ಬೆಂಗಳೂರಿನ 'ಪಿಂಕ್ ಲೈನ್' ಮೆಟ್ರೋ ಮಾರ್ಗದ ಕಾಮಗಾರಿ ಅಂತಿಮ ಹಂತದಲ್ಲಿದ್ದು, ಇದರ ಮನಮೋಹಕ ಡ್ರೋಣ್ ವಿಡಿಯೋ ವೈರಲ್ ಆಗಿದೆ. ಕಾಳೇನಾ ಅಗ್ರಹಾರದಿಂದ ತಾವರೆಕೆರೆವರೆಗಿನ ಮೊದಲ ಹಂತದ ಟ್ರಯಲ್ ರನ್ ಆರಂಭವಾಗಿದ್ದು, ಇನ್ನು ಮೂರ್ನಾಲ್ಕು ತಿಂಗಳಲ್ಲಿ ಈ ಮಾರ್ಗ ಸಂಚಾರಕ್ಕೆ ಮುಕ್ತವಾಗುವ ನಿರೀಕ್ಷೆಯಿದೆ.

ಬೆಂಗಳೂರು (ಜ.20): ನಗರದ ಸಂಚಾರ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತರಲಿರುವ 'ಪಿಂಕ್ ಲೈನ್' ಮಾರ್ಗದ ಕಾಮಗಾರಿ ಬಹುತೇಕ ಮುಕ್ತಾಯ ಹಂತಕ್ಕೆ ತಲುಪಿದೆ. ಈ ಮಾರ್ಗದ ಅಂದವನ್ನು ಸಾರುವ ಮನಮೋಹಕ 'ಡ್ರೋಣ್ ವಿಡಿಯೋ' ನೋಡಿ ಬೆಂಗಳೂರಿಗರು ವಾವ್ ಎನ್ನುತ್ತಿದ್ದಾರೆ. ವಿಡಿಯೋದಲ್ಲಿ ಮೇಲಿನಿಂದ ನೋಡಲು ಮೆಟ್ರೋ ಹಳಿಗಳು ಮತ್ತು ನಿಲ್ದಾಣಗಳು ಅದ್ಭುತವಾಗಿ ಕಾಣಿಸುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂರೇ ತಿಂಗಳಲ್ಲಿ ಸಂಚಾರ ಮುಕ್ತ?

ಬೆಂಗಳೂರು ಮೆಟ್ರೋ ರೈಲು ನಿಗಮ (BMRCL) ನೀಡಿರುವ ಸುಳಿವುಗಳ ಪ್ರಕಾರ, ಮುಂದಿನ ಮೂರರಿಂದ ನಾಲ್ಕು ತಿಂಗಳ ಅವಧಿಯಲ್ಲಿ ಈ ಮಾರ್ಗವು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗುವ ಸಾಧ್ಯತೆ ಇದೆ. ಇದರಿಂದ ದಕ್ಷಿಣ ಬೆಂಗಳೂರಿನ ಜನತೆಗೆ ನಗರದ ಇತರ ಭಾಗಗಳಿಗೆ ಸಂಪರ್ಕ ಕಲ್ಪಿಸುವುದು ಅತ್ಯಂತ ಸುಲಭವಾಗಲಿದೆ.

ಎರಡು ಹಂತಗಳಲ್ಲಿ ಸಂಚಾರ ಆರಂಭ

ಪಿಂಕ್ ಲೈನ್ ಮಾರ್ಗವನ್ನು ಒಟ್ಟಾರೆಯಾಗಿ ಆರಂಭಿಸುವ ಬದಲು, ಪ್ರಯಾಣಿಕರ ಅನುಕೂಲಕ್ಕಾಗಿ ಎರಡು ಹಂತಗಳಲ್ಲಿ ಸಂಚಾರ ಆರಂಭಿಸಲು ಯೋಜನೆ ರೂಪಿಸಲಾಗಿದೆ. ಈ ಮೂಲಕ ಕಾಮಗಾರಿ ಮುಗಿದ ಮಾರ್ಗಗಳನ್ನು ಶೀಘ್ರವಾಗಿ ಕಾರ್ಯಗತಗೊಳಿಸಲು ಬಿಎಂಆರ್‌ಸಿಎಲ್ ಮುಂದಾಗಿದೆ.

ಮೊದಲ ಹಂತದ ಟ್ರಯಲ್ ರನ್ ಶುರು

ಕಾಳೇನಾ ಅಗ್ರಹಾರದಿಂದ ತಾವರೆಕೆರೆವರೆಗಿನ ಮೊದಲ ಹಂತದ ಕಾಮಗಾರಿಗಳು ಈಗಾಗಲೇ ಪೂರ್ಣಗೊಂಡಿವೆ. ಈ ಮಾರ್ಗದಲ್ಲಿ ರೈಲುಗಳ ಓಡಾಟದ ತಾಂತ್ರಿಕ ಪರೀಕ್ಷೆ ಅಥವಾ 'ಟ್ರಯಲ್ ರನ್' ಪ್ರಕ್ರಿಯೆ ಕೂಡ ಆರಂಭವಾಗಿದೆ. ಈ ಭಾಗದ ಡ್ರೋಣ್ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.