ಮಳೆಯಿಂದ ಹಾನಿಗೀಡಾಗಿರುವ ಜಿಲ್ಲೆಗಳ ಸ್ಥಿತಿಗತಿ ಹಾಗೂ ಪರಿಹಾರ ಕಾರ್ಯಗಳ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್‌. ಅಶೋಕ್‌ (R Ashok) ಅವರು ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ (Video conference) ನಡೆಸಿದರು.

ಮಂಗಳೂರು (ಜು.16): ಭಾರೀ ಮಳೆಯಿಂದಾಗಿ ನದಿ ಪ್ರವಾಹ ಉಕ್ಕಿ ಹರಿದು ಹಾನೀಗೀಡಾದ ಮನೆಗಳಿಗೆ ತುರ್ತು ಪರಿಹಾರ 10 ಸಾವಿರ ರು. ನೀಡಬೇಕು. ಎನ್‌ಡಿಆರ್‌ಎಫ್‌ ಮಾರ್ಗಸೂಚಿಗಳ ಪ್ರಕಾರ ಹಾನಿಗೀಡಾದ ಮನೆಗಳ ನಿರ್ಮಾಣಕ್ಕೆ ಕೂಡಲೆ ಕ್ರಮ ಕೈಗೊಳ್ಳಬೇಕು ಎಂದು ಸಿಎಂ ಬಸವರಾಜ ಬೊಮ್ಮಾಯಿ (Basavaraj bommai) ಅವರು ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಮಳೆಯಿಂದ ಹಾನಿಗೀಡಾಗಿರುವ ಜಿಲ್ಲೆಗಳ ಸ್ಥಿತಿಗತಿ ಹಾಗೂ ಪರಿಹಾರ ಕಾರ್ಯಗಳ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್‌. ಅಶೋಕ್‌ (R Ashok) ಅವರು ವಿವಿಧ ಜಿಲ್ಲೆಗಳ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು ಸೇರಿದಂತೆ ಸಂಬಂಧಿಸಿದ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ (Video conference) ನಡೆಸಿದರು.

ಇದನ್ನೂ ಓದಿ: ಮಳೆ, ಇಳಿಯದ ನೆರೆ - ಉಕ್ಕಿ ಹರಿಯುತ್ತಿರುವ ನದಿಗಳ ಡ್ಯಾಂಗಳಿಂದ ಅಪಾರ ನೀರು ಹೊರಕ್ಕೆ

ರಸ್ತೆ, ಸೇತುವೆ ವಿದ್ಯುತ್‌ ಮುಂತಾದ ಮೂಲಭೂತ ಸೌಕರ್ಯ ದುರಸ್ತಿಗೆ ಆದ್ಯತೆ ನೀಡಬೇಕು. ಪ್ರವಾಹ ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಎಲ್ಲ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಒದಗಿಸಬೇಕು. ಬೆಳೆ ಹಾನಿ, ರಸ್ತೆ, ಮನೆಗಳ ಹಾನಿ ಬಗ್ಗೆ ಸಮೀಕ್ಷೆ ಸರಿಯಾಗಿ ಆಗಬೇಕು ಎಂದು ಸೂಚಿಸಿದರು.

ಜಿಲ್ಲೆಗಳಲ್ಲಿ ಮುಂದಿನ 5-6 ದಿನಗಳ ಮಳೆ ಹಾಗೂ ಮಳೆ ಮುನ್ಸೂಚನೆಯನ್ನು ಗಮನಿಸಬೇಕು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಜತೆಗೆ ರಕ್ಷಣೆ ಮತ್ತು ಪರಿಹಾರ ಕಾರ್ಯಗಳಿಗೆ ಸನ್ನದ್ಧರಾಗಬೇಕು. ಪರಿಹಾರ ಕಾರ್ಯಗಳು ತ್ವರಿತ ಹಾಗೂ ಪಾರದರ್ಶಕವಾಗಿರಬೇಕು. ರಸ್ತೆ ಸಂಪರ್ಕ, ವಿದ್ಯುತ್‌ ಕಂಬಗಳು ಹಾಗೂ ಕುಡಿಯುವ ನೀರಿನ ಸರಬರಾಜಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.

ಇದನ್ನೂ ಓದಿ: ಕರಾವಳಿಯಲ್ಲಿ ಮಳೆ ಇಳಿಮುಖ; ಮೀನುಗಾರಿಕಾ ರಸ್ತೆ ನೀರುಪಾಲು

ಜಂಟಿ ಸಮೀಕ್ಷೆ: ಮಳೆಯಿಂದ ಉಂಟಾಗಿರುವ ಹಾನಿಯ ಕುರಿತು ಜಂಟಿ ಸಮೀಕ್ಷೆ ನಡೆಸಿ ವ್ಯವಸ್ಥಿತವಾಗಿ ಪರಿಹಾರವನ್ನು ತಕ್ಷಣವೇ ಒದಗಿಸಲು ಕ್ರಮ ವಹಿಸಬೇಕು. ಭೂಕುಸಿತದ ಸಾಧ್ಯತೆಗಳುಳ್ಳ ಪ್ರದೇಶಗಳಲ್ಲಿ ರಸ್ತೆಗಳನ್ನು ತೆರವುಗೊಳಿಸುವುದು ಹಾಗೂ ದುರ್ಬಲ ಪ್ರದೇಶಗಳ ಸಮೀಕ್ಷೆ ಕಾರ್ಯ ಕೈಗೊಳ್ಳಲು ತಂಡಗಳನ್ನು ನಿಯೋಜಿಸಬೇಕು, ಅಲ್ಲಿರುವ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಕ್ಕೆ ಕ್ರಮ ವಹಿಸುವಂತೆ ಮುಖ್ಯಮಂತ್ರಿ ನಿರ್ದೇಶನ ನೀಡಿದರು.

ಗ್ರಾಮ ಮಟ್ಟದಲ್ಲಿ ಟಾಸ್‌್ಕ ಫೋರ್ಸ್‌: ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಟಾಸ್‌್ಕ ಫೋರ್ಸ್‌ ರಚಿಸಬೇಕು. ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲ್ಲ ನಿಯಂತ್ರಣಾ ಕೊಠಡಿಗಳು ಅಹವಾಲುಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ನೋಡಿಕೊಳ್ಳಬೇಕು. ಎನ್‌ಡಿಆರ್‌ಎಫ್‌ ಹಾಗೂ ಎಸ್‌ಡಿಆರ್‌ಎಫ್‌ ತಂಡಗಳಿಗೆ ಅಗತ್ಯವಿರುವ ಲಾಜಿಸ್ಟಿಕ್ಸ್‌ ನೆರವನ್ನು ಒದಗಿಸಿ ತೊಂದರೆಗೀಡಾದ ಪ್ರದೇಶಗಳಿಗೆ ತಕ್ಷಣ ತಲುಪಲು ಕ್ರಮ ವಹಿಸಬೇಕು. ಸಂಬಂಧಿಕರ ಮನೆಗಳಿಗೆ ತೆರಳಿರುವ ಸಂತ್ರಸ್ತರಿಗೆ ಪಡಿತರ ಕಿಟ್‌ನ್ನು ಕಂದಾಯ ಇಲಾಖೆ ನೀಡುವ ಪಟ್ಟಿಯಂತೆ ಒದಗಿಸುವುದು. ಹಾನಿಯಾಗಿರುವ ರಸ್ತೆ, ಸೇತುವೆ ಹಾಗೂ ಟ್ಯಾಂಕ್‌ಗಳನ್ನು ಜಿಲ್ಲಾಡಳಿತ ವತಿಯಿಂದ ತಾತ್ಕಾಲಿಕವಾಗಿ ಸರಿಪಡಿಸಿ, ಶಾಶ್ವತ ಕಾಮಗಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಹೇಳಿದರು.

ಕಂದಾಯ ಸಚಿವ ಆರ್‌.ಅಶೋಕ್‌ ಮಾತನಾಡಿ, ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಹಾಗೂ ಗ್ರಾಮ ಲೆಕ್ಕಾಧಿಕಾರಿ ತಮ್ಮ ಗ್ರಾಮ ವ್ಯಾಪ್ತಿಯಲ್ಲಿ ಅಪಾಯದಲ್ಲಿರುವ ಮನೆಗಳು ಹಾಗೂ ತಡೆಗೋಡೆಗಳನ್ನು ಪತ್ತೆ ಮಾಡಿ ನೆಲಸಮಗೊಳಿಸಲು ಕ್ರಮ ವಹಿಸಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: ಅಸಹಾಯಕ ಕುಟುಂಬಕ್ಕೆ ಆಸರೆಯಾದ ವಿಶ್ವ ಹಿಂದೂ ಪರಿಷತ್‌: ಇಂದು ಗೃಹಪ್ರವೇಶ

ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌, ವಿಪತ್ತು ಪರಿಹಾರ ಘಟಕದ ಡಾ.ಮನೋಜ್‌, ಮಂಗಳೂರಿನಿಂದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಋುಷಿಕೇಶ್‌ ಭಗವಾನ್‌ ಸೋನಾವಣೆ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್‌ ಶ್ರೀಧರ್‌, ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಸಹಾಯಕ ಆಯುಕ್ತ ಮದನ್‌ ಮೋಹನ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಸೀತಾ, ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕ ನಾಯಕ್‌ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.