Asianet Suvarna News Asianet Suvarna News

ಅದ್ಧೂರಿಯಾಗಿ ನೆರವೇರಿದ 'ಕನ್ನಡಪ್ರಭ' ಬೆಳಗಾವಿ ಆವೃತ್ತಿ ಬೆಳ್ಳಿ ಹಬ್ಬ!

ಬೆಳಗಾವಿ ಕನ್ನಡಪ್ರಭ ಆವೃತ್ತಿಗೆ ರಜತ ಮಹೋತ್ಸವದ ಸಂಭ್ರಮ. ತೋಂಟದಾರ್ಯ ಜಗದ್ಗುರುಗಳ ಸಾನಿಧ್ಯ, ಗೋವಿಂದ ಕಾರಜೋಳ ಉದ್ಘಾಟನೆ. 'ಕನ್ನಡಪ್ರಭ'ದಲ್ಲಿ ನನ್ನ ಹೆಸರು ನೋಡಿ ಸಂಭ್ರಮಿಸಿದವಳು ನಾನು ಎಂದ ಲಕ್ಷ್ಮೀ ಹೆಬ್ಬಾಳ್ಕರ್.

kannada prabha daily news paper belagavi edition silver jubilee celebration gow
Author
First Published Sep 17, 2022, 8:33 PM IST

ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್ 

ಬೆಳಗಾವಿ (ಸೆ.17): ‌ಕನ್ನಡಪ್ರಭ ದಿನಪತ್ರಿಕೆ ಬೆಳಗಾವಿ ಆವೃತ್ತಿ ಆರಂಭವಾಗಿ 25 ವಸಂತಗಳು ಪೂರೈಸಿದ ಹಿನ್ನೆಲೆ ಬೆಳ್ಳಿ ಹಬ್ಬ ಸಮಾರಂಭ ಆಯೋಜಿಸಲಾಗಿತ್ತು. ಬೆಳಗಾವಿಯ ಕೆಎಲ್‌ಇ ಸಂಸ್ಥೆಯ ಜಿರಗೆ ಸಭಾಭವನದಲ್ಲಿ ಅದ್ಧೂರಿಯಾಗಿ ಕಾರ್ಯಕ್ರಮ ನೆರವೇರಿತು. ಕಾರ್ಯಕ್ರಮಕ್ಕೆ ಆಗಮಿಸುವ ಗಣ್ಯರಿಗೆ ಡೊಳ್ಳು ಬಾರಿಸುವ ಮೂಲಕ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ಸಮಾರಂಭದ ಸಾನಿಧ್ಯವನ್ನು ಡಂಬಳ ಗದಗ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ.ತೋಂಟದ ಸಿದ್ದರಾಮ ಮಹಾಸ್ವಾಮೀಜಿ ವಹಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ಪ್ರಧಾನ ಸಂಪಾದಕರಾದ ರವಿ ಹೆಗಡೆ ವಹಿಸಿದ್ರೆ, ಕಾರ್ಯಕ್ರಮದ ಉದ್ಘಾಟನೆಯನ್ನು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೆರವೇರಿಸಿದರು. ಕನ್ನಡಪ್ರಭ ಬೆಳಗಾವಿ ಆವೃತ್ತಿ 25ನೇ ಬೆಳ್ಳಿ ಹಬ್ಬದ ವಿಶೇಷ ಸಂಚಿಕೆಯನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯರಾದ ಬಾಳಾಸಾಹೇಬ್ ಲೋಕಾಪುರ ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಆಗಮಿಸಿದ್ದರು. ಕಾರ್ಯಕ್ರಮಕ್ಕೂ ಮುನ್ನ ಕನ್ನಡಪ್ರಭ ಬೆಳಗಾವಿ ಆವೃತ್ತಿ ನಡೆದು ಬಂದ ರೀತಿ ಹಾಗೂ ವಸ್ತುನಿಷ್ಠ ನಿಷ್ಪಕ್ಷಪಾತ ವರದಿಗಳು ಹಾಗೂ ಜನರ ಮೆಚ್ಚುಗೆ ಗಳಿಸಿದ ರೀತಿಯ ಬಗ್ಗೆ ಪ್ರಾತ್ಯಕ್ಷಿಕೆ ಪ್ರದರ್ಶಿಸಲಾಯಿತು. 

ಕನ್ನಡಪ್ರಭ ಬೆಳಗಾವಿ ಆವೃತ್ತಿ ಬೆಳ್ಳಿಮಹೋತ್ಸವ ನಿಮಿತ್ತ ವಿಶೇಷ ಅಂಚೆ ಲಕೋಟೆ ಬಿಡುಗಡೆ
ಇನ್ನು ಕನ್ನಡಪ್ರಭ ಬೆಳಗಾವಿ ಆವೃತ್ತಿಯ ಬೆಳ್ಳಿ ಮಹೋತ್ಸವ ಸಂಭ್ರಮಾಚರಣೆ ಹಿನ್ನೆಲೆ ಬೆಳಗಾವಿ ಆವೃತ್ತಿಯ ಬೆಳ್ಳಿ‌ಮಹೋತ್ಸವ ನಿಮಿತ್ತ ವಿಶೇಷ ಅಂಚೆ ಲಕೋಟೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಬಿಡುಗಡೆಗೊಳಿಸಿದರು‌. ಕನ್ನಡ ಮಾಧ್ಯಮ ಲೋಕದಲ್ಲೇ ವಿಶೇಷ ಬಗೆಯ ಪ್ರಯೋಗ ಇದಾಗಿತ್ತು‌. ವಿಶೇಷ ಅಂಚೆ ಲಕೋಟೆ ಕುರಿತು ಮಾತನಾಡಿದ ಬೆಳಗಾವಿ ಜಿಲ್ಲೆಯ ಅಂಚೆ ಅಧೀಕ್ಷಕ ವಿಜಯ ನರಸಿಂಹ, 'ಅಂಚೆ ಇಲಾಖೆ ಸಹಯೋಗದಿಂದ ವಿಶೇಷ ಅಂಚೆ ಲಕೋಟೆ ಬಿಡುಗಡೆ ಮಾಡಿದ್ದು ಒಟ್ಟು ಮೂರು ಸಾವಿರ ಅಧಿಕೃತ ಅಂಚೆ ಲಕೋಟೆ ಮುದ್ರಿಸಲಾಗಿದೆ. ದೇಶಾದ್ಯಂತ ಎಲ್ಲ ಅಂಚೆ ಕಚೇರಿಗಳಿಗೆ ಈ ವಿಶೇಷ ಅಂಚೆ ಲಕೋಟೆ ತಲುಪಿದೆ. ಪ್ರತಿಯೊಂದು ಅಂಚೆ ಇಲಾಖೆಯಲ್ಲಿ ಈ ವಿಶೇಷ ಅಂಚೆ ಲಕೋಟೆ ಲಭ್ಯವಿದ್ದು. ಈ ರೀತಿಯ ಅಂಚೆ ಲಕೋಟೆ ಬಿಡುಗಡೆ ಮಾಡಿದ್ದು ಪ್ರಪ್ರಥಮ  ಸ್ಥಾನ ಕನ್ನಡಪ್ರಭದ್ದು' ಎಂದು ತಿಳಿಸಿದರು. ಇದೇ ವೇಳೆ ಕನ್ನಡಪ್ರಭ ಬಳಗದ ವತಿಯಿಂದ ಭಾರತೀಯ ಅಂಚೆ ಇಲಾಖೆಗೆ ಅಭಿನಂದನೆ ಸಲ್ಲಿಸಲಾಯಿತು.

ಬೆಳಗಾವಿ ಆವೃತ್ತಿ ಜೊತೆಗಿನ ಒಡನಾಟ ಸ್ಮರಿಸಿದ ರವಿ ಹೆಗಡೆ
'ಕನ್ನಡಪ್ರಭ' ಬೆಳಗಾವಿ ಆವೃತ್ತಿಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆ ಬೆಳಗಾವಿ ಆವೃತ್ತಿ ಆರಂಭದ ದಿನಗಳ ಬಗ್ಗೆ ಮೆಲುಕು ಹಾಕಿದರು. 'ನನಗೆ ಒಂದು ಧನ್ಯತೆ ಅನಿಸುತ್ತೆ. ಕಾಲು ಶತಮಾನ ಕಾಲ ಬೆಳಗಾವಿ ಆವೃತ್ತಿ ಆಚರಿಸಿದ್ದೇವೆ. ಇದು ಕನ್ನಡಪ್ರಭ ಇತಿಹಾಸ ಮಾತ್ರ ಅಲ್ಲ. ಬೆಳಗಾವಿ ಭಾಗದ ಹಲವು ವ್ಯಕ್ತಿಗಳ, ಶಕ್ತಿಗಳ ಈ ಭಾಗದ ಇತಿಹಾಸ. ಬೆಳಗಾವಿ ಆವೃತ್ತಿ ಆರಂಭಿಸಿದಾಗ ಲಕ್ಷ್ಮೀ ಹೆಬ್ಬಾಳ್ಕರ್, ಸತೀಶ್ ಜಾರಕಿಹೊಳಿ ಇನ್ನು ರಾಜಕೀಯಕ್ಕೆ ಕಾಲಿಟ್ಟರಲಿಲ್ಲ. ಹಿರಿಯ ಪತ್ರಕರ್ತ ಸರಜೂ ಕಾಟ್ಕರ್ ನೋಡಲು ಬರುತ್ತಿದ್ದ ಹುಡುಗ ಸತೀಶ್ ಜಾರಕಿಹೊಳಿ ಈಗ ಅವರ ಮನೆಯಲ್ಲಿ ಮೂವರು ಲೀಡರ್ ಇದ್ದಾರೆ. ಆ ವೇಳೆ ಡಿ.ಬಿ.ಇನಾಂದಾರ್, ಬಿ.ಶಂಕರಾನಂದ ರೀತಿಯ ಅನೇಕ ಘಟಾನುಘಟಿ ನಾಯಕರಿದ್ದರು.

 ಮಲಪ್ರಭಾ, ಘಟಪ್ರಭಾದಲ್ಲಿ ಎಷ್ಟು ಕ್ಯೂಸೆಕ್ ನೀರು ಹರಿದು ಹೋಗಿದೆಯೋ‌ ಕನ್ನಡದ ಸಾಕ್ಷಿ ಪ್ರಜ್ಞೆ ಆಗಿ ಉಳಿದು ಕೊಂಡಿದ್ದು ಕನ್ನಡಪ್ರಭ' ಎಂದರು. ಕನ್ನಡಪ್ರಭ ಬೆಳಗಾವಿ ಆವೃತ್ತಿಯಲ್ಲಿ ಕೆಲಸ ಮಾಡಿದ ಅನುಭವ ಹಂಚಿಕೊಂಡ ರವಿ ಹೆಗಡೆ, 'ಜೆ.ಹೆಚ್.ಪಟೇಲ್ ಸರ್ಕಾರವಿದ್ದ ವೇಳೆ ಬೆಳಗಾವಿ ಜಿಲ್ಲೆ ವಿಭಜನೆ ಪ್ರಸ್ತಾಪ ಇತ್ತು. ಗೋಕಾಕ, ಚಿಕ್ಕೋಡಿ ಜಿಲ್ಲೆ ಆಗುವ ಪ್ರಸ್ತಾಪ ಇತ್ತು. ಆಗ ಇದು ಸೂಕ್ಷ್ಮ ವಿಚಾರ ಅಲ್ಲಿಯ ಜನಪ್ರತಿನಿಧಿಗಳ ಕೇಳಿ ತೀರ್ಮಾನ ಮಾಡ್ತೀನಿ ಅಂತಾ ಜೆ.ಹೆಚ್. ಪಟೇಲ್ ಹೇಳಿದ್ದರು. ನಾನು ಆಗ ಜ್ಯೂನಿಯರ್ ರಿಪೋರ್ಟರ್ ಆಗಿ ಬೆಳಗಾವಿಯಲ್ಲಿ ಕೆಲಸ ಮಾಡುತ್ತಿದ್ದೆ‌. ಆಗ ಬೆಳಗಾವಿ ಜಿಲ್ಲೆಯ 14 ಶಾಸಕರ ಅಭಿಪ್ರಾಯ ಪಡೆದು ಬರೆದಿದ್ದೆ. ಆಗ ಜೆ.ಹೆಚ್.ಪಟೇಲ್‌ರು ಬೆಳಗ್ಗೆ 7 ಗಂಟೆಗೆ ಪತ್ರಿಕೆ ಓದಿ ಅಂದಿನ ಕನ್ನಡಪ್ರಭ ಸಂಪಾದಕರಿಗೆ ಕರೆ ಮಾಡಿದ್ದರು. 

ಗೋಕಾಕ ಜಿಲ್ಲೆ ಮಾಡುವ ಯೋಜನೆ ಕೈ ಬಿಟ್ಟಿದ್ದೇನೆ ಎಂದಿದ್ದರು. ಗೋಕಾಕ ಚಿಕ್ಕೋಡಿ ವಿಭಜನೆ ಮಾಡಿದ್ರೆ ಕನ್ನಡಕ್ಕೆ ಹಿನ್ನಡೆ ಎಂಬ ಮಾತು ಸಹ ಆಗಿತ್ತು. ನಾವೂ ಸಹ ಕನ್ನಡಪ್ರಭ ಆರಂಭ ಮಾಡಿದಾಗ ನಮಗೆ ಎಲ್ಲರೂ ಹೇಳಿದ್ದರು. 25 ವರ್ಷಗಳ ಹಿಂದೆ ಬೆಳಗಾವಿಯಲ್ಲಿ ಎಕಾನಮಿ(ಆರ್ಥಿಕತೆ) ಸ್ಟ್ರಾಂಗ್ ಇರಲಿಲ್ಲ. ಅಲ್ಲಿ ಏಕೆ ಪತ್ರಿಕೆ ಆವೃತ್ತಿ ಮಾಡ್ತೀರಿ ಅಂದಿದ್ರು. ಆಗ ಅಂದಿನ ಸಂಪಾದಕರಾಗಿದ್ದ ವೈಎನ್‌ಕೆ ಎಲ್ಲಿ ಕನ್ನಡಿಗರಿಗೆ ಅಗತ್ಯ ಇದೆಯೋ ಅಲ್ಲಿ ಹೋಗಬೇಕು ಎಂದಿದ್ದರು. ಎಲ್ಲಿ ಕನ್ನಡದ ಅಗತ್ಯ ಇದೆಯೋ ಅಲ್ಲಿ ಪತ್ರಿಕೆ ತಗೆಯಬೇಕು ಅಂದಿದ್ದರು. ಬೆಳಗಾವಿ ಇವತ್ತು ಬದಲಾಗಿದೆ, ಆರ್ಥಿಕ ಅಭಿವೃದ್ಧಿ ಕಂಡಿದೆ. ಶೈಕ್ಷಣಿಕ ಕೇಂದ್ರವಾಗಿ ಬೆಳಗಾವಿ ಬೆಳವಣಿಗೆ ಆಗುತ್ತಿದೆ‌‌. ರಾಜಕಾರಣಿಗಳ ಜೊತೆ ನಮ್ಮದು ಲವ್ & ಹೇಟ್ ರಿಲೇಷನ್‌ಶಿಪ್. ಬೆಳಗಾವಿ ಬೆಳವಣಿಗೆ ಹೊಂದಿದ ಸಂತೃಪ್ತಿ ಇದೆ. 

ಹುಬ್ಬಳ್ಳಿ ಧಾರವಾಡ ಕ್ಕಿಂತಲೂ ಬೆಳಗಾವಿ ಚೆನ್ನಾಗಿ ಬೆಳವಣಿಗೆ ಆಗಿದೆ. 25 ವರ್ಷದ ಹಿಂದಿಗೂ 25 ವರ್ಷದ ಇಂದಿಗೂ ಅಜಗಜಾಂತರ ವ್ಯತ್ಯಾಸವಿದೆ. ನಾನು 30 ವರ್ಷದ ಹಿಂದೆ ಬೆಂಗಳೂರಿಗೆ ಹೋದಾಗ ಹೇಗಿತ್ತೋ ಈಗ ಬೆಳಗಾವಿ ಕಾಣುತ್ತಿದೆ.‌ನನ್ನ ಮದುವೆಯಾಗಿದ್ದು ಬೆಳಗಾವಿಯಲ್ಲಿ. ನನ್ನ ಸಹೋದ್ಯೋಗಿಯನ್ನು ನಾನು ಬೆಳಗಾವಿಯಲ್ಲಿ ಮದುವೆಯಾದೆ, ಒಂದ ರೀತಿ ಬೆಳಗಾವಿ ಆವೃತ್ತಿ ಬೆಳ್ಳಿ ಮಹೋತ್ಸವ ಜೊತೆ ನಮ್ಮ ವಿವಾಹದ ಬೆಳ್ಳಿ ಮಹೋತ್ಸವವು ಹೌದು ಎಂದರು‌.

ಪತ್ರಿಕೋದ್ಯಮ ಬಹಳ ಶ್ರೇಷ್ಠವಾದ ವೃತ್ತಿ ಎಂದ ಗೋವಿಂದ ಕಾರಜೋಳ
ಕಾರ್ಯಕ್ರಮ ಉದ್ಘಾಟಿಸಿದ ಬಳಿಕ ಮಾತನಾಡಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, 'ಪತ್ರಿಕೋದ್ಯಮ ಬಹಳ ಮುಖ್ಯವಾದ ವೃತ್ತಿ. ಲಾಭ ನಷ್ಟ ನೋಡಿ ಮಾಡುವ ಉದ್ಯಮ ಇದಲ್ಲ. ಈ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹಾತ್ಮ ಗಾಂಧೀಜಿಯವರು ಪತ್ರಕರ್ತ. ಸ್ವಾತಂತ್ರ್ಯ ಬಂದ ಬಳಿಕ ಸಂವಿಧಾನ ಬರೆದುಕೊಟ್ಟ ಬಾಬಾಸಾಹೇಬ್ ಅಂಬೇಡ್ಕರ್ ಸಹ ಪತ್ರಕರ್ತರಾಗಿದ್ದರು. ವಿಶ್ವಗುರು ಬಸವಣ್ಣ ಆದಿಯಾಗಿ ಎಲ್ಲರೂ ಕನ್ಮಡ ಉಳಿಸಲು ಬೆಳೆಸಲು ಕೊಡುಗೆ ಕೊಟ್ಟವರು. ಪತ್ರಿಕೋದ್ಯಮ ಬಹಳ ಶ್ರೇಷ್ಠವಾದ ಪ್ರವೃತ್ತಿ. ಪತ್ರಿಕೋದ್ಯಮ ಬೆಳೆಯಲು ಮಹಾತ್ಮ ಗಾಂಧೀಜಿ ಕೊಡುಗೆ ದೊಡ್ಡದು. ಮಹಾತ್ಮ ಗಾಂಧೀಜಿ ತಮ್ಮ ವಕೀಲ ವೃತ್ತಿ ಆಫ್ರಿಕಾದಲ್ಲಿ ಪ್ರಾರಂಭ ಮಾಡಬೇಕೆಂದುಕೊಂಡಿದ್ದರು. ಬಳಿಕ ಸ್ವಾತಂತ್ರ್ಯ ಹೋರಾಟಕ್ಕೆ ಬಂದ ಬಳಿಕ ಯಂಗ್ ಇಂಡಿಯಾ ಪತ್ರಿಕೆ ಸಂಪಾದಕರಾಗಿ ಕಾರ್ಯ ಪ್ರಾರಂಭ ಮಾಡಿದ್ರು. 

ಪ್ರಾದೇಶಿಕ ಭಾಷೆಯಲ್ಲಿ ಪತ್ರಿಕೆ ಬರಬೇಕು ಅಂತಾ ಆಗ ಪ್ರತಿಪಾದಿಸಿದ್ದರು.‌ ನಿಷ್ಪಕ್ಷಪಾತ ನಿರ್ಭಯ ವರದಿ ಮಾಡ್ತೀರಿ ಅದರ ಜೊತೆ ಸಣ್ಣ ತಪ್ಪು ಆಗ್ತಿದೆ. ಎಲ್ಲವನ್ನೂ ವರದಿ ಮಾಡಬಾರದು‌. ಕೆಲವು ಲೆಟರ್‌ಹೆಡ್ ಸಂಘಟನೆಗ ಬ್ಲ್ಯಾಕ್‌ಮೇಲ್ ಮಾಡುವ ತಂತ್ರ ಮಾಡ್ತಾರೆ. ಯಾವುದೇ ಸುಳ್ಳು ಹೋರಾಟಗಾರರ ಬಗ್ಗೆ ಸ್ಕೂಟ್ನಿ ಮಾಡಿದ್ರೆ ಸಾಕು. ಸುದ್ದಿ ಸೆನ್ಸಾರ್ ಆಗಬೇಕು.‌ ಬೆಳಗಾವಿ ಅಭಿವೃದ್ಧಿ ಬಗ್ಗೆ ರವಿ ಹೆಗಡೆ ಮಾತನಾಡಿದ್ದಾರೆ. ಬೆಳಗಾವಿ ಎರಡನೇ ರಾಜಧಾನಿ ಆಗಬೇಕು. ಈ ನಿಟ್ಟಿನಲ್ಲಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಬೀಜ ಬಿತ್ತಿದ್ದಾರೆ ಫಲ‌ ಕೊಡುತ್ತದೆ ಅಂತಾ ಭಾವಿಸುತ್ತೇನೆ' ಎಂದರು. 

ಕನ್ನಡಪ್ರಭದ ಸುದ್ದಿಯಲ್ಲಿ ಪ್ರಕಟವಾದ ನನ್ನ ಹೆಸರು ನೋಡಿ ಸಂಭ್ರಮಿಸುತ್ತಿದ್ದೆ ಎಂದ ಲಕ್ಷ್ಮೀ ಹೆಬ್ಬಾಳ್ಕರ್
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಬೆಳಗಾವಿ ಗ್ರಾಮೀಣ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, 'ಕನ್ನಡಪ್ರಭ ಜೊತೆ ನನ್ನ ರಾಜಕೀಯ ಜೀವನ ನಂಟು ಬಹಳಷ್ಟು ಇದೆ. ಹಂತ ಹಂತವಾಗಿ ನನ್ನ ರಾಜಕೀಯ ಜೀವನದಲ್ಲಿ ಅಂಕು ಡೋಂಕುಗಳನ್ನು ತಿದ್ದಿ ತಿಡಿದೆ‌ ಕನ್ನಡ ಪ್ರಭ ಪತ್ರಿಕೆಯ ಸುದ್ದಿಯ ಕೊನೆಯಲ್ಲಿ 'ಲಕ್ಷ್ಮೀ ಹೆಬ್ಬಾಳ್ಕರ್ ಉಪಸ್ಥಿತರಿದ್ದರು' ಎಂಬ ಬರಹ ನೋಡಿ ಸಂಭ್ರಮಿಸಿದವಳು ನಾನು. ಇಂದು ಕನ್ನಡಪ್ರಭ ಬೆಳಗಾವಿ ಆವೃತ್ತಿಯ ಬೆಳ್ಳಿ ಮಹೋತ್ಸವದ ಮುಖ್ಯ ಅತಿಥಿಯಾಗಿದ್ದು ಹೆಮ್ಮೆಯ ವಿಷಯ. ಬೆಳಗ್ಗೆ ಟೀ ಜೊತೆ ಕನ್ನಡಪ್ರಭ ಪತ್ರಿಕೆ ಓದಿದಾಗಲೇ ಸಮಾಧಾನ ಆಗುತ್ತೆ. 

ಕನ್ನಡಪ್ರಭದಲ್ಲಿ ನಮ್ಮ ಸುದ್ದಿ ಬಂತಂದ್ರೆ ಅದು ಐಎಸ್ಐ‌ ಟ್ರೇಡ್ ಮಾರ್ಕ್ ತರಹ ಹಾಗೇ ನೋಡ್ತಿರ್ತೀವಿ‌. ಕನ್ನಡಪ್ರಭದಲ್ಲಿ ಸುದ್ದಿ ಬಂದ್ರೆ ಅದೊಂದು ರೀತಿ ವಿಶ್ವಸನೀಯ ಮಾರ್ಕ್ ಇದ್ದ ಹಾಗೆ. ಬೆಳಗಾವಿ ಅಭಿವೃದ್ದಿ ಬಗ್ಗೆ ರವಿ ಹೆಗಡೆ ಸರ್ ಮಾತುಗಳನ್ನಾಡಿದ್ದಾರೆ.‌ ಬೆಂಗಳೂರಿನಲ್ಲಿ ಆದ ಅದ್ವಾನಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.‌ ಕನ್ನಡಪ್ರಭ ಪತ್ರಿಕೆಯ ಎಲ್ಲರಿಗೂ ಧನ್ಯವಾದ ರಂಗನಾಥ ಸರ್, ವಿಶ್ವೇಶ್ವರ ಭಟ್ ಸರ್ ಕನ್ನಡಪ್ರಭ ಪತ್ರಿಕೆಯನ್ನು ಮುನ್ನಡೆಸಿದ್ದಾರೆ ಈಗ ರವಿ ಹೆಗಡೆ ಸರ್ ಮುನ್ನಡೆಸುತ್ತಿದ್ದಾರೆ. ನಮ್ಮಂತ ಬೆಳೆಯುವಂತಹ ರಾಜಕಾರಣಿಗಳಿಗೆ ಕನ್ನಡಪ್ರಭ ಪತ್ರಿಕೆ ತಿಳವಳಿಕೆ ಕೊಟ್ಟಂತಿದೆ' ಎಂದು ಅಭಿಪ್ರಾಯ ಪಟ್ಟರು.

'ನೇರ ದಿಟ್ಟ ನಿರಂತರ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯ ಉಳಿಸಿರುವ ಕನ್ನಡಪ್ರಭ'
ಕನ್ನಡಪ್ರಭ ಬೆಳಗಾವಿ ಆವೃತ್ತಿಗೆ 25ನೇ ವರ್ಷದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದ ಡಂಬಳ ಗದಗ ತೋಂಟದಾರ್ಯ ಸಂಸ್ಥಾನಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮೀಜಿ, 'ಕನ್ನಡಪ್ರಭ ತಾನೂ ಬೆಳೆದಿದೆ, ತನ್ನ ಜೊತೆ ಇತರರನ್ನೂ ಬೆಳೆಸಿದೆ. ಉದಾಹರಣೆಗೆ ರವಿ ಹೆಗಡೆ ಇಲ್ಲಿಯೇ ವರದಿಗಾರರಾಗಿದ್ರು ಈಗ ಪ್ರಧಾನ ಸಂಪಾದಕರಾಗಿದ್ದಾರೆ. ಕನ್ನಡಪ್ರಭ ತನ್ನ ಜೊತೆ ಇತರರನ್ನು ಬೆಳೆಸುತ್ತಿದೆ.‌ ಬೆಳಗಾವಿ ಸೂಕ್ಷ್ಮ ಪ್ರದೇಶ ಬೆಳಗಾವಿಯಲ್ಲಿ ಕನ್ನಡ ಬೆಳೆಸಬೇಕಾಗಿದೆ.

 ಕನ್ನಡ ಭಾಷೆ, ಸಂಸ್ಕೃತಿ ಬೆಳೆಸಲು ಕನ್ನಡಪ್ರಭ ಉತ್ತಮ ಕೆಲಸ ಮಾಡಿದೆ. ಕನ್ನಡ ಭಾಷಿಕ, ಓದುಗರನ್ನು ಗಳಿಸಿದ ಕೀರ್ತಿ ಕನ್ನಡಪ್ರಭಕ್ಕೆ ಸಲ್ಲುತ್ತೆ‌. ಬೆಳಗಾವಿ ಬೆಳವಣಿಗೆಯಲ್ಲಿ ಕನ್ನಡಪ್ರಭ ಪಾತ್ರ ಬಹಳ ಗಮನಾರ್ಹ. ಪ್ರಜಾಸತ್ತಾತ್ಮಕ ಮೌಲ್ಯಗಳು ಈ ದೇಶದಲ್ಲಿ ಉಳಿದಿದ್ದು ಪತ್ರಿಕೆಗಳಿಂದ. ನೇರ ದಿಟ್ಟ ನಿರಂತರ ಮೂಲಕ ಪ್ರಜಾಸತ್ತಾತ್ಮಕ ಮೌಲ್ಯ ಉಳಿಸಿದೆ. ಜನಪ್ರತಿನಿಧಿಗಳು, ಸರ್ಕಾರವನ್ನು ಎಚ್ಚರಿಸುವ ಕೆಲಸ ಪತ್ರಿಕೆಗಳು ಮಾಡಬೇಕು. ಹೀಗೆ ಮಾಡಿದ್ರೆ ಖಂಡಿತವಾಗಿ ಸಾಂವಿಧಾನಿಕ ಮೌಲ್ಯಗಳು ಉಳಿಯಲು ಸಾಧ್ಯ. 

ಕನ್ನಡಪ್ರಭ ದಲ್ಲಿ ಬರುವ ಅಂಕಣ ಬರಹಗಳು ಜನರಿಗೆ ಪ್ರೇರಣೆ ನೀಡುವುದನ್ನು ಗಮನಿಸಿದ್ದೇನೆ. ಕೇವಲ ರಾಜಕೀಯ ಸುದ್ದಿ ಅಷ್ಟೇ ಅಲ್ಲದೇ ಸಾಹಿತ್ಯ, ಸಂಸ್ಕೃತಿ, ಕಲೆ ಪ್ರೋತ್ಸಾಹಿಸುವ ಕೆಲಸ. ಈ ದಿಶೆಯಲ್ಲಿ ಕನ್ನಡಪ್ರಭ ಬಹಳ ಉತ್ತಮ ಸುದ್ದಿ ಪ್ರಕಟ ಮಾಡುತ್ತಾ ಬಂದಿದೆ. ಅನೇಕ ಅಂಕಣ ಬರಹಗಳು ಈಗಲೂ ಪತ್ರಿಕೆಗಳಲ್ಲಿ ಬರುತ್ತವೆ‌. ನಾನೂ ಸಹ ಕನ್ನಡಪ್ರಭದಲ್ಲಿ ಧರ್ಮಜ್ಯೋತಿ ಅಂಕಣ ಬರೆಯುತ್ತಿದ್ದೆ‌.‌ ಇನ್ನು ಕನ್ನಡಪ್ರಭ ಮಾಡಬೇಕಾದ ಗುರುತರ ಜವಾಬ್ದಾರಿ ಬಹಳಷ್ಟಿದೆ.‌ ಸೌಹಾರ್ದತೆ ಕದಡುವ ಕೆಲಸ ದೇಶದಲ್ಲಿ, ರಾಜ್ಯದಲ್ಲಿ ನಡೆಯುತ್ತಿದೆ.

 ಗಡಿ ಸಮಸ್ಯೆ ಬಗೆಹರಿದ ಸಮಸ್ಯೆ ಅದು ವಿಚಾರಣೆಗೆ ಬರದಂತೆ ನೋಡಿಕೊಳ್ಳಲು ಸರ್ಕಾರದ ಗಮನ ಸೆಳೆಯುವ ಕೆಲಸ ಪತ್ರಿಕೆ ಮಾಡಬೇಕು.‌ ಕಪ್ಪತಗುಡ್ಡ ರಕ್ಷಣೆ ಮಾಡುವ ಕೆಲಸ ಪತ್ರಿಕೆ ಮಾಡಬೇಕು. ಮಾಧ್ಯಮಗಳು ಬಹಳ ಜವಾಬ್ದಾರಿ ಕೆಲಸ ಮಾಡ್ತಿವೆ ಮಾಡಬೇಕು. ಕೋಮು ಸೌಹಾರ್ದತೆ ಕಾಪಾಡಲು ಅದರ ಪಾತ್ರ ಬಹಳ ಮಹತ್ವದ್ದಾಗಿರಬೇಕು.‌ ಬೆಳಗಾವಿಯ ಗಡಿ ಸಮಸ್ಯೆ ಶಾಶ್ವತ ಪರಿಹಾರಕ್ಕೆ ಸರ್ಕಾರದ ಗಮನ ಸೆಳೆಯಲು ಈ ಪತ್ರಿಕೆ ಮಾಡಬೇಕು. ಈ ನಿಟ್ಟಿನಲ್ಲಿ ಕನ್ನಡಪ್ರಭ ಬಹಳ ಒಳ್ಳೆಯ ಕಾರ್ಯ ಮಾಡುತ್ತಿದೆ' ಎಂದು  ಡಾ. ತೋಂಟದ ಸಿದ್ದರಾಮ ಸ್ವಾಮೀಜಿ ತಿಳಿಸಿದರು. ಇನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಬಾಳಾಸಾಹೇಬ್ ಲೋಕಾಪುರ್ ಮಾತನಾಡಿ ಕನ್ನಡಪ್ರಭ ಜೊತೆಗಿನ ಒಡನಾಟದ ಬಗ್ಗೆ ಸ್ಮರಿಸಿದರು.

ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರಿಗೆ ನೆನಪಿ‌ನ ಕಾಣಿಕೆ ನೀಡಿ ಗೌರವಿಸಲಾಯಿತು. ಕನ್ನಡಪ್ರಭ ಬೆಳಗಾವಿ, ವಿಜಯಪುರ, ಬಾಗಲಕೋಟ ಜಿಲ್ಲೆಯ ತಾಲೂಕು ಮಟ್ಟದ ವರದಿಗಾರರು, ಕಚೇರಿ ಸಿಬ್ಬಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕೊನೆಯಲ್ಲಿ ಕನ್ನಡಪ್ರಭ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ಪ್ರಧಾನ ಸಂಪಾದಕ ರವಿ ಹೆಗಡೆಗೆ ಮೂರು ಜಿಲ್ಲೆಗಳ ಸಿಬ್ಬಂದಿ ವತಿಯಿಂದ ಸನ್ಮಾನಿಸಲಾಯಿತು.

 ಕಾರ್ಯಕ್ರಮದ ನಿರೂಪಣೆಯನ್ನು ಏಷ್ಯಾನೆಟ್ ಸುವರ್ಣನ್ಯೂಸ್ ಹಿರಿಯ ನಿರೂಪಕಿ ಭಾವನಾ ನಾಗಯ್ಯ ನೆರವೇರಿಸಿದರು. ಕನ್ನಡಪ್ರಭ ಬೆಳಗಾವಿ ಆವೃತ್ತಿಯ ಬ್ರಹ್ಮಾನಂದ ಹಡಗಲಿ ಸ್ವಾಗತ ಕೋರಿ ಅಭಿನಂದನೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಕನ್ನಡಪ್ರಭ ವಿಶೇಷ ಯೋಜನೆ ಸಮ‌ನ್ವಯ ಸಂಪಾದಕರಾದ ಬಿ.ವಿ.ಮಲ್ಲಿಕಾರ್ಜುನಯ್ಯ, ಪ್ರಧಾನ ಪುರವಣಿ ಸಂಪಾದಕ ಜೋಗಿ ಉಪಸ್ಥಿತರಿದ್ದರು‌. ಅಸೋಸಿಸೇಯಟ್ ವಿಪಿ ರಾಘವೇಂದ್ರ ಬಿ.ಸಿ. ನೇತೃತ್ವದ ತಂಡ ಕನ್ನಡಪ್ರಭ ಸಂಪಾದಕೀಯ ಮಂಡಳಿ ಹಾಗೂ ಏಷ್ಯಾನೆಟ್ ಸುವರ್ಣನ್ಯೂಸ್ ತಂಡದ ಜೊತೆಗೂಡಿ ಕಾರ್ಯಕ್ರಮ ಅಚ್ಚುಕಟ್ಟಾಗಿ ನೆರವೇರಿಸಿತು. 

ಯುವಜನ ಮತ್ತು ಸಾಂಸ್ಕೃತಿಕ ವೇದಿಕೆಯ ಹರಲಾಪುರ ತಂಡ ಜನಪದ ಸಾಂಸ್ಕೃತಿಕ ನೀಡಿ ಮೆರುಗು ನೀಡಿತು. ಇದೇ ವೇಳೆ ಡೊಳ್ಳು ಕುಣಿತ ಸಹ ಆಕರ್ಷಣೀಯವಾಗಿತ್ತು. ಕಾರ್ಯಕ್ರಮದಲ್ಲಿ ನಗರ ಪೊಲೀಸ್ ಆಯುಕ್ತ ಡಾ.ಬೋರಲಿಂಗಯ್ಯ, ಎಸಿಪಿ ನಾರಾಯಣ ಭರಮಣಿ, ಹಿರಿಯ ಪತ್ರಕರ್ತ ಸರಜೂ ಕಾಟ್ಕರ್, ಕನ್ನಡಪರ ಹೋರಾಟಗಾರರಾದ ಅಶೋಕ ಚಂದರಗಿ, ದೀಪಕ್ ಗುಡಗನಟ್ಟಿ,  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ, ಜಿಲ್ಲಾ ಅಧ್ಯಕ್ಷ ದಿಲೀಪ್ ಕುರಂದವಾಡೆ ಸೇರಿದಂತೆ ಉಪಸ್ಥಿತರಿದ್ದ ಹಲವು ಗಣ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.

Follow Us:
Download App:
  • android
  • ios