ವಾಣಿಜ್ಯ ಕಾರಣಗಳಿಂದ ಸ್ಥಗಿತಗೊಂಡಿದ್ದ ಕಲಬುರಗಿ-ಬೆಂಗಳೂರು ವಿಮಾನಯಾನ ಸೇವೆಯನ್ನು ಪುನರಾರಂಭಿಸಲು ರಾಜ್ಯ ಸರ್ಕಾರವು 'ವೈಯಬಿಲಿಟಿ ಗ್ಯಾಪ್ ಫಂಡಿಂಗ್' ಯೋಜನೆಯಡಿ ಆರ್ಥಿಕ ನೆರವು ನೀಡಲು ನಿರ್ಧರಿಸಿದೆ. ಈ ಯೋಜನೆಯಲ್ಲಿ ಕೆಕೆಆರ್‌ಡಿಬಿ ಶೇ. 80 ರಷ್ಟು ಮತ್ತು ರಾಜ್ಯ ಸರ್ಕಾರ ಶೇ. 20 ರಷ್ಟು ವೆಚ್ಚವನ್ನು ಭರಿಸಲಿದ್ದು, ಶೀಘ್ರದಲ್ಲೇ ಸೇವೆ ಪುನಾರಂಭಗೊಳ್ಳುವ ನಿರೀಕ್ಷೆಯಿದೆ.
ಕಲಬುರಗಿ: ಜಿಲ್ಲೆಯ ಜನತೆಯ ಬಹುದಿನದ ಬೇಡಿಕೆಯಾದ ಕಲಬುರಗಿ-ಬೆಂಗಳೂರು ನಡುವಿನ ವಿಮಾನಯಾನ ಸೇವೆಯನ್ನು ಪುನಾರಂಭಿಸಲು ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ವಾಣಿಜ್ಯ ಕಾರಣಗಳಿಂದ ಸ್ಥಗಿತಗೊಂಡಿದ್ದ ಈ ಮಾರ್ಗದ ಕಾರ್ಯಾಚರಣೆಗೆ ಜೀವ ತುಂಬಲು ‘ವೈಯಬಿಲಿಟಿ ಗ್ಯಾಪ್ ಫಂಡಿಂಗ್’ (ವಿಜಿಎಪ್) ಯೋಜನೆಯಡಿ ಆರ್ಥಿಕ ನೆರವು ನೀಡಲು ನಿರ್ಧರಿಸಲಾಗಿದೆ. ಹೀಗಾಗಿ ಸ್ಥಗಿತಗೊಂಡಿರುವ ಕಲಬುರಗಿ ಹಾಗೂ ಬೆಂಗಳೂರು ನಡುವಿನ ವಿಮಾನ ಸೇವೆ ಪುನಾರಂಭಗೊಳ್ಳಲು ಎಲ್ಲ ರೀತಿಯ ಸಿದ್ಧತೆಗಳು ನಡೆದಂತಾಗಿದೆ.

ಅಂದಾಜು ರು. 2.50 ಕೋಟಿ ಆರ್ಥಿಕ ಬೆಂಬಲ
ಬೃಹತ್ ಹಾಗೂ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಮಂತ್ರಿಗಳ ಅಧ್ಯಕ್ಷತೆಯಲ್ಲಿ ಹಾಗೂ ಪಂಚಾಯತ್ ರಾಜ್ ಮತ್ತು ಐ.ಟಿ. ಇಲಾಖೆಯ ಮಂತ್ರಿಗಳು, ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆಯ ಮಂತ್ರಿಗಳು, ಪೌರಾಡಳಿತ ಮತ್ತು ಹಜ್ ಇಲಾಖೆಯ ಮಂತ್ರಿಗಳ ಸಭೆಯಲ್ಲಿ ಈ ಕುರಿತು ವಿಸ್ತೃತ ಚರ್ಚೆ ನಡೆಸಲಾಗಿದೆ. ವಿಮಾನಯಾನ ಸಂಸ್ಥೆಗಳು ಪ್ರತಿದಿನ ಕಾರ್ಯಾಚರಣೆ ನಡೆಸಲು ಆಸಕ್ತಿ ತೋರಿದ್ದು, ಇದಕ್ಕಾಗಿ ವರ್ಷಕ್ಕೆ ಅಂದಾಜು ರು. 2.50 ಕೋಟಿ ಆರ್ಥಿಕ ಬೆಂಬಲದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ ಎಂದು ಕೆಕೆಆರ್‌ಡಿಬಿ ಅಧ್ಯಕ್ಷ ಡಾ. ಅಜಯ್ ಸಿಂಗ್ ಹೇಳಿದ್ದಾರೆ.
ವಿಮಾನಯಾನ ಸಂಸ್ಥೆಗಳಿಗೆ ನೀಡಬೇಕಾದ ಈ ಮೊತ್ತದಲ್ಲಿ ಸಿಂಹಪಾಲು ಅಂದರೆ ಶೇ. 80 ರಷ್ಟನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಭರಿಸಲಿದ್ದು, ಉಳಿದ ಶೇ. 20 ರಷ್ಟನ್ನು ರಾಜ್ಯ ಸರ್ಕಾರ ನೀಡಲಿದೆ. ಈಗಾಗಲೇ ಬೀದರ್-ಬೆಂಗಳೂರು ಮಾರ್ಗಕ್ಕಾಗಿ 2025-26ನೇ ಸಾಲಿನಲ್ಲಿ 12.20 ಕೋಟಿ ರು. ಮಂಡಳಿಯಿಂದ ಮಂಜೂರು ಮಾಡಲಾಗಿದ್ದು, ಇದೇ ಮಾದರಿಯಲ್ಲಿ ಕಲಬುರಗಿ ಮಾರ್ಗಕ್ಕೂ ಅನುದಾನ ಒದಗಿಸಲು ಮಂಡಳಿಯ ಕ್ರಿಯಾ ಯೋಜನೆಯಡಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಡಾ. ಅಜಯ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಹಿನ್ನೆಲೆ ಮತ್ತು ಸವಾಲು:
ಕಲಬುರಗಿ ವಿಮಾನ ನಿಲ್ದಾಣವು ಕೇವಲ ಜಿಲ್ಲೆಗೆ ಮಾತ್ರವಲ್ಲದೆ, ಸುತ್ತಮುತ್ತಲಿನ ಆರು ಜಿಲ್ಲೆಗಳು ಹಾಗೂ ನೆರೆಯ ಮಹಾರಾಷ್ಟ್ರ ಮತ್ತು ತೆಲಂಗಾಣದ ಪ್ರಯಾಣಿಕರಿಗೂ ಆಸರೆಯಾಗಿದೆ. ಏರ್‌ಬಸ್ 320 ಹಾಗೂ ಬೋಯಿಂಗ್-737 ನಂತಹ ಬೃಹತ್ ವಿಮಾನಗಳ ಸಂಚಾರಕ್ಕೆ ಬೇಕಾದ ಅತ್ಯಾಧುನಿಕ ಮೂಲಸೌಕರ್ಯಗಳಿವೆ. ಆದರೆ, ಈ ಹಿಂದೆ ಸೇವೆ ನೀಡುತ್ತಿದ್ದ ಘೋಡಾವತ್ ಸಂಸ್ಥೆಯು ಪ್ರಯಾಣಿಕರ ಕೊರತೆ ಮತ್ತು ಆರ್ಥಿಕ ನಷ್ಟದ ಕಾರಣ ನೀಡಿ ಅಕ್ಟೋಬರ್ 15, 2025 ರಿಂದ ಸೇವೆಯನ್ನು ಸ್ಥಗಿತಗೊಳಿಸಿತ್ತು.
ಸರ್ಕಾರ ಹಾಗೂ ಕೆಕೆಆರ್‌ಡಿಬಿಯ ಸಹಯೋಗದಲ್ಲಿ ವಿಮಾನಯಾನ ಸಂಸ್ಥೆಗಳು ಪ್ರತಿದಿನ ಕಾರ್ಯಾಚರಣೆ ನಡೆಸಲು ಇದಕ್ಕಾಗಿ ವರ್ಷಕ್ಕೆ ಅಂದಾಜು ರು. 12.50 ಕೋಟಿ ಆರ್ಥಿಕ ಬೆಂಬಲದ ಅಗತ್ಯವಿದೆ ಎಂದು ಅಂದಾಜಿಸಲಾಗಿದೆ. ಈ ನಿರ್ಧಾರದಿಂದಾಗಿ ಕಲಬುರಗಿ ಮತ್ತು ಬೆಂಗಳೂರು ನಡುವೆ ಶೀಘ್ರದಲ್ಲೇ ಪ್ರತಿನಿತ್ಯ ವಿಮಾನ ಸಂಚಾರ ಆರಂಭವಾಗುವ ನಿರೀಕ್ಷೆಯಿದ್ದು, ಇದು ಈ ಭಾಗದ ಕೈಗಾರಿಕಾ ಮತ್ತು ಶೈಕ್ಷಣಿಕ ಪ್ರಗತಿಗೆ ಹೊಸ ವೇಗ ನೀಡಲಿದೆ ಎಂದು ಡಾ. ಅಜಯ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

