ಈ ಕಾಲದಲ್ಲಿ ಭಾಷೆ ಮಾತಿನಲ್ಲಿ ಇದ್ದರೆ ಮಾತ್ರ ಸಾಕಾಗುವುದಿಲ್ಲ. ಬದಲಿಗೆ ಇಂಟರ್‌ನೆಟ್ನಲ್ಲೂ ಇರಬೇಕು. ಈಗ ಪ್ರತಿಯೊಬ್ಬರ ಕೈಯಲ್ಲೂ ಸ್ಮಾರ್ಟ್‌ಫೋನ್ ಇದೆ. ಬೆರಳ ತುದಿಯಲ್ಲಿ ಯೂಟ್ಯೂಬ್ ಸಿಗುತ್ತದೆ. ಮನರಂಜನೆಗಾಗಿ ಅಲ್ಲಿ ವಿಡಿಯೋಗಳನ್ನು ನೋಡಿಕೊಂಡು ಖುಷಿ ಪಡುವ ಜನರ ಸಂಖ್ಯೆ ಲೆಕ್ಕಕ್ಕೆ ಸಿಗುತ್ತಿಲ್ಲ. ಅಂಥವರನ್ನೇ ಗುರಿಯಾಗಿಟ್ಟುಕೊಂಡು ಇಂಗ್ಲಿಷ್, ಹಿಂದಿ ಭಾಷೆಯ ಪುಟ್ಟ ಪುಟ್ಟ ವಿಡಿಯೋಗಳು ಲಕ್ಷಾಂತರ ಮಂದಿಯನ್ನು ತಲುಪುತ್ತಿವೆ.

ಆ ಭಾಷೆಗಳು ಬೇರೆ ಬೇರೆ ಜನರ ಕಿವಿಗೆ ಬೀಳುವಾಗ ಭಾಷೆ ಶಕ್ತಿಯುತವಾಗಿ ಬೆಳೆಯುತ್ತಾ ಹೋಗುತ್ತದೆ. ಸಂದರ್ಭ ಹೀಗಿರುವಾಗ ನಮ್ಮ ಕನ್ನಡ ಭಾಷೆ ವಿಡಿಯೋಗಳೂ ಲಕ್ಷಾಂತರ ಮಂದಿಯನ್ನು ತಲುಪಬೇಕು, ಯೂಟ್ಯೂಬ್‌ನಲ್ಲಿ ಕನ್ನಡದ ಅಸ್ತಿತ್ವ ಗಟ್ಟಿಯಾಗಿರಬೇಕು ಎಂಬ ಉದ್ದೇಶದಿಂದ ಒಂದು ತಂಡ ಶ್ರಮಿಸುತ್ತಿದೆ. ಆ ತಂಡದ ಹೆಸರೇ ನಮ್ದು-ಕೆ. ಇಲ್ಲಿ ಕೆ ಅಂದ್ರೆ ಕನ್ನಡ. ನಮ್ದು-ಕನ್ನಡ 

ಕನ್ನಡ ಬೆಳೆಸುತ್ತೇವೆ ಎಂಬ ಹಮ್ಮು ನಮಗಿಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಬೇರೆ ಭಾಷೆಯಲ್ಲಿ ತೀವ್ರವಾಗಿ ಆಗುತ್ತಿರುವ ಬದಲಾವಣೆ ನೋಡಿ ನಮ್ಮ ಭಾಷೆಯಲ್ಲೂ ಇಂಥದ್ದೊಂದು ಪ್ರಯತ್ನ ಮಾಡಬೇಕು ಎಂದು ಮಾಡಿದ್ದೇವೆ. ಎಲ್ಲೂ ದ್ವಂದ್ವಾರ್ಥ ಬಳಸದೆ, ಯಾರನ್ನೂ ನೋಯಿಸದೆ, ಯಾರ ಬಗ್ಗೆಯೂ ಕೆಟ್ಟದಾಗಿ ಮಾತನಾಡಿ ಶುದ್ಧವಾಗಿ ತಮಾಷೆ ವಿಡಿಯೋಗಳನ್ನು ಪ್ರಸಾರ ಮಾಡಿಕೊಂಡು ಬರುತ್ತಿದ್ದೇವೆ. ಅದಕ್ಕೆ ನಮಗೆ ಹೆಮ್ಮೆಯಿದೆ. ಈಗ ನಮಗೆ ಕನ್ನಡಿಗರ ಪ್ರೋತ್ಸಾಹ ಸಿಕ್ಕಿದೆ.- ಶ್ರವಣ್ ನಾರಾಯಣ ಐತಾಳ್


ಮೂವರು ಸಾಫ್ಟ್‌ವೇರ್ ಇಂಜಿನಿಯರ್‌ಗಳು

ಐದು ವರ್ಷದ ಹಿಂದೆ ಇನ್ಫೋಸಿಸ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರು ಕನಸುಗಣ್ಣಿನ ಹುಡುಗರು ತಮ್ಮ ಸಮಾನ ಆಸಕ್ತಿಗಳಿಂದಾಗಿ ಒಟ್ಟುಗೂಡಿದರು. ಆ ಮೂವರ ಹೆಸರು ಮಂಗಳೂರು ಮೂಲದ ಶ್ರವಣ್ ನಾರಾಯಣ್, ಮಂಡ್ಯದ ರಜತ್ ಎಚ್‌ಆರ್ ಮತ್ತು ಹಾಸನದ ಸಂದೀಪ್ ಟಿಸಿ. ಈ ಮೂವರಿಗೂ ನಟನೆಯಲ್ಲಿ ಆಸಕ್ತಿ. ಆ ಸಂದರ್ಭದಲ್ಲಿ ಅವರು ಕೆಲಸ ಮಾಡುತ್ತಿದ್ದಲ್ಲಿ ಬೇರೆ ಭಾಷೆಯ ಮಂದಿ ಯೂಟ್ಯೂಬ್ ಚಾನಲ್‌ಗಳನ್ನು ಮಾಡಿಕೊಂಡು ವಿಡಿಯೋಗಳನ್ನು ಪ್ರಸಾರ ಮಾಡುತ್ತಿದ್ದರು.

ಆಗಲೇ ಬೇರೆ ಭಾಷಿಗರ ಈ ಪ್ರಯತ್ನಕ್ಕೆ ಭಾರಿ ಬೆಂಬಲ ಸಿಗುತ್ತಿತ್ತು. ನಿಮ್ಮ ಕನ್ನಡದಲ್ಲಿ ಇಂಥಾ ಪ್ರಯತ್ನ ಆಗುತ್ತಿಲ್ವಾ ಎಂಬ ಪ್ರಶ್ನೆಗಳೂ ಇವರನ್ನು ಎದುರಾದವು. ಆ ಸಂದರ್ಭದಲ್ಲಿ ಮೂರೂ ಜನ ಒಂದೆಡೆ ಕುಳಿತು ಒಂದೊಳ್ಳೆ ತೀರ್ಮಾನಕ್ಕೆ ಬಂದರು. ಆ ತೀರ್ಮಾನದ ಫಲವೇ ನಮ್ದು-ಕೆ.

ದುಡ್ಡಿಲ್ಲದೆ ಆರಂಭವಾದ ನಮ್ದು-ಕೆ

ಕನ್ನಡದಲ್ಲಿ ಅದುವರೆಗೆ ಯಾರೂ ಪ್ರಯತ್ನ ಮಾಡದ ಕಾಮಿಡಿ ವಿಡಿಯೋಗಳನ್ನು ಮಾಡುವುದು ಎಂದು ನಿರ್ಧರಿಸಲಾಯಿತು. ಆ ಕುರಿತು ಮಾತುಕತೆ ನಡೆದು ಒಂದು ಚಿತ್ರಕತೆ ರೆಡಿಯಾಯಿತು. ಆಗ ಹೆಚ್ಚು ದುಡ್ಡು ಹೂಡುವ ಸಾಧ್ಯತೆ ಇರಲಿಲ್ಲ. ಯೂಟ್ಯೂಬ್ ಚಾನಲ್ ಉಚಿತವಾಗಿ ಮಾಡಬಹುದು.

ಉಳಿದಂತೆ ಅಲ್ಪಸ್ವಲ್ಪ ದುಡ್ಡು ಹಾಕಿ ಕ್ಯಾಮೆರಾ ಹೊಂದಿಸಿಕೊಂಡು ನಟಿಸಿ ವಿಡಿಯೋ ಮಾಡಿದರು. ಇಲ್ಲಿ ಬೇರೆ ಯಾರೂ ಛಾಯಾಗ್ರಾಹಕರಿಲ್ಲ. ಕ್ಯಾಮೆರಾ ಇಟ್ಟು ಆನ್ ಮಾಡಿ ನಟಿಸುತ್ತಿದರು. ಸಂಕಲನದ ಕೆಲಸವೂ ಅವರದೇ. ಹೀಗೆ ಶುರುವಾದ ಚಾನಲ್ ಈಗ ಲಕ್ಷಾಂತರ ವೀಕ್ಷಣೆ ಪಡೆಯುವಷ್ಟರ ಮಟ್ಟಿಗೆ ಬೆಳೆದಿದೆ.

ಯಾರಾದರೊಂದು ಕಿರುಚಿತ್ರ ಮಾಡಿದರೆ ಅದನ್ನು ಪ್ರಸಾರ ಮಾಡಿ ಪ್ರೋತ್ಸಾಹಿಸುವ ಕೆಲಸಗಳು ಬೇರೆ ಭಾಷೆಯಲ್ಲಿ ಆಗುತ್ತಿವೆ. ಹಾಗಾಗಿಯೇ ಬೇರೆ ಭಾಷೆಯ ಚಿತ್ರಗಳು ಎಲ್ಲಾ ಕಡೆ ಸಿಗುತ್ತವೆ. ಮುಂದೆ ನಾವೂ ಅಂಥದ್ದೊಂದು ಪ್ರಯತ್ನ ಮಾಡುವ ಆಸೆ ಇದೆ. ನಮ್ಮ ಖುಷಿಗಾಗಿ ನಾವು ಇದನ್ನು ಆರಂಭಿಸಿದೆವು. ಬೇರೆಯವರಿಗೂ ಇದರಿಂದ ಖುಷಿ ಸಿಕ್ಕಿದೆ. ಕನ್ನಡದ ಕಂಪು ಹರಡಿದೆ. ಲಾಭದ ಹಂಗಿಲ್ಲದೆ ಇದುವರೆಗೆ ಕೆಲಸ ಮಾಡಿದ್ದೇವೆ. ಇನ್ನು ಮುಂದೆಯೂ ನಮ್ಮ ಪ್ರಯತ್ನ ಜಾರಿಯಲ್ಲಿರುತ್ತದೆ.-ರಜತ್ ಎಚ್‌ಆರ್

ಈ ಹುಡುಗರ ಒಟ್ಟು ೭೩ ವಿಡಿಯೋಗಳನ್ನು ಮಾಡಿದ್ದಾರೆ. ಒಂದೊಂದು ವಿಡಿಯೋಗಳು ಕೂಡ ವಿಭಿನ್ನವಾಗಿದೆ. ಹಾಗಾಗಿ ಬೇರೆ ಭಾಷಿಗರೂ ನಮ್ದು-ಕೆ ವಿಡಿಯೋ ಚಾನಲ್ ನೋಡುವಂತಾಗಿದೆ. ಹಿಂದಿ, ತಮಿಳು ಭಾಷಿಗರು ಕನ್ನಡ ವಿಡಿಯೋಗೆ ಕಮೆಂಟ್ ಹಾಕುವುದನ್ನು ನೋಡಿದಾಗ ಖುಷಿಯಾಗುತ್ತದೆ ಎನ್ನುತ್ತಾರೆ ಈ ಹುಡುಗರು. ಅಲ್ಲಿಗೆ ಅವರ ಉದ್ದೇಶ ಒಂದು ಮಟ್ಟಿಗೆ ಈಡೇರಿದೆ. ಅವರ ಈ ಶ್ರಮ ನಿಜಕ್ಕೂ ಶ್ಲಾಘನೀಯ.

ನಮ್ದು-ಕೆ ಕನ್ನಡಕ್ಕೆ ಯಾಕೆ ಮುಖ್ಯ?

ಅಂಕಿ-ಅಂಶಗಳ ಆಧಾರದ ಮೇಲೆ ಹೇಳುವುದಾದರೆ ಇಂಗ್ಲಿಷ್ ಭಾಷೆಯಲ್ಲಿ ಸಾಕಷ್ಟು ವಿಡಿಯೋಗಳು ಬರುತ್ತವೆ. ಹೊಸ ಹೊಸ ಪ್ರಯೋಗಗಳು ನಡೆಯುತ್ತವೆ. ಆ ಭಾಷೆಯ ನಂತರದ ಸ್ಥಾನ
ಯಾವುದು ಅಂತ ಕೇಳಿದರೆ ತಕ್ಷಣಕ್ಕೆ ಹಿಂದಿ ಅಂತ ಹೇಳಬಹುದು. ಆದರೆ ಯೂಟ್ಯೂಬ್‌ನಲ್ಲಿ ಇಂಗ್ಲಿಷ್ ನಂತರದ ಸ್ಥಾನದಲ್ಲಿ ತಮಿಳು, ತೆಲುಗು ಭಾಷಿಗರ ಚಾನಲ್‌ಗಳು ಇವೆ. ಹೊಸ ಥರದ ಪ್ರಯೋಗಗಳು, ವಿಡಿಯೋಗಳನ್ನು ತಮಿಳು ಮತ್ತು ತೆಲುಗು ಭಾಷೆಯವರು ದಂಡಿಯಾಗಿ ಮಾಡುತ್ತಾರೆ. ಹಾಗಾಗಿ ಅವರ ಇಂಟರ್‌ನೆಟ್ ಅಸ್ತಿತ್ವ ಗಟ್ಟಿಯಾಗಿದೆ.

ಕನ್ನಡದಲ್ಲೂ ಅಂಥಾ ಪ್ರಯತ್ನಗಳು ನಡೆದು, ಕನ್ನಡವೂ ಒಂದು ಗಟ್ಟಿಯಾಗಿ ಅಸ್ತಿತ್ವ ಸಾಧಿಸಬೇಕಾದರೆ ಹೆಚ್ಚು ಹಚ್ಚು ಚಿತ್ರಗಳು, ಕಿರುಚಿತ್ರಗಳು ಕನ್ನಡದಲ್ಲಿ ಸೃಷ್ಟಿಯಾಗಬೇಕು ಮತ್ತು  ಅದು ಜಾಸ್ತಿ ಜನರನ್ನು ತಲುಪಬೇಕು. ಇಂಟರ್‌ನೆಟ್ ಕಾಲದಲ್ಲಿ  ಮಕ್ಕಳಿಗೆ, ಬೇರೆ ಭಾಷಿಗರಿಗೆ ಅವರ ರೀತಿಯಲ್ಲೇ, ಅವರ ಇಷ್ಟಕ್ಕೆ ತಕ್ಕಂತೆ ಅವರನ್ನು ತಲುಪಬೇಕು. ಆ ಕಾರಣಕ್ಕಾಗಿಯೇ ಇಂಥಾ ಚಾನಲ್‌ಗಳು ಮುಖ್ಯ.

ನಮ್ದು ಕನ್ನಡ ಅನ್ನುವ ಹೆಸರು ಯೂಟ್ಯೂಬ್‌ಗೆ ದೊಡ್ಡದಾಗುತ್ತದೆ ಎಂಬ ಕಾರಣಕ್ಕೆ ನಮ್ದು-ಕೆ ಎಂದು ಹೆಸರಿಟ್ಟಿದ್ದೆವು. ಯಾವುದೇ ಬಂಡವಾಳವಿಲ್ಲದೆ ಇಷ್ಟು ದಿನ ಈ ತಂಡವನ್ನು ನಡೆಸಿದ್ದೇವೆ. ಕನ್ನಡದ ತಮಾಷೆ ಕಾರ್ಯಕ್ರಮಗಳು, ಕಿರುಚಿತ್ರಗಳು ಎಲ್ಲವೂ ನಮ್ಮ ಚಾನಲ್‌ನಲ್ಲಿ ಸಿಗಬೇಕು ಎಂಬ ಉದ್ದೇಶವಿದೆ. ನಾವು ಮಾಡುತ್ತಿರುವ ವಿಡಿಯೋಗಳನ್ನು ಜನ ಪ್ರೀತಿಯಿಂದ ನೋಡುತ್ತಿದ್ದಾರೆ. ಮೆಚ್ಚುತ್ತಿದ್ದಾರೆ.- ಸಂದೀಪ್‌ ಟಿಸಿ

ನಮ್ದು-ಕೆ ಸ್ಟಾಂಡಪ್ ಕಾಮಿಡಿ ಪ್ರಯತ್ನ

ಈಗ ಈ ತಂಡದವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಸ್ಟಾಂಡಪ್  ಕಾಮಿಡಿಗಳ ಕಾಲ ಇದು. ಬೇರೆ ಬೇರೆ ಭಾಷೆಗಳಲ್ಲಿ ವಿಭಿನ್ನ ರೀತಿಯ ಪ್ರಯತ್ನಗಳೆಲ್ಲಾ ನಡೆದಿವೆ. ಈಗ ನಮ್ದು-ಕೆ ತಂಡದವರು ಕೂಡ ಸ್ಟಾಂಡಪ್ ಕಾಮಿಡಿ ಕಾರ್ಯಕ್ರಮ ಆರಂಭಿಸಿದ್ದಾರೆ. ಶಿರಸಿ ಮೂಲಕಸುಬ್ರಹ್ಮಣ್ಯ ಹೆಗ್ಡೆ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಈ ಪ್ರಯತ್ನ ಕೂಡ ಜನರಿಗೆ ಇಷ್ಟವಾಗಿದೆ ಅನ್ನುವುದು ಇವರ ಗೆಲುವು. ಇಂಟರ್‌ನೆಟ್‌ನಲ್ಲಿ ಜಗತ್ತಿಗೆ ಕನ್ನಡದ ಕಂಪು ಹಂಚುತ್ತಿರುವ ಈ ತಂಡ ನಿಜವಾಗಿಯೂ ಮೆಚ್ಚುಗೆಗೆ ಅರ್ಹ. ಯೂಟ್ಯೂಬ್, ಫೇಸ್‌ಬುಕ್, ಇನ್ ಸ್ಟಾಗ್ರಾಮ್‌ನಲ್ಲಿ ನಮ್ದು ಕೆ ಅಂತ ಟೈಪ್ ಮಾಡಿದರೆ ಇವರ ಪುಟ ತೆರೆದುಕೊಳ್ಳುತ್ತದೆ. ಒಂದು ಲೈಕ್ ಒತ್ತಿದರೆ ಪ್ರೋತ್ಸಾಹ ಜಾಸ್ತಿಯಾಗುತ್ತದೆ.
ಇಮೇಲ್- namdukannada@gmail.com