ಪಾವಗಡ (ಮಾ.05): ಗ್ರಾಪಂ ಚುನಾವಣೆಯಲ್ಲಿ ತಾಲೂಕಿನ 33 ಗ್ರಾಪಂಗಳ ಪೈಕಿ 17 ಗ್ರಾಪಂಗಳು ವಶವಾಗಿದ್ದು, ಇಲ್ಲಿ ಜೆಡಿಎಸ್‌ ಸುಭದ್ರವಾಗಿದೆ ಎಂಬ ಸಂದೇಶ ಸಾರಿದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು, ಇದೇ ರೀತಿ 2023ರ ವಿಧಾನ ಸಭೆ ಚುನಾವಣೆಯಲ್ಲಿ ಇಲ್ಲಿನ ಪಕ್ಷದ ಸಂಭವನೀಯ ಅಭ್ಯರ್ಥಿ ಕೆ.ಎಂ.ತಿಮ್ಮರಾಯಪ್ಪ ಅವರನ್ನು ಅತಿ ಹೆಚ್ಚು ಮತಗಳಿಂದ ಗೆಲ್ಲಿಸಿ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ತರುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.

ತಾಲೂಕು ಜೆಡಿಎಸ್‌ ವತಿಯಿಂದ  ಪಟ್ಟಣದ ಎಸ್‌ಎಸ್‌ಕೆ ಬಯಲು ರಂಗಮಂದಿರದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್‌ ಬೆಂಬಲಿತ ಗ್ರಾಪಂ ಅಧ್ಯಕ್ಷ ಮತ್ತು ಸದಸ್ಯರ ಸನ್ಮಾನ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಈ ಮಟ್ಟದ ಸಂಖ್ಯೆಯಲ್ಲಿ ಜನ ಸೇರಿರುವುದು ನೋಡಿದರೆ ಇಲ್ಲಿ ಪಕ್ಷ ಸದೃಢವಾಗಿದೆ ಎಂಬ ನಂಬಿಕೆ ಇದೆ. ಜಿಪಂ ತಾಪಂ ಚುನಾವಣೆಗಳಲ್ಲಿ ಹೆಚ್ಚಿನ ಸ್ಥಾನ ಗೆಲ್ಲಬೇಕು. ಮುಂದೆ ನಡೆಯುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಜಯಭೇರಿ ಸಾಧಿಸುವ ವಿಶ್ವಾಸವಿದೆ ಎಂದರು.'

2023ಕ್ಕೆ ಮತ್ತೊಮ್ಮೆ ಎಚ್ಡಿಕೆ ಮುಖ್ಯಮಂತ್ರಿ' ...

ಮಾಜಿ ಶಾಸಕ ಕೆ.ಎಂ.ತಿಮ್ಮರಾಯಪ್ಪ ಅತ್ಯಂತ ಯೋಗ್ಯ ವ್ಯಕ್ತಿಯಾಗಿದ್ದು ಇಂತಹ ಪ್ರಾಮಾಣಿಕರಿಗೆ ಚುನಾವಣೆಯಲ್ಲಿ ಬೆಂಬಲ ನೀಡಿದರೆ ಶಾಸಕ ಸಚಿವರಾಗಿ ತಾಲೂಕು ಪ್ರಗತಿ ಸಾಧ್ಯವಿದೆ. ಈ ಹಿಂದೆ ಸಮಿಶ್ರ ಸರ್ಕಾರದಲ್ಲಿ ಸಹಿಸದ ನಾಯಕರೊಬ್ಬರು ನನ್ನ ಹಾಗೂ ಜೆಡಿಎಸ್‌ ಪತನಗೊಳಿಸುವ ಹಿನ್ನೆಲೆಯಲ್ಲಿ ಎಚ್‌ಡಿಡಿ ಬಿ-ಟೀಂ ಅಂತ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿಯವರಿಗೆ ಇಲ್ಲಸಲ್ಲದ ದೂರು ಹೇಳಿದ್ದರು. ಇದರ ಪರಿಣಾಮ ರಾಜ್ಯ ಸರ್ಕಾರ ಬಿದ್ದು ಹೋಯಿತು. ಇದರಿಂದ ರಾಜ್ಯದ ಜನತೆಗೆ ನಷ್ಟವಾಗಿರುವುದಲ್ಲದೇ ದೂರು ಹೇಳಿದವರಿಗೂ ಒಳ್ಳೆಯದಾಗಲು ಸಾದ್ಯವಾಗಲಿಲ್ಲ ಎಂದರು.

ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ಹಲವಾರು ರೀತಿಯ ರೈತ ಹಾಗೂ ಜನಪರ ಕಾರ್ಯಕ್ರಮ ಕೊಟ್ಟಿದ್ದರು. ಸುಮಾರು 25ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿದ ಕೀರ್ತಿ ಅವರಿಗೆ ಸಲ್ಲಬೇಕಿದೆ. ಈ ಸಂಬಂಧ ತಾಲೂಕು 17 ಸಾವಿರ ರೈತರಿಗೆ 90 ಕೋಟಿಯಷ್ಟುಸಾಲಮನ್ನಾ ಆಗಿದೆ ಎಂದರು.

ಗ್ರಾಮವಾಸ್ತವ್ಯ ಬೀದಿ ಬದಿ ವ್ಯಾಪಾರಿಗಳಿಗೆ ಪ್ರೋತ್ಸಾಹ ಧನ ಸೇರಿದಂತೆ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಗರ್ಭಿಣಿಯರಿಗೆ 6 ಸಾವಿರ ಹಾಗೂ 70 ವರ್ಷ ಮೆಲ್ಪಟ್ಟರೈತರಿಗೆ ಮಾಸಾಶನ ಇತರೆ ಅಭಿವೃದ್ಧಿ ಭರವಸೆಗಳ ಬಗ್ಗೆ ವಿವರಿಸಿದ ಅವರು ಡಾ.ಬಿ.ಆರ್‌. ಅಂಬೇಡ್ಕರ್‌ ಕೊಟ್ಟಸಂವಿಧಾನ ಅಶಯ ಅನ್ವಯ ಪ್ರತಿಯೊಬ್ಬರಿಗೂ ಸೌಲಭ್ಯ ಸಿಗಬೇಕು. ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿ ಮಹಿಳೆಯರಿಗೆ ಶೇ.33ರಷ್ಟುಹಾಗೂ ನಾಯಕ ಸಮಾಜಕ್ಕೆ ಮೀಸಲು ಕಲ್ಪಿಸಿ ಎಸ್‌ಟಿಗೆ ಸೇರ್ಪಡೆ ಸೇರಿದಂತೆ ಚಿಕ್ಕ ಚಿಕ್ಕ ಜಾತಿಗಳನ್ನು ಗುರ್ತಿಸಿ ಶೇ.4ರಷ್ಟುಮೀಸಲಾತಿ ಜಾರಿಗೆ ತಂದ ಪರಿಣಾಮ ಹಿಂದುಳಿದ ವರ್ಗಗಗಳ ಆನೇಕ ನಾಯಕರು ಮಂತ್ರಿ ಮತ್ತು ಎಂಎಲ್‌ಸಿಗಳಾಗಿದ್ದರು. ತಮ್ಮ ಆಡಳಿತಾವಧಿಯಲ್ಲಿ ರಾಜ್ಯಕ್ಕೆ ಕೊಟ್ಟಜನಪರ ಕಾರ್ಯಕ್ರಮಗಳ ಬಗ್ಗೆ ಹೇಳಿದ ಅವರು ಅದ್ದೂರಿ ಸಮಾರಂಭ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.

ಮಾಜಿ ವಿಧಾನ ಪರಿಷತ್‌ ಸದಸ್ಯ ಶರವಣ ಮಾತನಾಡಿ, ಸ್ಥಳೀಯ ಶಾಸಕರ ಬಗ್ಗೆ ಟೀಕಿಸಿ ಪ್ರಗತಿಯಲ್ಲಿ ತಾಲೂಕು ಹಿಂದೂಳಿದಿದೆ ಎಂದ ಅವರು ಎಚ್‌ಡಿಕೆ ಸಿಎಂ ಅವಧಿಯಲ್ಲಿ ಅರ್ಯವೈಶ್ಯ ನಿಗಮ ಸ್ಥಾಪನೆ ಹಾಗೂ ಸಮಾಜದ ಪ್ರಗತಿಗೆ 11 ಕೋಟಿ ರು. ಹಣ ಬಿಡುಗಡೆ ಮಾಡಿದ್ದರು. ಆದರೆ ರಾಜಾಹುಲಿಯಂತೆ ಇರುವ ಈಗಿನ ಸಿಎಂ ಬರೀ 5ಕೋಟಿ ನೀಡಿ ಶಿಕಾರಿಪುರದ ಇಲಿಯಾಗಿದ್ದಾರೆಂದು ಲೇವಡಿ ಮಾಡಿದರು.

ಸಮಿಶ್ರ ಸರ್ಕಾರ ಕೆಡವಿದವರ ಪಾಪದ ಕೊಡ ತುಂಬಿದ್ದು ಹಗರಣಗಳ ಹೆಸರಿನಲ್ಲಿ ಬಿಜೆಪಿಯ ಒಂದೊಂದೇ ವಿಕೆಟ್‌ ಪತನವಾಗುತ್ತಿದೆ. ರಾಜ್ಯದ ಸಮಗ್ರ ಪ್ರಗತಿಗೆ ರೈತಪರ ಚಿಂತಕ ಎಚ್‌ಡಿಕೆ ಸಿಎಂ ಆಗಬೇಕು ಎಂದರು.