ಕೊಡಗು ಜಿಲ್ಲೆಯಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಚಿವ ಎಸ್.ಎನ್. ಭೋಸರಾಜ್, ರಾಜ್ಯ ಕಾಂಗ್ರೆಸ್‌ನಲ್ಲಿನ ಅಧಿಕಾರ ಹಂಚಿಕೆ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಅಧಿಕಾರ ಹಂಚಿಕೆ ವಿಷಯ ತಮ್ಮ ಗಮನದಲ್ಲಿಲ್ಲ ಮತ್ತು ಹೈಕಮಾಂಡ್ ತೀರ್ಮಾನವೇ ಅಂತಿಮ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು : ಅಧಿಕಾರ ವಿಷಯ ನಮ್ಮ ಗಮನಕ್ಕಂತು ಇಲ್ಲ ಎಂದು ಹೇಳುವ ಮೂಲಕ ಸಣ್ಣ ನೀರಾವರಿ ಸಚಿವ ಎಸ್.ಎನ್. ಭೋಸರಾಜ್ ಸುವರ್ಣ ನ್ಯೂಸ್ ಗೆ ಪ್ರತಿಕ್ರಿಯಿಸಿದ್ದಾರೆ. ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಅರೆಯೂರಿನಲ್ಲಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ ಸಂದರ್ಭ ಅವರು ಮಾತನಾಡಿದರು. ಅಧಿಕಾರ ಹಂಚಿಕೆಗಾಗಿ ಡಿಕೆಶಿ ಬಣದಿಂದ ದೆಹಲಿಯಲ್ಲಿ ಪರೇಡ್ ನಡೆಸುತ್ತಿದ್ದಾರೆ ಅದು ಸರಿಯೇ ಎನ್ನುವ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಎರಡು ವರ್ಷ ಅಧಿಕಾರ ಹಂಚಿಕೆ ವಿಷಯ ನಮ್ಮ ಗಮನಕ್ಕೆ ಇಲ್ಲ ಎನ್ನುವ ಮೂಲಕ ಸಿಎಂ ಆಗಿ ಸಿದ್ದರಾಮಯ್ಯನವರೇ ಮುಂದುವರಿಯುತ್ತಾರೆ ಎನ್ನುವ ರೀತಿ ಮಾತನಾಡಿದರು.
ಹೈಕಮಾಂಡ್ ನಿರ್ಧಾರಕ್ಕೆ ಬದ್ಧ
ಆದರೆ ಅಧಿಕಾರ ಹಂಚಿಕೆ ಹೈಕಮಾಂಡ್ ಗಮನಕ್ಕೆ ಇರಬಹುದೇನೋ ಗೊತ್ತಿಲ್ಲ. ಅಥವಾ ಸಿಎಂ, ಡಿಸಿಎಂ ಗಮನಕ್ಕೆ ಇರಬಹುದೇನೋ ಗೊತ್ತಿಲ್ಲ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ಅದರಂತೆ ನಡೆಯುತ್ತೇವೆ ಎಂದು ಸಚಿವ ಬೋಸರಾಜ್ ಹೇಳಿದರು. ಸಿಎಂ ತಾವು ಆಡಿದ ಮಾತಿಗೆ ತಪ್ಪುವುದಿಲ್ಲ ಮಾತಿನಂತೆ ನಡೆದು ಕೊಳ್ಳುತ್ತಾರೆ ಎಂದು ಡಿಕೆಶಿ ಸಹೋದರರು ಹೇಳಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅದು ಅವರವರ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ. ಆದರೆ ಪಕ್ಷದ ಹೈಕಮಾಂಡ್ ತೀರ್ಮಾನವೇ ಅಂತಿಮ. ಹೈಕಮಾಂಡ್ ಏನು ನಿರ್ಧಾರ ತೆಗೆದುಕೊಳ್ಳುತ್ತಾರೋ ಅದಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ. ಹೈಕಮಾಂಡ್ ನಿರ್ದೇಶನದಂತೆ ನಡೆದುಕೊಳ್ಳುವುದಾಗಿ ಸಿಎಂ, ಡಿಸಿಎಂ ಎಲ್ಲರೂ ಹೇಳಿದ್ದಾರೆ. ಹೀಗಿರುವಾಗ ಕೊಟ್ಟ ಮಾತಿನಂತೆ ನಡೆದುಕೊಳ್ಳುವ ಪ್ರಶ್ನೆ ಎಲ್ಲಿದೆ ಎಂದರು.
ಡಿಕೆಶಿ ಪರ ಶಾಸಕರ ದೆಹಲಿ ಪರೇಡ್ ಸುಳ್ಳು
ಡಿಕೆಶಿ ಪರ ಶಾಸಕರು ಸಚಿವರು ದೆಹಲಿಯಲ್ಲಿ ಪರೇಡ್ ಮಾಡುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಅದೆಲ್ಲಾ ಸುಳ್ಳು ಎಂದರು. ಅವರು ಹೋಗಿರುವುದು ಇಬ್ಬರು ಸಚಿವರು ಮಾತ್ರ. ಅವರು ತಮ್ಮ ಇಲಾಖೆ ಕೆಲಸಗಳಿಗೆ ಹೋಗಿದ್ದಾರೆ. ನಾನು ಕೂಡ ಜಲಸಂಪನ್ಮೂಲ ಸಚಿವರ ಹತ್ತಿರ ಸಮಯ ಕೇಳಿದ್ದೇನೆ. ನಾನು ಕೂಡ ದೆಹಲಿಗೆ ಹೋಗಲಿದ್ದೇನೆ. ಮುಂದೆ ಸಂಸತ್ ಅಧಿವೇಶನ ಬರಲಿದ್ದು, ನಮ್ಮ ವಿವಿಧ ಕಾಮಗಾರಿಗಳ ಕುರಿತು, ಅನುದಾನ ಕುರಿತು ಕೇಳಲು ಹೋಗುತ್ತಿದ್ದೇವೆ ಎಂದರು.
ಅಧಿಕಾರ ಹಂಚಿಕೆ ಆಗಬೇಕೊ ಬೇಡವೋ ಎನ್ನುವುದರ ಬಗ್ಗೆ ನಾವೇನೂ ಹೇಳಲ್ಲ, ಹೈಕಮಾಂಡ್ ಹೇಳಿದ್ದೆ ಫೈನಲ್ ಎಂದರು. ಇದಕ್ಕೂ ಮುನ್ನ ಕೊಡಗು ಜಿಲ್ಲೆ ಸೋಮವಾರಪೇಟೆ ತಾಲ್ಲೂಕಿನ ಯಲಕನೂರು, ಅರೆಯೂರು ಮತ್ತು ಕಣಿವೆ ನಡುವಿನ 7.5 ಕಿಲೋ ಮೀಟರ್ ಉದ್ದ ರಸ್ತೆ ಕಾಮಗಾರಿಗೆ 12 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ಮಡಿಕೇರಿ ಶಾಸಕ ಮಂತರ್ ಗೌಡ ಇದ್ದರು. ಸಚಿವ ಭೋಸರಾಜ್ ಅರೆಯೂರಿಗೆ ಬರುತ್ತಿದ್ದಂತೆ ಕಾರ್ಯಕರ್ತರು ಪಟಾಕಿ ಸಿಡಿ ಬರಮಾಡಿಕೊಂಡರು. ನಂತರ ವೇದಿಕೆ ಕಾರ್ಯಕ್ರಮ ನಡೆಯಿತು.


