ಬೆಂಗಳೂರು (ಆ. 14): ಇತ್ತೀಚೆಗೆ ಕರ್ನಾಟಕದ ಬಿಜೆಪಿ ನಾಯಕರು ಫೋನ್‌ನಲ್ಲಿ ಸಿಕ್ಕರೆ ಖಾಸಗಿಯಾಗಿ ಕೇಳುವ ಮೊದಲ ಪ್ರಶ್ನೆ; ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪನವರನ್ನು ಬದಲಿಸ್ತಾರಾ ಎಂಬುದೇ. ಯಡಿಯೂರಪ್ಪನವರ ಮೇಲೆ ಮೋದಿ ಮತ್ತು ಶಾ ಸಿಟ್ಟುಗೊಂಡಿದ್ದಾರೆ, ಬದಲಾವಣೆ ಅನಿವಾರ್ಯ ಎಂಬೆಲ್ಲಾ ಮಾತುಗಳು ರಾಜ್ಯ ಬಿಜೆಪಿ ನಾಯಕರಿಂದಲೇ ಕೇಳಿ ಬರುತ್ತಿದ್ದವು.

ಆದರೆ ಹೈಕಮಾಂಡ್‌ ನಾಯಕರನ್ನು ಮತ್ತು ಅವರ ಆಸುಪಾಸಿನವರನ್ನು ಖಾಸಗಿಯಾಗಿ ಕೇಳಿದಾಗ ಅಂಥ ಚರ್ಚೆಯೇ ನಡೆದಿಲ್ಲ ಎಂಬ ಉತ್ತರ ಬರುತ್ತದೆ. ದಿಲ್ಲಿ ಮೂಲಗಳು ಹೇಳುವ ಪ್ರಕಾರ, ಯಡಿಯೂರಪ್ಪನವರ ಆಡಳಿತದ ವೈಖರಿ ಬಗ್ಗೆ ದಿಲ್ಲಿ ನಾಯಕರಲ್ಲಿ ಸ್ವಲ್ಪ ಬೇಸರವಿದೆ, ಹೌದು. ಅದು ಮೊದಲಿನಿಂದಲೂ ಇದೆ. ಆದರೆ ಬದಲಾಯಿಸಲೇಬೇಕು ಎಂಬ ಅನಿವಾರ್ಯತೆಯ ಪರಿಸ್ಥಿತಿ ಉದ್ಭವವಾಗಿಲ್ಲ. ಕೋವಿಡ್‌ ಮತ್ತು ಬಿಹಾರದ ಚುನಾವಣೆಯ ಸಂದರ್ಭದಲ್ಲಿ ಇಂಥ ಸಾಹಸಕ್ಕೆ ಕೈಹಾಕಲೂ ಸಾಧ್ಯವಿಲ್ಲ ಎಂದು ದಿಲ್ಲಿ ಬಿಜೆಪಿ ಮೂಲಗಳೇ ಹೇಳುತ್ತಿವೆ.

ಬಿಹಾರದಲ್ಲಿ ಕುಸಿಯುತ್ತಿದೆ ನಿತೀಶ್ ಕುಮಾರ್ ಜನಪ್ರಿಯತೆ

ದಿಲ್ಲೀಲಿ ಬಿಎಸ್‌ವೈಗೆ ಯಾರೂ ಇಲ್ಲ

ನಿರರ್ಗಳವಾಗಿ ಹಿಂದಿ, ಇಂಗ್ಲಿಷ್‌ ಬಾರದ ಯಡಿಯೂರಪ್ಪನವರಿಗೂ ದಿಲ್ಲಿಗೂ ಸಂಬಂಧ ಅಷ್ಟಕಷ್ಟೆ. ಕಾಂಗ್ರೆಸ್‌ನ ಸಿದ್ದರಾಮಯ್ಯಗೆ ಅಹ್ಮದ್‌ ಪಟೇಲ… ಇದ್ದಂತೆ, ರಾಷ್ಟ್ರೀಯ ಪಕ್ಷಗಳ ಮುಖ್ಯಮಂತ್ರಿಗಳಿಗೆ ದಿಲ್ಲಿಯಲ್ಲಿ ಒಬ್ಬ ಮನುಷ್ಯ ಬೇಕು. ತುಂಬಾ ಹಿಂದೆ ದಿಲ್ಲಿ ಜೊತೆ ವ್ಯವಹರಿಸಲು ಯಡಿಯೂರಪ್ಪಗೆ ಅನಂತಕುಮಾರ್‌ ಇದ್ದರು. ನಂತರ ಅನಂತಕುಮಾರ್‌ ಜೊತೆ ಜಗಳ ಆದಾಗ ಅರುಣ್‌ ಜೇಟ್ಲಿ ಯಡಿಯೂರಪ್ಪನವರ ಆಪದ್ಬಾಂಧವರಾದರು. ಮಧ್ಯೆ ಸಣ್ಣಪುಟ್ಟಕೆಲಸಗಳಿಗೆ ಧನಂಜಯ ಕುಮಾರ್‌, ಲೆಹರ್‌ ಸಿಂಗ್‌ ಇದ್ದರು. ಈಗ ಯಡಿಯೂರಪ್ಪ ಜೊತೆ ಅಷ್ಟಕಷ್ಟೆಎಂಬಂತಿರುವ ಸದಾನಂದಗೌಡ, ಪ್ರಹ್ಲಾದ್‌ ಜೋಶಿ ಮತ್ತು ಬಿ.ಎಲ್‌.ಸಂತೋಷ್‌ ಈ ಮೂವರು ದಿಲ್ಲಿಯಲ್ಲಿದ್ದಾರೆ. ಬಿಎಸ್‌ವೈಗೆ ದಿಲ್ಲಿಯಲ್ಲಿ ಒಬ್ಬರು ತುರ್ತಾಗಿ ಆಪದ್ಬಾಂಧವ ಬೇಕಾಗಿದ್ದಾರೆ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

'ಇಂಡಿಯಾ ಗೇಟ್', ದೆಹಲಿಯಿಂದ ಕಂಡ ರಾಜಕಾರಣ