ಉತ್ತರಕನ್ನಡ: ಮತ್ತೆ ಮುನ್ನೆಲೆಗೆ ಬಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಡಿಕೆ, ಕರವೇಯಿಂದ ಬಂದ್ ಎಚ್ಚರಿಕೆ
ಉತ್ತರಕನ್ನಡ ಜಿಲ್ಲೆ ಆದಾಯ ಕೊಡುವ ಕಾರ್ಖಾನೆಯಲ್ಲ. ಜಿಲ್ಲೆಯ ಜನರು ಟ್ಯಾಕ್ಸ್ ನೀಡ್ತಿದ್ದಾರೆ. ನಾವೇನು ಹಣದ ಮಷಿನ್ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಕರ್ನಾಟಕ ರಕ್ಷಣಾ ವೇದಿಕೆ
ಉತ್ತರಕನ್ನಡ(ಅ.04): ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ ಬಳಿಕವೂ ಸೈಲೆಂಟಾಗಿದ್ದ ಉತ್ತರಕನ್ನಡ ಜಿಲ್ಲೆಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಬೇಡಿಕೆ ಇದೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜಿಲ್ಲೆಯ ರಾಜಕಾರಣಗಳಿಗೆ ಇಚ್ಛಾ ಶಕ್ತಿಯ ಕೊರತೆಯ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣ ಅಸಮಾಧಾನ ವ್ಯಕ್ತಪಡಿಸಿದೆ.
ಜಿಲ್ಲೆಯ ಉತ್ತಮ ಆಸ್ಪತ್ರೆಯಿರದ ಕಾರಣ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. ಆದರೆ, ಆಸ್ಪತ್ರೆಗಾಗಿ ಹೋರಾಡಬೇಕಿದ್ದ ರಾಜಕಾರಣಿಗಳು ಸ್ವಾರ್ಥದ ಬದುಕಿನಲ್ಲಿ ಮುಳುಗಿದ್ದಾರೆ. ಸರಕಾರ, ಜನಪ್ರತಿನಿಧಿಗಳು ಎಚ್ಚೆತ್ತುಕೊಳ್ಳದಿದ್ದಲ್ಲಿ ಉತ್ತರಕನ್ನಡ ಜಿಲ್ಲೆಯಾದ್ಯಂತ ಬಂದ್ ಕರೆ ನೀಡಲಾಗುವುದಲ್ಲದೇ, ಪ್ರತೀ ಪಂಚಾಯತ್ ವ್ಯಾಪ್ತಿಯಲ್ಲಿ ಹೋರಾಟ ನಡೆಸಲಾಗುವುದು. ಇದಕ್ಕೂ ಬಗ್ಗದಿದ್ದರೆ ನಮಗೆ ಬೇರೆ ರಾಜ್ಯ ಕೊಡಿ ಎಂದು ಜಿಲ್ಲೆಯ ಜನರಿಂದ ಹೇಳಿಸಬೇಕಾಗುತ್ತದೆ. ಉತ್ತರಕನ್ನಡ ಜಿಲ್ಲೆ ಆದಾಯ ಕೊಡುವ ಕಾರ್ಖಾನೆಯಲ್ಲ. ಜಿಲ್ಲೆಯ ಜನರು ಟ್ಯಾಕ್ಸ್ ನೀಡ್ತಿದ್ದಾರೆ. ನಾವೇನು ಹಣದ ಮಷಿನ್ ಅಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಕ್ರೋಶ ವ್ಯಕ್ತಪಡಿಸಿದೆ.
ಉತ್ತರಕನ್ನಡ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮತ್ತೆ ಒತ್ತಾಯ
ಬಿಜೆಪಿ ಆಡಳಿತವಿದ್ದಾಗ ಜಿಲ್ಲೆಯಲ್ಲಿ ಸೂಪರ್ ನಿರ್ಮಾಣಕ್ಕೆ ಸಾಕಷ್ಟು ಹೋರಾಟಗಳು ನಡೆದಿದ್ದವು. ಇದರ ಪರಿಣಾಮ ಅಂದಿನ ಆರೋಗ್ಯ ಸಚಿವರು ಕುಮಟಾಕ್ಕೆ ಭೇಟಿ ನೀಡಿ ಆಸ್ಪತ್ರೆ ನಿರ್ಮಾಣಕ್ಕೆ ಸ್ಥಳ ಪರಿಶೀಲನೆ ಕೂಡಾ ನಡೆಸಿ ತೆರಳಿದ್ದರು. ಸ್ಥಳ ಅಂತಿಮಗೊಂಡರೂ ಬಿಜೆಪಿ ಆಡಳಿತ ಅಸ್ಪತ್ರೆ ನಿರ್ಮಾಣ ಸಾಧ್ಯವಾಗಿರಲಿಲ್ಲ. ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಅಸ್ಥಿತ್ವಕ್ಕೆ ಬಂದ ಪ್ರಾರಂಭದಲ್ಲಿ ಸಚಿವರು, ಶಾಸಕರು ಕೂಡಾ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಹಾಗೂ ಎಮರ್ಜೆನ್ಸಿ ಆಸ್ಪತ್ರೆ ನಿರ್ಮಾಣದ ಬಗ್ಗೆಯೂ ಭರವಸೆ ನೀಡಿದ್ರು. ಆದರೆ, ಈವರೆಗೂ ಆಸ್ಪತ್ರೆ ನಿರ್ಮಾಣ ಸಂಬಂಧಿಸಿ ಯಾವುದೇ ಕೆಲಸ ಹಾಗೂ ಚಟುವಟಿಕೆಗಳು ನಡೆದಿಲ್ಲ. ಇದರಿಂದ ಜಿಲ್ಲೆಯ ಶಾಸಕರು ಹಾಗೂ ಸಚಿವರನ್ನು ಮತ್ತೆ ಎಚ್ಚರಗೊಳಿಸುವ ನಿಟ್ಟಿನಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸ್ವಾಭಿಮಾನಿ ಬಣ ಮತ್ತೆ ಜಿಲ್ಲೆಯಲ್ಲಿ ಆಸ್ಪತ್ರೆಯ ಬೇಡಿಕೆಯನ್ನು ಮುಂದಿರಿಸಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣ ಜಿಲ್ಲಾಧ್ಯಕ್ಷ ರಾಜು ಮಾಸ್ತಿಹಳ್ಳ ಹೇಳಿದ್ದಾರೆ.