ಜೋಗ ಜಲಪಾತವನ್ನು ಸರ್ವಋತು ತಾಣವನ್ನಾಗಿ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ. ಲಿಂಗನಮಕ್ಕಿ ಜಲಾಶಯದ ಬಳಿ ಕೆಆರ್‌ಎಸ್ ಮಾದರಿಯ ಉದ್ಯಾನವನ ನಿರ್ಮಾಣವಾಗಲಿದೆ. ವೀಕ್ಷಣಾ ಗೋಪುರ, ಪಂಚತಾರಾ ಹೋಟೆಲ್, ಜಾಯಿಂಟ್ ವೀಲ್, ಕೇಬಲ್ ಕಾರ್, ಗ್ಲಾಸ್ ಹೌಸ್ ನಿರ್ಮಾಣವೂ ಆಗಲಿದೆ. ರಾತ್ರಿ ೧೦ ಗಂಟೆಯವರೆಗೆ ಪ್ರವಾಸಿಗರಿಗೆ ಮನರಂಜನೆ ಲಭ್ಯವಾಗಲಿದೆ.

ವರದಿ: ರಾಜೇಶ ಕಾಮತ್ ಏಷ್ಯಾ ನೆಟ್ ಸುವರ್ಣ ನ್ಯೂಸ್, ಶಿವಮೊಗ್ಗ 

ವಿಶ್ವ ವಿಖ್ಯಾತ ಜೋಗ ಜಲಪಾತವನ್ನು ಸರ್ವ ಋತು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿ ಪಡಿಸಲು ಯೋಗ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದೆ ಅಲ್ಲದೆ ಲಿಂಗನಮಕ್ಕಿ ಜಲಾಶಯದ ಕೆಳಭಾಗದಲ್ಲಿ ಕೆ ಆರ್ ಎಸ್ ಮಾದರಿಯ ಉದ್ಯಾನ ನಿರ್ಮಿಸಲು ಚಿಂತನೆ ನಡೆದಿದೆ. ದಟ್ಟವಾದ ಕಾನನ ಹಾಗು ಗುಡ್ಡಗಳಿಂದ ಆವೃತ್ತವಾದ ವಿಶ್ವ ವಿಖ್ಯಾತ ಜೋಗ ಜಲಪಾತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿದೆ. ಇದು ಪ್ರಪಂಚದಾದ್ಯಂತ ಪ್ರವಾಸಿಗರನ್ನು ಆಕರ್ಷಿಸುವ ಪ್ರಮುಖ ಪ್ರವಾಸಿ ತಾಣಗಳಲ್ಲಿ ಒಂದು. ಸುಮಾರು 269 ಮೀ ಎತ್ತರದಿಂದ ಭೋರ್ಗರೆಯುತ್ತಾ ಶರಾವತಿ ನದಿಯು ನಾಲ್ಕು ಸೀಳಾಗಿ ಧುಮುಕುವ ಜಾಗವೇ ಜೋಗ ಜಲಪಾತ. ವೈಭವದಿಂದ ಅವ್ಯಾಹತವಾಗಿ ಧುಮಕುವ ರಾಜ, ಜೋರಾಗಿ ಆರ್ಭಟಿಸುತ್ತ ಹಲವಾರು ಭಾರಿ ಚಿಮ್ಮುತ್ತ ಧುಮಕುವ ರೋರರ್, ಬಳಕುತ್ತಾ ಜಾರುವ ರಾಣಿ(ಲೇಡಿ) ಮತ್ತು ರಭಸದಿಂದ ಹಲವಾರು ಬಂಡೆಗಳನ್ನು ಚಿಮ್ಮುತ್ತಾ ನುಗ್ಗುವ ರಾಕೆಟ್ ಈ ನಾಲ್ಕು ಜಲಧಾರೆಯ ಸೊಬಗನ್ನು ಸವಿಯಲು ಪ್ರವಾಸಿಗರ ದಂಡು ಹರಿದು ಬರುತ್ತದೆ.

ಮಳೆಗಾಲದಲ್ಲಿ ಅತ್ಯ೦ತ ರುದ್ರ ರಮಣೀಯ ರೂಪ ತೊಡುವ ಈ ಜಲಪಾತ ಬಿಳಿ ಮೋಡಗಳ ಹಿಂದೆ ಕಣ್ಣಾಮುಚ್ಚಾಲೆ ಆಡುತ್ತ ನೋಡುಗರ ಕಣ್ಮನ ಸೆಳೆಯುತ್ತದೆ. ಲಿಂಗನಮಕ್ಕಿ ಜಲಾಶಯದ ನಿರ್ಮಾಣದ ನಂತರ ಜೋಗ ತನ್ನ ಮೊದಲಿನ ಸೌಂದರ್ಯ ಹಾಗು ವೈಭವವನ್ನು ಕಳೆದುಕೊಂಡಿದ್ದ ಜಲಪಾತದ ವೈವವನ್ನು ಮತ್ತೆ ಮರಳಿ ತರಲು ಜೋಗ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರಾಧಿಕಾರ 90ಕ್ಕೂ ಹೆಚ್ಚು ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹಾಗೂ ಶಾಸಕ ಬೇಳೂರು ಗೋಪಾಲಕೃಷ್ಣ ಕಾಮಗಾರಿಗಳ ಪರಿಶೀಲನೆ ನಡೆಸಿದರು.

ಜಲಪಾತ ಪ್ರದೇಶಗಳಲ್ಲಿ ನೂತನವಾಗಿ ನಿಲ್ಲಿಸಿರುವ ವೀಕ್ಷಣ ಗೋಪುರ ಹಾಗೂ ಪ್ರವೇಶ ದ್ವಾರಗಳ ಕಾಮಗಾರಿ ಅಧಿಕಾರಿಗಳೊಂದಿಗೆ ಸಚಿವ ಮಧು ಬಂಗಾರಪ್ಪ ವೀಕ್ಷಣೆ ನಡೆಸಿದರು. ಜೋಗದಲ್ಲಿ ನೂತನವಾಗಿ ನಿರ್ಮಾಣವಾಗುವ ಪಂಚತಾರಾ ಹೋಟೆಲ್ ಬಳಿ ಭಾರಿ ಗಾತ್ರದ ಜಾಯಿಂಟ್ ವೀಲ್, ಕೇಬಲ್ ಕಾರ್ ಅಳವಡಿಕೆ ,ಗ್ಲಾಸ್ ಹೌಸ್ ಕೆಲಸಗಳಿಗೆ ಚಾಲನೆ ನೀಡಲಾಯಿತು. ಮುಂದಿನ ಮೂರು ತಿಂಗಳ ಒಳಗಾಗಿ ಈ ಕಾಮಗಾರಿಗಳನ್ನು ಪೂರ್ಣಗೊಳಿಸಿ ಲೋಕಾರ್ಪಣೆ ಮಾಡಲು ನಿರ್ಧರಿಸಲಾಯಿತು. 

ಇನ್ನು ಜೋಗ ಜಲಪಾತದ ಜೊತೆಗೆ ಶರಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಲಿಂಗನಮಕ್ಕಿ ಜಲಾಶಯದ ಕೆಳಭಾಗದಲ್ಲಿ 60 ಎಕರೆ ಭೂಮಿಯು ಜೋಗ ನಿರ್ವಹಣಾ ಪ್ರಾಧಿಕಾರಕ್ಕೆ ಮಂಜೂರಾಗಿದ್ದು ಈ ಜಾಗದಲ್ಲಿ ಕೆ ಆರ್ ಎಸ್ ಮಾದರಿಯ ಉದ್ಯಾನ ನಿರ್ಮಿಸಲು ಪ್ರಾಧಿಕಾರ ಮುಂದಾಗಿದೆ. ಅಲ್ಲದೆ ಜೋಗದಲ್ಲಿ ರಾತ್ರಿ 10 ಗಂಟೆಯವರೆಗೂ ಪ್ರವಾಸಿಗರಿಗೆ ಮನರಂಜನೆ ಪಡೆಯಲು ಅವಕಾಶ ಕಲ್ಪಿಸುವ ಯೋಜನೆ ರೂಪಿಸಲಾಗಿದೆ.

ಒಟ್ಟಿನಲ್ಲಿ ಮಳೆಗಾಲದಲ್ಲಿ ಸೂರ್ಯಕಿರಣಗಳಿಂದ ಜೋಗ ಜಲಪಾತದ ದಿನದ ವಿವಿಧ ಕಾಲಗಳಲ್ಲಿ ಕಾಮನ ಬಿಲ್ಲು ಅನೇಕ ವೈವಿಧ್ಯ ತಾಳುತ್ತದೆ. ಜೊತೆಗೆ ಬೋರ್ಗರಿಯ ಜಲಪಾತದ ಸೌಂದರ್ಯದ ನೀನಾದ ಪ್ರವಾಸಿಕರಲ್ಲಿ ಸದಾ ಕಾಲ ಉಳಿಯುತ್ತದೆ. ಇದೀಗ ಸರ್ಕಾರ ಸರ್ವ ಋತು ಪ್ರವಾಸಿ ತಾಣವಾಗಿ ಮಾಡಲು ಹೊರಟಿರುವುದು ಪ್ರವಾಸಿಗರಿಗೆ ಇನ್ನಷ್ಟು ಖುಷಿ ಅನ್ನು ಉಂಟು ಮಾಡಿದೆ