ಕೊರೋನಾ ಭೀತಿ: ರೈಲ್ವೆಯಿಂದ 80 ಸಾವಿರ ಐಸೋಲೇಷನ್ ಬೋಗಿ
ಹುಬ್ಬಳ್ಳಿ ನೈಋುತ್ಯ ರೈಲ್ವೆ ವತಿಯಿಂದ 312 ಐಸೋಲೇಷನ್ ಬೋಗಿ ನಿರ್ಮಾಣ| ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನಂತೆ ದೇಶಾದ್ಯಂತ ಐಸೋಲೇಷನ್ ಬೋಗಿ ನಿರ್ಮಾಣ| ರೈಲ್ವೆ ಇಲಾಖೆ ಕೊರೋನಾದಿಂದ ಉಂಟಾಗಬಹುದಾದ ಪರಿಸ್ಥಿತಿ ಎದುರಿಸಲು ಸನ್ನದ್ಧ|
ಹುಬ್ಬಳ್ಳಿ(ಏ.11): ರೈಲ್ವೆ ಇಲಾಖೆಯು ದೇಶದಲ್ಲಿ 10 ದಿನದಲ್ಲಿ 80000 ಬೆಡ್‌ಗಳ ಐಸೋಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಿದೆ. ಹುಬ್ಬಳ್ಳಿ ನೈಋುತ್ಯ ರೈಲ್ವೆ ವತಿಯಿಂದ 312 ಐಸೋಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ಸುರೇಶ್ ಅಂಗಡಿ ತಿಳಿಸಿದ್ದಾರೆ.
ಹುಬ್ಬಳ್ಳಿಯ ರೈಲ್ವೆ ವರ್ಕ್‌ಶಾಪ್‌ನಲ್ಲಿ ನಿರ್ಮಿಸಲಾಗಿರುವ ಐಸೋಲೇಷನ್ ಬೋಗಿಗಳನ್ನು ವೀಕ್ಷಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕನಸಿನಂತೆ ದೇಶಾದ್ಯಂತ ಐಸೋಲೇಷನ್ ಬೋಗಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ 5000 ಸ್ಲೀಪರ್ ಬೋಗಿಗಳನ್ನು ಐಸೋಲೇಷನ್ ಬೋಗಿಗಳನ್ನಾಗಿ ಪರಿವರ್ತಿಸಲಾಗಿದೆ. ಒಟ್ಟು 3,20,000 ಐಸೋಲೇಷನ್ ಬೆಡ್‌ಗಳನ್ನು ರೈಲ್ವೆ ಇಲಾಖೆಯಿಂದ ನಿರ್ಮಿಸುವ ಗುರಿ ಹೊಂದಲಾಗಿದೆ. ಈಗ ನಿರ್ಮಿಸಿರುವ ಐಸೋಲೇಷನ್ ಬೋಗಿಗಳನ್ನು ಆರೋಗ್ಯ ಇಲಾಖೆ ಹಾಗೂ ಗೃಹ ಇಲಾಖೆ ನಿರ್ದೇಶನದ ಮೇರೆಗೆ, ಅಗತ್ಯ ಇರುವ ಕಡೆ ಸೇವೆಗಾಗಿ ಕಳಿಸಿಕೊಡಲಾಗುವುದು ಎಂದರು.
ರೈಲು ಬೋಗಿಯಲ್ಲೇ ಕೊರೋನಾ ಆಸ್ಪತ್ರೆ: ಮೋದಿ ಐಡಿಯಾ!
ನೈಋುತ್ಯ ರೈಲ್ವೆಯ ಹುಬ್ಬಳ್ಳಿ, ಮೈಸೂರು, ಬೆಂಗಳೂರು ವಿಭಾಗ ಹಾಗೂ ವರ್ಕ್‌ಶಾಪ್‌ಗಳಲ್ಲಿ 312 ಐಸೋಲೇಷನ್ ಬೋಗಿಗಳನ್ನು ನಿರ್ಮಿಸಲಾಗಿದೆ. ಇಲಾಖೆಯು ಕೊರೋನಾದಿಂದ ಉಂಟಾಗಬಹುದಾದ ಪರಿಸ್ಥಿತಿಯನ್ನು ಎದುರಿಸಲು ಸನ್ನದ್ಧವಾಗಿದೆ. ಸದ್ಯ ಎಲ್ಲ ಪ್ರಯಾಣಿಕರ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ. ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ಸಲುವಾಗಿ ಸರಕು ಸಾಗಾಣಿಕೆ ರೈಲುಗಳು ಸಂಚಾರ ನಡೆಸುತ್ತಿವೆ ಎಂದು ವಿವರಿಸಿದರು.