ಮಂಡ್ಯ (ಜ.31):  ಜೆಡಿಎಸ್‌ ಪಕ್ಷವನ್ನು ಎಲ್ಲೋ ಒಂದು ಕಡೆ ಖಳನಾಯಕನನ್ನಾಗಿ ಮಾಡುವುದಕ್ಕೆ ಕಾಂಗ್ರೆಸ್‌ ಸಂಚು ರೂಪಿಸಿದೆ ಎಂದು ಮೇಲುಕೋಟೆ ಕ್ಷೇತ್ರದ ಶಾಸಕ ಸಿ.ಎಸ್‌.ಪುಟ್ಟರಾಜು ಆರೋಪಿಸಿದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್‌ನವರು ಸಮ್ಮಿಶ್ರ ಸರ್ಕಾರವನ್ನು ಕೆಡವಲು ಏನೆಲ್ಲಾ ಸಂಚು ನಡೆಸಿದರು ಎನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಆನಂತರವೂ ಜೆಡಿಎಸ್‌ ಪಕ್ಷಕ್ಕೆ ಖಳನಾಯಕನ ಪಟ್ಟಕಟ್ಟುವ ಪ್ರಯತ್ನ ನಡೆಸುತ್ತಿದ್ದಾರೆ. ಅದಕ್ಕಾಗಿ ಬಿಜೆಪಿ ಜೊತೆ ಹೊಂದಾಣಿಕೆ ರಾಜಕಾರಣ ನಮಗೆ ಅನಿವಾರ್ಯವಾಗಿದೆ ಎಂದರು.

ಗೋಹತ್ಯೆ ನಿಷೇಧ, ಕೃಷಿ ಕಾನೂನುಗಳ ವಿಚಾರವಾಗಿ ಬಿಜೆಪಿ ಜೊತೆ ರಾಜಿ ಪ್ರಶ್ನೆಯೇ ಇಲ್ಲ ಎಂದು ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರು ಹೇಳಿದ್ದಾರೆ. ಅದನ್ನು ಹೊರತುಪಡಿಸಿ ಸಭಾಪತಿ ಹುದ್ದೆಯನ್ನೇ ನಮಗೆ ನೀಡುತ್ತಿರುವಾಗ ವಿಧಿ ಇಲ್ಲದೆ ಅವರೊಂದಿಗೆ ಕೈಜೋಡಿಸಿದ್ದೇವೆ ಎಂದರು.

ಜೆಡಿಎಸ್-ಬಿಜೆಪಿ ಮೈತ್ರಿ: ಪಕ್ಷದಲ್ಲಿ ಶುರುವಾಯ್ತು ಅಸಮಾಧಾನ..!

ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ಜೊತೆ ಹೊಂದಾಣಿಕೆ ಮುಂದುವರೆಯಲಿದೆಯೇ ಎಂದಾಗ, ಮೊದಲಿನಿಂದಲೂ ಸ್ಥಳೀಯ ಸಂಸ್ಥೆಗಳಲ್ಲಿ ಯಾರಾರ‍ಯರಿಗೆ ಅನುಕೂಲವಾಗಲಿದೆಯೇ ಅದನ್ನು ನೋಡಿಕೊಂಡು ಮುಂದುವರೆಯಲಿದ್ದೇವೆ ಎಂದರು.

ಬೇಬಿಬೆಟ್ಟದ ಅಕ್ರಮ ಗಣಿಗಾರಿಕೆ ವಿಷಯದಲ್ಲಿ ಮುಲಾಜಿಲ್ಲದೆ ಕ್ರಮ ಜರುಗಿಸುವಂತೆ ಈಗಾಗಲೇ ಜಿಲ್ಲಾಡಳಿತಕ್ಕೆ ಸೂಚಿಸಿದ್ದೇನೆ. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗಲೇ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಬೇಬಿ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆಗೆ ತಡೆಯೊಡ್ಡಿದ್ದೆ. ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ನಂತರ ಬಂದ ಸರ್ಕಾರಗಳು ಅಕ್ರಮ ಗಣಿಗಾರಿಕೆ ನಡೆಯುವುದಕ್ಕೆ ಅವಕಾಶ ಮಾಡಿಕೊಟ್ಟವು ಎಂದು ದೂಷಿಸಿದರು.

ನಾನು ಸಚಿವನಾಗಿದ್ದ ವೇಳೆ ನೀರಾವರಿ ಇಲಾಖೆಗೆ 20 ಲಕ್ಷ ರು. ಬಿಡುಗಡೆ ಮಾಡಿಸಿ ಬೇಬಿ ಬೆಟ್ಟದಲ್ಲಿ ನಡೆಯುವ ಗಣಿಗಾರಿಕೆಯಿಂದ ಕೃಷ್ಣರಾಜಸಾಗರ ಜಲಾಶಯಕ್ಕೆ ಅಪಾಯವಿದೆಯೇ ಎಂಬ ಬಗ್ಗೆ ವರದಿಯನ್ನು ನೀಡುವಂತೆ ತಿಳಿಸಿದ್ದೆ. ಇದುವರೆಗೂ ನೀರಾವರಿ ಇಲಾಖೆ ಅಧಿಕಾರಿಗಳು ವರದಿ ಕೊಟ್ಟಿಲ್ಲ. ಅಣೆಕಟ್ಟೆಗೆ ಏನಾದರೂ ಅಪಾಯವಾದರೆ ಅದಕ್ಕೆ ಜಿಲ್ಲಾಡಳಿತ ಮತ್ತು ನೀರಾವರಿ ಇಲಾಖೆಯೇ ಹೊಣೆಯಾಗಲಿದೆ ಎಂದರು.

ಮೇಲುಕೋಟೆ ವಿಧಾನಸಭಾ ಕ್ಷೇತ್ರದ ದುದ್ದ ಹೋಬಳಿಯ ಶಿವಳ್ಳಿ ಗ್ರಾಮದಿಂದ ಗೊರವಾಲೆ, ಸಂಪಹಳ್ಳಿ, ಬೀರಗೌಡನಹಳ್ಳಿ ಗ್ರಾಮದ ಮೂಲಕ ಬಿ. ಹೊಸಹಳ್ಳಿಗೆ ಸೇರುವ ರಸ್ತೆ ಬಹಳ ಹದಗೆಟ್ಟಿತ್ತು. ಕಳೆದ ಬಾರಿ ನಮ್ಮ ಸರ್ಕಾರ ಇದ್ದಾಗ ಲೋಕೋಪಯೋಗಿ ಇಲಾಖೆಯಿಂದ ಟೆಂಡರ್‌ ಕರೆಯಲಾಗಿತ್ತು. ಬದಲಾದ ರಾಜಕೀಯ ವ್ಯವಸ್ಥೆಯಲ್ಲಿ ಬಂದಂತಹ ಸರ್ಕಾರ ಅನುದಾನವನ್ನು ತಡೆಹಿಡಿದಿತ್ತು. ಈಗ ವಿಶೇಷವಾಗಿ ಆರ್‌ಡಿಪಿಆರ್‌ ಇಲಾಖೆಯಿಂದ 5 ಕೋಟಿ ರು. ಬಿಡುಗಡೆ ಮಾಡಿಸಿ ಟೆಂಡರ್‌ ಕರೆದು ಎರಡು ತಿಂಗಳಲ್ಲಿ ಉತ್ತಮ ರೀತಿಯಲ್ಲಿ ಕೆಲಸ ಆಗಬೇಕು ಎಂದು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದ್ದೇನೆ ಎಂದರು.

ಈ ಐದು ಗ್ರಾಮಗಳಲ್ಲಿ ಹಾದು ಹೋಗುವಂತಹ ರಸ್ತೆಯ ಎರಡೂ ಕಡೆಯೂ ಚರಂಡಿ ಆಗಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಧಿಕಾರಿಗಳು ನನ್ನ ಕ್ಷೇತ್ರಕ್ಕೆ ಸಂಬಂಧಿಸಿದ ಅಭಿವೃದ್ಧಿ ಕಾಮಗಾರಿಗಳ ವಿಷಯದಲ್ಲಿ ಬಹಳ ಜವಾಬ್ದಾರಿಯುತವಾಗಿ ಕೆಲಸ ಮಾಡುತ್ತಿದ್ದಾರೆ. ಬೇರೆ ಕ್ಷೇತ್ರದ ಬಗ್ಗೆ ನನಗೆ ತಿಳಿಯದು, ಒಂದು ವೇಳೆ ಬೇರೆ ಕ್ಷೇತ್ರಗಳಲ್ಲಿ ಅವರಿಂದ ಲೋಪವಾಗಿದ್ದಲ್ಲಿ ಮಾತುಕತೆ ನಡೆಸಿ ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ದುದ್ದ ಹೇಮಾವತಿ ಇಲಾಖೆ ಬಳಿ ನೂತನವಾಗಿ ನಿರ್ಮಿಸಿರುವ ಪ್ರವಾಸಿಮಂದಿರ ಉದ್ಘಾಟನೆ, ದುದ್ದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 1 ಕೋಟಿ ರು. ವೆಚ್ಚದಲ್ಲಿ 6 ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.