ನಾವು ದೀಪ ಹಚ್ಚೋರು, ಬೆಂಕಿ ಹಚ್ಚೋರಲ್ಲ : ಸಿದ್ದರಾಮಯ್ಯ
ನಾವು ಮನುಷ್ಯ ಪರವೇ ಹೊರತು ಮನುಷ್ಯ ವಿರೋಧಿಗಳಪರವಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರು (ಆ.14): ‘ನಾವು ಮನುಷ್ಯರ ಪರವೇ ಹೊರತು ಮನುಷ್ಯ ವಿರೋಧಿಗಳ ಪರವಲ್ಲ. ದೀಪ ಹಚ್ಚುವವರ ಪರವೇ ಹೊರತು ಬೆಂಕಿ ಹಚ್ಚುವವರ ಪರ ಅಲ್ಲ’ ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಜತೆಗೆ, ‘ನೀವು ದಲಿತರ ಪರವೋ ಅಥವಾ ಹಿಂದುಗಳ ಪರವೋ ಉತ್ತರಿಸಿ’ ಎಂದು ಕಟೀಲ್ ಅವರನ್ನು ಪ್ರಶ್ನಿಸಿದ್ದಾರೆ.
ಬಿಎಸ್‌ವೈ ಸರ್ಕಾರಕ್ಕೆ ಮತ್ತೆ ಸಂಕಷ್ಟ ತಂದಿಟ್ಟ ಸಿದ್ದರಾಮಯ್ಯ...
‘ಸಿದ್ದರಾಮಯ್ಯ ಅವರು ದಲಿತ ಪರವೋ? ಭಯೋತ್ಪಾದಕರ ಪರವೋ’ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಟ್ವೀಟ್‌ಗೆ ಟ್ವೀಟ್ ಸಿದ್ದರಾಮಯ್ಯ ಈ ಪ್ರತಿಕ್ರಿಯೆ ನೀಡಿದ್ದು, ‘ನಳಿನ್ ಕುಮಾರ್ ಕಟೀಲ್ ಅವರೇ, ನಾವು ಮನುಷ್ಯರ ಪರವೇ ಹೊರತು ಮನುಷ್ಯ ವಿರೋಧಿಗಳ ಪರ ಅಲ್ಲ. ನಾವು ದೀಪ ಹಚ್ಚುವವರ ಪರವೇ ಹೊರತು ಬೆಂಕಿ ಹಚ್ಚುವವರ ಪರ ಅಲ್ಲ ಎಂದಿದ್ದಾರೆ.
ನಾವು ಕಟ್ಟುವವರ ಪರವೇ ಹೊರತು ಕೆಡುವವರ ಪರ ಅಲ್ಲ. ನಮ್ಮನ್ನು ಹಾಗೂ ನಿಮ್ಮನ್ನು ಇದಕ್ಕಿಂತ ಚೆನ್ನಾಗಿ ಹೇಗೆ ಪರಿಚಯಿಸಲಿ’ ಎಂದು ಟ್ವೀಟ್ ಮಾಡಿದ್ದಾರೆ
ಅಖಂಡ ಏಕೆ ಹಿಂದುವಲ್ಲ?:
‘ನೀವು ದಲಿತರೋ? ಹಿಂದೂಗಳ ಪರವೋ? ಎಂಬುದನ್ನು ಸ್ಪಷ್ಟಪಡಿಸಿ. ನೀವೊಬ್ಬ ಹಿಂದುವಾದರೆ ಅಖಂಡ ಶ್ರೀನಿವಾಸಮೂರ್ತಿ ಏಕೆ ಹಿಂದುವಲ್ಲ? ಅವರು ಏಕೆ ಹಿಂದುವಾಗದೆ ಕೇವಲ ದಲಿತರಾಗಿಬಿಟ್ಟರು. ಹಿಂದುತ್ವದ ಸರಿಯಾದ ವ್ಯಾಖ್ಯಾನವೇನು ಎಂಬುದನ್ನು ನಿಮ್ಮ ಹಿರಿಯರಿಂದ ಕೇಳಿ ತಿಳಿದು ಸ್ಪಷ್ಟಪಡಿಸುವಿರಾ?’ ಎಂದು ಟ್ವೀಟ್ ಮೂಲಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.