ಬೆಂಗಳೂರು, (ನ.03): ಭಾರಿ ಕುತೂಹಲ ಕೆರಳಿಸಿದ್ದ ರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಇಂದು (ಮಂಗಳವಾರ) ಶಾಂತಿಯುತ ಮತದಾನ ನಡೆಯಿತು. ಶಿರಾದಲ್ಲಿ ಮತದಾರರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರೆ, ಆರ್ ಆರ್ ನಗರದಲ್ಲಿ ಜನರು ಅತಿ ಕಡಿಮೆ ಉತ್ಸಾಹ ತೋರಿಸಿದ್ದಾರೆ.

ಮತದಾನದ ಅಂತ್ಯಗೊಂಡಾಗ ಶಿರಾದಲ್ಲಿ ಶೇ. 82.13 ಮತ್ತು ರಾಜರಾಜೇಶ್ವರಿ ನಗರದಲ್ಲಿ ಶೇ.45.24ರಷ್ಟು ಮತದಾನ ದಾಖಲಾಗಿದೆ ಎಂದು ಚುನಾವಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಎರಡೂ ಕ್ಷೇತ್ರಗಳಿಂದ ಒಟ್ಟು 52 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದರು. ಅಂತಿಮವಾಗಿ ನಾಲ್ವರು ಮಹಿಳೆಯರು ಸೇರಿ 31 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಇವರೆಲ್ಲ ಭವಿಷ್ಯ ಮತಗಟ್ಟೆಯಲ್ಲಿ ಭದ್ರಗೊಂಡಿದ್ದು, ನವೆಂಬರ್ 10ರಂದು ಹೊರಬೀಳಲಿದೆ..

ಭಾರತದ ಚುನಾವಣಾ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಈ ದೃಶ್ಯ ಸಾಕ್ಷಿಯಾಯ್ತು..!

ಆರ್‌ಆರ್‌ ನಗರದಲ್ಲಿ ಕಡಿಮೆ ವೋಟಿಂಗ್
2013ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಆರ್​ಆರ್​ ನಗರದಲ್ಲಿ ಶೇ. 56.80 ಮತದಾನವಾಗಿತ್ತು. 2015ರ‌ ಬಿಬಿಎಂಪಿ ಚುನಾವಣೆಯಲ್ಲಿ ಆರ್.ಆರ್. ನಗರದಲ್ಲಿ ಶೇ. 50.17 ಮತದಾನವಾಗಿತ್ತು. 2018ರ‌ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲೂ ಆರ್.ಆರ್. ನಗರದಲ್ಲಿ 54.34% ಮತದಾನವಾಗಿತ್ತು. ನಂತರ 2019ರ‌ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಇದೇ ಕ್ಷೇತ್ರದಲ್ಲಿ 53.65% ಮತದಾನವಾಗಿತ್ತು. ಆದರೆ ಈ ಬಾರೀಯ ಉಪ ಚುನಾವಣೆಯಲ್ಲಿ ಮಾತ್ರ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಮುಂದೆ ಬಂದಿಲ್ಲ ಎಂಬುದಂತೂ ಸ್ಪಷ್ಟ.. ಇದಕ್ಕೆ ಕೊರೋನಾ ಭೀತಿಯೂ ಒಂದು  ಕಾರಣ ಎಂದು ಹೇಳಬಹುದು.

ಸೋಂಕತರಿಂದ ಮತದಾನ
ಇದೇ ಮೊದಲ ಬಾರಿಗೆ ಸಂಜೆ 5ರ ನಂತರ ಕೋವಿಡ್ ಸೋಂಕಿತರಿಗೆ ಕೂಡ ಅವಕಾಶ ಕಲ್ಪಿಸಲಾಗಿತ್ತು. ಶಿರಾ ಕ್ಷೇತ್ರದಲ್ಲಿ ಒಟ್ಟು 105 ಸೋಂಕಿತರು ಮತ ಚಲಾಯಿಸಿದ್ದಾರೆ. ಆರ್ ಆರ್.ನಗರದಲ್ಲಿ 6 ಸೋಂಕಿತರು ಮತ ಹಾಕಿದ್ದಾರೆ. ಈ ಸೋಂಕಿತರಿಗೆ ಮತಚಲಾಯಿಸಲು ಅವಕಾಶ ಕಲ್ಪಿಸಲು ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಮತಗಟ್ಟೆ ಸಿಬ್ಬಂದಿ ಮತ್ತು ಮತ ಚಲಾಯಿಸುವವರು ಪಿಪಿಇ ಕಿಟ್ ಧರಿಸಿ ಸುರಕ್ಷತಾ ಕ್ರಮಗಳನ್ನು ಪಾಲಿಸಿದ್ದರು.

ಇನ್ನು ಶಾಂತಿಯುತ ಮತದಾನಕ್ಕೆ ಸಹಕರಿಸಿದ ಪ್ರತಿಯೊಬ್ಬರಿಗೂ ಹಾಗೂ ಕೋವಿಡ್ ಸೋಂಕಿನ ಬಾಧೆಯ ನಡುವೆಯೂ ತಮ್ಮ ಹಕ್ಕು ಚಲಾಯಿಸಿದ ಸೋಂಕಿತರಿಗೆ ಚುನಾವಣಾಧಿಕಾರಿ ಧನ್ಯವಾದ ಸಮರ್ಪಿಸಿದ್ದಾರೆ.