Traffic Jam: ಅಡ್ಡಾದಿಡ್ಡಿ ಟ್ರಾಫಿಕ್‌ಗೆ ಕಲಬುರಗಿ ಪೊಲೀಸ್ ಮೂಗುದಾರ
ಕಲಬುರಗಿ ಮಹಾನಗರದ ಅಡ್ಡಾದಿಡ್ಡಿ ಸಂಚಾರಕ್ಕೆ ಮೂಗುದಾರ ಹಾಕುವ ಕೆಲಸ ಪೊಲೀಸರು ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಮಾಡುತ್ತಿದ್ದಾರೆ. ಅದರಲ್ಲೂ ಇದೇ ಮೊದಲ ಬಾರಿಗೆ ಎಂಬಂತೆ ಇಲ್ಲಿನ ಬಸ್ ನಿಲ್ದಾಣ ಮುಂದಿನ ರಸ್ತೆ ಹಾಗೂ ಏಶಿಯನ್ ಮಾಲ್ ಮುಂದಿನ ರಸ್ತೆಗಳನ್ನು ಸುಗಮ ಸಂಚಾರಕ್ಕಾಗಿ ವಿಭಜಿಸುವ ಮೂಲಕ ವಾಹನಗಳ ದಟ್ಟಣೆ ಇಲ್ಲದಂತೆ ಸಂಚರಿಸಲು ಅನುವು ಮಾಡಿಕೊಡುತ್ತಿದ್ದಾರೆ
ಕಲಬುರಗಿ (ಮಾ.3) : ಕಲಬುರಗಿ ಮಹಾನಗರದ ಅಡ್ಡಾದಿಡ್ಡಿ ಸಂಚಾರಕ್ಕೆ ಮೂಗುದಾರ ಹಾಕುವ ಕೆಲಸ ಪೊಲೀಸರು ನಗರದ ಪ್ರಮುಖ ರಸ್ತೆ, ವೃತ್ತಗಳಲ್ಲಿ ಮಾಡುತ್ತಿದ್ದಾರೆ. ಅದರಲ್ಲೂ ಇದೇ ಮೊದಲ ಬಾರಿಗೆ ಎಂಬಂತೆ ಇಲ್ಲಿನ ಬಸ್ ನಿಲ್ದಾಣ ಮುಂದಿನ ರಸ್ತೆ ಹಾಗೂ ಏಶಿಯನ್ ಮಾಲ್ ಮುಂದಿನ ರಸ್ತೆಗಳನ್ನು ಸುಗಮ ಸಂಚಾರಕ್ಕಾಗಿ ವಿಭಜಿಸುವ ಮೂಲಕ ವಾಹನಗಳ ದಟ್ಟಣೆ ಇಲ್ಲದಂತೆ ಸಂಚರಿಸಲು ಅನುವು ಮಾಡಿಕೊಡುತ್ತಿದ್ದಾರೆ.
ಏಶಿಯನ್ ಮಾಲ್ ಕಟ್ಟಡ(Asian Mall Building) ತಲೆ ಎತ್ತಿದ ನಂತರದ ದಿನಗಳಲ್ಲಿ ಎಂದಿಗೂ ಈ ಮಾಲ್ ಮುಂದಿನ ರಸ್ತೆಯಲ್ಲಿ ಸುಗಮ ಸಂಚಾರಕ್ಕೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅದರಲ್ಲೂ ಇಲ್ಲಿನ ವಿಶಾಲ 100 ಅಡಿಗೂ ಹೆಚ್ಚಿನ ಅಗಲದ ರಸ್ತೆಯಲ್ಲಿ ಕಾರ್, ಬೈಕ್ ಪಾರ್ಕಿಂಗ್‌ಗೆ ಅವಕಾಶ ನೀಡಿ ತಮ್ಮ ಪಾಡಿಗೆ ತಾವಿರುತ್ತಿದ್ದರು. ಹೀಗಾಗಿ ಈ ರಸ್ತೆಯಲ್ಲಿ ಬೈಕ್ ಸವಾರಿ, ಪಾದಚಾರಿಯಾಗಿ ನಡೆದು ಹೋಗಲೂ ಸಾಕುಬೇಕಾಗಿತ್ತು.
MGNREGA: ಕೇಂದ್ರ ಸರ್ಕಾರ ಕಾರ್ಮಿಕರಿಗೆ ಕೆಲಸ ನೀಡದೆ ಕತ್ತು ಹಿಚುಕುವ ಕೆಲಸ ಮಾಡ್ತಿದೆ: ಕೆ.ನೀಲಾ
ಆದರೆ, ಇದೇ ಮೊದಲ ಬಾರಿಗೆ ಎಂಬಂತೆ ನಗರ ಪೊಲೀಸರು ಈ ಮಾಲ್ ಮಂದಿನ ವಿಶಾಲ ರಸ್ತೆಯನ್ನು ಸರಿಯಾಗಿ 2 ಭಾಗವಾಗಿ ವಿಭಜಿಸಿದ್ದಾರೆ. ನಟ್ಟನಡುವೆ ಬ್ಯಾರಿಕೇಡ್ ಇಟ್ಟು ಆಚೆ ಈಚೆಗಳಲ್ಲಿ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ಅನುಕೂಲ ಮಾಡಿದ್ದಾರೆ. ಈ ಮಾಲ್‌ಗೆ ನೆಲ ಮಹಡಿಯಲ್ಲಿ ವಿಶಾಲ ನಿಲುಗಡೆ ವ್ಯವಸ್ಥೆ ಇದ್ದರೂ ಪೊಲೀಸರ ನಿರ್ಲಕ್ಷ್ಯ, ವಾಹನ ಬಳಕೆದಾರರ ಚಲ್ತೆ ಹೈ ನೀತಿಗಳಿಂದ ರಸ್ತೆಯಲ್ಲೇ ಪಾರ್ಕಿಂಗ್ ನಡೆಯುತ್ತಿತ್ತು.
ಆದರೀಗ ನಗಕ್ಕೆ ಹೊಸ ಪೊಲೀಸ್ ಕಮೀಷ್ನರ್ ಆರ್.ಚೇತನ್ ಬಂದ ನಂತರದಲ್ಲಿ ಅಲ್ಲಲ್ಲಿ ಇಂತಹ ಸಂಚಾರ ದಟ್ಟಣೆ ಸ್ಥಳಗಳಲ್ಲು ಗುರುತಿಸುವ ಕೆಲಸ ನಡೆಯುತ್ತಿದ್ದು ಅಲ್ಲೆಲ್ಲಾ ಪರಿಹಾರದ ಉಪಾಯಗಳನ್ನೂ ಪೊಲೀಸರು ಕೈಗೊಳ್ಳುತ್ತಿದ್ದಾರೆ.
ಬಸ್ ನಿಲ್ದಾಣ ಮುಂದಿನ ರಸ್ತೆ ಇಷ್ಟೊಂದು ವಿಶಾಲವಾಗಿದೆಯೆ?:
ಕಳೆದ 2 ದಿನದಿಂದ ಪೊಲೀಸರು ಬಸ್ ನಿಲ್ದಾಣ(Kalaburagi busstand) ಮುಂದಿನ ಅಡಾದಿಡ್ಡಿ ಆಟೋ ಸಂಚಾರಕ್ಕೆ ಮೂಗುದಾರ ಹಾಕುವತ್ತ ಮುನ್ನುಗ್ಗಿದ್ದಾರೆ. ಈ ರಸ್ತೆಯಲ್ಲೀಗ ಸಂಚರಿಸುವವರು ಈ ರಸ್ತೆ ಈ ಪರಿ ವಿಶಾಲವಾಗಿದೆಯೆ? ಇಷ್ಟುದಿನ ಅದೆಲ್ಲಿತ್ತು? ಎಂದು ಅವಾಕ್ಕಾಗುವಂತಾಗಿದೆ. ಏಕಂದರೆ ಇಲ್ಲಿಯೂ ಪೊಲೀಸರು ಅಡ್ಡಾದಿಡ್ಡಿ ಸಂಚಾರಕ್ಕೆ ಕಡಿವಾಣ ಹಾಕಿದ್ದಾರೆ. ಈ ರಸ್ತೆಯಲ್ಲೂ ಬಸ್, ಬೈಕ್, ಆಟೋಗಳ ಸಂಚಾರದಲ್ಲಿ ಶಿಸ್ತು ತಂದಿದ್ದಾರೆ. ಮೈಕ್ ಜೊತೆಗೇ ಕೂಡುವ ಪೊಲೀಸರು ಯಾರಾದರೂ ಬೇಟಾಬಿಟ್ಟಸಂಚರಿಸಿದರೆ ಜೋರಾಗಿ ಕೂಗಿ ಸೂಚಿಸುತ್ತ ಖಡಕ್ಕಾಗಿ ಎಚ್ಚರಿಕೆ ನೀಡುತ್ತಿದ್ದಾರೆ.
ಕಮೀಷ್ನರ್ ಚೇತನ್(Commissioner chethan) ಸೂಚನೆಯಂತೆ ಡಿಸಿ ಚಂದ್ರಪ್ಪ, ಡಿಸಿಪಿ ಅಡ್ಡೂರು ಶ್ರೀನಿವಾಸುಲು ಹಾಗೂ ಪೊಲೀಸ್ ತಂಡ ಸಂಚಾರ ಸುಗಮಕ್ಕೆ ರಸ್ತೆಗೆ ಇಳಿದಿದೆ. ಡಿಸಿಪಿಗಳೇ ಖುದ್ದು ಸಂಚಾರ ದಟ್ಟಣೆಗೆ ಪರಿಹಾರಕ್ಕಾಗಿ ಸಂಜೆ, ಬೆಳಗ್ಗೆ ರಸ್ತೆಯಲ್ಲಿ ಓಡಾಡುತ್ತಿರೋದನ್ನ ಕಂಡು ಜನ ಸುಗಮ ಸಂಚಾರಕ್ಕೆ ಸಹಕರಿಸಲು ಶುರು ಮಾಡಿದ್ದಾರೆ.
ನಗರದಲ್ಲಿವೆ 25 ಸಂಚಾರ ದಟ್ಟಣೆ ಪಾಯಿಂಟ್
ಕಲಬುರಗಿ ನಗರ(Kalaburagi city)ದಲ್ಲಿ ಸುಗಮ ಸಂಚಾರಕ್ಕೆ ತಾವು ಆದ್ಯತೆ ನೀಡುತ್ತಿರೋದಾಗಿ ಹೇಳಿರುವ ಕಮೀಷ್ನರ್ ಆರ್.ಚೇತನ್ ನಗರದಲ್ಲಿ ತಾವು ಖುದ್ದಾಗಿ ಸಂಚರಿಸಿ ನೋಡಿದ್ದರಿಂದ 25ರಷ್ಟುಅವೈಜ್ಞಾನಿಕ ಸಂಚಾರ ದಟ್ಟಣೆ ಪಾಯಿಂಟ್, ವೃತ್ತ, ರಸ್ತೆ, ತಿರುವುಗಳನ್ನು ಗುರುತಿಸಿದ್ದಾಗಿ ಹೇಳಿದ್ದಾರೆ.
ಕನ್ನಡಪ್ರಭ ಜತೆ ಮಾತನಾಡಿದ ಅವರು, ಇವೆಲ್ಲ ಸ್ಥಳಗಳಲ್ಲಿ ಸಂಚಾರ ಸುಗಮಗೊಳಿಸಲು ಏನೆಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೋ ಅವುಗಳನ್ನು ಕೈಗೊಳ್ಳಲು ತಾವು ಸಿದ್ಧ, ಇದಕ್ಕಾಗಿ ಪಾಲಿಕೆಯ ನೆರವು ಕೋರಿದ್ದು ಅಲ್ಲಿಂದಲೂ ಸ್ಪಂದನೆ ದೊರಕುತ್ತಿದೆ ಎಂದಿದ್ದಾರೆ. ಅತಿಕ್ರಮಣ ತೆರವು, ಸಿಸಿ ಕ್ಯಾಮೆರಾ ಸೇರಿದಂತೆ ಹಲವು ಹತ್ತು ಉಪಕ್ರಮಗಳೊಂದಿಗೆ ಸಂಚಾರ ಸುರಕ್ಷತೆಗೆ ತಾವು ಕ್ರಮಕ್ಕೆ ಮುಂದಾಗಿದ್ದು ಜನರ ಸಹಕಾರ ಬೇಕೆಂದು ಚೇತನ್ ಹೇಳಿದ್ದಾರೆ.
ಆಕಸ್ಮಿಕವಾಗಿ ರಾಜಕೀಯ ಪ್ರವೇಶ ಮಾಡಿದ್ದೇನೆ: ಅವಿನಾಶ ಜಾಧವ್
ಸರ್ದಾರ್ ಪಟೇಲ್ ವೃತ್ತದ ರಸ್ತೆ, ಸೂಪರ್ ಮಾರ್ಕೆಟ್‌ನ ರಸ್ತೆಗಳು, ಪ್ರಕಾಶ ಮಾಲ್ ಮುಂದಿನ ರಸ್ತೆ ಇಲ್ಲೆಲ್ಲಾ ಹಿಂದಿನಂತೆಯೇ ಏಕಮುಖ ಸಂಚಾರ ಮಾರ್ಗ ವ್ಯವಸ್ಥೆ ಜಾರಿಗೆ ತರುವುದೇ ತಮ್ಮ ಚಿಂತನೆಯಾಗಿದೆ. ಇಂತಹ ಮಾರ್ಗಗಳಲ್ಲಿ ಸಚಾರ ದಟ್ಟಣೆ ಆಗೋದೇ ಕಿರಿದಾದ ರಸ್ತೆಗಳಂದಾಗಿ, ಹೀಗಾಗಿ ಜನ ಸಹಕರಿಸಬೇಕು. ಏಕಮುಖ ರಸ್ತೆಗಳೆಂದು ಶೀಘ್ರದಲ್ಲೇ ಕೆಲವು ರಸ್ತೆಗಳನನು ಘೋಷಿಸಲಾಗುತ್ತದೆ. ಜನ ಇಂತಹ ರಸ್ತೆಗಳನ್ನು ಸಂಚಾರ ಹೆಚ್ಚಾಗಿರುವ ಹೊತ್ತಲ್ಲಿ ಬೇಕಾಬಿಟ್ಟಿಯಾಗಿ ಬಳಸದೆ ನಯಮದಂತೆ ಬಳಸಿ ಸಹಕರಿಸಬೇಕು ಎಂದು ಕಮೀಷ್ನರ್ ಆರ್. ಚೇತನ್ ಹೇಳಿದ್ದಾರೆ.