ಕೆ.ಆರ್‌. ನಗರ (ಏ.16): ಸಾ.ರಾ. ಮಹೇಶ್‌ ಏನೆಂದು ಮಿರ್ಲೆ ಗ್ರಾಮದ ಜನತೆಗೆ ಗೊತ್ತಿದ್ದು ಕೆಲವು ಕಿಡಿಗೇಡಿಗಳಿಂದ ನನ್ನನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಶಾಸಕ ಸಾ.ರಾ. ಮಹೇಶ್‌ ಗುಡುಗಿದರು.

ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದ ಅವರು ಮಿರ್ಲೆ ಜಿಪಂ ಕ್ಷೇತ್ರ ರದ್ದಾಗಿರುವುದಕ್ಕೆ ಕೆಲವರು ವರ್ತಿಸಿರುವ ನಡೆಯನ್ನು ಖಂಡಿಸಿದರಲ್ಲದೆ ಮಿರ್ಲೆ ಗ್ರಾಮದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿಯವರು ಹೋರಾಟ ಮಾಡಿದ ತಕ್ಷಣ ಏನು ಮಾಡಲು ಸಾಧ್ಯವಿಲ್ಲ ಎಂದರು.

ಸಾರಾ-ಎಚ್‌ಡಿಕೆ ಕೈ ಬಲಪಡಿಸಲು ಶ್ರಮ : ಗಂಭೀರವಾಗಿ ಪರಿಗಣಿಸಿದ JDS ...

ಕ್ಷೇತ್ರದಲ್ಲಿ ನನಗೆ ಚಪ್ಪಲಿಯಲ್ಲಿ ಹೊಡೆಯುವವರೂ ನಮ್ಮವರೆ, ನಂತರ ಹೂವಿನ ಹಾರ ಹಾಕಿ ಜೈಕಾರ ಕೂಗುವವರು ನಮ್ಮವರೆ ಎಂದ ಅವರು ಒಬ್ಬ ರೌಡಿ ಶೀಟರ್‌, ಕೊಲೆಗಡುಕನ ಕೈಯಲ್ಲಿ ನಮ್ಮ ಮನೆ ಮಂದಿಯನ್ನು ಬೈಯಿಸುತ್ತಾರೆ ಎಂದರೆ ಇದು ಯಾವ ಸಂಸ್ಕಾರ ಎಂದು ಪ್ರಶ್ನಿಸಿದರು.

ನೀವು ಮಿರ್ಲೆಯಲ್ಲಿ ರಾಜಕಾರಣ ಮಾಡಿ ಆದರೆ ನಾನು 30 ವರ್ಷದ ಹಿಂದೆ ಹೊರಗೆ ಹೋಗಿ ರಾಜಕೀಯ ಮಾಡಿದ್ದೇನೆ. ಇದರಿಂದ ಸಾ.ರಾ. ಮಹೇಶ್‌ನನ್ನು ಎದುರಿಸಲು ಸಾಧ್ಯವಿಲ್ಲ. ಮೊದಲು ನಿಮ್ಮ ಕಾರ್ಯಕರ್ತರಿಗೆ ಸಂಸ್ಕಾರ ಕಲಿಸಿ ಎಂದು ಸಲಹೆ ನೀಡಿದರು.

ಮಿರ್ಲೆ ಗ್ರಾಮವನ್ನು ನಾನು ನನ್ನ ರಾಜಕೀಯ ಜೀವನದಲ್ಲಿ ಎಂದೂ ಕಡೆಗಣಿಸಿಲ್ಲ ಪಾಲಿಟೆಕ್ನಿಕ್‌, ಪವರ್‌ ಸ್ಟೇಷನ್‌, ನಾಲೆಗಳ ಆಧುನೀಕರಣ, ಹುಣಸಮ್ಮ ದೇವಾಲಯ ಅಭಿವೃದ್ದಿ, ಗ್ರಾಮದ ರಸ್ತೆಗಳ ಅಭಿವೃದ್ದಿ ಬಸ್‌ನಿಲ್ದಾಣ, ಸೇರಿದಂತೆ ಹಲವು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದು ಜಾತ್ಯಾತೀತ ಮತ್ತು ಪಕ್ಷಾತೀತವಾಗಿ ಕೆಲಸ ಮಾಡಿದ್ದು ನಾನು ಕ್ಷೇತ್ರದಲ್ಲಿ ರಾಜಕೀಯ ಮಾಡಲು ಆರಂಭಿಸಿದ ಮೇಲೆ ಪಡೆದಿರುವುದಕ್ಕಿಂತ ಕಳೆದುಕೊಂಡಿರುವುದೆ ಹೆಚ್ಚು ಎಂದು ಅವರು ನೊಂದು ನುಡಿದರು.