ಚಿತ್ರದುರ್ಗ: ವಿಧಾನಸಭಾ ಚುನಾವಣೆಗೆ ಜಿಲ್ಲಾಡಳಿತ ಸರ್ವ ಸನ್ನದ್ಧ: ಜಿಲ್ಲಾಧಿಕಾರಿ ದಿವ್ಯಾಪ್ರಭು

ಕೇಂದ್ರ ಚುನಾವಣಾ ಆಯೋಗ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು ತಿಳಿಸಿದರು.

Karnataka assembly election DC Divya Prabhu press conference at chitradurga rav

ಚಿತ್ರದುರ್ಗ (ಮಾ.30) : ಕೇಂದ್ರ ಚುನಾವಣಾ ಆಯೋಗ ವಿಧಾನಸಭಾ ಚುನಾವಣೆಗೆ ದಿನಾಂಕ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದ್ದು, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿಗೆ ಬಂದಿದೆ. ಚುನಾವಣೆಗೆ ಜಿಲ್ಲೆಯಲ್ಲಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸಲು, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಬಿಗಿ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ದಿವ್ಯಾಪ್ರಭು(DC Divyaprabhu) ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಬುಧವಾರ ವಿಧಾನಸಭಾ ಚುನಾವಣೆ(Karnataka assembly election) ಘೋಷಣೆ ಹಾಗೂ ಮಾದರಿ ನೀತಿ ಸಂಹಿತೆ ಜಾರಿ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಏಪ್ರಿಲ್‌ 13ರಂದು ಚುನಾವಣೆ ಅಧಿಸೂಚನೆ ಹೊರಡಿಸಲಾಗುವುದು. ಏಪ್ರಿಲ್‌ 20ರಂದು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದೆ. ಏಪ್ರಿಲ್‌ 21ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಏಪ್ರಿಲ್‌ 24ಕ್ಕೆ ನಾಮಪತ್ರಗಳನ್ನು ಹಿಂಪಡೆಯಲು ಕಡೆಯ ದಿನವಾಗಿದೆ. ಮೇ 10ರಂದು ಮತದಾನ ನಡೆಯಲಿದೆ. ಮೇ 13ಕ್ಕೆ ಮತ ಎಣಿಕೆ ಕಾರ್ಯ ನಡೆದು, ಚುನಾವಣೆ ಫಲಿತಾಂಶ ಹೊರ ಬೀಳಲಿದೆ. ಮೇ 15ರ ಒಳಗೆ ಚುನಾವಣೆ ಪ್ರಕ್ರಿಯೆಗಳು ಪೂರ್ಣಗೊಳ್ಳಲಿವೆ ಎಂದರು.

Karnataka election 2023: ₹2.87 ಲಕ್ಷದ ಮದ್ಯ, ಮಾದಕ ವಶ; 8071 ಬ್ಯಾನರ್‌ಗಳ ತೆರವು: ಚುನಾವಣಾಧಿಕಾರಿ ದಿವ್ಯಪ್ರಭು ಮಾಹಿತಿ

13,95,641 ಮಂದಿ ಮತದಾರರು ಜಿಲ್ಲೆಯಲ್ಲಿ ಆರು ವಿಧಾನಸಭಾ ಕ್ಷೇತ್ರಗಳಿದ್ದು, 1648 ಮತಗಟ್ಟೆಗಳಿವೆ. ಮತದಾರರ ಅಂತಿಮ ಪಟ್ಟಿಪ್ರಕಾರ ಜಿಲ್ಲೆಯಲ್ಲಿ 13,80,670 ಮತದಾರರಿದ್ದಾರೆ. ಇಂದಿನವರೆಗೂ ಜಿಲ್ಲೆಯಲ್ಲಿ 13,95,641 ಮಂದಿ ಮತದಾರರಿದ್ದಾರೆ. 6,97,131 ಪುರುಷ ಮತದಾರರು ಹಾಗೂ 6,98,438 ಮಹಿಳಾ ಮತದಾರರಿದ್ದಾರೆ. 382-ಸೇವಾ ಮತದಾರರು, 35,722-ಯುವ ಮತದಾರರು, 833-ಲಿಂಗತ್ವ ಅಲ್ಪಸಂಖ್ಯಾತರು, 2,793-ಲೈಂಗಿಕ ಕಾರ್ಯಕರ್ತರು, 23,472-ಅಂಗವಿಕಲರು ಹಾಗೂ 31,073 ಮಂದಿ 80 ವರ್ಷ ಮೇಲ್ಪಟ್ಟಮತದಾರರು ಇದ್ದಾರೆ ಎಂದು ತಿಳಿಸಿದರು.

ಏಪ್ರಿಲ್‌ 11ರವರೆಗೂ ಅವಕಾಶ:

ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ 2023ರ ಏಪ್ರಿಲ್‌ 11ರವರೆಗೂ ಅವಕಾಶ ನೀಡಲಾಗಿದೆ. 18 ವರ್ಷ ಮೇಲ್ಪಟ್ಟವರೂ, ಮತದಾರ ಪಟ್ಟಿಯಲ್ಲಿ ಹೆಸರು ಇಲ್ಲದವರು ಮತದಾರರ ಪಟ್ಟಿಗೆ ಸೇರ್ಪಡೆಗೆ ಸಮೀಪದ ತಹಸೀಲ್ದಾರ್‌ ಕಚೇರಿ, ಉಪವಿಭಾಗಾಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಗೆ ಹಾಗೂ ವೋಟರ್‌ ಹೆಲ್ಪ್‌ಲೈನ್‌ ಆ್ಯಪ್‌ ಹಾಗೂ ಎನ್‌ವಿಎಸ್‌ ಪೋರ್ಟಲ್‌ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಮತಪಟ್ಟಿಯಲ್ಲಿ ತಮ್ಮ ಹೆಸರು ಇದೆಯೋ, ಇಲ್ಲವೋ ಎಂಬುದನ್ನು ಬಿಎಲ್‌ಒ ಬಳಿ ಅಥವಾ ವೋಟರ್‌ ಹೆಲ್ಪ್‌ಲೈನ್‌ ಆಪ್‌ನಲ್ಲಿಯೂ ಪರಿಶೀಲಿಸಿ ಖಚಿತಪಡಿಸಿಕೊಳ್ಳಬಹುದು ಎಂದು ಹೇಳಿದರು.

ಚುನಾವಣೆ ಅಕ್ರಮ 52 ಪ್ರಕರಣಗಳಲ್ಲಿ ಶಿಕ್ಷೆ:

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕೆ. ಪರುಶುರಾಮ್‌ ಮಾತನಾಡಿ, 2013 ಹಾಗೂ 2018ರ ವಿಧಾನಸಭಾ ಹಾಗೂ 2019ರ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ದಾಖಲಿಸಿದ ಪ್ರಕರಣಗಳ ಪೈಕಿ 52 ಪ್ರಕರಣಗಳ 138 ಜನರು ಶಿಕ್ಷೆಗೆ ಒಳಗಾಗಿದ್ದಾರೆ. ಇಂತಹವರ ವಿರುದ್ಧ ಮುಂಜಾಗ್ರತಾ ಕ್ರಮವಾಗಿ ಪ್ರತಿಬಂಧಕ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು.

ಜಿಲ್ಲೆಯಲ್ಲಿ ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ದೃಷ್ಟಿಯಿಂದ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿದ 1020 ಜನರ ವಿರುದ್ಧ ಪ್ರತಿಬಂಧಕ ಪ್ರಕರಣಗಳನ್ನು ದಾಖಲಿಸಿ, ಕ್ರಮ ಕೈಗೊಳ್ಳಲಾಗುವುದು. ಜಿಲ್ಲೆಯಲ್ಲಿ 1174 ಪರವಾನಿಗೆ ಹೊಂದಿದ ಶಸ್ತ್ರಾಸ್ತ್ರಗಳು ಇವೆ. ಇದರಲ್ಲಿ ಬೇರೆ ಬೇರೆ ಕಾರಣಗಳಿಂದ 620 ಶಸ್ತ್ರಾಸ್ತ್ರಗಳು ಜಮೆಯಾಗಿವೆ. ಜಿಲ್ಲಾ ಚುನಾವಣಾ ಅಧಿಕಾರಿ ಆದೇಶ ನೀಡಿದ ತಕ್ಷಣ ಉಳಿದ ಶಸ್ತ್ರಾಸ್ತ್ರಗಳನ್ನು ಸಹ ವಶಪಡಿಸಿಕೊಳ್ಳಲಾಗುವುದು.

ಜಿಲ್ಲೆಯಲ್ಲಿ 377 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದೆ. ಇದರಲ್ಲಿ 110 ದುರ್ಬಲ ಮತಗಟ್ಟೆಗಳು ಇವೆ. ಈ ಮತಗಟ್ಟೆವ್ಯಾಪ್ತಿಯಲ್ಲಿ ಮತದಾರರಿಗೆ ಬೆದರಿಸಿ ಪ್ರಭಾವ ಬೀರುವ 189 ಜನರನ್ನು ಗುರುತಿಸಿ ಪ್ರತಿಬಂಧಕ ಪ್ರಕರಣ ದಾಖಲಿಸಲಾಗಿದೆ. ಇದರೊಂದಿಗೆ ಜಿಲ್ಲೆಯ 8 ಜನರ ಗಡಿಪಾರಿಗೆ ಉಪ ವಿಭಾಗಧಿಕಾರಿ ದಂಡಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಇದರಲ್ಲಿ 3 ಜನರನ್ನು ಗಡಿಪಾರು ಮಾಡಿ, ಬೇರೆ ಜಿಲ್ಲೆಯಲ್ಲಿ ಬಿಟ್ಟುಬಂದು ಅನುಪಾಲನಾ ವರದಿ ಸಲ್ಲಿಸಲಾಗಿದೆ. ಒಬ್ಬ ವ್ಯಕ್ತಿಯ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಜಿಪಂ ಸಿಇಒ ಎಂ.ಎಸ್‌. ದಿವಾಕರ್‌ ಮಾತನಾಡಿ, ಕಳೆದ ಬಾರಿ ಜಿಲ್ಲೆಯಲ್ಲಿ ಸರಾಸರಿ ಶೇ. 80.86 ರಷ್ಟುಮತದಾನ ಆಗಿತ್ತು. ಇದು ರಾಜ್ಯ ಸರಾಸರಿಗಿಂತ ಶೇ. 8ರಷ್ಟುಹೆಚ್ಚಾಗಿದೆ. ಜಿಲ್ಲಾ ಸರಾಸರಿ ಮತದಾನ ಪ್ರಮಾಣಕ್ಕಿಂತ 585 ಮತಗಟ್ಟೆಗಳಲ್ಲಿ ಕಡಿಮೆ ಮತದಾನವಾಗಿದೆ. ಈ ಮತಗಟ್ಟೆವ್ಯಾಪ್ತಿಗಳಲ್ಲಿ ಸ್ವೀಪ್‌ ಕಾರ್ಯಚಟುವಟಿಕೆಗಳನ್ನು ಹೆಚ್ಚಾಗಿ ಮಾಡಲಾಗಿದೆ. ಶಿಕ್ಷಣ ಇಲಾಖೆ ಸಿಆರ್‌ಪಿ ನೇತೃತ್ವದಲ್ಲಿ ಬಿಎಲ್‌ಒ ಅಂಗನವಾಡಿ ಕಾರ್ಯಕರ್ತರು ಹಾಗೂ ಶಿಕ್ಷಕರು ಮನೆ ಮನೆಗೆ ತೆರಳಿ ಮತದಾನದ ಮಹತ್ವ ತಿಳಿಸುತ್ತಿದ್ದಾರೆ ಎಂದರು.

ಕಳೆದ ಬಾರಿ ಸಾಹಸಿ ಜ್ಯೋತಿರಾಜ್‌ ಅವರನ್ನು ಜಿಲ್ಲಾ ಚುನಾವಣಾ ರಾಯಭಾರಿಯಾಗಿ ನೇಮಿಸಲಾಗಿತ್ತು. ರಾಯಭಾರಿ ಸ್ಥಾನದಿಂದ ಮುಕ್ತಗೊಳಿಸುವಂತೆ ಜ್ಯೋತಿರಾಜ್‌ ಸ್ವತಃ ಪತ್ರ ಬರೆದು ಕೋರಿದ್ದರಿಂದ ಅವರನ್ನು ಕೈಬಿಡಲಾಗಿದೆ. ಹಿರಿಯೂರಿನ ಕಾಮಿಡಿಯನ್‌ ಬರ್ಕತ್‌ ಅಲಿ (Barkat Ali Comedian) ಅವರನ್ನು ಈ ಬಾರಿ ಜಿಲ್ಲಾ ಚುನಾವಣಾ ರಾಯಭಾರಿಯಾಗಿ ನೇಮಿಸಲಾಗಿದೆ ಎಂದು ತಿಳಿಸಿದರು.

Chitradurga: ಡಿಸಿ ಕಚೇರಿ ನಿರ್ಮಾಣ ಕಾಮಗಾರಿ ಅಕ್ರಮ: ತನಿಖೆಗೆ ಹೋರಾಟಗಾರರ ಒತ್ತಾಯ

ಪತ್ರಿಕಾಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಉಪಸ್ಥಿತರಿದ್ದರು.

ಚುನಾವಣಾಧಿಕಾರಿಗಳ, ಸಹಾಯಕ ಚುನಾವಣಾಧಿಕಾರಿ ವಿವರ:

ಮೊಳಕಾಲ್ಮುರು (ಎಸ್‌ಟಿ)- ಕೃಷಿ ಇಲಾಖೆ ಜೆಡಿ ರಮೇಶ್‌ ಕುಮಾರ್‌, ತಹಸೀಲ್ದಾರ್‌ ರೂಪಾ

ಚಳ್ಳಕೆರೆ (ಎಸ್‌ಟಿ)- ಜಿಲ್ಲಾ ಕೈಗಾರಿಕೆ, ವಾಣಿಜ್ಯ ಇಲಾಖೆ ಜೆಡಿ ಬಿ. ಆನಂದ್‌, ತಹಸೀಲ್ದಾರ್‌ ರೆಹಾನ್‌ ಪಾಷಾ

ಚಿತ್ರದುರ್ಗ- ಉಪವಿಭಾಗಾಧಿಕಾರಿ ಆರ್‌. ಚಂದ್ರಯ್ಯ, ತಹಸೀಲ್ದಾರ್‌ ಡಾ. ನಾಗವೇಣಿ

ಹಿರಿಯೂರು- ಜಿಪಂ ಉಪಕಾರ್ಯದರ್ಶಿ ಕೊರಮ ತಿಮ್ಮಪ್ಪ, ತಹಸೀಲ್ದಾರ್‌ ಪ್ರಶಾಂತ್‌ ಪಾಟೀಲ್‌

ಹೊಸದುರ್ಗ- ನಗರಾಭಿವೃದ್ಧಿ ಯೋಜನಾ ನಿರ್ದೇಶಕ ಮಹೇಂದ್ರ ಕುಮಾರ್‌, ತಹಸೀಲ್ದಾರ್‌ ಪಟ್ಟರಾಜೇಗೌಡ

ಹೊಳಲ್ಕೆರೆ (ಎಸ್‌ಸಿ)- ಭದ್ರಾ ಮೇಲ್ದಂಡೆ ಭೂಸ್ವಾಧೀನಾಧಿಕಾರಿ ಟಿ. ವಿವೇಕಾನಂದ, ತಹಸೀಲ್ದಾರ್‌ ಎನ್‌.ಜಿ. ನಾಗರಾಜ್‌

Latest Videos
Follow Us:
Download App:
  • android
  • ios