*  ಶೇಕಡ 80ರಷ್ಟು ಮಳಿಗೆಗಳನ್ನು ತೆರವುಗೊಳಿಸಿದ ಪೊಲೀಸರು*  ಐದಾರು ದಿನ ಜಾತ್ರೆ ನಿರೀಕ್ಷೆಯಲ್ಲಿದ್ದವರಿಗೆ ನಿರಾಸೆ*  3 ದಿನದಲ್ಲಿ 5 ಲಕ್ಷ ಮಂದಿ ಭೇಟಿ 

ಬೆಂಗಳೂರು(ಡಿ.02): ಅದ್ಧೂರಿಯಾಗಿ ನಡೆದ ಬಸನವಗುಡಿಯ ಐತಿಹಾಸಿಕ ಕಡಲೆಕಾಯಿ(Kadalekaayi Parishe) ಪರಿಷೆಗೆ ಬುಧವಾರ ತೆರೆ ಬಿದ್ದಿದ್ದು, ಒಟ್ಟು ಸುಮಾರು 5 ಲಕ್ಷ ಮಂದಿ ಪರಿಷೆ ಕಣ್ತುಂಬಿಕೊಂಡಿದ್ದಾರೆ ಎಂದು ಬಿಬಿಎಂಪಿ(BBMP) ಅಧಿಕಾರಿಗಳು ಮಾಹಿತಿ ನೀಡಿದರು.

ಕಡಲೆಕಾಯಿ ಪರಿಷೆಗೆ ಶನಿವಾರ ಸಂಜೆಯಿಂದಲೇ ಲಕ್ಷಾಂತರ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು. ‘ಒಮಿಕ್ರಾನ್‌’(Omicron) ಹೊಸ ವೈರಸ್‌ ಭೀತಿ ಹಿನ್ನೆಲೆಯಲ್ಲಿ ಬುಧವಾರವೆ ಶೇ.80ರಷ್ಟು ಮಳಿಗೆಗಳನ್ನು ಅಧಿಕಾರಿಗಳು ತೆರವುಗೊಳಿಸುವ ಮೂಲಕ ಪರಿಷೆಗೆ ತೆರೆ ಎಳೆದರು. ಇದು ಐದಾರು ದಿನ ಪರಿಷೆಯ ಆಚರಣೆಯ ನಿರೀಕ್ಷೆಯಲ್ಲಿದ್ದ ಜನರಲ್ಲಿ ನಿರಾಶೆ ಮೂಡಿಸಿತು.

Omicron: ಬೆಂಗ್ಳೂರಲ್ಲಿ ಲಸಿಕೆ ಪಡೆಯಲು ಮತ್ತೆ ಮುಗಿಬಿದ್ದ ಜನ..!

ಕೋವಿಡ್‌(Covid19) ಆತಂಕದಿಂದಾಗಿ ಸಮಾಲೋಚನೆ ನಡೆಸಿದ ಬಿಬಿಎಂಪಿ, ಮುಜರಾಯಿ ಇಲಾಖೆ ಹಾಗೂ ಪೊಲೀಸ್‌ ಇಲಾಖೆಗಳ ಸೂಚನೆ ಮೇರೆಗೆ ಮಂಗಳವಾರ ಸಂಜೆಯಿಂದಲೇ ಎಲ್ಲ ಅಂಗಡಿ ಮುಂಗಟ್ಟು ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಬುಧವಾರ 12 ಗಂಟೆವರೆಗೂ ಕಾಯ್ದ ಪೊಲೀಸರು(Police) ನಂತರ ಖುದ್ದು ತಾವೇ ಬಲವಂತವಾಗಿ ಶೇ.80ರಷ್ಟು ಮಳಿಗೆಗಳನ್ನು ತೆರವುಗೊಳಿಸಿದರು.

ಬಾಕಿ ಉಳಿದ ಶೇ.20ರಷ್ಟು ಮಳಿಗೆದಾರರು ದೂರದ ತಮಿಳುನಾಡು, ಆಂಧ್ರಪ್ರದೇಶ(Andhra Pradesh), ಮಂಡ್ಯ(Mandya), ಮೈಸೂರು(Mysuru) ಮತ್ತು ಚಿಂತಾಮಣಿ ಮುಂತಾದೆಡೆಯಿಂದ ಆಗಮಿಸಿದ್ದರು. ಸಂಜೆ ಲಗೇಜು ಸಮೇತ ತೆರಳಲು ಸಾಧ್ಯವಾಗಲಿಲ್ಲ. ಹೀಗಾಗಿ ಗುರುವಾರ ತೆರಳುವುದಾಗಿ ಪೊಲೀಸರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಭರ್ಜರಿ ವ್ಯಾಪಾರ:

2 ಸಾವಿರಕ್ಕೂ ಹೆಚ್ಚು ಮಳಿಗೆದಾರರನ್ನು ಕೊರೋನಾ(Coronavirus) ತಪಾಸಣೆಗೆ ಒಳಪಡಿಸಿದ್ದಾರೆ. ಸೋಂಕು ದೃಢಪಟ್ಟರೆ ಸೂಕ್ತ ವೈದ್ಯಕೀಯ ನೆರವು ನೀಡಲೆಂದು ಆರೋಗ್ಯ ಸಿಬ್ಬಂದಿ ವ್ಯಾಪಾರಿಗಳ ಸಂಪೂರ್ಣ ವಿಳಾಸ ದಾಖಲಿಸಿಕೊಂಡಿದ್ದಾರೆ.

ಪರಿಷೆಯಲ್ಲಿದ್ದ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಳಿಗೆಗಳಲ್ಲಿ ಸಹಸ್ರಾರು ಟನ್‌ ಕಡಲೆಕಾಯಿ ಮಾರಾಟವಾಗಿದೆ. ಕೋಟ್ಯಂತರ ರೂ. ವಹಿವಾಟು ನಡೆಯಿತು ಅಂದಾಜಿಸಲಾಗಿದೆ.

ಪರಿಷೆಗೆ ಡಿಕೆಶಿ ಭೇಟಿ

ಕೆಪಿಸಿ(KPCC) ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಅವರು ಬುಧವಾರ ತೆರೆ ಬೀಳುವ ಮುನ್ನವೇ ಕಡಲೆಕಾಯಿ ಪರಿಷೆಗೆ ಭೇಟಿ ನೀಡಿದರು. ಕೆಲ ಸಮಯ ಪರಿಷೆಯಲ್ಲಿ ಸುತ್ತಾಡಿ ನಂತರ ಇಷ್ಟದ ಕಡಲೆಕಾಯಿ ಖರೀದಿಸಿದ್ದು ಕಂಡು ಬಂತು. ಪರಿಷೆ ಪ್ರಯುಕ್ತ ಎನ್‌.ಆರ್‌.ಕಾಲೋನಿಯಿಂದ ಶಂಕರಮಠ ಆಶ್ರಮದ ವೃತದವರೆಗಿನ ಬುಲ್‌ ಟೆಂಪಲ್‌ ಹಾಗೂ ಮತ್ತಿತರ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿತ್ತು. ಸರ್ಕಾರದ ಸೂಚನೆ ಮೇರೆಗೆ ಪರಿಷೆಗೆ ತೆರೆ ಎಳೆಯುವ ಜತೆಗೆ ಈ ರಸ್ತೆಗಳಲ್ಲಿ ಪೊಲೀಸರು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

Covid Vaccine ಪಡೆಯದಿದ್ರೆ ಪಾರ್ಕ್‌, ಮಾಲ್‌ಗೆ ನೋ ಎಂಟ್ರಿ..?

ಕೊನೆಯ ಕಾರ್ತಿಕ ಸೋಮವಾರ (ನ.29) ಜರುಗುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಅದ್ಧೂರಿ ಚಾಲನೆ ದೊರಕಿತ್ತು. ಮುಜರಾಯಿ ಇಲಾಖೆ ಹಾಗೂ ಬಿಬಿಎಂಪಿ ಸಹಯೋಗದಲ್ಲಿ ಹೂಗಳಿಂದ ಅಲಂಕೃತಗೊಂಡ ದೊಡ್ಡ ಗಣಪತಿ ಹಾಗೂ ಬಸವಣ್ಣನ ಮೂರ್ತಿಗೆ ಬೆಳಗ್ಗೆ 10.30ಕ್ಕೆ ವಿಶೇಷ ಪೂಜೆಗಳು ಹಾಗೂ ಕಡಲೆಕಾಯಿಯ ಅಭಿಷೇಕ ನೆರವೇರಿಸುವ ಮೂಲಕ ಪರಿಷೆ ವಿದ್ಯುಕ್ತವಾಗಿ ಆರಂಭವಾಗಿತ್ತು. ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತಾ, ಆಡಳಿತಾಧಿಕಾರಿ ರಾಕೇಶ್‌ಸಿಂಗ್‌, ಮುಜರಾಯಿ ಇಲಾಖೆ ಅಧಿಕಾರಿಗಳು ಸೇರಿದಂತೆ ರಾಜಕೀಯ ಗಣ್ಯರು ಪರಿಷೆಗೆ ಆಗಮಿಸಿದ್ದರು.

ಪ್ರತಿ ವರ್ಷ ಕಾರ್ತಿಕ ಮಾಸದ ಕಡೆ ಸೋಮವಾರ ನಡೆಯುವ ಈ ಕಡಲೆಕಾಯಿ ಪರಿಷೆಯು ಬೆಂಗಳೂರಿಗರ ಜನಪ್ರಿಯ ಜಾತ್ರೆ ಎಂದು ಬಿಂಬಿತವಾಗಿದೆ. ಕೊರೋನಾ ಕಾರಣದಿಂದ ಕಳೆದೆರಡು ವರ್ಷ ದೇವರ ಮೂರ್ತಿಗಳಿಗೆ ಸರಳ ಪೂಜೆಗಷ್ಟೆ ಸಿಮೀತವಾಗಿದ್ದ ಪರಿಷೆ ಈ ಬಾರಿ ಎಂದಿನಂತೆ ಸಂಭ್ರಮ, ಸಡಗರದಿಂದ ನಡೆಯಲಿದ್ದು, ಆದರೆ ಒದೀಗ ಒಮಿಕ್ರಾನ್‌ ಭೀತಿ ಹಿನ್ನೆಲೆಯಲ್ಲಿ ಮೂರೇ ದಿನಕ್ಕೆ ಪರೀಷೆ ಮುಕ್ತಾಯಗೊಂಡಿದೆ.