Asianet Suvarna News Asianet Suvarna News

ವಿಶ್ವದ ಮೊಟ್ಟ ಮೊದಲ ಹೈಬ್ರಿಡ್‌ ಏರ್‌ ಶೋಗೆ ದಿನಗಣನೆ: ಸಾರಂಗ್‌-ಸೂರ್ಯಕಿರಣ್‌ ಜಂಟಿ ಪ್ರದರ್ಶನ

ಏರ್‌ ಶೋಗೆ ಭರದ ಸಿದ್ಧತೆ| ಕೊನೆಗೂ ಸಾರ್ವಜನಿಕರ ಪ್ರವೇಶಕ್ಕೆ ಐಎಎಫ್‌ ಅನುಮತಿ| ದಿನವೊಂದಕ್ಕೆ 3 ಸಾವಿರ ಮಂದಿಗೆ ಅವಕಾಶ| 45 ನಿಮಿಷ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಅವಕಾಶ| ಫೆ.3ರಂದು ಚಾಲನೆ| 

Joint Performance of Sarang-SuryaKiran in Air Show in Bengaluru grg
Author
Bengaluru, First Published Jan 23, 2021, 9:37 AM IST

ಬೆಂಗಳೂರು(ಜ.23):  ಕೊರೋನಾ ಆತಂಕದ ನಡುವೆಯೇ ವಿಶ್ವದ ಮೊಟ್ಟ ಮೊದಲ ಹೈಬ್ರಿಡ್‌ ಏರ್‌ ಶೋಗೆ ದಿನಗಣನೆ ಶುರುವಾಗಿದ್ದು, ಫೆ.3ರಿಂದ ಮೂರು ದಿನಗಳ ಕಾಲ ನಡೆಯಲಿರುವ ‘ಏರೋ ಇಂಡಿಯಾ-2021’ ವೈಮಾನಿಕ ಪ್ರದರ್ಶನದಲ್ಲಿ ಇದೇ ಮೊದಲ ಬಾರಿಗೆ ‘ಸೂರ್ಯಕಿರಣ್‌ ಹಾಗೂ ಸಾರಂಗ್‌’ ವೈಮಾನಿಕ ಪ್ರದರ್ಶನ ತಂಡಗಳು ಜಂಟಿ ಪ್ರದರ್ಶನ ನೀಡಲಿವೆ.

ಅಲ್ಲದೆ, ‘ಚಿನೂಕ್‌ ಟ್ವಿನ್‌ ಇಂಜಿನ್‌’ ಹೆಲಿಕಾಪ್ಟರ್‌ನ ಪ್ರದರ್ಶನ, ಪ್ರತ್ಯಕ್ಷ ಹಾಗೂ ವರ್ಚುಯಲ್‌ ಎರಡೂ ಮಾದರಿಯಲ್ಲಿ ಏಕಕಾಲದಲ್ಲಿ ನಡೆಯಲಿರುವ ಹಲವು ವೈಶಿಷ್ಟ್ಯಗಳ ಏರ್‌ಶೋಗೆ ಯಲಹಂಕ ವಾಯುನೆಲೆ ಸಂಪೂರ್ಣ ಸಜ್ಜಾಗಿದೆ. ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಈ ಬಾರಿ ಸಾರ್ವಜನಿಕರಿಗೆ ಅವಕಾಶವಿಲ್ಲ ಎಂದು ಹೇಳಿದ್ದ ಐಎಎಫ್‌, ಇದೀಗ ದಿನವೊಂದಕ್ಕೆ 3 ಸಾವಿರ ಮಂದಿಗೆ ವೈಮಾನಿಕ ಪ್ರದರ್ಶನ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದೆ.

ಕೊರೋನಾ ಸೋಂಕಿನ ಭೀತಿಯಿಂದಾಗಿ ವಾಯುಪಡೆ ಅಧಿಕಾರಿಗಳು ಸೇರಿದಂತೆ ಪ್ರತಿಯೊಬ್ಬರೂ 72 ಗಂಟೆಗಳಿಗಿಂತ ಹಳೆಯದಲ್ಲದ ಆರ್‌ಟಿ-ಪಿಸಿಆರ್‌ ಕೊರೋನಾ ನೆಗೆಟಿವ್‌ ವರದಿ ಕಡ್ಡಾಯವಾಗಿ ತರಬೇಕು. ದಿನವೊಂದಕ್ಕೆ ವೈಮಾನಿಕ ಪ್ರದರ್ಶನ ವೀಕ್ಷಣೆ ಮಾಡುವ (ಅಡ್ವಾ) ಸ್ಥಳಕ್ಕೆ 3 ಸಾವಿರ ಮಂದಿ ಮಾತ್ರ ಭಾಗವಹಿಸಬೇಕು. ವಸ್ತುಪ್ರದರ್ಶನ ಮಳಿಗೆಗಳಲ್ಲಿ ದಿನವೊಂದಕ್ಕೆ 15 ಸಾವಿರಕ್ಕಿಂತ ಹೆಚ್ಚು ಮಂದಿ ಭೇಟಿ ನೀಡಬಾರದು ಎಂಬುದು ಸೇರಿದಂತೆ ಹತ್ತಾರು ನಿಯಮಗಳನ್ನು ಮಾಡಲಾಗಿದೆ.

ಕೊರೋನಾ ಕಾಟ: ಏರೋ ಇಂಡಿಯಾಕ್ಕೆ ವಿದೇಶಗಳ ನಿರಾಸಕ್ತಿ

ಶುಕ್ರವಾರ ವೈಮಾನಿಕ ಪ್ರದರ್ಶನದ ಸಿದ್ಧತೆಗಳ ಕುರಿತು ಸುದ್ದಿಗೋಷ್ಠಿ ನಡೆಸಿದ ಏರ್‌ ಆಫೀಸರ್‌ ಕಮಾಂಡಿಂಗ್‌ ಶೈಲೇಂದ್ರ ಸೂದ್‌, ಆರೋಗ್ಯ ಮತ್ತು ಭದ್ರತೆಗೆ ಹೆಚ್ಚು ಒತ್ತು ನೀಡಿ ವೈಮಾನಿಕ ಪ್ರದರ್ಶನ ಆಯೋಜಿಸುತ್ತಿದ್ದು, ಕೊರೋನಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸ್ಪಷ್ಟಪಡಿಸಿದ್ದಾರೆ.

ಮೂರು ಹಂತದ ಭದ್ರತೆ:

ಕೊರೋನಾ ಸೋಂಕಿನ ಭೀತಿಯಿಂದಾಗಿ 5 ದಿನಗಳ ಏರೋ ಇಂಡಿಯಾವನ್ನು ಮೂರು ದಿನಕ್ಕೆ ಇಳಿಸಲಾಗಿದೆ. ವೈಮಾನಿಕ ಪ್ರದರ್ಶನದ ವೇಳೆ ಸೂಕ್ತ ಭದ್ರತೆ ಒದಗಿಸುವ ಸಲುವಾಗಿ 3 ಹಂತದ ಭದ್ರತಾ ವ್ಯವಸ್ಥೆಯಿರಲಿದೆ. ವಾಯುನೆಲೆ ಸುತ್ತಲೂ ಪೊಲೀಸರು, ವಾಯುನೆಲೆ ಆವರಣದಲ್ಲಿ ಕೈಗಾರಿಕಾ ಭದ್ರತಾ ದಳ, ಸ್ಟ್ಯಾಟಿಕ್‌ ಡಿಸ್‌ಪ್ಲೇ ಪ್ರದೇಶದಲ್ಲಿ ಏರ್‌ಪೋರ್ಸ್‌ ಭದ್ರತಾ ಪಡೆಗಳು ಭದ್ರತೆ ಒದಗಿಸಲಿವೆ. ಜೊತೆಗೆ ರಾಜ್ಯಪೊಲೀಸ್‌, ಗುಪ್ತಚರ ಇಲಾಖೆಯೂ ನೆರವಾಗಲಿದೆ ಎಂದು ಐಎಎಫ್‌ ಅಧಿಕಾರಿಗಳು ಮಾಹಿತಿ ನೀಡಿದರು.

ಸೂರ್ಯಕಿರಣ್‌, ಸಾರಂಗ್‌ ಜಂಟಿ ಪ್ರದರ್ಶನ:

ಏರೋಬ್ಯಾಟಿಕ್‌ ಪ್ರದರ್ಶನದಲ್ಲಿ ಛಾಪು ಮೂಡಿಸಿರುವ ಸೂರ್ಯಕಿರಣ್‌ ತಂಡವು ಹಾಗೂ ವಿಶ್ವದ ಏಕೈಕ ಹೆಲಿಕಾಪ್ಟರ್‌ ಏರೋಬ್ಯಾಟಿಕ್‌ ತಂಡವಾದ ಸಾರಂಗ್‌ ಜೊತೆಯಾಗಿ ಜಂಟಿ ಪ್ರದರ್ಶನ ನೀಡಲಿದೆ. ಏರ್‌ಕ್ರ್ಯಾಫ್ಟ್‌ ಹಾಗೂ ಹೆಲಿಕಾಪ್ಟರ್‌ ಮೂಲಕ ಕರಾಮತ್ತು ಮಾಡುವ ಎರಡು ತಂಡಗಳು ಇದೇ ಮೊದಲ ಬಾರಿಗೆ ಜಂಟಿಯಾಗಿ ಪ್ರದರ್ಶನ ನೀಡಲಿವೆ. ಹೀಗಾಗಿ ಪ್ರಸಕ್ತ ಸಾಲಿನ ಏರೋ ಇಂಡಿಯಾ ತೀವ್ರ ಕುತೂಹಲ ಕೆರಳಿಸಿದೆ.

’ಕಾರ್'ಗಿಚ್ಚು: RTO ಅಧಿಕಾರಿಗಳ ಎಡವಟ್ಟು, ವಿಮೆಗಾಗಿ ಮಾಲೀಕರ ಪರದಾಟ!

ಟ್ವಿನ್‌ ಇಂಜಿನ್‌ ‘ಚಿನೂಕ್‌’ ಹಾರಾಟ:

ಈ ಬಾರಿಯ ಏರೋ ಇಂಡಿಯಾದಲ್ಲಿ ಚಿನೂಕ್‌ ಹಾರಾಟವು ಕುತೂಹಲ ಕೆರಳಿಸಿದೆ. ಹೆಚ್ಚು ಭಾರದ ಸಾಮಗ್ರಿಗಳನ್ನು ಲಿಫ್ಟ್‌ ಮಾಡಬಲ್ಲ ಎರಡು ಇಂಜಿನ್‌ವುಳ್ಳ ಹೆಲಿಕಾಪ್ಟರ್‌ 2019ರಲ್ಲಿ ಐಎಎಫ್‌ಗೆ ಸೇರ್ಪಡೆಯಾಗಿತ್ತು. ಬೋಯಿಂಗ್‌ನ ಸಿಎಚ್‌- 47ಎಫ್‌ (ಐ) ಹೆಲಿಕಾಪ್ಟರ್‌ ಇದೇ ಮೊದಲ ಬಾರಿಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದಲ್ಲಿ ಪ್ರದರ್ಶನ ನೀಡುತ್ತಿದೆ.

63 ಏರ್‌ಕ್ರಾಫ್ಟ್‌, ಹೆಲಿಕಾಪ್ಟರ್‌ಗಳ ಪ್ರದರ್ಶನ

ಏರೋ ಇಂಡಿಯಾದಲ್ಲಿ ಭಾರತ ಸೇರಿ ಇನ್ನಿತರ ದೇಶಗಳ 63 ವಿಮಾನಗಳು ಪ್ರದರ್ಶನಗೊಳ್ಳಲಿವೆ. 42 ವಿಮಾನಗಳು ದಿನದಲ್ಲಿ ಎರಡು ಬಾರಿ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನೀಡಲಿವೆ. ಡಕೋಟಾ, ಸುಖೋಯ್‌, ರಫೆಲ್‌, ಎಲ್‌ಸಿಎಚ್‌, ಎಲ್‌ಯುಎಚ್‌, ಜಗ್ವಾರ್‌, ಹಾಕ್‌ ಸೇರಿ ಇನ್ನಿತರ ಫೈಟರ್‌ ಜೆಟ್‌, ಏರ್‌ಕ್ರಾಫ್ಟ್‌, ಹೆಲಿಕಾಪ್ಟರ್‌ಗಳಿಂದ ಪ್ರದರ್ಶನ ನಡೆಯಲಿದೆ.

ಅಗ್ನಿ ಅವಘಡದಿಂದ ಎಚ್ಚೆತ್ತ ಐಎಎಫ್‌!

ಕಳೆದ ಏರೋ ಇಂಡಿಯಾದಲ್ಲಿ ವಾಹನ ನಿಲುಗಡೆ ಸ್ಥಳದಲ್ಲಿ ಅಗ್ನಿ ಅವಘಡ ಸಂಭವಿಸಿ 60ಕ್ಕೂ ಹೆಚ್ಚಿನ ಕಾರು, ಬೈಕ್‌ಗಳು ಸುಟ್ಟು ಹೋಗಿದ್ದವು. ಈ ಬಾರಿ ಅಂತಹ ಅವಘಡ ಸಂಭವಿಸದಂತೆ ಮಾಡಲು, ವಾಹನ ನಿಲುಗಡೆ ಸ್ಥಳದಲ್ಲಿ ಬೆಳೆದಿದ್ದ ಹುಲ್ಲುಗಳನ್ನು ಸಂಪೂರ್ಣ ಕತ್ತರಿಸಲಾಗಿದೆ. ಅದರ ಜತೆಗೆ ವಾಹನ ನಿಲುಗಡೆ ಸ್ಥಳದಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ ಕ್ರಮ ಕೈಗೊಳ್ಳಲಾಗಿದೆ. ಸಿ.ಸಿ. ಟಿವಿ ದೃಶ್ಯಾವಳಿಗಳ ಮೇಲೆ ನಿಗಾ ವಹಿಸಲು ಪ್ರತ್ಯೇಕ ನಿಯಂತ್ರಣಾ ಕೊಠಡಿ ಸ್ಥಾಪಿಸಲಾಗಿದೆ.

ಇನ್ನು ಅಗ್ನಿ ಅವಘಡ ಸಂಭವಿಸಿದರೆ ಅದನ್ನು ನಂದಿಸಲು ಬಂಬಿ ಬಕೆಟ್‌ (ಹೆಲಿಕಾಪ್ಟರ್‌ ಬಕೆಟ್‌) ಅಳವಡಿಸಲಾದ 2 ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗುತ್ತದೆ. ಅದರ ಜತೆಗೆ ಅಗ್ನಿ ಶಾಮಕ ದಳ, ನೈಸರ್ಗಿಕ ವಿಕೋಪ ನಿಯಂತ್ರಣ ತಂಡಗಳು ಕಾರ್ಯನಿರ್ವಹಿಸಲಿವೆ.

ಆಗಸದಲ್ಲೂ ಭದ್ರತೆ

ಶಸ್ತ್ರ ಸಜ್ಜಿತ ಯೋಧರಿರುವ ಸು-30 ಎಂಕೆಐ ಫೈಟರ್‌ ಜೆಟ್‌ ಮತ್ತು ಎಂಐ-17 ವಿ5 ಹೆಲಿಕಾಪ್ಟರ್‌ಗಳು ಆಗಸದಲ್ಲಿ ಗಸ್ತು ತಿರುಗಲಿವೆ. ಅದರ ಜತೆಗೆ ಆ್ಯಂಟಿ ಡ್ರೋಣ್‌ ಮೆಷ​ರ್‍ಸ್, ಡ್ರೋಣ್‌ ಡಿಟೆಕ್ಷನ್‌ ರಡಾರ್‌ ಅಳವಡಿಸಲಾಗುತ್ತದೆ. ಜ. 24ರಿಂದ ಫೆ. 5ರವರೆಗೆ ಯಲಹಂಕ ವಾಯುನೆಲೆಯ ಸುತ್ತಲಿನ 100 ಕಿ.ಮೀ. ವ್ಯಾಪ್ತಿಯಲ್ಲಿ ಡ್ರೋಣ್‌ ಹಾರಾಟ ನಿಷೇಧಕ್ಕೂ ಕ್ರಮ ಕೈಗೊಳ್ಳಲಾಗುತ್ತಿದೆ.

ಕೊರೋನಾ ನೆಗೆಟಿವ್‌ ವರದಿ ಕಡ್ಡಾಯ

ಏರೋ ಇಂಡಿಯಾದಲ್ಲಿ ಪಾಲ್ಗೊಳ್ಳುವವರು 72 ಗಂಟೆಯ ಸಿಂಧುತ್ವ ಹೊಂದಿದ ಆರ್‌ಟಿಪಿಸಿಆರ್‌ ಪರೀಕ್ಷೆ ಮಾಡಿಸಿಕೊಂಡು ಕೊರೋನಾ ನೆಗೆಟಿವ್‌ ವರದಿ ಪಡೆಯುವುದು ಕಡ್ಡಾಯವಾಗಿದೆ. ಯಲಹಂಕ ವಾಯುನೆಲೆಗೆ ಪ್ರವೇಶಿಸಿದ ನಂತರ ಕೊರೋನಾ ಲಕ್ಷಣಗಳು ಕಂಡು ಬರುವವರನ್ನು ಪರೀಕ್ಷೆಗೊಳಪಡಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಅದರ ಜತೆಗೆ ಲಕ್ಷಣ ಉಳ್ಳವರಿಗಾಗಿ ಐಸೋಲೇಷನ್‌ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

ಏರ್‌ ಆ್ಯಂಬುಲೆನ್ಸ್‌ ಸೇರಿ ಎಲ್ಲಾ ವೈದ್ಯ ವ್ಯವಸ್ಥೆ

ವೈದ್ಯಕೀಯ ಸೇವೆ ನೀಡುವ ಸಲುವಾಗಿ ಯಲಹಂಕ ವಾಯುನೆಲೆ ಆವರಣದಲ್ಲಿ 4 ಆಸ್ಪತ್ರೆಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ 26 ವೈದ್ಯರು, 46 ವೈದ್ಯಕೀಯ ಸಹಾಯಕರು ಕಾರ್ಯ ನಿರ್ವಹಿಸಲಿದ್ದು, 5 ಆಂಬ್ಯುಲೆನ್ಸ್‌ಗಳನ್ನು ಮೀಸಲಿಡಲಾಗುತ್ತದೆ. ಜೊತೆಗೆ ಅನಾಹುತ ಸಂಭವಿಸಿದಾಗ ನೆರವಾಗಲು ಬೆಂಗಳೂರಿನ 14 ಸರ್ಕಾರಿ ಆಸ್ಪತ್ರೆ ಮತ್ತು 48 ಖಾಸಗಿ ಆಸ್ಪತ್ರೆಗಳಲ್ಲಿ ತುರ್ತು ಚಿಕಿತ್ಸೆ ನೀಡಲು 2,500 ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ. ಅದರ ಜತೆಗೆ ತಲಾ 2 ಎಎನ್‌-32 ಮತ್ತು ಎಂಐ-17 ಹೆಲಿಕಾಪ್ಟರ್‌ಗಳನ್ನು ತುರ್ತು ಪರಿಸ್ಥಿತಿಯಲ್ಲಿ ಬಳಸಲು ಮೀಸಲಿಡಿಸಲಾಗುತ್ತಿದೆ. ಕಾಮಾಂಡ್‌ ಆಸ್ಪತ್ರೆಯಲ್ಲಿ 105 ವೈದ್ಯಕೀಯ ತಜ್ಞರು ಮತ್ತು 500 ವೈದ್ಯಕೀಯ ಸಹಾಯಕರನ್ನು ನಿಗದಿ ಮಾಡಲಾಗುತ್ತದೆ.

ಕೊನೆಗೂ ಸಾರ್ವಜನಿಕರಿಗೆ ಅವಕಾಶ

ಕೊರೋನಾ ಕಾರಣ ಈ ಬಾರಿ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಸಿದ್ದ ಐಎಎಫ್‌, ಕೊನೆ ಹಂತದಲ್ಲಿ ಸಾರ್ವಜನಿಕರ ಪ್ರವೇಶಕ್ಕೆ ಅನುಮತಿ ನೀಡಿದೆ. ದಿನವೊಂದಕ್ಕೆ ವೈಮಾನಿಕ ಪ್ರದರ್ಶನ ಸ್ಥಳಕ್ಕೆ (ಅಡ್ವ) ಮೂರು ಸಾವಿರ ಮಂದಿ ಭೇಟಿ ನೀಡಲು ಅವಕಾಶ ಕಲ್ಪಿಸಿದೆ. ಒಬ್ಬರಿಗೆ ತಲಾ .500 ಟಿಕೆಟ್‌ ದರ ನಿಗದಿ ಪಡಿಸಲಾಗಿದ್ದು, ಆನ್‌ಲೈನ್‌ನಲ್ಲಿ ಇ-ಟಿಕೆಟ್‌ ಬುಕ್ಕಿಂಗ್‌ ಆರಂಭವಾಗಿದೆ. ಸಾರ್ವಜನಿಕರಿಗೆ 45 ನಿಮಿಷಗಳ ಒಂದು ಅವಧಿಯ ವೈಮಾನಿಕ ಪ್ರದರ್ಶನವಷ್ಟೇ ವೀಕ್ಷಿಸಲು ಅವಕಾಶ ಮಾಡಿಕೊಡಲಾಗಿದೆ.

ಇನ್ನು ವಸ್ತುಪ್ರದರ್ಶನ ಕೇಂದ್ರದಲ್ಲಿ ದಿನಕ್ಕೆ 15 ಸಾವಿರ ಮಂದಿ ಮಾತ್ರ ಭಾಗವಹಿಸಬಹುದು. ಜೊತೆಗೆ ನಿಯಮಿತವಾಗಿ ಸ್ಯಾನಿಟೈಸ್‌ ಮಾಡುವುದು ಹಾಗೂ ಮಾಸ್ಕ್‌ ಧರಿಸುವುದು ಸೇರಿದಂತೆ ಕೊರೋನಾ ನಿಯಮ ಪಾಲಿಸುವುದು ಕಡ್ಡಾಯಗೊಳಿಸಲಾಗಿದೆ.

* ಫೆ.3ರಂದು ಬೆಳಗ್ಗೆ 9ಕ್ಕೆ ರಕ್ಷಣಾ ಸಚಿವ ರಾಜನಾಥ್‌ಸಿಂಗ್‌ರಿಂದ ಉದ್ಘಾಟನೆ, ಮಧ್ಯಾಹ್ನ 1ಕ್ಕೆ ವೈಮಾನಿಕ ಪ್ರದರ್ಶನ
* ಫೆ.4 ಹಾಗೂ 5 ರಂದು ಬೆಳಗ್ಗೆ 9 ಗಂಟೆ ಹಾಗೂ ಮಧ್ಯಾಹ್ನ 2 ಗಂಟೆಗೆ ವೈಮಾನಿಕ ಪ್ರದರ್ಶನ
* ಸಾರ್ವಜನಿಕರಿಗೆ 45 ನಿಮಿಷಗಳ ಒಂದು ಅವಧಿಯ ವೈಮಾನಿಕ ಪ್ರದರ್ಶನವಷ್ಟೇ ವೀಕ್ಷಿಸಲು ಅವಕಾಶ
* ಭಾರತದ 463 ಮತ್ತು 14 ದೇಶಗಳ 78 ವಿದೇಶಿ ಪ್ರದರ್ಶಕರು ಸೇರಿ ಒಟ್ಟು 541 ಮಂದಿ ಪ್ರದರ್ಶಕರು ಭಾಗಿ
* ಇದೇ ಮೊದಲ ಬಾರಿಗೆ 143 ಪ್ರದರ್ಶಕರು ವರ್ಚುಯಲ್‌ ಮೂಲಕ ನೋಂದಣಿ
 

Follow Us:
Download App:
  • android
  • ios