Asianet Suvarna News Asianet Suvarna News

ಬೆಂಗಳೂರು: ದೀಪಾವಳಿ ಹಬ್ಬದ ಬಳಿಕ ರೈತರಿಗೆ ಕಾರಂತ ಲೇಔಟ್‌ ಸೈಟ್‌..!

ಸುಪ್ರೀಂ ಕೋರ್ಟ್‌ ಆದೇಶದನ್ವಯ ಭೂಮಿ ಕಳೆದುಕೊಂಡಿರುವ ಭೂಮಾಲೀಕರಿಗೆ (ರೈತರು) ಮೊದಲ ಆದ್ಯತೆಯಲ್ಲಿ 40:60 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ನಿವೇಶನ ಕೊಡಬೇಕಿದೆ. ರೈತರಿಗೆ ಯಾವ ರೀತಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂಬುದೇ ಕಷ್ಟದ ಕೆಲಸ. 

Karanta Layout Site for Farmers after Diwali Festival in Bengaluru grg
Author
First Published Nov 12, 2023, 5:54 AM IST

ಬೆಂಗಳೂರು(ನ.11): ಡಾ। ಕೆ.ಶಿವರಾಮ ಕಾರಂತ ಬಡಾವಣೆಗೆಂದು ಜಮೀನು ನೀಡಿರುವ ಭೂಮಾಲೀಕರಿಗೆ 40:60 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ದೀಪಾವಳಿ ನಂತರ ಹಂಚಿಕೆ ಮಾಡುವ ಪ್ರಕ್ರಿಯೆ ಆರಂಭಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಿದ್ಧತೆ ನಡೆಸಿದೆ.

ಬಡಾವಣೆಯಲ್ಲಿ ಈವರೆಗೆ 34 ಸಾವಿರ ನಿವೇಶನಗಳ ನಿರ್ಮಾಣ ಮಾಡಲಾಗಿದ್ದು, ನಿಯಮದನ್ವಯ ಹರಾಜು ಮಾಡಬೇಕಾಗಿರುವ 4500 ಮೂಲೆ ನಿವೇಶನಗಳು ಸಹ ಇದರಲ್ಲಿ ಒಳಗೊಂಡಿವೆ. ಸದ್ಯ 29 ಸಾವಿರ ನಿವೇಶಗಳಿಗೆ ಸಂಖ್ಯೆ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಬಡಾವಣೆಗೆ ಮೂಲಸೌಕರ್ಯ ಒದಗಿಸುವ ಕಾರ್ಯದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿ ಮುಕ್ತಾಯವಾಗಿದೆ. ನಿವೇಶನ ಗುರುತಿಸುವ ಮತ್ತು ಸಂಖ್ಯೆ ನೀಡುವ ಕಾರ್ಯ ಆರಂಭಿಸಲಾಗಿದೆ. ಸಮಾನಾಂತರವಾಗಿ, ವಿದ್ಯುದೀಕರಣ, ನೀರು ಸರಬರಾಜು ಮತ್ತು ಒಳಚರಂಡಿಯ ಕಾಮಗಾರಿ ಪ್ರಗತಿಯಲ್ಲಿದೆ.

ಬಿಡಿಎ ಯಡವಟ್ಟಿಗೆ ಸೈಟ್ ಮಾಲೀಕ ಕಂಗಾಲು: ಸೈಟ್ ಮಾರಲಾಗದೆ, ಮನೆ ಕಟ್ಟಲಾಗದೆ ಪರದಾಟ !

ಸುಪ್ರೀಂ ಕೋರ್ಟ್‌ ಆದೇಶದನ್ವಯ ಭೂಮಿ ಕಳೆದುಕೊಂಡಿರುವ ಭೂಮಾಲೀಕರಿಗೆ (ರೈತರು) ಮೊದಲ ಆದ್ಯತೆಯಲ್ಲಿ 40:60 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ನಿವೇಶನ ಕೊಡಬೇಕಿದೆ. ರೈತರಿಗೆ ಯಾವ ರೀತಿಯಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಬೇಕೆಂಬುದೇ ಕಷ್ಟದ ಕೆಲಸ. ಬಡಾವಣೆಯ ವಿವಿಧ ಪ್ರದೇಶಗಳಲ್ಲಿ ಇರುವ ಕೆಲವು ನಿವೇಶನಗಳಿಗೆ ಬೇಡಿಕೆ ಹೆಚ್ಚಿರುತ್ತದೆ. ಇನ್ನು ಕೆಲವು ನಿವೇಶನಗಳಿಗೆ ಬೇಡಿಕೆ ಕಡಿಮೆ ಇರುತ್ತದೆ. ವಾಸ್ತು ಪ್ರಕಾರವೇ ನಿವೇಶನ ಇರಬೇಕು ಎಂದು ಕೆಲವರು ಪಟ್ಟು ಹಿಡಿಯುತ್ತಾರೆ. ಹೀಗೆ ಸಾಕಷ್ಟು ಗೊಂದಲಗಳು ಇವೆ. ಇವುಗಳನ್ನು ನಿವಾರಣೆ ಮಾಡಿಕೊಂಡು ನಿವೇಶನಗಳನ್ನು ಹಂಚಿಕೆ ಮಾಡಬೇಕಾಗುತ್ತದೆ.

ಅದಕ್ಕಾಗಿ ಬಿಡಿಎ ನೀತಿ ಕ್ರಮಗಳನ್ನು ಮಾಡುತ್ತಿದ್ದು, ಅದರ ಪ್ರಕಾರ ಹಂಚಿಕೆಗೆ ಸುಲಭವಾಗಲಿದೆ. ಬಿಡಿಎ ಅಧಿಕಾರಿಗಳು ನಿವೇಶನ ಹಂಚಿಕೆಯ ನಿಯಮ ರೂಪಿಸಿದ ನಂತರ ಸುಪ್ರೀಂ ಕೋರ್ಟ್‌ ಡಾ। ಶಿವರಾಮ ಕಾರಂತ ಬಡಾವಣೆ ನಿರ್ಮಾಣದ ಉಸ್ತುವಾರಿಗೆಂದು ನೇಮಿಸಿರುವ ಹೈಕೋರ್ಟ್‌ ವಿಶ್ರಾಂತ ನ್ಯಾ.ಎ.ವಿ.ಚಂದ್ರಶೇಖರ್‌ ನೇತೃತ್ವದ ಸಮಿತಿಗೆ ವರದಿ ನೀಡಲಿದ್ದು, ಅದನ್ನು ಸಮಿತಿಯು ಪರಿಶೀಲಿಸಿ ಒಪ್ಪಿಗೆ ನೀಡಿದ ನಂತರವೇ ನಿವೇಶನ ಹಂಚಿಕೆ ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ದೀಪಾವಳಿ ಸಂಭ್ರಮ, ಸಡಗರ ಮುಗಿಯುತ್ತಿದ್ದಂತೆ ನಿಯಮಗಳ ಪಟ್ಟಿಯನ್ನು ಸಮಿತಿ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ ಬಿಡಿಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.

ಸುಪ್ರೀಂ ಕೋರ್ಟ್ ಆದೇಶದನ್ವಯ ಕಂದಾಯ ನಿವೇಶನ ಹೊಂದಿದ್ದು, ಜಿಲ್ಲಾ ನ್ಯಾಯಾಧೀಶರ ಸಮಿತಿಗೆ ಅರ್ಜಿ ಸಲ್ಲಿಸಿರುವ ಕಂದಾಯ ನಿವೇಶನದಾರರಿಗೆ ಬಿಡಿಎ ನಿವೇಶನಗಳ ಹಂಚಿಕೆ ನಿಯಮದ ಅಡಿ ಅರ್ಹತೆ ಆಧಾರದಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಈ ಸಂಬಂಧ ಸುಮಾರು 2 ಸಾವಿರ ಮಂದಿ ಅರ್ಹತೆ ಹೊಂದಿರುವುದಾಗಿ ಅಂದಾಜಿಸಲಾಗಿದೆ. 40:60 ಅನುಪಾತದ ಯೋಜನೆಯಡಿ ಸ್ವಯಂ ಪ್ರೇರಿತವಾಗಿ ಜಮೀನನ್ನು ಸ್ವಾಧೀನಕ್ಕೆ ನೀಡುವ ಭೂಮಾಲೀಕರು ಬಿಡಿಎದಿಂದ ಅಭಿವೃದ್ದಿಪಡಿಸಿದ ನಿವೇಶನಗಳನ್ನು ಪಡೆಯಬಹುದು. ಭೂಮಾಲೀಕರು ಒಂದು ಎಕರೆ ಜಮೀನನ್ನು ಬಿಡಿಎ ಸ್ವಾಧೀನಕ್ಕೆ ನೀಡಿದ್ದಲ್ಲಿ ಅಂತಹ ಭೂಮಾಲೀಕರು 9583 ಚದರ ಅಡಿಗಳಷ್ಟು ಅಭಿವೃದ್ಧಿ ಹೊಂದಿದ ನಿವೇಶನವನ್ನು ಪಡೆಯಬಹುದು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾಗಿ ಎನ್. ಜಯರಾಂ ನೇಮಕ

ಶೇ.15 ಸಿಎ ನಿವೇಶನ

ಬಡಾವಣೆ ನಿರ್ಮಾಣಕ್ಕಾಗಿ ಸ್ವಾಧೀನ ಪಡಿಸಿಕೊಂಡಿರುವ ಭೂಮಿಯ ಪೈಕಿ ಶೇ.15ರಷ್ಟು ಪ್ರದೇಶವನ್ನು ಉದ್ಯಾನವನ ಮತ್ತು ಆಟದ ಮೈದಾನಕ್ಕೆ ಕಾಯ್ದಿರಿಸಬೇಕಿದೆ. ಜೊತೆಗೆ ಸುಪ್ರೀಂ ಕೋರ್ಟ್ ಆದೇಶದ ಅನ್ವಯ 150 ಎಕರೆಯಷ್ಟು ಜಮೀನನ್ನು ರಾಜೀವ್‌ಗಾಂಧಿ ವಸತಿ ನಿಗಮದ ಪರವಾಗಿ ಗುರುತಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ನೀಡುವ ನಿವೇಶನಗಳನ್ನು ಇದರಲ್ಲಿ ಹೊಂದಾಣಿಕೆ ಮಾಡುವುದಾಗಿ ಬಿಡಿಎ ತಿಳಿಸಿದೆ.

ಜನರಿಗೆ 12 ಸಾವಿರ ನಿವೇಶನ

ಡಾ। ಶಿವರಾಮ ಕಾರಂತ ಬಡಾವಣೆಯಲ್ಲಿ ಮೊದಲ ಹಂತದಲ್ಲಿ ಭೂಮಾಲೀಕರ ರೈತರಿಗೆ ನಿವೇಶನಗಳ ಹಂಚಿಕೆ ಮಾಡಲು ಆದ್ಯತೆ ನೀಡಲಾಗಿದೆ. ನಂತರ 12 ಸಾವಿರ ನಿವೇಶನಗಳನ್ನು ಸಾರ್ವಜನಿಕರಿಗೆ ಹಂಚಿಕೆ ಮಾಡುವ ಪ್ರಕ್ರಿಯೆ ಆರಂಭಗೊಳ್ಳಲಿದ್ದು, ಅರ್ಜಿಗಳನ್ನು ಆಹ್ವಾನಿಸಲಾಗುವುದು. ನಿವೇಶನಗಳ ಅಳತೆಗೆ ತಕ್ಕಂತೆ ದರ ನಿಗದಿ ಮಾಡಲಾಗುವುದು ಎಂದು ಬಿಡಿಎ ಹಿರಿಯ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ತಿಳಿಸಿದರು.

Follow Us:
Download App:
  • android
  • ios