ಆಯ್ಕೆಗೆ ಸಹಕಾರ : ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ ಮುಖಂಡರು
ಆಯ್ಕೆಗೆ ಸಹಕರಿಸಿದ್ದ ಹಿನ್ನೆಲೆಯಲ್ಲಿ ಮುಖಂಡರೋರ್ವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಘಟನೆ ನಡೆದಿದೆ.
ಕನಕಪುರ (ನ.05): ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಸಂಘದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಗೊಳ್ಳಲು ಸಹಕಾರ ಹಾಗೂ ಬೆಂಬಲ ನೀಡಿದ ಹಿನ್ನೆಲೆಯಲ್ಲಿ ಟಿ.ಎನ್ .ಕೈಲಾಸಮೂರ್ತಿ ಜೆಡಿಎಸ್ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾದರು.
ನನ್ನ ಅವಿರೋಧ ಆಯ್ಕೆಗೆ ಜೆಡಿಎಸ್ ಮುಖಂಡರು ತೊಡಕಾದ ಕಾರಣ ಬೇಸತ್ತು ಪಕ್ಷವನ್ನು ತೊರೆಯಬೇಕಾಯಿತು ಎಂದು ಕೈಲಾಸಮೂರ್ತಿ ಪ್ರತಿಕ್ರಿಯೆ ನೀಡಿದರು. ಜಿಪಂ ಮಾಜಿ ಅಧ್ಯಕ್ಷ ಎಚ್.ಬಸಪ್ಪ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಆರ್. ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಮುನಿಹುಚ್ಚೇಗೌಡ, ಮಾಜಿ ಅಧ್ಯಕ್ಷರಾದ ವಿಶ್ವನಾಥ್, ಯದುನಂದನಗೌಡ (ಬಾಬು), ಕಾಂಗ್ರೆಸ್ ಹಿರಿಯ ಮುಖಂಡರಾದ ಎಸ್.ಎಸ್.ಶಂಕರ್ , ತಮ್ಮಣ್ಣಗೌಡ ಹಾಜರಿದ್ದರು.
ಕನಕಪುರ ತಾಲೂಕಿನ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಆಡಳಿತ ಮಂಡಳಿಯ 12 ಸದಸ್ಯರ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಮಂಗಳವಾರ ಏಳು ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದು, ಉಳಿದ 5 ಸ್ಥಾನಗಳಿಗೆ 17 ಮಂದಿ ಚುನಾವಣಾ ಕಣದಲ್ಲಿ ಉಳಿದಿದ್ದಾರೆ.
ಬೈ ಎಲೆಕ್ಷನ್: ಹಳ್ಳಿ ಮಂದಿ ಮುಂದೆ ಹಿಂದೆ ಬಿದ್ದ ಸಿಟಿ ಜನ...! ..
ಅವಿರೋಧವಾಗಿ ಆಯ್ಕೆಯಾದವರು: ಶಿವನಹಳ್ಳಿ ಪತ್ತಿನ ಸಹಕಾರ ಸಂಘದಿಂದ ತಮ್ಮಣ್ಣಗೌಡ, ಕೊತ್ತನೂರು ಪತ್ತಿನ ಸಹಕಾರ ಸಂಘದಿಂದ ಕಾಳೇಗೌಡ, ಕೋಡಿಹಳ್ಳಿ ಪತ್ತಿನ ಸಹಕಾರ ಸಂಘದಿಂದ ಕೆ.ಎನ್.ರಾಜೇಂದ್ರ, ಮರಳವಾಡಿ ಪತ್ತಿನ ಸಹಕಾರ ಸಂಘದಿಂದ ಮೊಹಮ್ಮದ್ ಎಕ್ಬಾಲ… ಅವಿರೋಧವಾಗಿಯಾಗಿದ್ದಾರೆ.
ಉಳಿದ 8 ಸ್ಥಾನಗಳಲ್ಲಿ ಮೂರು ಸ್ಥಾನಗಳಿಗೂ ಒಂದೊಂದೇ ನಾಮಪತ್ರಗಳು ಸಲ್ಲಿಕೆಯಾಗಿದ್ದರಿಂದ ಪರಿಶಿಷ್ಠ ಜಾತಿ ಸ್ಥಾನದ ಟಿ.ಎಸ್. ಕೈಲಾಸಮೂರ್ತಿ, ಪರಿಶಿಷ್ಠ ವರ್ಗದ ನಾಗಯ್ಯ, ಹಿಂದುಳಿದ ವರ್ಗ (ಬಿ) ಸ್ಥಾನಕ್ಕೆ ಸ್ಪರ್ಧಿಸಿದ್ದ ಎಂ.ಎನ್.ಚಂದ್ರಶೇಖರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ 5 ಸ್ಥಾನಗಳಿಗೆ ಒಟ್ಟು 17 ಮಂದಿ ಚುನಾವಣೆ ಎದುರಿಸಲಿದ್ದಾರೆ.
ನ. 8ರಂದು ಬೆಳಿಗ್ಗೆ 9ರಿಂದ ಸಂಜೆ 4ರ ವರೆಗೆ ಮತದಾನ ನಡೆಯಲಿದೆ. ನಂತರ ಅದೇ ದಿನ ಮತದಾನದ ನಂತರ ಮತ ಎಣಿಕೆ ಕಾರ್ಯ ನಡೆಯಲಿರುವುದಾಗಿ ಚುನಾವಣಾಧಿಕಾರಿ ತಹಸೀಲ್ದಾರ್ ವರ್ಷಾ ಒಡೆಯರ್ ತಿಳಿಸಿದ್ದಾರೆ. ಸಹಾಯಕ ಚುನಾವಣಾಧಿಕಾರಿಯಾಗಿ ಶಿಕ್ಷಕ ಗಂಗಾಧರಯ್ಯ ಕರ್ತವ್ಯ ನಿರ್ವಹಿಸಲಿದ್ದಾರೆ.