Omicron: ಬೆಂಗ್ಳೂರಲ್ಲಿ ಲಸಿಕೆ ಪಡೆಯಲು ಮತ್ತೆ ಮುಗಿಬಿದ್ದ ಜನ..!

*   ಹೊಸ ತಳಿ ಭೀತಿ: ಲಸಿಕೆಗೆ ಭಾರಿ ಡಿಮ್ಯಾಂಡ್‌
*   ಜನರಿಂದ ತುಂಬಿ ತುಳುಕುತ್ತಿರುವ ಲಸಿಕಾ ಕೇಂದ್ರಗಳು
*   ಮಂಗಳವಾರ 67 ಸಾವಿರ ಮಂದಿಗೆ ಲಸಿಕೆ
 

Covid Vaccine Huge Demand in Bengaluru Due to Fear of Omicron grg

ಬೆಂಗಳೂರು(ಡಿ.01):  ಕೊರೋನಾ ಹೊಸ ತಳಿಯ(Omicron) ಆತಂಕದ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಕೋವಿಡ್‌ ಲಸಿಕೆ ಪಡೆಯುವವರ ಸಂಖ್ಯೆ ದಿಢೀರ್‌ ಏರಿಕೆಯಾಗಿದೆ.

ಒಮಿಕ್ರಾನ್‌ ರೂಪಾಂತರಿ ವೈರಾಣು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಮೂರನೇ ಅಲೆ ಆರಂಭದ ಮುನ್ಸೂಚನೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ನಗರದಲ್ಲಿ ಕೋವಿಡ್‌ ಪರೀಕ್ಷೆ(Covid Test) ಮತ್ತು ಲಸಿಕಾಕರಣಕ್ಕೆ(Vaccine) ಜನರು ಮುಗಿಬಿದ್ದಿದ್ದಾರೆ. ವಾರದ ಹಿಂದೆ ಬಿಕೋ ಎನ್ನುತ್ತಿದ್ದ ಲಸಿಕಾ ಕೇಂದ್ರ ಈಗ ತುಂಬಿ ತುಳುಕುತ್ತಿವೆ.

ಕಳೆದ ಒಂದೂವರೆ ತಿಂಗಳಿನಿಂದ ಕೊರೋನಾ(Coronavirus) ಸೋಂಕಿತ ಪ್ರಕರಣಗಳು ಇಳಿಕೆಯಾದ ಬೆನ್ನಲ್ಲೇ ಕೋವಿಡ್‌ ಲಸಿಕೆ ಪಡೆಯುವವರ ಸಂಖ್ಯೆಯೂ ಗಣನೀಯವಾಗಿ ಇಳಿಕೆಯಾಗಿತ್ತು. ಬಿಬಿಎಂಪಿ(BBMP) ಮತ್ತು ಆರೋಗ್ಯ ಇಲಾಖೆ ನಿರಂತರವಾಗಿ ಲಸಿಕಾಕರಣ ಅಭಿಯಾನ ಕೈಗೊಂಡಿದ್ದರೂ ಶೇ.100ರಷ್ಟುಗುರಿ ಸಾಧಿಸಲು ಸಾಧ್ಯವಾಗಿರಲಿಲ್ಲ. ಮೊದಲ ಡೋಸ್‌ ಲಸಿಕೆ (ಶೇ.85) ಪಡೆದ ಬಳಿಕ ನಿಗದಿತ ಅವಧಿಯಲ್ಲಿ ಎರಡನೇ ಲಸಿಕೆ ಪಡೆಯದವರ ಸಂಖ್ಯೆ ಸಾಕಷ್ಟುದೊಡ್ಡದಿದ್ದು ಶೇ.55 ಮಂದಿ ಮಾತ್ರ ಎರಡನೇ ಡೋಸ್‌ ಪಡೆದುಕೊಂಡಿದ್ದಾರೆ. ಆದರೆ ದಕ್ಷಿಣ ಆಫ್ರಿಕಾದಲ್ಲಿ(South Africa) ಕಂಡು ಬಂದ ಕೊರೋನಾ ಒಮಿಕ್ರಾನ್‌ ತಳಿ ಮತ್ತು ಕ್ಲಸ್ಟರ್‌ ಮಾದರಿಯಲ್ಲಿ ಶಾಲಾ, ಕಾಲೇಜುಗಳಲ್ಲಿ ಸೋಂಕು ಪ್ರಕರಣ ಹೆಚ್ಚು ಕಂಡು ಬರುತ್ತಿರುವುದರಿಂದ ಆತಂಕಗೊಂಡ ಜನರು ಈಗ ಮತ್ತೆ ಲಸಿಕಾ ಕೇಂದ್ರಗಳತ್ತ ಧಾವಿಸುತ್ತಿದ್ದಾರೆ.

Omicron variant :  13 ದೇಶಗಳಲ್ಲಿ ಕಾಣಿಸಿಕೊಂಡ ವೈರಸ್, ಮುನ್ನೆಚ್ಚರಿಕೆಯೇ ಪರಿಹಾರ

ಬಿಬಿಎಂಪಿ ವ್ಯಾಪ್ತಿಯಲ್ಲಿ ವಾರದ ಹಿಂದೆ ಪ್ರತಿದಿನ ಸರಾಸರಿ 25ರಿಂದ 30 ಸಾವಿರ ಜನರು ಕೋವಿಡ್‌ ಲಸಿಕೆ ಪಡೆದಿದ್ದರು. ಆದರೆ ನವೆಂಬರ್‌ 23ರಿಂದ ನ.29ರವರೆಗೆ ಪ್ರತಿ ದಿನ ಸರಾಸರಿ 36ರಿಂದ 40 ಸಾವಿರ ಲಸಿಕೆ ನೀಡಲಾಗಿದೆ. ಅಂದರೆ ಒಂದು ವಾರದಿಂದ ಲಸಿಕೆ ಪಡೆಯುತ್ತಿರುವವರ ಸರಾಸರಿ ಸಂಖ್ಯೆ 5ರಿಂದ 6 ಸಾವಿರದಷ್ಟು ಹೆಚ್ಚಾಗಿದೆ. ಅದರಲ್ಲೂ ನ.27ರಂದು 48,302 ಮತ್ತು ನ.28ರಂದು 39,281 ಮಂದಿ ಲಸಿಕೆ ಪಡೆದುಕೊಂಡಿದ್ದರೆ, ಮಂಗಳವಾರ (ನ.30) ಒಂದೇ ದಿನ 67 ಸಾವಿರ ಮಂದಿ ಲಸಿಕೆ ಹಾಕಿಸಿಕೊಂಡಿದ್ದಾರೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಲಸಿಕಾ ಕೇಂದ್ರ ಹೆಚ್ಚಳ

ಹೊಸ ತಳಿ ಪತ್ತೆ ಹಿನ್ನೆಲೆಯಲ್ಲಿ ಪಾಲಿಕೆ ವ್ಯಾಪ್ತಿಯ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗಿದೆ. ಜೊತೆಗೆ ಮೆಜೆಸ್ಟಿಕ್‌, ರೈಲ್ವೆ ನಿಲ್ದಾಣಗಳು ಸೇರಿದಂತೆ ಪ್ರಮುಖ ಜನಸಂದಣಿ ಪ್ರದೇಶಗಳಲ್ಲಿ ಮತ್ತೆ ಕೋವಿಡ್‌ ಪರೀಕ್ಷಾ ಕೇಂದ್ರಗಳನ್ನು ಬಿಬಿಎಂಪಿ ಆರಂಭಿಸಿದೆ. ಜೊತೆಗೆ ಮೊದಲ ಮತ್ತು ಎರಡನೇ ಡೋಸ್‌ ಲಸಿಕೆ ಪಡೆಯದವರಿಗೆ ಅನುಕೂಲವಾಗಲಿ ಎನ್ನುವ ಕಾರಣಕ್ಕೆ ಪಾಲಿಕೆ ವ್ಯಾಪ್ತಿಯ ಆಯಕಟ್ಟಿನ ಜಾಗಗಳಲ್ಲಿ ಲಸಿಕಾ ಕೇಂದ್ರಗಳನ್ನು ಕೂಡ ಪ್ರಾರಂಭಿಸಿದೆ.

185 ಜನರಿಗೆ ಸೋಂಕು: 6 ಮಂದಿ ಕೊರೋನಾದಿಂದ ಸಾವು

(Bengaluru)ನಗರದಲ್ಲಿ ಮಂಗಳವಾರ 185 ಜನರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಆರು ಸೋಂಕಿತರು ಮೃತಪಟ್ಟಿದ್ದಾರೆ.

ಪುರುಷರು 103 ಮತ್ತು 82 ಮಂದಿ ಮಹಿಳೆಯರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಈವರೆಗಿನ ಸೋಂಕಿತರ ಸಂಖ್ಯೆ 12,56,452ಕ್ಕೆ ಏರಿಕೆಯಾಗಿದೆ. ತಲಾ ಮೂರು ಮಂದಿ ಮಹಿಳೆಯರು ಮತ್ತು ಪುರುಷರು ಸಾವು ಸೇರಿ ಒಟ್ಟು ಸಾವಿನ ಸಂಖ್ಯೆ 16,338ಕ್ಕೆ ಏರಿದೆ.

Covid vaccination : ‘ಮಂತ್ರಕ್ಕೆ ತಿರುಮಂತ್ರ’ ಕಡೆಗೂ ದೇವಿ ಮೈಮೇಲೆ ಬಂದಿದ್ದ ಅಜ್ಜಿಗೆ ಲಸಿಕೆ

ಇದೇ ವೇಳೆ 237 ಪುರುಷರು ಮತ್ತು 237 ಮಂದಿ ಮಹಿಳೆಯರು ಸೇರಿದಂತೆ 654 ಸೋಂಕಿತರು ಗುಣಮುಖರಾಗಿದ್ದು, ಒಟ್ಟು ಬಿಡುಗಡೆಯಾದವರ ಸಂಖ್ಯೆ 12,35.281 ತಲುಪಿದೆ. ಸಕ್ರಿಯವಾಗಿರುವ 5,308 ಕೋವಿಡ್‌ ರೋಗಿಗಳಿಗೆ ನಿಗದಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ(Department of Health) ತಿಳಿಸಿದೆ.

ಬಿಬಿಎಂಪಿಯ ಒಟ್ಟು ಎಂಟು ವಲಯಗಳಲ್ಲಿನ ಒಟ್ಟು ಕಂಟೈನ್ಮೆಂಟ್‌ ಝೋನ್‌ಗಳ ಸಂಖ್ಯೆ 55ಕ್ಕೆ ಇಳಿಕೆಯಾಗಿದೆ. ಬೊಮ್ಮನಹಳ್ಳಿಯಲ್ಲಿ 18, ದಕ್ಷಿಣ ವಲಯ 10, ಪೂರ್ವ 10, ಪಶ್ಚಿಮ 5, ಯಲಹಂಕ 7, ಮಹದೇವಪುರದಲ್ಲಿ 5 ಕಂಟೈನ್ಮೆಂಟ್‌ ಝೋನ್‌ಗಳು ಇವೆ. ದಾಸರಹಳ್ಳಿ ಮತ್ತು ಆರ್‌.ಆರ್‌.ನಗರ ವಲಯಗಳು ಕಂಟೈನ್ಮೆಂಟ್‌ ಝೋನ್‌ನಿಂದ ಮುಕ್ತವಾಗಿದೆ ಎಂದು ಬಿಬಿಎಂಪಿಯ ಕೊರೋನಾ ವರದಿ ತಿಳಿಸಿದೆ.
 

Latest Videos
Follow Us:
Download App:
  • android
  • ios