ಬೆಂಗಳೂರು(ಡಿ.21): ಕೊರೋನಾ ಸೋಂಕಿನ ಕರಿನೆರಳು ಬೆಂಗಳೂರಿನಲ್ಲಿ ಫೆಬ್ರವರಿಯಲ್ಲಿ ನಡೆಯುವ ಏಷ್ಯಾದ ಅತಿ ದೊಡ್ಡ ರಕ್ಷಣಾ ಉತ್ಪನ್ನಗಳ ಪ್ರದರ್ಶನವಾಗಿರುವ ‘ಏರೋ ಇಂಡಿಯಾ-2021’ ಪ್ರದರ್ಶನದ ಮೇಲೂ ಬೀರಿದ್ದು, ವಿದೇಶಿ ಪ್ರದರ್ಶಕರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಕುಸಿದಿದೆ.

ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ನಡೆಯಲಿರುವ ‘ಏರೋ ಇಂಡಿಯಾ-2021’ ಪ್ರದರ್ಶನಕ್ಕೆ ದಿನಗಣನೆ ಆರಂಭಗೊಂಡಿದೆ. ಫೆ.3ರಿಂದ ಫೆ.7ರವರೆಗೆ ಐದು ದಿನಗಳ ನಡೆಯಲಿರುವ ಏರೋ ಶೋಗೆ ಈ ಬಾರಿ ಕೊರೋನಾ ಸೋಂಕಿನ ಆತಂಕದ ಭೀತಿ ಎದುರಾಗಿದೆ. ಹೀಗಾಗಿ, ಪ್ರಸಕ್ತ ಏರೋ ಶೋಗೆ ವಿದೇಶಗಳಿಂದ ಆಗಮಿಸುವ ಪ್ರದರ್ಶಕರ ಸಂಖ್ಯೆ ಭಾರೀ ಸಂಖ್ಯೆಯಲ್ಲಿ ಕಡಿಮೆಯಾಗಿದೆ.

ಕಳೆದ 2019ರ ಏರೋ ಇಂಡಿಯಾ ಬರೋಬ್ಬರಿ 22 ದೇಶಗಳ ಭಾಗವಹಿಸಿದ್ದವು. ಆದರೆ, ಈ ಬಾರಿ ಏರೋ ಇಂಡಿಯಾದಲ್ಲಿ ಭಾಗವಹಿಸಲು 14 ರಾಷ್ಟ್ರಗಳು ಮಾತ್ರ ನೋಂದಣಿ ಮಾಡಿಕೊಂಡಿವೆ. ಇನ್ನು ಕಳೆದ ಬಾರಿ ಒಟ್ಟು 403 ಪ್ರದರ್ಶಕರು ಭಾಗವಹಿಸಿದ್ದರು. ಈ ಪೈಕಿ 238 ಭಾರತೀಯ ಕಂಪನಿಗಳು, 165 ವಿದೇಶಿ ಪ್ರದರ್ಶಕರಾಗಿದ್ದರು. ಈ ಬಾರಿ ಪ್ರದರ್ಶಕರ ಒಟ್ಟು ಸಂಖ್ಯೆ 509ಕ್ಕೆ ಏರಿಕೆಯಾದರೂ ಕೊರೋನಾ ಸೋಂಕಿನ ಆತಂಕದಿಂದ ವಿದೇಶಿ ಕಂಪನಿಗಳು ಭಾಗವಹಿಸುವ ಸಂಖ್ಯೆ 67ಕ್ಕೆ ಇಳಿಕೆಯಾಗಿದೆ. ಉಳಿದಂತೆ 442 ಭಾರತೀಯ ಮೂಲದ ಕಂಪನಿಗಳು ಭಾಗವಹಿಸುವುದಕ್ಕೆ ನೋಂದಣಿ ಮಾಡಿಕೊಂಡಿವೆ.

ಏರ್ ಶೋ ಅಗ್ನಿ ಅವಘಡ: ಕಾರು ಕಳೆದುಕೊಂಡವರಿಗೆ ಚೆಕ್ ವಿತರಿಸಿದ ಗೃಹ ಸಚಿವ!

ಏರೋ ಇಂಡಿಯಾದಲ್ಲಿ ಭಾಗವಹಿಸುವುದಕ್ಕೆ ನೋಂದಣಿ ಮಾಡಿಕೊಂಡಿರುವ ಫ್ರಾನ್ಸ್‌, ಅಮೆರಿಕ, ಬ್ರಿಟನ್‌, ಇಸ್ರೇಲ್‌ ದೇಶದ ಕಂಪನಿಗಳು ಕೂಡ ಸೇರಿವೆ. ಪ್ರಮುಖವಾಗಿ ಯುದ್ಧ ವಿಮಾನ ಉತ್ಪಾದಕ ಕಂಪನಿ ರಫೇಲ್‌, ರಕ್ಷಣಾ ಮತ್ತು ನಾಗರಿಕ ವಿಮಾನಗಳ ಉತ್ಪಾದಕ ಕಂಪನಿ ಏರ್‌ ಬಸ್‌ಗಳು ಕಂಪನಿಗಳು ಭಾಗವಹಿಸಲಿವೆ

ಪ್ರದರ್ಶನ ಸ್ಥಳ ಭರ್ತಿ:

ಪ್ರದರ್ಶಕರ ಸಂಖ್ಯೆ ಕಳೆದ ವರ್ಷಕ್ಕಿಂತ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶೇ.94ರಷ್ಟುಪ್ರದರ್ಶನ ಸ್ಥಳ ಬುಕ್ಕಿಂಗ್‌ ಆಗಿದೆ. ಇನ್ನು ಬಾಕಿ ಇರುವ ಶೇ.6ರಷ್ಟುಸ್ಥಳದ ಪೈಕಿ ಶೇ.5ರಷ್ಟುಈಗಾಗಲೇ ಅನೌಪಚಾರಿಕವಾಗಿ ಬುಕ್ಕಿಂಗ್‌ ಆಗಿದ್ದು, ಶೇಕಡ 1ರಷ್ಟುಮಾತ್ರ ಬಾಕಿ ಉಳಿದಿದೆ.

ಸೋಂಕಿಗೆ ಹಲವು ಮುನ್ನೆಚ್ಚರಿಕೆ ಕ್ರಮ

ಕೊರೋನಾ ಸೋಂಕಿನ ಭೀತಿ ಇರುವುದರಿಂದ ವೈಮಾನಿಕ ಪ್ರದರ್ಶನದ ವೇಳೆ ಸುರಕ್ಷತೆಗೆ ಅತಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮುನ್ನೆಚ್ಚರಿಕಾ ಕ್ರಮವಾಗಿ ದೈಹಿಕ ಅಂತರ ಕಾಪಾಡಲು ಮಾರ್ಕಿಂಗ್‌, ಪ್ರವೇಶದ ವೇಳೆ ಪ್ರತಿಯೊಬ್ಬ ಸಂದರ್ಶಕರ ದೇಹದ ಉಷ್ಣತೆ ತಪಾಸಣೆ, ಪ್ರವೇಶ ದ್ವಾರದಲ್ಲಿ ಕಾಂಟ್ಯಾಕ್ಟ್ ಚೆಕ್ಕಿಂಗ್‌, ಪತ್ರಿಕಾಗೋಷ್ಠಿ ಮತ್ತು ಕಾರ್ಯಕ್ರಮಗಳಲ್ಲಿ ಸಾಕಷ್ಟುಅಂತರ ಕಾಪಾಡಿಕೊಳ್ಳುವುದು, ಸ್ಯಾನಿಟೈಸರ್‌ ವ್ಯವಸ್ಥೆ ಪಾಲಿಸಲಾಗುತ್ತದೆ. ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ ಆವರಣದಲ್ಲಿ ಕಡ್ಡಾಯವಾಗಿ ಐಸೋಲೇಷನ್‌ ಕೇಂದ್ರವನ್ನು ಕೂಡ ತೆರೆಯಲಾಗುತ್ತದೆ. ಮಹತ್ವದ ರಕ್ಷಣಾ ಆಸ್ತಿಗಳಿರುವ ಕಾರಣ ಏರೋ ಇಂಡಿಯಾ ಪ್ರವೇಶ ದ್ವಾರ ಮತ್ತು ಎಲ್ಲ ಕಡೆಗಳಲ್ಲೂ ಪರೀಕ್ಷೆ ಮಾಡಿಯೇ ಬಿಡಲಾಗುತ್ತದೆ.

ವಿವರ 2019 2021
ದೇಶಗಳು 22 14
ಭಾರತೀಯ ಪ್ರದರ್ಶಕರು 238 442
ವಿದೇಶಿ ಪ್ರದರ್ಶಕರು 165 67
ಒಟ್ಟು ಪ್ರದರ್ಶಕರು 403 509