ಮಂಡ್ಯ(ಜು.25): ಮಂಡ್ಯ ಭಗೀರಥನೆಂಬ ಹೆಗ್ಗಳಿಕೆಗೆ ಪಾತ್ರರಾಗಿ ಮನ್‌ ಕೀ ಬಾತ್‌ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಅವರಿಂದ ಹೊಗಳಿಸಿಕೊಂಡಿದ್ದ ದಾಸನದೊಡ್ಡಿ ಕಾಮೇಗೌಡರು ಕೆಲವು ದಿನಗಳಿಂದ ಊಟ, ತಿಂಡಿಯನ್ನು ತ್ಯಜಿಸಿದ್ದಾರೆ. ಶೌಚಕ್ಕೆ ಹೋಗುವ ತೊಂದರೆಯಿಂದ ದೂರವಾಗಲು ಅನ್ನಾಹಾರ ಸೇವನೆ ನಿಲ್ಲಿಸಿದ್ದಾರೆ. ಕೊರೋನಾ ಸೋಂಕಿತರಾಗಿ ತೀವ್ರ ಕಾಲುನೋವಿನಿಂದ ಬಳಲುತ್ತಿರುವ ಅವರನ್ನು ಮಂಡ್ಯ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ, ಅವರ ಪಾಲಿಗೆ ಚಿಕಿತ್ಸೆಯೇ ಚಿತ್ರಹಿಂಸೆಯಾಗಿ ಪರಿಣಮಿಸಿದೆ.

ಕಾಮೇಗೌಡರ ಕಾಲಿಗೆ ಗಾಯವಾಗಿ ಹಲವು ದಿನಗಳಾಗಿದೆ. ಗಾಯ ಉಲ್ಬಣಿಸಿದ ಪರಿಣಾಮ ಕಾಮೇಗೌಡರ ವಿರೋಧದ ನಡುವೆಯೂ ಅವರನ್ನು ಮಂಡ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ. ಕೋವಿಡ್‌ ವಾರ್ಡ್‌ ಪಕ್ಕದಲ್ಲೇ ಇವರನ್ನು ಚಿಕಿತ್ಸೆಗೆ ದಾಖಲು ಮಾಡಿಕೊಂಡ ಪರಿಣಾಮ ಕಾಮೇಗೌಡರನ್ನೂ ಸೋಂಕು ಆವರಿಸಿತು.

ವೈದ್ಯರ ಆತಂಕ:

ಮನೆಯಲ್ಲೇ ನನಗೆ ಚಿಕಿತ್ಸೆ ನೀಡುವಂತೆ ಕಾಮೇಗೌಡರು ವೈದ್ಯರ ಬಳಿ ಕಾಡಿ ಬೇಡಿದರೂ ಕಾಲಿಗೆ ಆಗಿರುವ ಗಾಯದ ಮೇಲೆ ಸರಿಯಾದ ನಿಗಾ ವಹಿಸಿ ಸಮರ್ಪಕ ಚಿಕಿತ್ಸೆ ನೀಡಬೇಕು. ಇಲ್ಲದಿದ್ದರೆ ಬೇರೆ ಸ್ವರೂಪ ಪಡೆಯಬಹುದೆಂಬ ಆತಂಕ ವೈದ್ಯರದ್ದಾಗಿದೆ. ಕೊರೋನಾ ಸೋಂಕಿರುವುದರಿಂದ ಸದ್ಯಕ್ಕೆ ಮನೆಗೆ ಕಳುಹಿಸಲಾಗುವುದಿಲ್ಲವೆಂದು ಹೇಳಿ ಅವರ ಮನವೊಲಿಸಿ ಆಸ್ಪತ್ರೆಯಲ್ಲೇ ಚಿಕಿತ್ಸೆ ಮುಂದುವರೆಸಿದ್ದಾರೆ. ಇದರಿಂದ ಕಾಮೇಗೌಡರಿಗೆ ದಿಕ್ಕೇ ತೋಚದಂತಾಗಿದೆ.

ಶೌಚಕ್ಕೆ ಹೋಗೋದೇ ಸಮಸ್ಯೆ:

ಕಾಲಿಗೆ ಆಗಿರುವ ಗಾಯಕ್ಕೆ ಮಂಡಿಯವರೆಗೆ ಪ್ಲಾಸ್ಟರ್‌ ಮಾಡಲಾಗಿದೆ. ಇದರಿಂದ ನಿತ್ಯಕರ್ಮಗಳನ್ನು ಪೂರೈಸುವುದು ಕಾಮೇಗೌಡರಿಗೆ ಕಷ್ಟವಾಗುತ್ತಿದೆ. ಮನೆಯಲ್ಲಿದ್ದ ಸಮಯದಲ್ಲಿ ಕಾಮೇಗೌಡರಿಗೆ ಅವರ ಪುತ್ರ ಎಲ್ಲ ರೀತಿಯಲ್ಲೂ ನೆರವಾಗುತ್ತಿದ್ದರು. ಮಲವಿಸರ್ಜನೆಗೆ ಕರೆದುಕೊಂಡು ಹೋಗುವುದು, ಬಳಿಕ ಶುಚಿಗೊಳಿಸುವ ಎಲ್ಲ ಕಾರ್ಯವನ್ನೂ ಆತನೇ ಮಾಡುತ್ತಿದ್ದನು. ಆದರೆ, ಕೊರೋನಾ ಸೋಂಕಿಗೆ ಒಳಗಾಗಿರುವ ಕಾಮೇಗೌಡರು ಈಗ ಆಸ್ಪತ್ರೆಯಲ್ಲಿ ಏಕಾಂಗಿಯಾಗಿದ್ದಾರೆ. ಅವರ ಬಳಿಯೇ ಇದ್ದು ಆರೈಕೆ ಮಾಡುವವರಿಲ್ಲದೆ ಕಾಲುನೋವು, ಸೋಂಕು ಹಿರಿಯ ಜೀವವನ್ನು ಹಿಂಡುತ್ತಿವೆ.

ಆರೈಕೆ ಮಾಡುವವರೇ ಇಲ್ಲ:

ಕಾಲುನೋವು ಹಾಗೂ ಸೋಂಕು ಗುಣಮುಖವಾಗಬೇಕಾದರೆ ಸರಿಯಾದ ಸಮಯಕ್ಕೆ ಊಟ, ತಿಂಡಿ ಮಾಡಬೇಕು. ಊಟ, ತಿಂಡಿ ಮಾಡಿದರೆ ಮಲವಿಸರ್ಜನೆಗೆ ತೆರಳಲೇಬೇಕು. ಕಾಲುನೋವಿನಿಂದ ಬಳಲುತ್ತಿರುವ ಅವರನ್ನು ಶೌಚಕ್ಕೆ ಕರೆದುಕೊಂಡು ಹೋಗುವವರು ಯಾರು, ಶುಚಿಗೊಳಿಸುವವರು ಯಾರು ಎಂಬುದು ಅವರ ಚಿಂತೆಯಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಸಿಗುತ್ತಿದೆಯೇ ವಿನಃ ಕಾಮೇಗೌಡರನ್ನು ಆರೈಕೆ ಮಾಡುವವರು ಇಲ್ಲ. ಹೀಗಾಗಿ ಊಟ-ತಿಂಡಿ ಮಾಡುವುದನ್ನೇ ಈಗ ಕಾಮೇಗೌಡರು ಬಿಟ್ಟುಬಿಟ್ಟಿದ್ದಾರೆ.

ಪುತ್ರ ಆರೈಕೆ ಮಾಡಲು ಮುಚ್ಚಳಿಕೆ ಬರೆದುಕೊಡಲಿ:

ಕಾಮೇಗೌಡರನ್ನು ಆಸ್ಪತ್ರೆಯಲ್ಲಿದ್ದುಕೊಂಡು ಆರೈಕೆ ಮಾಡುವುದಕ್ಕೆ ಪುತ್ರ ಕೃಷ್ಣ ಎಂಬುವರು ಸಿದ್ಧರಿದ್ದಾರೆ. ಆದರೆ, ಕೋವಿಡ್‌ ಸೋಂಕಿತರಿರುವ ವಾರ್ಡ್‌ನಲ್ಲಿ ಬೇರೆಯವರು ಉಳಿಯುವುದಕ್ಕೆ ವೈದ್ಯಾಧಿಕಾರಿಗಳು ಅವಕಾಶ ನೀಡುತ್ತಿಲ್ಲ. ಹಾಗೊಮ್ಮೆ ಸಹಾಯಕ್ಕೆ ಬೇಕಾದರೆ ಮುಚ್ಚಳಿಕೆ ಬರೆದುಕೊಟ್ಟು ಪಿಪಿ ಕಿಟ್‌ ಹಾಕಿಕೊಂಡು ಆರೈಕೆ ಮಾಡಬಹುದು. ಮಗನ ಆರೋಗ್ಯದ ಹಿತದೃಷ್ಟಿಯಿಂದ ಕಾಮೇಗೌಡರು ಪುತ್ರನಿಂದ ಆರೈಕೆ ಮಾಡಿಸಿಕೊಳ್ಳುವುದಕ್ಕೆ ಒಪ್ಪುತ್ತಿಲ್ಲ. ಈ ಸಂದಿಗ್ಧ ಪರಿಸ್ಥಿತಿಯಿಂದ ಪಾರಾಗಲು ನನ್ನನ್ನು ಮನೆಗೆ ಕಳುಹಿಸುವಂತೆ ಕಾಮೇಗೌಡರು ವೈದ್ಯರನ್ನು ಒತ್ತಾಯಿಸುತ್ತಿದ್ದಾರೆ.

ಆಸ್ಪತ್ರೆಯಲ್ಲಿ ಮೂಕರೋದನ 

ಕಾಮೇಗೌಡರು ಊಟ, ತಿಂಡಿ ತ್ಯಜಿಸಿರುವುದರಿಂದ ಅವರಿಗೆ ನೀಡುತ್ತಿರುವ ಚಿಕಿತ್ಸೆಯೂ ಪ್ರಯೋಜನವಾಗುತ್ತಿಲ್ಲ. ಸೋಂಕು ಮತ್ತು ಕಾಲಿನ ಗಾಯ ವಾಸಿಯಾಗಲು ಸರಿಯಾದ ಸಮಯಕ್ಕೆ ಊಟ-ತಿಂಡಿ ಸೇವಿಸುವ ಅಗತ್ಯವಿದೆ. ಆಗ ವೈದ್ಯರು ನೀಡುವ ಚಿಕಿತ್ಸೆ ಪರಿಣಾಮಕಾರಿಯಾಗಿ ಕೆಲಸ ಮಾಡಿ ಗುಣಮುಖರಾಗಲು ಸಾಧ್ಯವಾಗಲಿದೆ. ಆದರೆ, ಶೌಚ ತೊಂದರೆ, ಆರೈಕೆ ಮಾಡುವವರರಿಲ್ಲದೆ ಕಾಮೇಗೌಡರು ಊಟ-ತಿಂಡಿ ಬಿಟ್ಟು ಆಸ್ಪತ್ರೆಯೊಳಗೆ ಮೂಕರೋಧನ ಅನುಭವಿಸುತ್ತಿದ್ದಾರೆ.

ಹೋಂ ಐಸೋಲೇಷನ್‌ ಕಷ್ಟ:

ಕಾಮೇಗೌಡರ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಹೋಂ ಐಸೋಲೇಷನ್‌ ವ್ಯವಸ್ಥೆ ಮಾಡುವುದಕ್ಕೆ ಅವಕಾಶವಿದೆ. ಆದರೆ, ಜಿಲ್ಲಾಡಳಿತ ಮತ್ತು ಆರೋಗ್ಯಾಧಿಕಾರಿಗಳು ಆ ಬಗ್ಗೆ ಈವರೆಗೆ ಮನಸ್ಸು ಮಾಡಿಲ್ಲ. ಕಾಮೇಗೌಡರಿಗೆ ಹಲವಾರು ಆರೋಗ್ಯ ಸಮಸ್ಯೆಗಳಿರುವುದರಿಂದ ಹೋಂ ಐಸೋಲೇಷನ್‌ ಮಾಡುವುದು ಕಷ್ಟಎಂದು ಹೇಳುತ್ತಿದ್ದಾರೆ.

ಯಾದಗಿರಿ: ನಾಗರ ಪಂಚಮಿಯಂದು ಹಾವಿನ ಬದಲು ಚೇಳುಗಳಿಗೆ ಭಕ್ತಿಯ ಪೂಜೆ..!

ಕಾಮೇಗೌಡರಿಗೆ ಕೊರೋನಾ ಸೋಂಕಿದೆ. ಅಲ್ಲದೆ, ಅವರ ದೇಹದಲ್ಲಿ ಪ್ರೋಟೀನ್‌ ಅಂಶ, ರಕ್ತದ ಕೊರತೆ ಇದೆ. ಕಾಲಿನಲ್ಲಿ ಹುಣ್ಣಾಗಿದೆ. ಇವೆಲ್ಲಾ ಸಮಸ್ಯೆಗಳಿರುವ ಅವರಿಗೆ ಹಲವು ಟೆಸ್ಟ್‌ಗಳನ್ನೆಲ್ಲಾ ಮಾಡಬೇಕಿದೆ. 70 ವರ್ಷ ವಯಸ್ಸಾಗಿರುವುದರಿಂದ ಉಸಿರಾಟದ ತೊಂದರೆಗ ಎದುರಾದಲ್ಲಿ ತಕ್ಷಣಕ್ಕೆ ಚಿಕಿತ್ಸೆ ಕೊಡಬೇಕು. ಹೋಂ ಐಸೋಲೇಷನ್‌ ಮಾಡಿದರೆ ಇವೆಲ್ಲಾ ಚಿಕಿತ್ಸೆಗಳಿಗೆ ತೊಂದರೆಯಾಗಲಿದೆ. ಅದಕ್ಕಾಗಿ ಅವರಿಗೆ ಪ್ರತ್ಯೇಕವಾಗಿ ಹೆಲ್ಪರ್‌ ನೀಡುವಂತೆ ಮಿಮ್ಸ್‌ ನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ. ಐದು ದಿನಗಳ ಬಳಿಕ ಮಂಡ್ಯದ ಒಕ್ಕಲಿಗರ ಹಾಸ್ಟೆಲ್‌ ಅಥವಾ ಮಳವಳ್ಳಿ ಆಸ್ಪತ್ರೆಗೆ ಶಿಫ್ಟ್‌ ಮಾಡಲಾಗುವುದು. ಅವರ ಆರೋಗ್ಯದ ಮೇಲೆ ತೀವ್ರ ನಿಗಾ ಇಡಲಾಗಿದೆ ಎಂದು ಮಂಡ್ಯ  ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್‌ ತಿಳಿಸಿದ್ದಾರೆ.

ಕಸ ಸಂಗ್ರಹಣೆಗೆ ಟ್ರಾಕ್ಟರ್‌ ಓಡಿಸುವ ಪಿಡಿಒ!

ಕಾಮೇಗೌಡರು ಮನೆಗೆ ಹೋಗಬೇಕೆಂದು ಹೆಚ್ಚು ಹಠ ಮಾಡುತ್ತಿದ್ದಾರೆ. ಅವರು ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಕಾರಣ ಆಸ್ಪತ್ರೆಯಲ್ಲೇ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದರೂ ಅವರು ಸ್ಪಂದಿಸುತ್ತಿಲ್ಲ. ಅವರಿಗೆ ಮಾತ್ರೆಗಳಿಗಿಂತ ಹೆಚ್ಚಾಗಿ ಇಂಜೆಕ್ಷನ್‌ ಮೂಲಕ ಚಿಕಿತ್ಸೆ ನೀಡಲಾಗುತ್ತಿದೆ. ಸರಿಯಾದ ಸಮಯಕ್ಕೆ ಅವುಗಳನ್ನು ನೀಡುವುದು ಆವರ ಆರೋಗ್ಯದ ದೃಷ್ಟಿಯಿಂದ ಅಗತ್ಯ ಮತ್ತು ಅನಿವಾರ್ಯ. ಹೋಂ ಐಸೋಲೇಷನ್‌ ಮಾಡಿದರೆ ಈ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟವಾಗಲಿದೆ ಎಂದು ಮಂಡ್ಯ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್‌.ಪಿ. ಮಂಚೇಗೌಡ ತಿಳಿಸಿದ್ದಾರೆ.