Ballari News: 4 ವರ್ಷ ಕಳೆದರೂ ಆರಂಭವಾಗದ ತಾಲೂಕು ಮಟ್ಟದ ಕಚೇರಿಗಳು
ತಾಲೂಕಾಗಿ 4 ವರ್ಷಗಳನ್ನು ಪೂರೈಸಿದರೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಆರಂಭವಾಗಿಲ್ಲ. ಹೀಗಾದರೆ, ಕಚೇರಿಗಳು ಅಭಿವೃದ್ಧಿಯಾಗುವುದಾದರೂ ಯಾವಾಗ ಎನ್ನುವ ಯಕ್ಷಪ್ರಶ್ನೆ ತಾಲೂಕಿನ ಜನತೆಯದ್ದಾಗಿದೆ.
ಬಿ.ಹೆಚ್.ಎಂ.ಅಮರನಾಥಶಾಸ್ತ್ರಿ
ಕಂಪ್ಲಿ (ಸೆ.10) : ಕಂಪ್ಲಿ ತಾಲೂಕಾಗಿ 4 ವರ್ಷಗಳನ್ನು ಪೂರೈಸಿದರೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಆರಂಭವಾಗಿಲ್ಲ. ಹೀಗಾದರೆ, ಕಚೇರಿಗಳು ಅಭಿವೃದ್ಧಿಯಾಗುವುದಾದರೂ ಯಾವಾಗ ಎನ್ನುವ ಯಕ್ಷಪ್ರಶ್ನೆ ತಾಲೂಕಿನ ಜನತೆಯದ್ದಾಗಿದೆ. ಹಲವು ಸಂಘ ಸಂಸ್ಥೆಗಳ, ಮುಖಂಡರು, ನಾನಾ ರಾಜಕೀಯ ಮುಖಂಡರು, ವರ್ತಕರು ಸೇರಿದಂತೆ ತಾಲೂಕಿನ ಜನತೆ ಪಕ್ಷಾತೀತವಾಗಿ ಸಂಘಟಿತರಾಗಿ ಕಂಪ್ಲಿ ತಾಲೂಕು ಕೇಂದ್ರವನ್ನಾಗಿಸುವಂತೆ ಆಗ್ರಹಿಸಿ ನಿರಂತರ ಹೋರಾಟ ನಡೆಸಿದ್ದರ ಪ್ರತಿಫಲವಾಗಿ 2018ರ ಮಾಚ್‌ರ್ 6ರಂದು ಕಂಪ್ಲಿ ತಾಲೂಕು ಕೇಂದ್ರವಾಗಿ ಅನುಷ್ಠಾನಗೊಂಡಿತು. ಮಿನಿವಿಧಾನಸೌಧ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಒಂದೆಡೆ ಎಲ್ಲ ಕಚೇರಿಗಳು ಆರಂಭವಾಗುತ್ತವೆ ಎಂಬ ನಿರೀಕ್ಷೆಯಲ್ಲಿದ್ದಾರೆ ಜನರು.
Ballari; ಕೃಷಿ ಭೂಮಿಯಲ್ಲಿ ಇಟ್ಟಿಗೆ ಕಾರ್ಖಾನೆಗಳ ಹಾವಳಿ, ಮೌನವಹಿಸಿದ ತಾಲೂಕಾಡಳಿತ!
ಹೊಸಪೇಟೆಯೇ ಆಸರೆ :
ಕಂಪ್ಲಿ ತಾಲೂಕು ಕೇಂದ್ರವಾದರೇ ಸಾಕು ಹೊಸಪೇಟೆಗೆ ಅಲೆದಾಡುವುದು ತಪ್ಪುತ್ತದೆ. ಅಲ್ಲದೇ ಪಟ್ಟಣದಲ್ಲಿಯೇ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ ಕೆಲಸಗಳು ಈಡೇರುತ್ತವೆ ಎಂದುಕೊಂಡಿರುವ ತಾಲೂಕಿನ ಜನರ ಅಭಿಪ್ರಾಯ ಮಾತ್ರ ಹುಸಿಯಾಗಿದೆ. ಪಟ್ಟಣದಲ್ಲಿ ತಾಲೂಕು ಕಚೇರಿ, ತಾಲೂಕು ಪಂಚಾಯಿತಿ, ಉಪ ಖಜಾನೆ ಕಚೇರಿಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಕೃಷಿ, ತೋಟಗಾರಿಕೆ, ಬಿಇಒ, ಸಮಾಜಕಲ್ಯಾಣ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಆರಂಭವಾಗಿಲ್ಲ. ಸದ್ಯ ವಿಜಯನಗರ ಜಿಲ್ಲೆ ಹೊಸಪೇಟೆ ತಾಲೂಕಿನ ಅಧಿಕಾರಿಗಳೇ ಕಂಪ್ಲಿ ತಾಲೂಕಿಗೆ ಸಂಬಂಧಿಸಿದ ಕೆಲಸಗಳನ್ನು ನಿಭಾಯಿಸುತ್ತಿದ್ದಾರೆ.
ಭೌಗೋಳಿಕವಾಗಿ ಕಂಪ್ಲಿ ಬಳ್ಳಾರಿ ಜಿಲ್ಲೆಗೆ ಸೇರಿದೆಯಾದರೂ ವಿವಿಧ ಕೆಲಸಗಳಿಗೆ ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನವಾಗಿರುವ ಹೊಸಪೇಟೆಯನ್ನೇ ಅವಲಂಭಿಸಿದೆ. ಇದರಿಂದಾಗಿ ತಾಲೂಕಿನ ಜನತೆ ಹೊಸಪೇಟೆಗೆ ಅಲೆದಾಡುವ ಪರಿಸ್ಥಿತಿ ಇನ್ನೂ ತಪ್ಪಿಲ್ಲ.
ಅಗ್ನಿಶಾಮಕದಳ:
ಅಗ್ನಿ ಶಾಮಕ ಠಾಣೆ ನಿರ್ಮಾಣಕ್ಕೆ 2 ಎಕರೆ ಜಾಗವನ್ನು ಮೀಸಲಿಡಲಾಗಿದ್ದು, ಠಾಣೆಯ ನಿರ್ಮಾಣ ಕಾರ್ಯ ಮಾತ್ರ ಆಗುತ್ತಿಲ್ಲ. ಪಟ್ಟಣ ಸೇರಿದಂತೆ ತಾಲೂಕಿನ ಯಾವುದಾದರೂ ಗ್ರಾಮಗಳಲ್ಲಿ ಆಕಸ್ಮಿಕ ಅಗ್ನಿ ಅವಘಡಗಳು ಸಂಭವಿಸಿದಲ್ಲಿ ಗಂಗಾವತಿ ಅಥವಾ ಕುರುಗೋಡು ಅಗ್ನಿಶಾಮಕ ಠಾಣೆಗೆ ಕರೆ ಮಾಡುವ ಪರಿಸ್ಥಿತಿ ಇದೆ. ಅಲ್ಲಿಂದ ಅಗ್ನಿ ಶಾಮಕದಳದ ವಾಹನ ಸ್ಥಳಕ್ಕೆ ಬರುವಷ್ಟರಲ್ಲಿ ಅಧಿಕ ಹಾನಿ ಸಂಭವಿಸಿರುರುತ್ತದೆ ಎಂದು ಸಾರ್ವಜನಿಕರು ಆರೋಪಿಸುತ್ತಾರೆ.
ತಾತ್ಕಾಲಿಕ ಬಿಇಒ ಕಚೇರಿ ಆರಂಭಿಸಲು ಒತ್ತಾಯ
ಪಟ್ಟಣದಲ್ಲಿ ಈವರೆಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನಿರ್ಮಾಣವಾಗದೇ ಇರುವುದರಿಂದ ಶಿಕ್ಷಕರು ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಕಚೇರಿ ಆರಂಭಿಸುವಂತೆ ಒತ್ತಾಯಿಸಿ ಶಾಸಕರು, ಸಂಬಂಧಪಟ್ಟಅಧಿಕಾರಿಗಳು, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಶೀಘ್ರವೇ ತಾತ್ಕಾಲಿಕವಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಆರಂಭಿಸಬೇಕು. ಅಲ್ಲದೇ ಆದಷ್ಟುಬೇಗ ಪಟ್ಟಣದಲ್ಲಿ ಬಿಇಒ ಕಚೇರಿ ಆರಂಭಿಸಲು ಅಧಿಕಾರಿಗಳು ಮುತುವರ್ಜಿವಹಿಸಬೇಕು ಎಂದು ಶಿಕ್ಷಣ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಬಳ್ಳಾರಿ ಲಾಜಿಕ್ ರಾಜಕೀಯ: ಒಬ್ರು ಸೀರೆ ಕೊಟ್ರೆ, ಮತ್ತೊಬ್ರು ಬೆಳ್ಳಿ ಕಾಯಿನ್ ಕೊಟ್ರು!
ಈಗಲಾದರೂ ಜನಪ್ರತಿನಿಧಿಗಳು ಹಾಗೂ ಸಂಬಂಧ ಪಟ್ಟಅಧಿಕಾರಿಗಳು ಎಚ್ಚೆತ್ತುಕೊಂಡು ತಾಲೂಕಿಗೆ ಬೇಕಾದ ಎಲ್ಲ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳನ್ನು ಆರಂಭಿಸಿ ಪೂರಕವಾದಂತಹ ಸಿಬ್ಬಂದಿ ಒದಗಿಸಿ ತಾಲೂಕಿನ ಜನತೆಗೆ ಅನುಕೂಲ ಕಲ್ಪಿಸುವ ಜೊತೆಗೆ ತಾಲೂಕಿನ ಅಭಿವೃದ್ಧಿಗೆ ಮುಂದಾಗಬೇಕು ಎನ್ನುವುದು ಸಾರ್ವಜನಿಕರ ಒತ್ತಾಯ. ಸರ್ಕಾರ ತಾಲೂಕು ಘೋಷಣೆ ಮಾಡಿದಾಗ ಪೂರಕವಾದ ಎಲ್ಲ ಕಚೇರಿಗಳನ್ನು ಒದಗಿಸಬೇಕು. ಕಂಪ್ಲಿ ತಾಲೂಕಾದರೂ ವಿವಿಧ ಕಚೇರಿಗಳಿಲ್ಲದೆ ತಾಲೂಕಿನ ಜನತೆ ಈಗಲೂ ಹೊಸಪೇಟೆಯನ್ನು ಅವಲಂಭಿಸಿದ್ದು ಕಂಪ್ಲಿ ತಾಲೂಕಾಗಿಯೂ ಸಾರ್ಥಕವಿಲ್ಲದಂತಾಗಿದೆ. ಕೂಡಲೇ ಸರ್ಕಾರ ಎಲ್ಲ ಕಚೇರಿಗಳನ್ನು ಆರಂಭಿಸುವ ಮೂಲಕ ಸೂಕ್ತ ಸಿಬ್ಬಂದಿ ಸೌಲಭ್ಯಗಳನ್ನು ಒದಗಿಸಬೇಕು.
ಕೆ.ಎಂ. ಹೇಮಯ್ಯಸ್ವಾಮಿ ತಾಲೂಕು ಹೋರಾಟ ಸಮಿತಿ ಕಾರ್ಯಾಧ್ಯಕ್ಷ
ಕಂಪ್ಲಿ ತಾಲೂಕಾಗಿ 4 ವರ್ಷಕಳೆದರೂ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಕಚೇರಿಗಳು ಆರಂಭಗೊಳ್ಳದೆ ತಾಲೂಕಿ ಜನತೆಗೆ ಸಮಸ್ಯೆಯಾಗಿದೆ. ಯಾವುದಾದರೂ ಕೆಲಸಕ್ಕಾಗಿ ಹೊಸಪೇಟೆಗೆ ತೆರಳಬೇಕಾಗಿದ್ದು ಹಣ, ಸಮಯ ವ್ಯರ್ಥವಾಗುತ್ತದೆ. ಜನಪ್ರತಿನಿಧಿಗಳು ಸಂಬಂಧ ಪಟ್ಟಅಧಿಕಾರಿಗಳ ತಾತ್ಸಾರವೇ ಇದಕ್ಕೆ ಕಾರಣ. ಇದರಿಂದ ತಾಲೂಕು ಅಭಿವೃದ್ಧಿಗೆ ಹಿನ್ನಡೆಯಾಗಿದ್ದು ಸರ್ಕಾರ ಸೂಕ್ತ ಅನುದಾನ ನೀಡಿ ಕಚೇರಿಗಳು, ರಸ್ತೆಗಳ ಅಭಿವೃದ್ಧಿ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಶ್ರಮಿಸಬೇಕು.
ಬಿ.ನಾರಾಯಣಪ್ಪ ಕಾಂಗ್ರೆಸ್ ಮುಖಂಡರು