ಶಿವಮೊಗ್ಗ ಲಾಕ್‌ಡೌನ್ ಕುರಿತು ಇಂದು ನಿರ್ಧಾರ: ಸಚಿವ ಈಶ್ವರಪ್ಪ
ಸಂಸದರು, ಜಿಲ್ಲೆಯ ಎಲ್ಲ ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಅಭಿಪ್ರಾಯ ಸಂಗ್ರಹ ಮಾಡಿ ಶಿವಮೊಗ್ಗ ಲಾಕ್‌ಡೌನ್ ಕುರಿತಂತೆ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ಎಸ್. ಈಶ್ವರಪ್ಪ ಹೇಳಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ
ಶಿವಮೊಗ್ಗ(ಜು.15): ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಚರ್ಚಿಸಲು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜು.15 ರಂದು ಬೆಳಗ್ಗೆ 11 ಗಂಟೆಗೆ ಮಹತ್ವದ ಸಭೆ ಕರೆಯಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದರು.
ಮಂಗಳವಾರ ತಮ್ಮ ನಿವಾಸದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿನ್ನೆಲೆಯಲ್ಲಿ ಸಂಸದರು, ಜಿಲ್ಲೆಯ ಎಲ್ಲ ಶಾಸಕರು, ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಸಭೆ ಕರೆಯಲಾಗಿದ್ದು, ಸಭೆಯಲ್ಲಿ ಅಭಿಪ್ರಾಯ ಸಂಗ್ರಹ ಮಾಡಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಈಗಾಗಲೇ ಶಿವಮೊಗ್ಗ ನಗರದಲ್ಲಿ ವ್ಯಾಪಾರಸ್ಥರು, ಸಂಘ ಸಂಸ್ಥೆಯವರು ಸ್ವಯಂ ಪ್ರೇರಿತರಾಗಿ ಮಧ್ಯಾಹ್ನ 3 ಗಂಟೆ ನಂತರ ವ್ಯಾಪಾರ ಬಂದ್ ಮಾಡುತ್ತಿದ್ದಾರೆ. ಅಲ್ಲದೇ, ಜಿಲ್ಲೆಯಲ್ಲಿ ಲಾಕ್‌ಡೌನ್ ಮಾಡುವಂತೆಯೂ ಸಲಹೆ ಬರುತ್ತಿದೆ. ಇವೆಲ್ಲಗಳನ್ನು ಪರಿಗಣಿಸಿ, ಕೊರೋನಾ ನಿಯಂತ್ರಣಕ್ಕೆ ಜಿಲ್ಲೆಯಲ್ಲಿ ಹೇಗೆ ಕ್ರಮ ಕೈಗೊಳ್ಳಬೇಕು? ಅರ್ಧದಿನ ಮಾತ್ರ ಲಾಕ್‌ಡೌನ್ ಮಾಡಬೇಕಾ ? ಪೂರ್ತಿ ಲಾಕ್‌ಡೌನ್ ಮಾಡಬೇಕಾ ಎಂಬ ಕುರಿತಾಗಿ ಚರ್ಚೆ ನಡೆಸಿ, ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
9 ದಿನ ಚಿಕಿತ್ಸೆಗೆ 9 ಲಕ್ಷ ಕೇಳಿದ ಖಾಸಗಿ ಆಸ್ಪತ್ರೆ..!
ಜಿಲ್ಲೆಯ ಸಂಘ ಸಂಸ್ಥೆಗಳು, ಕೈಗಾರಿಕೋದ್ಯಮಿಗಳು, ಜನಪ್ರತಿನಿಧಿಗಳು ಒಳಗೊಂಡತೆ ಎಲ್ಲಾ ಪ್ರಮುಖರ ಸಲಹೆ ಸೂಚನೆಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದರು. ಕೊರೋನಾ ಸೋಂಕು ತಡೆಗೆ ಸರ್ಕಾರ ಹಾಗೂ ಜಿಲ್ಲಾಡಳಿತ ನೀಡುತ್ತಿರುವ ಸೂಚನೆಗಳನ್ನು ಸಾರ್ವಜನಿಕರು ಪಾಲನೆ ಮಾಡುತ್ತಿದ್ದಾರೆ. ಆದರೂ, ಜಿಲ್ಲೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸೋಂಕನ್ನು ನಿಯಂತ್ರಣಕ್ಕೆ ತರುವ ಸಲುವಾಗಿ ಕೈಗೊಳ್ಳಬೇಕಿರುವ ಕ್ರಮದ ಕುರಿತು ಚರ್ಚೆ ನಡೆಸಲು ಸಭೆ ಕರೆಯಲಾಗಿದೆ ಎಂದು ಹೇಳಿದರು.
ಕ್ವಾರಂಟೈನ್ ಇಲ್ಲ :
ನಮ್ಮ ಮನೆಯ ಮಗನಂತಿದ್ದ ಕೃಷ್ಣನಿಗೆ ಕೊರೋನಾ ಸೋಂಕು ತಗುಲಿದ್ದು ನಿಜ. ಆದರೆ ನಿನ್ನೆ (ಸೋಮವಾರ) ರಾತ್ರಿಯೇ ನಾನು, ನನ್ನ ಕಾರಿನ ಚಾಲಕ, ಗನ್‌ಮ್ಯಾನ್, ನನ್ನ ಮೊಮ್ಮಕ್ಕಳು ಸೇರಿದಂತೆ ಕುಟುಂಬದ ಸದಸ್ಯರೆಲ್ಲರೂ ಸೇರಿ 21 ಜನರು ಕೋವಿಡ್ ತಪಾಸಣೆಗೆ ಒಳಗಾಗಿದ್ದೆವು. ವರದಿಯಲ್ಲಿ ಎಲ್ಲರಿಗೂ ಕೊರೋನಾ ನೆಗೆಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಸೆಲ್ಫ್ ಕ್ವಾರಂಟೈನ್ ಇಲ್ಲವೆಂದು ಸಚಿವ ಕೆ.ಎಸ್.ಈಶ್ವರಪ್ಪ ಸ್ಪಷ್ಟಪಡಿಸಿದರು.
ಅಲ್ಲದೆ ತಾವು ಪ್ರತಿನಿತ್ಯ ಆಯುರ್ವೇದಿಕ್ ಔಷಧ ಬಳಸುತ್ತಿದ್ದು, ಬಹುಶಃ ಇದರಿಂದಲೂ ಕೊರೋನಾ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರಬಹುದೆಂಬುದು ನನ್ನ ಭಾವನೆ ಎಂದರು. ಕೃಷ್ಣ ನನ್ನ ಮನೆಯ ಮಗನಾಗಿದ್ದ. ಎಲ್ಲಾ ಕೆಲಸವನ್ನ ಮಾಡುತ್ತಿದ್ದ ಹಾಗೂ ಆತ ನನ್ನ ಹತ್ತಿರದ ಸಂಬಂಧಿಯೂ ಹೌದು. ಆತನನನ್ನ ಕೆಲ ಮಾಧ್ಯಮದಲ್ಲಿ ಕೆಲಸದವನು ಎಂದು ಕರೆದಿರುವುದು ನೋವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.