ಪ್ರಿಯಾ ಕೆರ್ವಾಶೆ

ಜಗತ್ತಿನಾದ್ಯಂತ 17,500 ಜನರಿಗೆ ಕನ್ನಡ ಕಲಿಸಿದ ಕೀರ್ತಿ ಈ ಟೀಂನದ್ದು. ಹೊರದೇಶದ ಹುಡುಗಿಗೆ ಕನ್ನಡ ಹುಡುಗನ ಮೇಲೆ ಪ್ರೇಮವಾಗಿ ಅದು ಮದುವೆಯವರೆಗೂ ಮುಂದುವರಿದಾಗ ಸೇತುವೆಯಂತೆ ಕೆಲಸ ಮಾಡಿದ್ದು ಈ ತಂಡ. 72 ವರ್ಷದ ಮಲೆಯಾಳಿ ಭಾಷಿಕ ಇಂದು ನಿರರ್ಗಳವಾಗಿ ಕನ್ನಡ ಮಾತಾಡ್ತಾರೆ ಅಂದ್ರೆ ಕಾರಣ ಈ ಹನ್ನೊಂದು ಜನ. ‘ಕನ್ನಡ ಗೊತ್ತಿಲ್ಲ’ ಅನ್ನೋದು ಈಗ ವಾಚ್ಯಾರ್ಥದಲ್ಲಷ್ಟೇ ಉಳಿದಿಲ್ಲ, ಕನ್ನಡ ಎಂಬ ಭಾಷೆ ಗೊತ್ತಿಲ್ಲ ಅನ್ನೋದನ್ನಷ್ಟೇ ಅದು ಸಂವಹನ ಮಾಡಲ್ಲ. ಅದರಾಚೆಗೂ ಕೆಲಸ ಮಾಡಿದೆ.

‘ಕನ್ನಡ ಗೊತ್ತಿಲ್ಲ’ ಎಂಬುದೀಗ ಕನ್ನಡ ಕಲಿಸುವ ಕಾಲು ಹಾದಿ. ಈ ದಾರಿಯಲ್ಲಿ ನಡೆದವರು 17,500 ಮಂದಿ. ಹನ್ನೊಂದು ಜನ ಉತ್ಸಾಹಿ ಹುಡುಗರು ಇವರನ್ನು ಲೀಡ್ ಮಾಡ್ತಾರೆ. ‘ಕನ್ನಡ ಗೊತ್ತಿಲ್ಲ’ ಎನ್ನುವವರಿಗಾಗಿ ಇದೇ ಹೆಸರಿನಿಂದ ಶುರುವಾದ ಟೀಮ್ ಅವರಿಗೆಲ್ಲ ಕನ್ನಡ ಮಾತಾಡಲು ಕಲಿಸಿದೆ. ಹಾಗೆ ಕಲಿತವರೆಲ್ಲ ಈಗ ‘ಕನ್ನಡ ಗೊತ್ತಿದೆ’ ಅನ್ನತೊಡಗಿದ್ದಾರೆ. ಕನ್ನಡದಲ್ಲೇ ವ್ಯವಹರಿಸಲು ಕಲಿತಿದ್ದಾರೆ. ಕನ್ನಡ ಪುಸ್ತಕಗಳ ಬಗ್ಗೆ ಅಭಿರುಚಿ ಮೂಡಿಸುವತ್ತಲೂ ಈ ಟೀಮ್ ಹೆಜ್ಜೆ ಹಾಕುತ್ತಿದೆ.

ಕನ್ನಡ ಕಟ್ಟಿದವರು: ಗಡಿಭಾಗದಲ್ಲಿ ಕನ್ನಡದ ಕಂಪು ಹರಡಿದ ಸಿದ್ಧಸಂಸ್ಥಾನ ಮಠ!

ಐದು ವರ್ಷದ ಹಿಂದೆ ಶುರುವಾಯ್ತು: ಅನೂಪ್ ಮಯ್ಯ ಎಂಬ ಉತ್ಸಾಹಿ ತರುಣ ದೂರದ ಪೂನಾದಲ್ಲಿ ಕೂತು ಕನ್ನಡ ರೇಡಿಯೋ ಬ್ರಾಂಡ್ ಆಲಿಸುತ್ತಿದ್ದರು, ಅಲ್ಲೊಬ್ಬ ವ್ಯಕ್ತಿ ಆರ್‌ಜೆ ಜೊತೆಗೆ ಮಾತನಾಡುತ್ತಾ ಹಿಂದಿ ಹಾಡನ್ನು ಕನ್ನಡಕ್ಕೆ ಅನುವಾದಿಸಿ ಹಾಡಿದರು. ಜೊತೆಗೆ ತಾನೊಬ್ಬ ಉತ್ತರ ಭಾರತೀಯನಿಗೆ ಕನ್ನಡ ಕಲಿಸಿದ್ದೇನೆ ಅಂತಲೂ ಹೇಳಿದರು. ಈ ಸಣ್ಣ ಘಟನೆ ಅನೂಪ್ ಅವರಲ್ಲಿ ತಾನೂ ಯಾಕೆ ಕನ್ನಡ ಕಲಿಸಬಾರದು ಅನ್ನೋ ಯೋಚನೆಯನ್ನು ಹುಟ್ಟು ಹಾಕಿತು. ಹಾಗೆ ಶುರುವಾದ ‘ಕನ್ನಡ ಗೊತ್ತಿಲ್ಲ’ ಈಗ ಐದು ವಸಂತ ಪೂರೈಸಿದೆ.

ಎಷ್ಟು ಜನ ಕನ್ನಡ ಕಲಿತರು: ಆರಂಭದ ಒಂದು ವರ್ಷ ‘ಕನ್ನಡ ಗೊತ್ತಿಲ್ಲ’ ವಾಟ್ಸಾಪ್ ಗ್ರೂಪ್ ಮೂಲಕ ಇವರೊಬ್ಬರೇ ಒಂದಿಷ್ಟು ಜನರಿಗೆ ಕನ್ನಡ ಮಾತಾಡಲು ಕಲಿಸಿದರು. ಇವರ ಅಣ್ಣ ನಟ ರಾಕೇಶ್ ಮಯ್ಯ ಅವರೂ ಸಹಕಾರ ಕೊಡುತ್ತಿದ್ದರು. ಕ್ರಮೇಣ ಒಂದಿಷ್ಟು ಜನ ಉತ್ಸಾಹಿಗಳು ಈ ತಂಡ ಸೇರಿಕೊಂಡರು. ಅವರಲ್ಲಿ ಹೆಚ್ಚಿನವರು ಐಟಿ ಉದ್ಯೋಗಿಗಳು. ಇಡೀ ವರ್ಷ ಒಬ್ಬರು ಮಾಡುತ್ತಿದ್ದ ಕೆಲಸವನ್ನೀಗ ಹನ್ನೊಂದು ಜನ ಹಂಚಿಕೊಂಡರು. ಕೆಲಸದ ವ್ಯಾಪ್ತಿ ವಿಸ್ತರಿಸಿತು. ವಿಶ್ವಾದ್ಯಂತದ ಜನ ಕನ್ನಡ ಕಲಿಯಲು ಮುಂದೆ ಬಂದರು. ಹಾಗೆ 17,500ಕ್ಕೂ ಹೆಚ್ಚು ಜನ ಕನ್ನಡ ಮಾತಾಡಲು ಕಲಿತರು.

ಮೆಕ್ಸಿಕೋ ಹುಡುಗಿ ಕನ್ನಡ ಕಲಿತದ್ದು!: ಆಕೆ ಮೆಕ್ಸಿಕೋದ ಹುಡುಗಿ. ಅವಳ ಬಾಯ್‌ಫ್ರೆಂಡ್ ಕನ್ನಡದ ಹುಡುಗ. ಅವರಿಬ್ಬರ ಸ್ನೇಹ ಪ್ರೇಮಕ್ಕೆ ತಿರುಗಿ ಮದುವೆಯವರೆಗೂ ಬಂತು. ಹುಡುಗನ ಮನೆಯವರನ್ನು ಕನ್ವಿನ್ಸ್ ಮಾಡಬೇಕಿತ್ತು, ಅವರ ಒಪ್ಪಿಗೆ ಪಡೆಯಬೇಕಿತ್ತು. ಭಾಷೆ ಬಾರದ, ನಮ್ಮ ಸಂಪ್ರದಾಯಗಳ ಬಗ್ಗೆ ಗೊತ್ತಿಲ್ಲದ ಹುಡುಗಿಯನ್ನು ಮನೆ ತುಂಬಿಸಿಕೊಳ್ಳೋದು ಹೇಗೆ ಅಂತ ಹುಡುಗನ ಮನೆಯವರ ತಕರಾರು. ಈ ಜಾಣ ಹುಡುಗಿ ‘ಕನ್ನಡ ಗೊತ್ತಿಲ್ಲ’ ಟೀಮ್ ಸೇರ‌್ಕೊಂಡ್ಲು. ಕೆಲವು ದಿನಗಳಲ್ಲೇ ಅಚ್ಚಕನ್ನಡದಲ್ಲಿ ಸ್ವಚ್ಛವಾಗಿ ಮಾತಾಡೋದು ಕಲಿತಳು. ಈಗ ಅವಳ ಮಾತು ಕೇಳಿ ನಿಬ್ಬೆರಗಾಗುವ ಸರದಿ ಹುಡುಗನ ಕಡೆಯವರದು. ಹೀಗೆ ಮೆಕ್ಸಿಕೋ ಹುಡುಗಿ ಕನ್ನಡಿಗನ ಕೈ ಹಿಡಿಯುವ ಮೂಲಕ ಕನ್ನಡತಿಯೂ ಆದಳು. ಇದೇ ಕಾರಣಕ್ಕೆ ಡಿಲ್ಲಿ ಹುಡುಗಿಯೂ ಕನ್ನಡ ಕಲಿತು ಕನ್ನಡಿಗ ಹುಡುಗನನ್ನು ವರಿಸಿದಳು. ಈ ಥರದ ಉದಾಹರಣೆಗಳು ‘ಕನ್ನಡ ಗೊತ್ತಿಲ್ಲ’ ಟೀಮ್‌ನ ಐದು ವರ್ಷಗಳ ಇತಿಹಾಸದಲ್ಲಿ ಬಹಳಷ್ಟು ಕಾಣಸಿಗುತ್ತವೆ. ಕೆಲವು ದಿನಗಳ ಹಿಂದೆ 72 ವರ್ಷದ ಮಲೆಯಾಳಿ ವ್ಯಕ್ತಿಯೊಬ್ಬರು ಕನ್ನಡ ಕಲಿತರು. ಈಗ ಕನ್ನಡಿಗರಷ್ಟೇ ಸುಲಲಿತವಾಗಿ ಪಟಪಟ ಕನ್ನಡ ಮಾತಾಡ್ತಾರೆ.

ಕನ್ನಡ ಕಟ್ಟಿದವರು: ಯೂಟ್ಯೂಬ್ ಚಾನಲ್ ಮೂಲಕ ಕನ್ನಡ ಪಸರಿಸುತ್ತಿರುವ ನಮ್ದು-ಕೆ

ಹೇಗೆ ಕನ್ನಡ ಕಲಿಸ್ತಾರೆ!: ‘ಕನ್ನಡ ಗೊತ್ತಿಲ್ಲ’ ವಾಟ್ಸಾಪ್ ಗ್ರೂಪ್‌ನಲ್ಲಿ ಹೆಚ್ಚು ಜನ ಕನ್ನಡ ಕಲೀತಾರೆ. ಜೊತೆಗೆ ವರ್ಕ್‌ಶಾಪ್‌ಗಳು, ಕ್ಲಾಸ್ ರೂಮ್ ಪಾಠಗಳೂ ಇರುತ್ತವೆ. ಅನೇಕ ಅಪಾರ್ಟ್‌ಮೆಂಟ್‌ಗಳಲ್ಲಿ, ಕಾರ್ಪೊರೇಟ್ ಕಂಪೆನಿಗಳಲ್ಲಿ, ಆರ್ಟ್ ಆಫ್ ಲಿವಿಂಗ್, ಇಸ್ಕಾನ್ ಮೊದಲಾದೆಡೆ ಕನ್ನಡ ಗೊತ್ತಿಲ್ಲ ಟೀಮ್‌ನ ಪಾಠಗಳು ನಡೆಯುತ್ತವೆ. ಅಲ್ಲೆಲ್ಲ ಹಾಡು, ಹಾಸ್ಯದ ಮೂಲಕ ಕನ್ನಡದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಲಾಗುತ್ತದೆ. ಕನ್ನಡೇತರರಿಗೆ ಕನ್ನಡ ತಿಳಿಸಲು ಇಂಗ್ಲೀಷ್ ಭಾಷೆ ಸೇತುವೆಯಂತಾಗಿದೆ. ಕನ್ನಡವನ್ನು ಇಂಗ್ಲೀಷ್‌ನಲ್ಲೇ ಬರೆದು ಮಾತನಾಡಲು ಕಲಿಸುತ್ತಾರೆ. ಇದರಲ್ಲಿ ಮೂರು ಲೆವೆಲ್‌ಗಳಿವೆ. ಮೊದಲ ಲೆವೆಲ್‌ನಲ್ಲಿ ಪ್ರತೀ ದಿನ ಕನ್ನಡದಲ್ಲೇ ಐದೈದು ವಾಕ್ಯ ರಚನೆ ಮಾಡುವುದು. ಇದಕ್ಕೆ ದಿನದಲ್ಲಿ ೨೦ ನಿಮಿಷಗಳ ಸಮಯ ಸಾಕು. ತಿಂಗಳಲ್ಲಿ ಒಂದು ಹಂತಕ್ಕೆ ಮ್ಯಾನೇಜ್ ಮಾಡುವಷ್ಟು ಕನ್ನಡ ಕಲಿಯಬಹುದು. ಇದರ ಮುಂದಿನ ಲೆವೆಲ್‌ನಲ್ಲಿ ವ್ಯಾಕರಣ, ಕಾಲಗಳು ಮೊದಲಾದವನ್ನು ಕಲಿಸಲಾಗುತ್ತೆ. ಮೂರನೇ ಹಂತ ತಲಪುವಾಗ ಇವರ ಕನ್ನಡ ಬಹಳ ಸುಧಾರಿಸಿರುತ್ತೆ. ಆವಾಗ ಅವರೇನು ಬಯಸುತ್ತಾರೋ ಅದನ್ನು ಈ ಟೀಮ್ ನವರು ಕಲಿಸುತ್ತಾರೆ.

ಏನೆಲ್ಲ ಚಾಲೆಂಜ್‌ಗಳು: ‘ಶುರು ಶುರುವಿಗೆ ಕನ್ನಡ ಗೊತ್ತಿಲ್ಲ ಗ್ರೂಪ್‌ಅನ್ನು ಹಲವರು ಟೀಕಿಸಿದರು. ಕೆಲವರು ಇದಕ್ಕೆ ಪರ್ಮಿಶನ್ ಪಡೆದುಕೊಂಡಿದ್ದೀರಾ ಅಂತೆಲ್ಲ ಕೇಳಿ ಹೆದರಿಸಿದರು. ಇನ್ನೊಂದಿಷ್ಟು ಜನ ಕನ್ನಡ ಗೊತ್ತಿಲ್ಲ ಅನ್ನೋದೇ ನೆಗೆಟಿವ್ ಆಗಿದೆ ಅಂದ್ರು. ಈ ವಿಷಯವಾಗಿ ಎಂಜಿ ರೋಡ್‌ನಲ್ಲಿ ಒಬ್ರು ಜಗಳಕ್ಕೇ ನಿಂತಿದ್ರು. ಒಂದು ವರ್ಷದವರೆಗೂ ಇಂಥ ಸವಾಲುಗಳೆಲ್ಲ ಇದ್ದವು’ ಅಂತಾರೆ ಅನೂಪ್ ಮಯ್ಯ. ಆಮೇಲಾಮೇಲೆ ಇತರರ ಸಹಾಯವೂ ಸಿಕ್ಕ ಕಾರಣ ಕೆಲಸ ಸುಲಭವಾಯ್ತು. 

ಕನ್ನಡ ಕಟ್ಟಿದವರು: ಕ್ಷೌರಿಕ ವೃತ್ತಿ ಮಾಡುತ್ತಲೇ ಕನ್ನಡ ಪರಿಚಾರಕರಾಗಿರುವ ಪವನ್!

ಜಯನಗರ ಹುಡುಗಿಯ ಕನ್ನಡ ಪಾಠ

* ಮೇಘನಾ ಸುಧೀಂದ್ರ

ಎಐ ಇಂಜಿನಿಯರ್ ಮತ್ತು ‘ಕನ್ನಡ ಗೊತ್ತಿಲ್ಲ’ ಸಂಸ್ಥೆಯಲ್ಲಿ ಶಿಕ್ಷಕಿ ‘ಕನ್ನಡ ಗೊತ್ತಿಲ್ಲ’ ತಂಡ ಸೇರಿಕೊಂಡಿದ್ದು ನಾನು ಬ್ಲಾಗರ್ ಆಗಿ. ಕನ್ನಡೇತರರಿಗೆ ಬೆಂಗಳೂರಿನ ಇತಿಹಾಸವನ್ನ ಪರಿಚಯ ಮಾಡಿಕೊಡಲು ಪ್ರತಿ ವಾರ ಇಂಗ್ಲಿಷಿನಲ್ಲಿ ಕಾಲಂ ಬರೆಯುತ್ತಿದ್ದೆ. ಆರು ತಿಂಗಳ ನಂತರ ಕನ್ನಡ ಶಿಕ್ಷಕಿಯಾಗಿ ಭಾಷೆ ಹೇಳಿಕೊಡಲು ಶುರುಮಾಡಿದೆ. 5 ವರ್ಷದಿಂದ ಯಾವ ದೇಶದಲ್ಲಿದ್ದರೂ ಭಾರತದ ಬೆಳಗಿನ 6.30ಕ್ಕೆ ಕನ್ನಡ ಪಾಠ ವಾಟ್ಸಾಪ್ ಗುಂಪಿಗೆ ಹೋಗುತ್ತದೆ. ಬಾರ್ಕಾ ಆಗಿರಲಿ, ಬಾಲಿ ಆಗಿರಲಿ, ಸಿಡ್ನಿ ಆಗಿರಲಿ ಎಲ್ಲೇ ಇದ್ದರೂ ಒಂದು ಸಣ್ಣ ಪಾಠ, ಆಡಿಯೋ ರೆಕಾರ್ಡಿಂಗ್ ಮತ್ತು ಡೌಟ್ಸ್ ಕ್ಲಿಯರ್ ಆಗೇ ಆಗುತ್ತದೆ. ಇನ್ನು ಎಂ.ಜಿ ರೋಡಿನಲ್ಲಿ ಪ್ರತಿ ತಿಂಗಳ ಮೊದಲ ಭಾನುವಾರ ಉಚಿತ ಕನ್ನಡ ತರಬೇತಿ, ಆರ್ಟ್ ಆಫ್ ಲಿವಿಂಗಿನ ಶಿಬಿರಾರ್ಥಿಗಳಿಗೆ ಶನಿವಾರ ಭಾನುವಾರ ಕನ್ನಡ ಪಾಠ, ಬೆಳ್ಳಂದೂರಿನ 3 4 ಅಪಾರ್ಟ್‌ಮೆಂಟ್‌ನಲ್ಲಿ ವಾರಾಂತ್ಯ ಲೈವ್ ಪಾಠಗಳು ಮತ್ತು ಸ್ಕೈಪಿನಲ್ಲಿ ಬೇರೆ ಟೈಮ್ ಜೋನಿನಲ್ಲಿ ನಡೆಯುವ ಕನ್ನಡ ಪಾಠಗಳು ಸದಾ ನಡೆಯುತ್ತಿರುತ್ತದೆ . ಕನ್ನಡ ಹೇಳಿಕೊಡುತ್ತಾ ನಾನು ಮರೆತ ಕನ್ನಡ ವ್ಯಾಕರಣವನ್ನ ಮತ್ತೆ ನೆನಪಿಸುತ್ತದೆ. ಕನ್ನಡ ಕಲಿಯೋದಕ್ಕೆ ಬರುವವರೆಲ್ಲರೂ ನಮ್ಮ ತಂಡದ ಪ್ರೀತಿಯ ಮಕ್ಕಳು. ತಂಡದಲ್ಲಿರುವ ಹನ್ನೊಂದು ಜನರೂ ಈ ಎಲ್ಲಾ ಕೆಲಸವನ್ನ ಚಾಚೂ ತಪ್ಪದೆ ಮಾಡುತ್ತೇವೆ. 364 ದಿವಸವು ಕನ್ನಡ ಕಲಿಸುವ ನಮಗೆ ನವೆಂಬರ್ 1 ಮಾತ್ರ ರಜ. 

ಕನ್ನಡದ ಕನಸು

ಈಗ ‘ಕನ್ನಡ ಗೊತ್ತಿಲ್ಲ’ ಟೀಮ್‌ಗೆ ಒಂದು ಕಟ್ಟಡ ಇಲ್ಲ. ಆರ್ಥಿಕ ಬೆಂಬಲವೂ ಇಲ್ಲ. ವಾಟ್ಸಾಪ್‌ನಲ್ಲಿ ಕನ್ನಡ ಪಾಠ ಮಾಡಲು ಇವರು 240 ರು. ಚಾರ್ಜ್ ಮಾಡುತ್ತಾರೆ. ಉಳಿದೆಲ್ಲ ಕ್ಲಾಸ್‌ಗಳು
ಫ್ರೀಯಾಗಿಯೇ ನಡೆಯುತ್ತವೆ. ಎಂ.ಜಿ ರೋಡ್ ಮೆಟ್ರೋದಲ್ಲಿ ಸತತ ಮೂರು ವರ್ಷ ಉಚಿತವಾಗಿ ಕನ್ನಡ ಮಾತಾಡುವ ಕ್ಲಾಸ್ ಮಾಡಿದ್ದರು. ವಾಟ್ಸಾಪ್ ಪಾಠದಿಂದ ಬರುವ ಹಣ ಅತ್ಯಲ್ಪ. ಇದನ್ನು ತಂಡದ ಹನ್ನೊಂದು ಮಂದಿಗೂ ಶೇರ್ ಮಾಡಿದಾಗ ಒಬ್ಬೊಬ್ಬರಿಗೆ ವರ್ಷಕ್ಕೆ 8 ಸಾವಿರದಿಂದ 10 ಸಾವಿರ ರುಪಾಯಿ ಬಂದರೆ ಹೆಚ್ಚು. ಒಂದು ವೇಳೆ ಹೆಚ್ಚು ಹಣ ಸಂಗ್ರಹ ಆದರೆ ಅದರಲ್ಲೊಂದು ಕಟ್ಟಡ ಕಟ್ಟಿ, ಅಲ್ಲಿ ಸಂಪೂರ್ಣ ಕನ್ನಡಮಯ ವಾತಾವರಣ ರೂಪಿಸುವ ಕನಸು ಅನೂಪ್ ಅವರದು.