಗಳಿಗೆ ನೇರ ವರ್ಗಾವಣೆ ಆಗುತ್ತಿದೆ ಎಂದರು.
ರೈತಪರ, ಬಡವರ ಸರ್ಕಾರ: ರೈತರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿ ವೇತನ ನೀಡಲಾಗುತ್ತಿದ್ದರೆ, ರೈತರಿಗಾಗಿ ಕಿಸಾನ್ ಸಮ್ಮಾನ್ ಯೋಜನೆ ಆರಂಭಿಸಲಾಗಿದೆ. ರೈತರಿಗೆ ಅಗತ್ಯವಾದಷ್ಟು ರಸಗೊಬ್ಬರಗಳು ದೊರೆಯುವಂತೆ ಮಾಡಲಾಗಿದೆ. ಒಟ್ಟಿನಲ್ಲಿ ರೈತರ ಮತ್ತು ಬಡವರ ಪರವಾದ ಸರ್ಕಾರ ನಮ್ಮದು ಎಂದು ಈರಣ್ಣ ಕಡಾಡಿ ಹೇಳಿದರು.
ಕಾಂಗ್ರೆಸ್ ಸರ್ಕಾರಿಂದ ರೈತರಿಗೆ ಅನ್ಯಾಯ: ಸಮಾವೇಶದಲ್ಲಿ ಮಾತನಾಡಿದ ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್, ಇಂದು ಕೊಡಗಿನ ರೈತರಿಗೆ ಸಾಕಷ್ಟು ಸಬ್ಸಿಡಿಗಳನ್ನು ನೀಡಲಾಗಿದೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಜಿಲ್ಲೆಯ ರೈತರೊಬ್ಬರಿಗೆ ಕೇವಲ 500 ರೂಪಾಯಿ ಬೆಳೆ ಪರಿಹಾರ ನೀಡಲಾಗಿತ್ತು. ಆದರೆ ಅವರು ಅದನ್ನು ಪಡೆದುಕೊಳ್ಳಲು 3,500 ರೂಪಾಯಿಯನ್ನು ಖರ್ಚು ಮಾಡಿದ್ದರು. ಇದನ್ನು ಗಮನಿಸಿದ್ದ ನಾನು ಚೆಕನ್ನು ರೈತರಿಂದ ವಾಪಸ್ ಪಡೆದು ವಿಧಾನ ಸೌಧದಲ್ಲಿ ಈ ಕುರಿತು ಪ್ರಶ್ನಿಸಿದ್ದೆನು. ಕಾಂಗ್ರೆಸ್ ಸರ್ಕಾರದಲ್ಲಿ ರೈತರಿಗೆ ಅಥವಾ ಜನರಿಗೆ ಯಾವುದೇ ಅನುಕೂಲ ಇರಲಿಲ್ಲ ಎಂದರು.
ಸಿಎಂ ಚಡ್ಡಿ ಬಿಚ್ಚಿಸ್ತೀವಿ ಎಂದವರಿಗೆ ಬಿರಿಯಾನಿ ಕೊಟ್ಟು ಸಾಕೊಲ್ಲ: ಬಾಂಬ್ ಹಾಕೋರ ತಲೆಗೆ ಬಾಂಬ್ ಹಾಕ್ತೀವಿ
ಬೋಗಸ್ ಕಾರ್ಡುಗಳ ವಿತರಣೆ: ಇದೀಗ ಮತ್ತೆ ಅಧಿಕಾರಕ್ಕೆ ಬರುವುದಕ್ಕಾಗಿ ಗ್ಯಾರಂಟಿಯೇ ಇಲ್ಲ ಗ್ಯಾರಂಟಿ ಬೋಗಸ್ ಕಾರ್ಡುಗಳನ್ನು ವಿತರಣೆ ಮಾಡುತ್ತಿದೆ. ಪ್ರತಿ ಮನೆಯ ಮಹಿಳೆಯ ತಲಾ 2 ಸಾವಿರ ಕೊಡುವುದಾಗಿ ಹೇಳುತ್ತಿದೆ. ಆದರೆ ಇದನ್ನು ಲೆಕ್ಕ ಹಾಕಿದರೆ ನಮ್ಮ ರಾಜ್ಯದ ಒಟ್ಟು ಬಜೆಟ್ ಗಾತ್ರದ ಅರ್ಧದಷ್ಟು ಆಗುತ್ತದೆ. ಹೀಗಿರುವಾಗ ಇಂತಹ ಬೋಗಸ್ ಭರವಸೆಗಳನ್ನು ನಂಬಲು ಸಾಧ್ಯವೇ ಎಂದು ರಂಜನ್ ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.