ಯಾದಗಿರಿ: ನಾಗರ ಪಂಚಮಿಯಂದು ಹಾವಿನ ಬದಲು ಚೇಳುಗಳಿಗೆ ಭಕ್ತಿಯ ಪೂಜೆ..!
ಯಾದಗಿರಿ(ಜು.25): ನಾಗರ ಪಂಚಮಿಯಂದು ಕಲ್ಲು ನಾಗರ ಸೇರಿ ಹುತ್ತಕ್ಕೆ ತೆರಳಿ ಹಾಲೆರೆದು ಭಯ ಭಕ್ತಿಯಿಂದ ಪೂಜಿಸುತ್ತಾರೆ. ಆದರೆ, ಕಂದಕೂರು ಬಳಿ ಹಾವಿನ ಬದಲು ಚೇಳಿನ ಪೂಜೆ ಸಲ್ಲಿಸಲಾಗುತ್ತದೆ. ಜೀವಂತ ಚೇಳುಗಳನ್ನು ಕೈಯಲ್ಲಿ ಹಿಡಿದು ಆಟವಾಡುತ್ತಾರೆ.
ಯಾದಗಿರಿ ನಗರದಿಂದ 24 ಕಿ.ಮೀ. ದೂರದಲ್ಲಿ ಕಂದಕೂರಿನ ಕೊಂಡಮಾಯಿ ಗುಡ್ಡದಲ್ಲಿ ಪ್ರತಿ ನಾಗರ ಪಂಚಮಿ ದಿನದಂದು ನಡೆಯೋ ಈ ಚೇಳಿನ ಜಾತ್ರೆ ಕುತೂಹಲಕ್ಕೆ ಕಾರಣವಾಗಿದೆ.
ಇಲ್ಲಿನ ಗ್ರಾಮಸ್ಥರು ಎಂದಿನಂತೆ ಭಕ್ತಿಯಿಂದ ಜೀವಂತ ಚೇಳುಗಳನ್ನು ಪೂಜಿಸುತ್ತಾರೆ. ಅವುಗಳನ್ನು ಕೈಯಲ್ಲಿ ಹಿಡಿದು ಆಟವಾಡುತ್ತಾರೆ.
ಇಂದು ಇಲ್ಲಿ ಇಂತಹ ಅಚ್ಚರಿ ನಡೆಯಲಿದೆ ಅನ್ನೋದು ಗ್ರಾಮದ ಬಸರೆಡ್ಡಿಗೌಡರ ಮಾತು ವಿಚಿತ್ರವಾದರೂ ಸತ್ಯ.
ಚೇಳುಗಳು ಮಾತ್ರ ಕಡಿಯೋದಿಲ್ಲ. ಕಡಿದ್ರೂ ಸಹ ಕೊಂಡಮಾಯಿ ದೇವಿ ಪವಾಡದಿಂದ ವಿಷ ಏರೋಲ್ಲ ಅನ್ನೋದು ಇಲ್ಲಿನ ನಂಬಿಕೆ. ಇದನ್ನ ನೋಡೋದಕ್ಕೆ ಬೇರೆ ಬೇರೆಡೆಯಿಂದ ಜನ ಬರುತ್ತಾರೆ.
ನಾಗರ ಪಂಚಮಿಯಂದು ಸಂಜೆ ಕೊಂಡಮಾಯಿ ಗುಡ್ಡಕ್ಕೆ ಸೇರಿ ಊರಿನ ಜನರೆಲ್ಲ ಹೋಗುತ್ತಾರೆ. ಸಂಪ್ರದಾಯದಂತೆ ಚೇಳುದೇವಿಗೆ ಪೂಜೆ ಸಲ್ಲಿಸುತ್ತಾರೆ. ಒಂದು ಕಡೆ ಪೂಜೆ ಪುನಸ್ಕಾರ ನಡೆಯುತ್ತಿದ್ದರೆ, ಇನೊಂದೆಡೆ ಚೇಳುಗಳ ಜೊತೆಗೆ ಜನರ ಆಟ ಆರಂಭವಾಗಿರುತ್ತದೆ.
ಯಾವುದೇ ಭಯವಿಲ್ಲದೆ ಕೈಯಲ್ಲಿ ಹಿಡಿದು, ಮೈಮೇಲೆ ಬಿಟ್ಟುಕೊಂಡು ಖುಷಿ ಪಡುತ್ತಾರೆ. ಸದ್ಯ, ಕೊರೋನಾ ಭೀತಿ ಹಾಗೂ ಸರ್ಕಾರದ ನಿಯಮಾವಳಿಗಳನುಸಾರ ಈ ಬಾರಿ, ಇಂತಹ ಜಾತ್ರೆಗೆ ಭಕ್ತರ ಸಂಖ್ಯೆ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ. ಈ ಮಧ್ಯೆ, ಕೊಂಡಮಾಯಿ ಮೂರ್ತಿ ಸ್ಥಾಪನೆ ನೆರವೇರಿದೆ.
ನಾಗರ ಪಂಚಮಿಯ ದಿನದಂದು ಮಾತ್ರ ಕಂದಕೂರಿನ ಕೊಂಡಮಾಯಿ ಗುಡ್ಡದಲ್ಲಿ ನಡೆಯುವ ಚೇಳಿನ ದೇವಿ ಪೂಜೆ ಕುತೂಹಲಕ್ಕೆ ಕಾರಣವಾಗಿದೆ.
ಚೇಳುಗಳ ಜೊತೆಗೆ ನಡೆಯೋ ಸರಸಾಟ ರೋಮಾಂಚನಗೊಳಿಸುತ್ತದೆ. ಆದರೆ, ವೈಜ್ಞಾನಿಕ ತಳಹದಿಯ ಪ್ರಕಾರ, ಈ ವಾತಾವರಣದಲ್ಲಿ ಸರಿಸೃಪಗಳು ಮಂದಾವಸ್ಥೆಯಲ್ಲಿರುತ್ತವೆ.
ಚೇಳುಗಳಿಗೆ ಆವರಿಸುವ ಮಬ್ಬಿನಿಂದಾಗಿ ಚೇಳುಗಳು ಕಚ್ಚುವುದಿಲ್ಲ ಎಂಬ ವಾದವಿದೆ.
ಈ ಹಿಂದೆ ಗುಲ್ಬರ್ಗಾ ವಿವಿಯಿಂದ ಇದರ ಪರಿಶೀಲನೆಗೆ ಬಂದ ತಂಡದ ಮುಖ್ಯಸ್ಥರಿಗೆ ಚೇಳು ಕಡಿದು ಆತಂಕ ಮೂಡಿಸಿತ್ತು ಎನ್ನುವ ಮಾತುಗಳೂ ಇವೆ.