ಮಂಡ್ಯ (ಆ.14) :  ಬಿಜೆಪಿಯ ಬಿ-ಟೀಂ ಜೆಡಿಎಸ್‌ ಪಕ್ಷ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದರು. ನಿಜವಾದ ಅರ್ಥದಲ್ಲಿ ಕಾಂಗ್ರೆಸ್‌ ಬಿಜೆಪಿಯ ಬಿ-ಟೀಂ ಎನ್ನುವುದು ಸ್ಥಾಯಿ ಸಮಿತಿಗಳಿಗೆ ನಡೆದ ಚುನಾವಣೆಯಿಂದ ಸಾಬೀತಾಗಿದೆ ಎಂದು ಜೆಡಿಎಸ್‌ ಜಿಲ್ಲಾಧ್ಯಕ್ಷ ಡಿ.ರಮೇಶ್‌ ಆರೋಪಿಸಿದ್ದಾರೆ.

ಜಿಪಂನಲ್ಲಿ ಪಕ್ಷೇತರರಾಗಿ ಗೆದ್ದಿರುವ ಎನ್‌.ಶಿವಣ್ಣ ಬಹಿರಂಗವಾಗಿ ಬಿಜೆಪಿ ಸೇರಿದ್ದನ್ನು ಹೊರತುಪಡಿಸಿದರೆ ಉಳಿದವರು ಯಾರೂ ಬಿಜೆಪಿಗರಲ್ಲ. ಜಿಪಂ ಅಧ್ಯಕ್ಷೆ ನಾಗರತ್ನಸ್ವಾಮಿ ಪತಿ ಬಿಜೆಪಿಯ ಅಧಿಕೃತ ಮುಖಂಡ. ಇವರ ಧರ್ಮಪತ್ನಿ ನಾಮಕಾವಸ್ಥೆ ಜೆಡಿಎಸ್‌. ಇವರ ಬೆಂಬಲಕ್ಕೆ ಜಿಲ್ಲೆಯ ಎಲ್ಲಾ ಕಾಂಗ್ರೆಸ್‌ ಮುಖಂಡರು ನಿಂತಿದ್ದು ಏಕೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಶ್ನಿಸಿದ್ದಾರೆ.

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಿಸ್ತಾರಾ..?...

ರಾಷ್ಟ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ನ ಬದ್ಧವೈರಿ ಬಿಜೆಪಿ ಎಂದು ಹೇಳಿಕೊಂಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯನವರು ಜೆಡಿಎಸ್‌ ಪಕ್ಷವನ್ನು ಬಿಜೆಪಿಯ ಬಿ-ಟೀಂ ಎಂದು ಟೀಕಿಸಿದ್ದರು. ಸ್ಥಾಯಿ ಸಮಿತಿಗಳ ಚುನಾವಣೆ ವೇಳೆ ಕಾಂಗ್ರೆಸ್ಸಿಗರ ನಡೆ ಅವರ ಗಮನಕ್ಕೆ ಬಂದಿಲ್ಲವೇ ಅಥವಾ ಸಿದ್ದರಾಮಯ್ಯನವರು ಅನುಕೂಲ ಸಿಂಧು ರಾಜಕಾರಣವೇ, ಜಿಲ್ಲೆಯ ಕಾಂಗ್ರೆಸ್ಸಿಗರು ಸಿದ್ದರಾಮಯ್ಯನವರ ಹುಟ್ಟುಹಬ್ಬಕ್ಕೆ ನೀಡಿದ ಉಡುಗೊರೆಯೇ ಎಂಬ ಪ್ರಶ್ನೆಗಳಿಗೆ ಉತ್ತರಿಸಬೇಕು ಎಂದು ತಿಳಿಸಿದ್ದಾರೆ.

ನಾವು ದೀಪ ಹಚ್ಚೋರು, ಬೆಂಕಿ ಹಚ್ಚೋರಲ್ಲ : ಸಿದ್ದರಾಮಯ್ಯ...

ಜಿಲ್ಲೆಯಲ್ಲಿ ಜೆಡಿಎಸ್‌ ಇನ್ನೂ ಜೀವಂತವಾಗಿದೆ. ದೇವೇಗೌಡರು ಹಾಗೂ ಕುಮಾರಸ್ವಾಮಿ ಬಗೆಗಿನ ಗೌರವವನ್ನು ಯಾರಿಂದಲೂ ಅಳಿಸಲಾಗುವುದಿಲ್ಲ. ಈವರೆಗೆ ನಮ್ಮ ಅತಿಯಾದ ಆತ್ಮವಿಶ್ವಾಸಗಳಿಂದ ನಮಗೆ ತೊಂದರೆಯಾಗಿದೆ. ಜಿಲ್ಲಾ ಪಂಚಾಯಿತಿ ವ್ಯವಸ್ಥೆಯಲ್ಲಿ ಎಂದಿಗೂ ಸ್ಥಾಯಿ ಸಮಿತಿ ಚುನಾವಣೆಗಳು ಈ ರೀತಿ ನಡೆದಿರಲಿಲ್ಲ. ಕೇವಲ ಹಂಚಿಕೆಯಲ್ಲಿ ಸಮಾಪ್ತಿಯಾಗುತ್ತಿತ್ತು. ಕೇವಲ ಒಬ್ಬರ ಅಧಿಕಾರ ಲಾಲಸೆಯಿಂದ ಇಡೀ ಜಿಲ್ಲಾ ಪಂಚಾಯಿತಿ ವ್ಯವಸ್ಥೆ ಹಾಳಾಗುತ್ತಿದೆ. ಕಾಂಗ್ರೆಸ್‌ ಮುಖಂಡರು ಇವರಿಗೆ ತಿಳಿಹೇಳಿ, ವ್ಯವಸ್ಥೆ ಸರಿಪಡಿಸಿ ಅಭಿವೃದ್ಧಿ ಕಡೆ ಗಮನಹರಿಸಲಿ ಎಂದು ಸಲಹೆ ನೀಡಿದ್ದಾರೆ.