Asianet Suvarna News Asianet Suvarna News

Basavaraj bommai Speech: ಸಿಎಂ ಭಾವನಾತ್ಮಕ ಭಾಷಣ, ರಾಜೀನಾಮೆ ಅಂತೆ-ಕಂತೆಗಳಿಗೆ ಪೂರಕವಾಯ್ತಾ?

* ಸಿಎಂ ಬಸವರಾಜ ಬೊಮ್ಮಾಯಿ ಭಾವನಾತ್ಮಕ ಭಾಷಣ
* ಹಲವು ಚರ್ಚೆಗೆ ಗ್ರಾಸವಾಯ್ತು ಬೊಮ್ಮಾಯಿ ಮಾತುಗಳು
* ರಾಜೀನಾಮೆ ಸುಳಿವು ನೀಡಿದ್ರಾ ಬಸವರಾಜ ಬೊಮ್ಮಾಯಿ?

CM basavaraj-bommai-emotional speech in haveri rbj
Author
Bengaluru, First Published Dec 19, 2021, 5:30 PM IST

ಹಾವೇರಿ, (ಡಿ.19): ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಬದಲಾವಣೆಯಾಗುತ್ತೆ ಎನ್ನುವ ಮಾತುಗಳು ಕೇಳಿಬರುತ್ತಿವೆ. ಇದರ ಮಧ್ಯೆ ಅಧಿಕಾರ ಶಾಶ್ವತ ಅಲ್ಲ ಎಂದು ಭಾವನಾತ್ಮಕವಾಗಿ ಹೇಳಿರುವುದು ಅಚ್ಚರಿಕೆ ಕಾರಣವಾಗಿದೆ.

ಹೌದು....ಹಾವೇರಿ (Haveri) ಶಿಗ್ಗಾಂವಿ ಪಟ್ಟಣದ ಸಂತೆ ಮೈದಾನದಲ್ಲಿ ವೀರರಾಣಿ ಕಿತ್ತೂರು ಚೆನ್ನಮ್ಮ ಪುತ್ಥಳಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಬೊಮ್ಮಾಯಿ, ಅಧಿಕಾರ ಹಾಗೂ ಸ್ಥಾನಮಾನ ಶಾಶ್ವತ ಅಲ್ಲ ಎಂದು ಹೇಳಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಅಲ್ಲದೇ ಭಾವನಾತ್ಮಕ ಭಾಷಣ ಬೊಮ್ಮಾಯಿ ರಾಜೀನಾಮೆಗೆ ಪೂರಕವಾಗಿದೆ. 

ಈ ಬದುಕು ಶಾಶ್ವತವಲ್ಲ. ನಾವು ಎಷ್ಟು ದಿನ ಇರ್ತೇವೆ ಅದು ಗೊತ್ತಿಲ್ಲ. ಸ್ಥಾನಮಾನಗಳು ಶಾಶ್ವತವಲ್ಲ ಎಂದು ಹೇಳಿ ಬಸವರಾಜ ಬೊಮ್ಮಾಯಿ ಭಾವುಕರಾದರು.

Murugesh Nirani: ನಿರಾಣಿ ಆದಷ್ಟು ಬೇಗ ಸಿಎಂ ಆಗ್ತಾರೆ, ಸ್ಫೋಟಕ ಭವಿಷ್ಯ ನುಡಿದ ಬಿಜೆಪಿ ನಾಯಕ

ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತ
ನಿಮ್ಮೆಲ್ಲರ ಆಶೀರ್ವಾದದಿಂದ ಈ ರಾಜ್ಯದ ಮುಖ್ಯಮಂತ್ರಿಯಾಗಿ ನಿಂತಿದ್ದೇನೆ. ಕ್ಷೇತ್ರದ ಹೊರಗಡೆ ಇದ್ದಾಗ ನಾನು ಸಿಎಂ, ಗೃಹ ಸಚಿವ. ಆದರೆ ಕ್ಷೇತ್ರದ ಒಳಗಡೆ ಬಂದಾಗ ನಾನು ಬಸವರಾಜ ಬೊಮ್ಮಾಯಿ ಆಗಿ ಉಳಿಯುತ್ತೇನೆ. ಬಸವರಾಜ ಬೊಮ್ಮಾಯಿ ಅನ್ನೋದು ಶಾಶ್ವತ. ಅದರ ಹಿಂದಿರೋ ಪದನಾಮಗಳು ಶಾಶ್ವತವಲ್ಲ. ನಾನು ನಿಮ್ಮೂರಿಗೆ ಬಂದಾಗ ರೊಟ್ಟಿ ತಿನ್ನಿಸಿದ್ದೀರಿ, ನವಣಿ ಅಕ್ಕಿ ಅನ್ನ ಮಾಡಿ ಹಾಕಿದ್ದೀರಿ. ನಾನೇನು ಕೆಲಸ ಮಾಡಿದ್ರೂ ಆ ಋಣ ತೀರಿಸಲು ಆಗೋದಿಲ್ಲ ಎಂದು ಗದ್ಗತಿತರಾದರು.

ಶಾಶ್ವತವಾಗಿ ನಿಮ್ಮ ಪ್ರೀತಿ ವಿಶ್ವಾಸ ಉಳಿಸಿಕೊಂಡು ಹೋಗಬೇಕೆಂಬ ಆಸೆಯಿದೆ. ನಾನು ಭಾವನಾತ್ಮಕವಾಗಿ ಮಾತನಾಡಬಾರ್ದು ಅಂದ್ಕೊಂಡಿದ್ದೆ. ನಿಮ್ಮನ್ನೆಲ್ಲ ನೋಡಿದಾಗ ಭಾವನೆಗಳು ಬರುತ್ತವೆ. ಎಲ್ಲ ಸಮುದಾಯಗಳ ಭಾವನೆಗೆ ಸ್ಪಂದಿಸೋದು ಸೇರಿದಂತೆ ದೊಡ್ಡ ಜವಾಬ್ದಾರಿ ನನ್ನ ಮೇಲಿದೆ. ಸರ್ಕಾರಕ್ಕೆ ಸವಾಲುಗಳಿವೆ, ಅವುಗಳನ್ನ ಎದುರಿಸಿಕೊಂಡು ಹೋಗಬೇಕಿದೆ ಎಂದರು.

ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು, ಯಾವುದೋ ಒಂದು ರಾಜ್ಯ ಪಡೆದುಕೊಳ್ಳಲು ಅಲ್ಲ. ವಿಸ್ತರಣೆಗಾಗಿ ಹೋರಾಟ ಮಾಡಲಿಲ್ಲ. ತನ್ನ ರಾಜ್ಯದ ಜನರ ರಕ್ಷಣೆ ಮತ್ತು ಸ್ವಾಭಿಮಾನಕ್ಕಾಗಿ ಹೋರಾಟ ಮಾಡಿದಳು. ಎಲ್ಲ ಸಮುದಾಯದವರನ್ನ ಸೇರಿಸಿಕೊಂಡು ಚೆನ್ನಮ್ಮ ರಾಜ್ಯವನ್ನ ಉಳಿಸೋ ಕೆಲಸ ಮಾಡಿದಳು. ಸಂಗೊಳ್ಳಿ ರಾಯಣ್ಣ ಸೆರೆಯಾದಾಗ ಕಿತ್ತೂರು ಚೆನ್ನಮ್ಮ ಕುಸಿದು ಹೋದಳು. ಅಲ್ಲಿಯವರೆಗೂ ಕಿತ್ತೂರು ಚೆನ್ನಮ್ಮ ಬ್ರಿಟಿಷರ ಯಾವುದಕ್ಕೂ ಕುಸಿದಿರಲಿಲ್ಲ. ಸಾಧಕರಿಗೆ ಸಾವು ಅಂತ್ಯವಲ್ಲ ಎಂದು ಸ್ಪೂರ್ತಿ ಮಾತುಗಳನ್ನು ಆಡಿದರು.

ಸಿಎಂ ತಮ್ಮ ಕಣ್ಣೀರಿನ ಭಾಷಣದ ಮೂಲಕ ರಾಜಕೀಯದಲ್ಲಿ ಮುಂದಿನ ಸುಳಿವು ಕೊಟ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ. ಅಲ್ಲದೇ ಗುಸು-ಗುಸು, ಬೇರೆ ಚರ್ಚೆಗಳಿಗೆ ಕಾರಣವಾಗಿದೆ.

ಆಂತರಿಕ ಕಲಹ, ಶಾಸಕರ ಭಿನ್ನಮತದ ಕಾರಣ ಮುಂದಿಟ್ಟು ಕೊಂಡು ಬಿಎಎಸ್ವೈರನ್ನು ಅಧಿಕಾರದಿಂದ ಕೆಳಕ್ಕಿಳಿಸಿದ ಬಿಜೆಪಿ ಬೊಮ್ಮಾಯಿಗೆ ಪಟ್ಟ ಕಟ್ಟಿದೆ. ನಾಲ್ಕು ತಿಂಗಳ ಹಿಂದೆಯಷ್ಟೇ ಅಧಿಕಾರ ಸ್ವೀಕರಿಸಿದ ಬೊಮ್ಮಾಯಿ ಇನ್ನೇನು ಎಲ್ಲವನ್ನೂ ಸರಿ ತೂಗಿಸಿಕೊಂಡು ಹೋಗುತ್ತಿದ್ದಾರೆ ಎಂದುಕೊಳ್ಳುವಾಗಲೇ ಮತ್ತೆ ಬೊಮ್ಮಾಯಿ ಪದತ್ಯಾಗದ ಮಾತು ಕೇಳಿಬಂದಿದೆ. ಆದರೆ ಈ ಭಾರಿ ರಾಜಕೀಯ ಕಾರಣವಿಲ್ಲದೇ ವೈಯಕ್ತಿಕ ಕಾರಣಕ್ಕೆ ಸಿಎಂ ರಾಜೀನಾಮೆ‌ನೀಡುತ್ತಾರೆ ಎಂಬುದು ಸದ್ಯ ತಿಳಿದು ಬರ್ತಿರೋ ಸಂಗತಿ.

ಆರೋಗ್ಯದ ನೆಪ ನೀಡಿ ರಾಜೀನಾಮೆ ನೀಡ್ತಾರಾ?
ಮೂಲಗಳ ಮಾಹಿತಿ ಪ್ರಕಾರ ಸಿಎಂ ಬಸವರಾಜ್ ಬೊಮ್ಮಾಯಿ ತೀವ್ರ ಮಂಡಿನೋವಿನಿಂದ ಬಳಲುತ್ತಿದ್ದಾರೆ. ಅವರಿಗೆ ತುರ್ತಾಗಿ ಮಂಡಿ ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ಸೂಚಿಸಿದ್ದಾರೆ. ಹೀಗಾಗಿ ಜನವರಿಯಲ್ಲಿ ಮಂಡಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಸಿಎಂ ಬೊಮ್ಮಾಯಿ ಅಮೇರಿಕಾಗೆ ತೆರಳಲಿದ್ದಾರೆ. ಈಗಾಗಲೇ ವೀಸಾಗೆ ಅರ್ಜಿ ಸಲ್ಲಿಸಿರುವ ಸಿಎಂ ಬೊಮ್ಮಾಯಿ ಅಧಿವೇಶನ ಮುಗಿಯುತ್ತಿದ್ದಂತೆ ಅಮೇರಿಕಾಕ್ಕೆ ತೆರಳಲಿದ್ದಾರಂತೆ.

ಮಂಡಿ ನೋವಿನ ಶಸ್ತ್ರಚಿಕಿತ್ಸೆ ಬಳಿಕ ಕನಿಷ್ಟ ಮೂರು ತಿಂಗಳ ಕಾಲ ಕಡ್ಡಾಯವಾಗಿ ವಿಶ್ರಾಂತಿ ಪಡೆಯೋದು ಅನಿವಾರ್ಯ. ಹೀಗಾಗಿ ಸಿಎಂ ಯಾವುದೇ ಕಾರ್ಯ ಕಲಾಪ, ಸಭೆ, ಸಮಾರಂಭದಲ್ಲಿ ಪಾಲ್ಗೊಳ್ಳುವುದು ಕಷ್ಟ. ಮೂರು ತಿಂಗಳು ಸಿಎಂ ಇಲ್ಲದೇ ಅಧಿಕಾರ ನಡೆಸುವುದು ಕೂಡ ಕಷ್ಟ. ಈ ಕಾರಣಕ್ಕಾಗಿ ಸಿಎಂ ಬೊಮ್ಮಾಯಿ ಜನವರಿ ಮೊದಲ ವಾರದಲ್ಲೇ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗುತ್ತಿದೆ.

ಬಿಜೆಪಿ ಉಳಿದ ಒಂದೂವರೆ ವರ್ಷದ ಅವಧಿ ಹಾಗೂ ಮುಂದಿನ ಚುನಾವಣೆಗೆ ಸೂಕ್ತವಾಗುವ ನಾಯಕತ್ವಕ್ಕಾಗಿ ಹುಡುಕಾಟ ಆರಂಭಿಸಿದೆಯಂತೆ. ಒಟ್ಟಿನಲ್ಲಿ ಮತ್ತೊಮ್ಮೆ ರಾಜ್ಯದಲ್ಲಿ ಬಿಜೆಪಿ ನಾಯಕತ್ವ ಬದಲಾವಣೆಯ ಪ್ರಹಸನ ಜೋರಾಗುವ ಮುನ್ಸೂಚನೆ ಸಿಕ್ಕಿದ್ದು ಐದು ವರ್ಷದ ಅವಧಿಯ ಸರ್ಕಾರಕ್ಕೆ ಮೂರನೇ ಮುಖ್ಯಮಂತ್ರಿ ಖಚಿತ ಎನ್ನಲಾಗುತ್ತಿದೆ.

Follow Us:
Download App:
  • android
  • ios