ಹಗರಿಬೊಮ್ಮನಹಳ್ಳಿ(ಡಿ.01): ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಬಳಿ ಇದ್ದ 15 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿರುವ ಬಗ್ಗೆ ಶನಿವಾರ ಪಟ್ಟಣದ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊಸಪೇಟೆಯ ಪಾಟೀಲ್‌ ನಗರ ವಾಸಿ ಸರೋಜಾ ವೆಂಕಟೇಶ್‌ ಎನ್ನುವವರು ಹೂವಿನ ಹಡಗಲಿಯಲ್ಲಿರುವ ತನ್ನ ಅಣ್ಣನ ಮಗನ ಮದುವೆಗೆಂದು, ನ. 29ರ ಶುಕ್ರವಾರ ಮಧ್ಯಾಹ್ನ 1.30ಕ್ಕೆ ಹೊಸಪೇಟೆಯಿಂದ ಹಡಗಲಿ ಬಸ್‌ಗೆ ಪ್ರಯಾಣ ಬೆಳೆಸಿದ್ದಾರೆ. ತನ್ನೊಂದಿಗೆ ಡೈಮಂಡ್‌ ನಕ್ಲೆಸ್‌ ಸೇರಿ ಒಟ್ಟು 15.2 ಲಕ್ಷ ಮೌಲ್ಯದ ಬಂಗಾರ ಆಭರಣಗಳಿರುವ ಪೆಟ್ಟಗೆಯನ್ನು ತೆಗೆದುಕೊಂಡು ಹೊರಟಿದ್ದಾರೆ. ಹೂವಿನ ಹಡಗಲಿಗೆ ಮನೆಗೆ ಹೋಗಿ ತಲುಪಿದ 2 ಗಂಟೆಗಳ ನಂತರ ಆಭರಣಗಳಿದ್ದ ಪೆಟ್ಟಿಗೆಯನ್ನು ತೆರೆದು ನೋಡಿದರೆ ಪೆಟ್ಟಿಗೆ ಖಾಲಿ ಇತ್ತು ಎಂದು ಹಗರಿಬೊಮ್ಮನಹಳ್ಳಿ ಪೊಲೀಸ್‌ ಠಾಣೆಗೆ ಸರೋಜಾ ದೂರು ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಾನು ಪ್ರಯಾಣಿಸುತ್ತಿದ್ದ ಬಸ್‌ನಲ್ಲಿ ಮರಿಯಮ್ಮನಹಳ್ಳಿಯಿಂದ ಮೂವರು ಮಹಿಳೆಯರು ತಮ್ಮ ಕಂಕುಳಲ್ಲಿ ಮಕ್ಕಳನ್ನು ಹೊತ್ತುಕೊಂಡು ಬಸ್‌ ಏರಿದರು. ನಂತರ ತಾಲೂಕಿನ ಮಧ್ಯೆ ಉಪನಾಯಕನಹಳ್ಳಿ ಬಳಿ ಇಳಿದು ಹೋದರು. ಅವರು ನನ್ನ ಪಕ್ಕದಲ್ಲಿಯೇ ಕುಳಿತು ಪದೇ ಪದೇ ಆಭರಣಗಳಿದ್ದ ಪೆಟ್ಟಿಗೆ ಮುಟ್ಟುತ್ತಿದ್ದರು. ಆಗಾಗ, ನನ್ನ ಗಮನ ಬೇರೆಡೆ ಸೆಳೆಯುತ್ತಿದ್ದರು. ಹಾಗಾಗಿ ಅವರ ಮೇಲೆ ನನಗೆ ಅನುಮಾನವಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪಿಎಸ್‌ಐ ಲಕ್ಷ್ಮಣ ಕೇಸು ದಾಖಲಿಸಿಕೊಂಡಿದ್ದಾರೆ.