ಉತ್ತರಕನ್ನಡ: ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಮತ್ತೆ ಒತ್ತಾಯ
ರಾಜ್ಯಕ್ಕೆ ಉತ್ತಮ ಆದಾಯ ನೀಡುವ ಜಿಲ್ಲೆಯಾಗಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಯಾವ ಇಚ್ಛಾಶಕ್ತಿಯ ಕೊರತೆ ಎದುರು ಕಾಣುತ್ತಿದೆ ಗೊತ್ತಾಗ್ತಿಲ್ಲ.
ಭರತ್ ರಾಜ್ ಕಲ್ಲಡ್ಕ, ಏಷಿಯಾನೆಟ್ ಸುವರ್ಣ ನ್ಯೂಸ್, ಕಾರವಾರ
ಉತ್ತರಕನ್ನಡ(ಜು.12): ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಆಗಬೇಕೆನ್ನುವುದು ಹಲವು ವರ್ಷಗಳ ಬೇಡಿಕೆ. ಕಳೆದ ಬಿಜೆಪಿ ಸರ್ಕಾರ ಅವಧಿಯಲ್ಲಿ ಈ ಸಂಬಂಧ ಜನರು ವಿವಿಧ ರೀತಿಯಲ್ಲಿ ಅಭಿಯಾನವೇ ನಡೆಸಿದ್ದರು. ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡಿದ್ದ ಕಾಂಗ್ರೆಸ್, ಪ್ರಸ್ತುತ ತನ್ನ ಆಡಳಿತವಿದ್ರೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡುವ ಬಗ್ಗೆ ವಿಶೇಷ ಗಮನ ಮಾತ್ರ ಹರಿಸುತ್ತಿಲ್ಲ. ಇದರಿಂದಾಗಿ ಕಾಂಗ್ರೆಸ್ ಸರಕಾರ ಕೂಡಾ ಇದನ್ನು ನಿರ್ಲಕ್ಷ್ಯಿಸಿದಲ್ಲಿ ಪ್ರತಿಭಟನೆ ನಡೆಸುವುದಾಗಿ ಹೋರಾಟಗಾರರು ಎಚ್ಚರಿಸಿದ್ದಾರೆ.
ಹೌದು, ಉತ್ತರಕನ್ನಡ ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ಇಲ್ಲದ ಪರಿಣಾಮ ಪ್ರತಿನಿತ್ಯ ಚಿಕಿತ್ಸೆಗಾಗಿ ಹೊರ ಜಿಲ್ಲೆ, ಹೊರ ರಾಜ್ಯದ ಆಸ್ಪತ್ರೆಗಳಿಗೆ ಓಡಾಡುವ ಪರಿಸ್ಥಿತಿ ಇದ್ದು, ಜಿಲ್ಲೆಯಲ್ಲಿಯೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಮಾಡಬೇಕು ಎಂದು ಹೋರಾಟವೇ ನಡೆದಿತ್ತು. ಈ ವೇಳೆ ಸ್ವತಃ ಆರೋಗ್ಯ ಸಚಿವರೇ ಜಿಲ್ಲೆಗೆ ಬಂದು ಆಸ್ಪತ್ರೆ ಮಾಡಲು ಸ್ಥಳ ಪರಿಶೀಲನೆ ಮಾಡಿಕೊಂಡು ಹೋಗಿದ್ದರು. ಅಲ್ಲದೇ, ಆಸ್ಪತ್ರೆ ನಿರ್ಮಾಣಕ್ಕೆ ಸಿದ್ದತೆ ನಡೆಸಿದ್ದರೂ ಆಸ್ಪತ್ರೆ ಮಾತ್ರ ನಿರ್ಮಾಣ ಆಗಿರಲಿಲ್ಲ. ಅಂದು ವಿರೋಧ ಪಕ್ಷವಾಗಿದ್ದ ಕಾಂಗ್ರೆಸ್ ಈ ವಿಚಾರವನ್ನು ರಾಜಕೀಯವಾಗಿ ಬಳಸಿಕೊಂಡಿದ್ದು, ತಮ್ಮ ಸರ್ಕಾರ ಆಡಳಿತಕ್ಕೆ ಬಂದ ಕೆಲವೇ ದಿನದಲ್ಲಿ ಶಂಕುಸ್ಥಾಪನೆ ಮಾಡುವುದಾಗಿ ಹೇಳಿತ್ತು.
ಉತ್ತರ ಕನ್ನಡ: 5 ತಾಲೂಕುಗಳಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿ!
ಪ್ರಸ್ತುತ, ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದೆಯಾದ್ರೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಸುದ್ದಿಯೇ ಇಲ್ಲ. ಮೊನ್ನೆಯಷ್ಟೇ ಬಜೆಟ್‌ನಲ್ಲಿ ಸಿಎಂ ಸಿದ್ದರಾಮಯ್ಯನವರು ಕಾರವಾರದ ಸರಕಾರಿ ಆಸ್ಪತ್ರೆಯ 450 ಬೆಡ್‌ಗಳ ಕಟ್ಟಡ ಕಾಮಗಾರಿಯನ್ನು ಆದ್ಯತೆ ಮೇಲೆ ಪೂರ್ಣಗೊಳಿಸುವುದಾಗಿ ತಿಳಿಸಿದ್ದರು. ಆದರೆ, ಕಳೆದ ಬಿಜೆಪಿ ಆಡಳಿತದಲ್ಲೇ ಈ ಯೋಜನೆಗೆ ಚಾಲನೆ ದೊರಕಿ ಕಟ್ಟಡ ಕಾಮಗಾರಿ ಅರ್ಧದಷ್ಟು ಪೂರ್ಣಗೊಂಡಿತ್ತು. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬಗ್ಗೆ ಕಾಂಗ್ರೆಸ್ ಮುಖಂಡರಲ್ಲಿ ಕೇಳಿದ್ರೆ, ಕುಮಟಾದ ಬದಲು ಕಾರವಾರದ ಸರಕಾರಿ ಆಸ್ಪತ್ರೆಯನ್ನೇ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಟ್ಟಕ್ಕೆ ಏರಿಸುತ್ತೇವೆ. ಟೆಕ್ನಾಲಜಿಗಳನ್ನು ತಂದಿಟ್ಟರೆ ಸಾಕಾಗುವುದಿಲ್ಲ. ಟ್ರಾಮಾ, ಎಮರ್ಜೆನ್ಸಿ ವಾರ್ಡ್ ಸೌಲಭ್ಯಗಳೊಂದಿಗೆ ವಿಶೇಷ ತಜ್ಞ ವೈದ್ಯರು ಲಭ್ಯವಿರುವಂತೆ ಮಾಡಿದರೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗುತ್ತದೆ ಎಂದು ಕಾರವಾರ ಶಾಸಕ ಸತೀಶ್ ಸೈಲ್ ಹೇಳಿದ್ದಾರೆ.
ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಮಾಡಲು ಶಾಸಕ ದಿನಕರ ಶೆಟ್ಟಿ ಬಹಳಷ್ಟು ಪ್ರಯತ್ನ ನಡೆಸಿದ್ದಾರೆ. ಆದರೆ, ಅಲ್ಲಿ ಎಲ್ಲಾ ಸೌಲಭ್ಯಗಳನ್ನು ಪ್ರಾರಂಭದಿಂದ ಮಾಡಬೇಕಾಗಿರುವುದರಿಂದ ಕಾರವಾರದಲ್ಲಿ ಇರುವ ಸೌಲಭ್ಯವನ್ನೇ ಮೇಲ್ದರ್ಜೆಗೇರಿಸಲಾಗುತ್ತದೆ. ಈ ವರ್ಷದಲ್ಲಿ 450 ಬೆಡ್‌ಗಳ ಕಟ್ಟಡದ ಕಾಮಗಾರಿ ಮುಗಿದ ಬಳಿಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ವಿಚಾರ ಕೈಗೆತ್ತಿಕೊಳ್ಳುತ್ತೇವೆ ಎಂದು ಶಾಸಕರು ಹೇಳಿದ್ದಾರೆ. ಆದರೆ, ಈ ನಡುವೆ ಕುಮಟಾದಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ನಿರ್ಮಾಣದ ಬೇಡಿಕೆಯೂ ಕಾಣಿಸಿಕೊಂಡಿದೆ.
ರಾಜ್ಯಕ್ಕೆ ಉತ್ತಮ ಆದಾಯ ನೀಡುವ ಜಿಲ್ಲೆಯಾಗಿರುವ ಉತ್ತರಕನ್ನಡ ಜಿಲ್ಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಯಾವ ಇಚ್ಛಾಶಕ್ತಿಯ ಕೊರತೆ ಎದುರು ಕಾಣುತ್ತಿದೆ ಗೊತ್ತಾಗ್ತಿಲ್ಲ. ಜಿಲ್ಲೆಗೆ ಕುಮಟಾ ತಾಲೂಕು ಮಧ್ಯವಿರುವ ಪ್ರದೇಶವಾಗಿದ್ದು, ಜನರಿಗೆ ಅನುಕೂಲವಾಗುವಂತೆ ಇಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ ಅಗತ್ಯವಿದೆ. ಒಂದು ವೇಳೆ ಆಸ್ಪತ್ರೆ ನಿರ್ಮಣ ವಿಚಾರದಲ್ಲಿ ಸರಕಾರ ನಿರ್ಲಕ್ಣ್ಯ ವಹಿಸಿದಲ್ಲಿ ಉಗ್ರ ಪ್ರತಿಭಟನೆ ನಡೆಸುವುದಾಗಿ ಹೋರಾಟಗಾರರು ಎಚ್ಚರಿಸಿದ್ದಾರೆ.