ಬೆಳಗಾವಿ ಅಧಿವೇಶನದಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ಹಿರಿಯ ಕಾಂಗ್ರೆಸ್‌ ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ ರಾಜೀನಾಮೆ ನೀಡಬೇಕೆಂದು ಅಗ್ರಹ

 ಮಾಲೂರು(ಡಿ.21): ಬೆಳಗಾವಿ (Belagavi) ಅಧಿವೇಶನದಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಹಿರಿಯ ಕಾಂಗ್ರೆಸ್‌ (Congress) ಶಾಸಕ ಕೆ.ಆರ್‌.ರಮೇಶ್‌ ಕುಮಾರ್‌ (Ranesh Kumar) ರಾಜೀನಾಮೆ (Resignation) ನೀಡಬೇಕೆಂದು ಅಗ್ರಹಿಸಿ ಇಲ್ಲಿನ ಜೆಡಿಎಸ್‌ (JDS) ಕಾರ‍್ಯಕರ್ತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು. ಇಲ್ಲಿನ ಶ್ರೀ ಜಗಜ್ಯೋತಿ ಬಸವೇಶ್ವರ ವೃತ್ತದಿಂದ ಮಿನಿ ವಿಧಾನಸೌಧದ ವರೆಗೆ ಮೆರವಣಿಗೆಯಲ್ಲಿ ಬಂದ ಕಾರ‍್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಮುಖಂಡ ರಾಮೇಗೌಡ, ರಮೇಶ್‌ ಕುಮಾರ್‌ ಅವರು ತಮ್ಮ ಚಪಲವನ್ನು ಮಾತಿನ ಮೂಲಕ ಹೇಳುತ್ತಿರುವುದು ಇದೇ ಮೊದಲಲ್ಲ. ಹಿಂದೆ ಸಭಾಧ್ಯಕ್ಷ ಸ್ಥಾನದಲ್ಲಿ ಕುಳಿತಾಗಲೂ ಇದೇ ರೀತಿ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಕೀಟಲೆ ಮಾಡುವ ರೀತಿಯಲ್ಲಿ ವರ್ಣಿಸಿದ್ದರು ಎಂದು ಟಾಕಿಸಿದರು.

ರಮೇಶ್‌ ಕುಮಾರ್‌ ಅವರು ತಮ್ಮ ಬೇಜಬ್ದಾರಿ ಮಾತಿಗೆ ಕ್ಷಮಾಪಣೆ ಕೇಳಿದ ರೀತಿ ನೋಡಿದರೆ ಅವರಿಗೆ ತಮ್ಮ ಮಾತಿಗೆ ಪಾಶ್ಚಾತ್ತಾಪ ಇಲ್ಲ ಎಂದೆನ್ನೆಸುತ್ತದೆ. ಇಂತಹ ವ್ಯಕ್ತಿ ರಾಜೀನಾಮೆ (Resignation) ನೀಡುವುದೇ ಸೂಕ್ತ. ರಾಜೀನಾಮೆ ನೀಡದಿದ್ದರೆ ಅವರನ್ನು ಪಕ್ಷದಿಂದ ಹೊರ ಹಾಕುವ ಮೂಲಕ ಮಹಿಳೆಯರಿಗೆ ಕಾಂಗ್ರೆಸ್‌ ನ್ಯಾಯ ನೀಡಬೇಕೆಂದರು.

ಜೆಡಿಎಸ್‌ (JDS) ತಾಲೂಕು ಅಧ್ಯಕ್ಷ ಚಂದ್ರಶೇಖರ್‌ ಗೌಡ ಮಾತನಾಡಿ, ಶಾಂತಿ ಬಯಸುವ ಕನ್ನಡಿಗರ ಸ್ವಾಭಿಮಾನವನ್ನು ಕೆಣಕುತ್ತಿರುವ ಮರಾಠಿ ಪುಂಡರನ್ನು ಗಡಿಪಾರು ಮಾಡಬೇಕೆಂದರು. ಶಿವಾಜಿ, ಸಂಗೊಳಿ ರಾಯಣ್ಣ, ರಾಣಿ ಚೆನ್ನಮ್ಮ ಎಲ್ಲರೂ ದೇಶಕ್ಕಾಗಿ ಹೋರಾಟ ಮಾಡಿ ಹುತ್ಮಾತರಾದವರು. ಅವರೆಲ್ಲರೂ ನಮ್ಮ ಸ್ವಾಭಿಮಾನದ ಸಂಕೇತವಾಗಿದ್ದಾರೆ. ಯಾವುದೇ ದೇಶ ಭಕ್ತನ ವಿರುದ್ಧ ಅವಮಾನ ಮಾಡುವುದನ್ನು ಜೆಡಿಎಸ್‌ ಖಂಡಿಸುತ್ತದೆ ಎಂದರು.

ಜೆಡಿಎಸ್‌ ಜಿಲ್ಲಾ ಉಪಾಧ್ಯಕ್ಷ ಬಲ್ಲಹಳ್ಳಿ ನಾರಾಯಣಸ್ವಾಮಿ ,ಜಿ.ಪಂ.ಮಾಜಿ ಸದಸ್ಯ ರಾಮಸ್ವಾಮಿ ರೆಡ್ಡಿ,ಕಾರ‍್ಯದರ್ಶಿ ದೂಮ್ಮಲೂರು ದೇವರಾಜು,ಜಿ.ಮಂಜುನಾಥ್‌ ಗೌಡ,ವರದರಾಜು,ಆನಂದ್‌,ಜೋನ್ನಪ್ಪ, ದಿನೇಶ್‌ ಗೌಡ, ಮೋಹನ್‌, ಸಂದೀಪ್‌, ಅದಿತ್ಯ ಇದ್ದರು.

ಕೀಳು ಹೇಳಿಕೆ - ಕ್ಷಮೆ ಯಾಚನೆ :  ಅತ್ಯಾಚಾರ (Rape) ವಿಷಯಕ್ಕೆ ಸಂಬಂಧಿಸಿದಂತೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಮಾಜಿ ಸ್ಪೀಕರ್‌ ಕೆ.ಆರ್‌.ರಮೇಶ್‌ ಕುಮಾರ್‌ (Ramesh Kumar) ಅವರು ಕಲಾಪದಲ್ಲಿ ಬೇಷರತ್‌ ಕ್ಷಮೆ ಕೋರಿದ್ದರು.

ಶುಕ್ರವಾರ ಕಲಾಪ ಆರಂಭವಾಗುತ್ತಿದ್ದಂತೆ ಸ್ವಯಂಪ್ರೇರಿತವಾಗಿ ಹೇಳಿಕೆ ನೀಡಿದ ಅವರು, ಯಾರನ್ನೂ ನೋಯಿಸಬೇಕು ಎಂಬ ಉದ್ದೇಶದಿಂದ ಹೇಳಿಕೆ ನೀಡಿಲ್ಲ. ಇಂಗ್ಲಿಷ್‌ನ (English) ಹೇಳಿಕೆಯೊಂದನ್ನು ಸಾಂದರ್ಭಿಕವಾಗಿ ಬಳಕೆ ಮಾಡಿದೆ. ಮಹಿಳೆಯರಿಗೆ ಅವಮಾನ ಮಾಡುವುದು, ಸದನದ ಗೌರವ ಕಡಿಮೆ ಮಾಡುವುದು ಅಥವಾ ಲಘುವಾಗಿ ನಡೆದುಕೊಳ್ಳುವ ಉದ್ದೇಶ ಇರಲಿಲ್ಲ. ನನ್ನ ಹೇಳಿಕೆಯಿಂದ ದೇಶದ ಯಾವುದೇ ಮೂಲೆಯಲ್ಲಿ ಮಹಿಳೆಯರಿಗೆ ನೋವಾಗಿದ್ದರೂ ಇದನ್ನು ಪ್ರತಿಷ್ಠೆಯಾಗಿ ತೆಗೆದುಕೊಳ್ಳದೆ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದರು.

ನೆರೆಗೆ ಸಂಬಂಧಿಸಿದಂತೆ ಸದನದಲ್ಲಿ ಭಾಷಣಕಾರರ ಪಟ್ಟಿಜಾಸ್ತಿಯಾದಾಗ ಸಭಾಧ್ಯಕ್ಷರು ‘ನಾನು ಸಹ ಇದನ್ನು ಅನುಭವಿಸುತ್ತೇನೆ’ ಎಂದು ಹೇಳಿದರು. ಆಗ ಸಾಂದರ್ಭಿಕವಾಗಿ ಹೇಳಿಕೆ ನೀಡಿದ್ದೇನೆ. ಯಾವ ಸನ್ನಿವೇಶದಲ್ಲಿ ಹೇಳಿಕೆ ನೀಡಿದ್ದೇನೆ ಎಂದು ಕೆಲವರು ಅರಿತುಕೊಂಡಿಲ್ಲ. ಹಾಗಂತ ನನ್ನ ಹೇಳಿಕೆಯನ್ನು ಸಮರ್ಥಿಸಿಕೊಳ್ಳುವುದಿಲ್ಲ. ನಾನು ಸಾಮಾನ್ಯ ಹಿನ್ನೆಲೆಯಿಂದ ಬಂದವನು. ಮಹಿಳೆಯರಿಗೆ ಸದಾ ಕಾಲ ಗೌರವ ನೀಡಿದ್ದೇನೆ ಎಂದು ತಿಳಿಸಿದ್ದರು.

ನಗೆಯಾಡಿದಿರಿ ಎಂಬ ಕಾರಣಕ್ಕೆ ನಿಮ್ಮನ್ನು (ಸಭಾಧ್ಯಕ್ಷರು) ಅಪರಾಧಿ ಮಾಡಿದ್ದಾರೆ. ನಿಮ್ಮದೂ ಆ ಉದ್ದೇಶ ಇರಲಿಲ್ಲ. ನನ್ನ ಮಾತಿನಿಂದ ಮಹಿಳೆಯರು ಸೇರಿದಂತೆ ಸಮಾಜದ ಯಾವುದೇ ವರ್ಗಕ್ಕೆ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸಲು ಯಾವುದೇ ಮುಜುಗರ ಇಲ್ಲ. ನನ್ನಿಂದ ಅಪರಾಧವಾಗಿದೆ ಎಂದು ತೀರ್ಮಾನವನ್ನೂ ಸಹ ಕೊಟ್ಟಿದ್ದಾರೆ. ಹೇಳಿಕೆಗೆ ವಿಷಾದ ವ್ಯಕಪಡಿಸುತ್ತಾ ಇದನ್ನು ಇಲ್ಲಿಗೆ ಸುಖಾಂತ್ಯ ಮಾಡೋಣ ಎಂದರು.

ಈ ವೇಳೆ ಆಡಳಿತ ಮತ್ತು ಪ್ರತಿ ಪಕ್ಷದವರು ವಿಚಾರದ ಕುರಿತು ಮಾತನಾಡಲು ಮುಂದಾದಾಗ ಮಧ್ಯಪ್ರವೇಶಿಸಿದ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಈ ವಿಷಯವನ್ನು ಬೆಳೆಸುವುದು ಬೇಡ. ರಮೇಶ್‌ಕುಮಾರ್‌ ಅವರು ಸದನದಲ್ಲಿ ವಿಷಾದ ವ್ಯಕ್ತಪಡಿಸಿ, ಕ್ಷಮೆ ಕೋರಿದ್ದಾರೆ. ಹೀಗಾಗಿ ವಿಚಾರವನ್ನು ಇಲ್ಲಿಗೆ ಬಿಟ್ಟು ಮುಂದೆ ಹೋಗೋಣ ಎಂದು ನುಡಿದಿದ್ದರು.

ನಾವೆಲ್ಲರೂ ಒಂದು ಕುಟುಂಬದವರಿದ್ದಂತೆ. ನಮಗೂ ಸಾಂಸಾರಿಕವಾದ ಎಲ್ಲಾ ಭಾವನಾತ್ಮಕ ಸಂಬಂಧಗಳಿವೆ. ಸದನದಲ್ಲಿ ಮತ್ತು ಸಮಾಜದಲ್ಲಿ ನಾವೆಲ್ಲರೂ ಮಹಿಳೆಯರ ಬಗ್ಗೆ ಗೌರವದ ಭಾವನೆ ಇಟ್ಟಿಕೊಂಡಿದ್ದೇವೆ. ಅದನ್ನು ಹೆಚ್ಚಿಸಲು ಬದ್ಧವಾಗಿದ್ದೇವೆ. ಈ ವಿಚಾರವನ್ನು ಇಲ್ಲಿಗೇ ಮುಕ್ತಾಯ ಮಾಡಿ. ಬೆಳೆಸುವುದು ಬೇಡ ಎಂದು ತಿಳಿಸಿದ್ದರು.

ಹಿಂದೆಯೂ ಇಂಥದೇ ಮಾತು ಹೇಳಿದ್ದರು : ಅತ್ಯಾಚಾರ (Rape) ವಿಷಯಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಶಾಸಕ ರಮೇಶ್‌ ಕುಮಾರ್‌ ಅವರು ಸದನದಲ್ಲಿ ಹೇಳಿಕೆ ನೀಡಿದ್ದು ಇದೇ ಮೊದಲೇನಲ್ಲ. ಈ ಹಿಂದೆ ಸಭಾಧ್ಯಕ್ಷರಾಗಿದ್ದ ವೇಳೆ ಸದನದಲ್ಲಿ ತಮ್ಮ ಪರಿಸ್ಥಿತಿಯನ್ನು ಅತ್ಯಾಚಾರಕ್ಕೊಳಗಾದ ಸಂತ್ರಸ್ತರ ಸ್ಥಿತಿಗೆ ಹೋಲಿಸಿಕೊಂಡು ವಿವಾದಕ್ಕೀಡಾಗಿದ್ದರು.

‘ನನ್ನ ಸ್ಥಿತಿ ಹೇಗಿದೆ ಎಂದರೆ ಸಮಸ್ಯೆಯಾಗಿದೆ ಎಂದು ಸುಮ್ಮನಿದ್ದರೆ ಆಗುತ್ತಿತ್ತು. ಆದರೆ, ಈ ಬಗ್ಗೆ ದೂರು ನೀಡಿದ್ದಕ್ಕೆ ಸಮಸ್ಯೆಯಾಗಿದೆ. ಅತ್ಯಾಚಾರದ ಬಗ್ಗೆ ದೂರು ನೀಡಿದ್ದಕ್ಕೆ ಆರೋಪಿಯನ್ನೇನೋ ಪ್ರಕರಣ ದಾಖಲಿಸಿ ಜೈಲಿಗೆ ಕಳುಹಿಸಲಾಗುತ್ತದೆ. ಆದರೆ, ಸಂತ್ರಸ್ತರಿಗೆ ನ್ಯಾಯಾಲಯದಲ್ಲಿ ವಕೀಲರು ರೇಪ್‌ ಹೇಗೆ ಮಾಡಿದ? ಎಷ್ಟೊತ್ತಿಗೆ ಮಾಡಿದ? ಎಷ್ಟೊತ್ತು ಮಾಡಿದ? ಹೆಂಗೆಲ್ಲಾ ಮಾಡಿದ ಎಂದು ಕೇಳುತ್ತಾರೆ. ನಾನು ಸಂತ್ರಸ್ತರನ್ನು ಕೇಳಿದಾಗ ನ್ಯಾಯಾಲಯದಲ್ಲಿ ನ್ಯಾಯ ಸಿಗುತ್ತೋ ಇಲ್ಲವೋ ಗೊತ್ತಿಲ್ಲ. ಆದರೆ, ಆತ ಒಂದು ಸಲ ಮಾಡಿದ. ನ್ಯಾಯಾಲಯದಲ್ಲಿ 100 ಸಲ ಮಾಡಿದರು ಎಂದಿದ್ದರು. ಆ ರೀತಿ ನನ್ನ ಪರಿಸ್ಥಿತಿಯಾಗಿದ್ದು, ನನ್ನನ್ನು ಬೀದಿಯಲ್ಲಿ ಮಲಗಿಸಿದ್ದೀರಿ’ ಎಂದು ಹಿಂದೊಮ್ಮೆ ಹೇಳಿದ್ದರು.