ಲಾಕ್‌ಡೌನ್‌: ಆನ್‌ಲೈನ್‌ ಬೋಧನೆಗೆ ಕರ್ನಾಟಕ ವಿಶ್ವವಿದ್ಯಾಲಯ ಅಸ್ತು!

ಬಾಕಿ ಉಳಿದ ಪಠ್ಯದ ಬೋಧನೆಗೆ ಪರ್ಯಾಯ ಮಾರ್ಗ|ಜೂಮ್‌ ಆಪ್‌, ವಾಟ್ಸ್‌ಆ್ಯಪ್‌, ಯೂಟ್ಯೂಬ್‌ ಮೂಲಕ ಬೋಧನೆ| ಮನೆಯಲ್ಲಿಯೇ ಕುಳಿತು ನೂತನ ಬೋಧನಾ ತಂತ್ರದ ಮೊರೆಹೋದ ಉಪನ್ಯಾಸಕರು|
 

Karnatak University Start Online Teaching to Students

ಶಿವಕುಮಾರ ಮುರಡಿಮಠ

ಧಾರವಾಡ(ಏ.11): ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜೂನ್‌ನಲ್ಲಿ ಜರುಗಬೇಕಿದ್ದ ಸ್ನಾತಕೋತ್ತರ ಸೆಮಿಸ್ಟರ್‌ ಪರೀಕ್ಷೆಗಳು ವಿದ್ಯಾರ್ಥಿಗಳಿಗೆ ಹೊರೆಯಾಗಬಾರದೆಂದು ಕರ್ನಾಟಕ ವಿಶ್ವವಿದ್ಯಾಲಯವು ತಂತ್ರಜ್ಞಾನದ ಮೊರೆ ಹೋಗಿದೆ.

ಆನ್‌ಲೈನ್‌ ಬೋಧನೆಗೆ ಕರ್ನಾಟಕ ವಿಶ್ವವಿದ್ಯಾಲಯ ಮುಂದಾಗಿದ್ದು, ಉಪನ್ಯಾಸಕರಿಗೆ ಪಠ್ಯವನ್ನು ಮನೆಯಲ್ಲಿಯೇ ಕುಳಿತು ಪೂರ್ಣಗೊಳಿಸಲು ಸೂಚಿಸಲಾಗಿದೆ. ಈಗಾಗಲೇ ಅರ್ಥಶಾಸ್ತ್ರ ವಿಭಾಗದಲ್ಲಿ ಪಠ್ಯಗಳು ಪ್ರಾರಂಭವಾಗಿದ್ದು, ಏ. 13ರಿಂದ ಉಳಿದ ವಿಷಯಗಳಲ್ಲಿ ಪಾಠ-ಪ್ರವಚನಗಳು ಆನ್‌ಲೈನ್‌ನಲ್ಲಿಯೇ ಆರಂಭವಾಗಲಿವೆ ಎಂದು ಕವಿವಿ ಕುಲಪತಿ ಡಾ. ಭಾಸ್ಕರ್‌ ಮಾಹಿತಿ ನೀಡಿದ್ದಾರೆ. 

ಕೊರೋನಾ ಭೀತಿ: ರೈಲ್ವೆಯಿಂದ 80 ಸಾವಿರ ಐಸೋಲೇಷನ್‌ ಬೋಗಿ

ಸಾಮಾನ್ಯವಾಗಿ ಶೈಕ್ಷಣಿಕ ದಿನಗಳು ಏಪ್ರಿಲ್‌ ತಿಂಗಳಾಂತ್ಯದಲ್ಲಿ ಪೂರ್ಣಗೊಳುತ್ತಿದ್ದವು. ಬಳಿಕ ಮೇ ತಿಂಗಳಲ್ಲಿ ಪರೀಕ್ಷೆ ಮುಗಿಸಿ ರಜೆ ಘೋಷಿಸಲಾಗುತ್ತಿತ್ತು. ಆದರೆ, ಕೊರೋನಾ ವೈರಸ್‌ ಪರಿಣಾಮದಿಂದ ಮಾರ್ಚ್‌ ತಿಂಗಳಲ್ಲಿಯೇ ತರಗತಿಗಳು ಬಂದ್‌ ಆಗಿದ್ದು, ಯಾವಾಗ ಪ್ರಾರಂಭವಾಗಲಿವೆ ಎಂಬ ಬಗ್ಗೆ ನಿಶ್ಚಿತತೆ ಇಲ್ಲ. ಹೀಗಾಗಿ ವಿದ್ಯಾರ್ಥಿಗಳಲ್ಲಿ ಪಠ್ಯ ಪೂರ್ಣಗೊಳಿಸದೆ ಪರೀಕ್ಷೆ ತಯಾರಿ ಹೇಗೆ ಎಂಬ ಆತಂಕ ಉಂಟಾಗಿತ್ತು. ಇದನ್ನರಿತ ಉನ್ನತ ಶಿಕ್ಷಣ ಇಲಾಖೆ ಎಲ್ಲ ವಿವಿಗಳಿಗೂ ಆನ್‌ಲೈನ್‌ ಪಾಠ ಮಾಡಲು ಸೂಚಿಸಿದೆ.

ಕೊರೋನಾ ತಡೆಯುವ ನಿಟ್ಟಿನಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಅತಿ ಅವಶ್ಯವಾಗಿದ್ದು, ಶಾಲಾ-ಕಾಲೇಜುಗಳ ಬೀಗ ತೆರೆದು ಬೋಧಿಸಲು ಅವಕಾಶಗಳು ಇಲ್ಲದ ಕಾರಣ ಕರ್ನಾಟಕ ವಿವಿಯ ಉಪನ್ಯಾಸಕರು ತಮ್ಮ ವಿಷಯದ ಕುರಿತು ಮನೆಯಲ್ಲಿಯೇ ಕುಳಿತು ಆನ್‌ಲೈನ್‌ ಮೂಲಕ ಬೊಧನೆ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಲಾಕ್‌ಡೌನ್‌ ಮುಗಿಯುವವರೆಗೂ ಉಪನ್ಯಾಸಕರು ವಾಟ್ಸ್‌ಆ್ಯಪ್‌, ಯೂಟ್ಯೂಬ್‌ ಸೇರಿದಂತೆ ಸಾಮಾಜಿಕ ಜಾಲತಾಣದ ಮೂಲಕ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

ಜೂಮ್‌ ಆ್ಯಪ್‌ ಬಳಕೆ:

ಜೂಮ್‌ ಆ್ಯಪ್‌ನಲ್ಲಿ ಗರಿಷ್ಠ 100 ವಿದ್ಯಾರ್ಥಿಗಳು ಒಂದೇ ಬಾರಿಗೆ ಆನ್‌ಲೈನ್‌ಗೆ ಬರಬಹುದು. ಅದನ್ನು ಬಳಸಿಕೊಂಡು ಹೆಚ್ಚು ವಿದ್ಯಾರ್ಥಿಗಳನ್ನು ತಲುಪುವ ಮೂಲಕ ಉಪನ್ಯಾಸಕರು ಪಾಠ ಅಥವಾ ಮಾರ್ಗದರ್ಶನ ನೀಡಬಹುದಾಗಿದೆ. ಈಗಾಗಲೇ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರಿಗೆ ಆನ್‌ಲೈನ್‌ ಪಾಠಕ್ಕೆ ಸಂಬಂಧಿಸಿದ ಅಗತ್ಯ ಮಾಹಿತಿ ಒದಗಿಸುವ ಕೆಲಸದಲ್ಲಿ ನಿರತವಾಗಿದ್ದು, ವಾಟ್ಸ್‌ಆ್ಯಪ್‌ ಗ್ರೂಪ್‌ ಮೂಲಕ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ.

ಆಡಿಯೋ ಪಾಠಗಳನ್ನು ತಮ್ಮ ಅನುಕೂಲದ ಸಮಯದಲ್ಲಿ, ಅನುಕೂಲದ ಸ್ಥಳದಲ್ಲಿ ಕುಳಿತು ಕೇಳಿ ನೋಟ್ಸ್‌ ಮಾಡಿಕೊಳ್ಳಬಹುದು. ಜತೆಗೆ ಆನ್‌ಲೈನ್‌ ಪಾಠ ಕೇಳಬಹುದು. ಇಂತಹ ಸಂದರ್ಭದಲ್ಲಿ ಆನ್‌ಲೈನ್‌ ಪಾಠ ನಮಗೆ ತುಂಬ ಉಪಯೋಗ ಆಗಲಿದೆ ಎಂದು ಕವಿವಿ ವಿದ್ಯುನ್ಮಾನ ವಿಭಾಗದ ವಿದ್ಯಾರ್ಥಿನಿ ಲಾವಣ್ಯಾ ಕೆ.ಎಂ. ಹೇಳುತ್ತಾರೆ.

ಈ ಬಗ್ಗೆ ಮಾತನಾಡಿದ ಕವಿವಿ ಕುಲಪತಿ ಡಾ. ಭಾಸ್ಕರ್‌ ಅವರು, ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮನೆ ಪಾಠದ ಮೂಲಕ ಪರೀಕ್ಷೆಗೆ ಸಜ್ಜುಗೊಳಿಸಲು ವಿವಿ ಮುಂದಾಗಿದೆ. ವಾಟ್ಸ್‌ಆ್ಯಪ್‌ ಮೂಲಕ ವಿದ್ಯಾರ್ಥಿಗಳಿಗೆ ಪಾಠ ಪ್ರವಚನದ ರೆಕಾರ್ಡಿಂಗ್‌ ಕಳುಹಿಸಲಾಗುತ್ತಿದ್ದು, ಜೂಮ್‌ ಆ್ಯಪ್‌ ಮೂಲಕ ಉಳಿದಿರುವ ಶೇ. 30ರಷ್ಟುಸಿಲೆಬಸ್‌ನ್ನು ಪೂರ್ಣಗೊಳಿಸಲಾಗುವುದು ಎಂದು ಹೇಳಿದ್ದಾರೆ. 
 

Latest Videos
Follow Us:
Download App:
  • android
  • ios