ಕೆ.ಆರ್‌. ನಗರ (ಸೆ.25): ತಾಲೂಕಿನ ಮಾರಗೌಡನಹಳ್ಳಿ ಗ್ರಾಮದ ಬಳಿ ವಲಯ ಅರಣ್ಯ ಪ್ರದೇಶದ ಪಕ್ಕದಲ್ಲಿರುವ ಕಂದಾಯ ಇಲಾಖೆಯ ಜಾಗದಲ್ಲಿ 20 ಎಕರೆ ಸ್ಥಳವನ್ನು ಮೊರಾರ್ಜಿ ವಸತಿ ಶಾಲೆ ನಿರ್ಮಾಣ ಮಾಡಲು ನೀಡಬೇಕು ಎಂದು ಶಾಸಕ ಸಾ.ರಾ. ಮಹೇಶ್‌ ಅಧಿಕಾರಿಗೆ ಸೂಚಿಸಿದರು.

ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹೀರಾಲಾಲ್‌, ಹೆಚ್ಚುವರಿ ಜಿಲ್ಲಾಧಿಕಾರಿ ಮಂಜುನಾಥಸ್ವಾಮಿ ಮತ್ತು ಇತರ ಅಧಿಕಾರಿಗಳೊಂದಿಗೆ ಬುಧವಾರ ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಶಾಲೆಗೆ ಹೋಗಲು ಅರಣ್ಯ ಇಲಾಖೆಯವರು ರಸ್ತೆಗೆ ಜಾಗ ನೀಡಬೇಕು ಮತ್ತು ಇದರ ಬದಲಿಗೆ ಇಲಾಖೆಗೆ ಬೇರೆ ಜಾಗ ನೀಡಲಾಗುತ್ತದೆ ಎಂದರು.

ಕರ್ನಾಟಕದ ಮುಕ್ತ ವಿಶ್ವವಿದ್ಯಾಲಯ : ವಿವಿಧ ಪದವಿ ಅಡ್ಮಿಷನ್ ಪ್ರಾರಂಭ..! .

ಮಾರಗೌಡನಹಳ್ಳಿ ಗ್ರಾಮದಲ್ಲಿ ಮೊರಾರ್ಜಿ ವಸತಿ ಶಾಲೆ ನಿರ್ಮಿಸಲು ಎಚ್‌.ಡಿ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಸರ್ಕಾರದಿಂದ 21 ಕೋಟಿ ಹಣ ಮಂಜೂರಾಗಿತ್ತು, ಆದರೆ ಜಾಗದ ಸಮಸ್ಯೆಯಿಂದ ಕಾಮಗಾರಿ ಆರಂಭವಾಗಿರಲಿಲ್ಲ ಈಗ ಸೂಕ್ತ ಸ್ಥಳ ಗುರುತು ಮಾಡಿದ್ದು, ನಾಳೆಯಿಂದಲೆ ಕಾಮಗಾರಿ ಆರಂಭಿಸಲಾಗುತ್ತದೆ ಎಂದು ಅವರು ತಿಳಿಸಿದರು.

ವಸತಿ ಶಾಲೆ ನಿರ್ಮಾಣ ಮಾಡುವ ಸ್ಥಳದಲ್ಲಿ ವಲಯ ಅರಣ್ಯ ಇಲಾಖೆಯವರು ಅಕ್ರಮವಾಗಿ ನೆಡುತೋಪು ಬೆಳೆಸಿ ಕಾಮಗಾರಿ ಆರಂಭಕ್ಕೆ ತೊಂದರೆ ನೀಡುತ್ತಿದ್ದಾರೆಂದು ಮಾರಗೌಡನಹಳ್ಳಿ ಗ್ರಾಮಸ್ಥರು ಕೆ.ಆರ್‌. ನಗರದ ವಲಯ ಅರಣ್ಯ ಇಲಾಖೆಯ ಕಚೇರಿಯ ಮುಂದೆ ಕಳೆದ ವಾರ ಧರಣಿ ನಡೆಸಿದ ಹಿನ್ನೆಲೆ ಸಾ.ರಾ. ಮಹೇಶ್‌ ಅವರು ಸ್ಥಳಕ್ಕೆ ಖುದ್ದು ಆಗಮಿಸಿ ಸಮಸ್ಯೆ ಬಗೆಹರಿಸಿದರು.

ಶಾಸಕ ರಾಮದಾಸ್‌ಗೆ ಸಿಗುತ್ತಾ BSY ಸಂಪುಟದಲ್ಲಿ ಸ್ಥಾನ ? ...

ಅಭಿನಂದನೆ- ಕಳೆದ ವಾರ ಗ್ರಾಮಸ್ಥರು ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿದಾಗ ಕೊಟ್ಟಿದ್ದ ಭರವಸೆಯಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳನ್ನು ಗ್ರಾಮಕ್ಕೆ ಕರೆಯಿಸಿ ಹತ್ತು ದಿನಗಳಲ್ಲಿ ಶಾಲೆ ನಿರ್ಮಾಣದ ಸಂಬಂಧ ಉಂಟಾಗಿದ್ದ ಸ್ಥಳದ ಸಮಸ್ಯೆಯನ್ನು ಪರಿಹರಿಸಿದ ಶಾಸಕರನ್ನು ಗ್ರಾಮಸ್ಥರು ಅಭಿನಂದಿಸಿದರು.

ಜಿಪಂ ಮಾಜಿ ಸದಸ್ಯ ಎಂ.ಟಿ. ಕುಮಾರ್‌, ತಾಲೂಕು ಜೆಡಿಎಸ್‌ ವಕ್ತಾರ ಕೆ.ಎಲ್‌. ರಮೇಶ್‌, ಉಪವಿಭಾಗಾಧಿಕಾರಿ ಬಿ.ಎನ್‌. ವೀಣಾ, ತಹಸೀಲ್ದಾರ್‌ ಎಂ. ಮಂಜುಳ ತಾಪಂ ಇಒ ಎಂ.ಎಸ್‌. ರಮೇಶ್‌, ಉಪ ಅರಣ್ಯ ಸಂರಕ್ಷಣಾಧಿಕಾರಿ ಪೂವಯ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೋಮಪ್ಪ, ವಲಯ ಅರಣ್ಯಾಧಿಕಾರಿ ಜಗದೀಶ್‌ಗೌಡ, ಉಪ ವಲಯ ಅರಣ್ಯಾಧಿಕಾರಿ ಬಿ.ಎನ್‌. ಕುಮಾರ್‌ ಸೇರಿದಂತೆ ಗ್ರಾಮದ ಮುಖಂಡರಾದ ಶಿವಪ್ರಕಾಶ್‌, ನಟರಾಜು, ಮಹದೇವು, ನೇತ್ರಾವತಿ ಇದ್ದರು.