ಹಾಸನ ಜಿಲ್ಲೆಯಲ್ಲಿ ಕೊರೋನಾ ಲಸಿಕೆ ಕೊರತೆ ಹಿನ್ನೆಲೆ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ನಾಳೆ (ಮೇ.3) ಬೆಳಗ್ಗೆ ಸಿಎಂ ಮನೆ ಮುಂದೆ ಧರಣಿ ಮಾಡುವುದಾಗಿ ಜೆಡಿಎಸ್ ಮುಖಂಡ ಎಚ್ ಡಿ ರೇವಣ್ಣ ಹೇಳಿದ್ದಾರೆ.
ಹಾಸನ (ಮೇ.02): ಕೊರೋನಾ ಮಹಾಮಾರಿ ವ್ಯಾಪಕವಾಗಿದ್ದು, ಹಾಸನ ಜಿಲ್ಲೆಯಲ್ಲಿ ಕೊರೊನಾ ಲಸಿಕೆ ಕೊರತೆ ಹಿನ್ನೆಲೆ ಸರ್ಕಾರದ ನಿರ್ಲಕ್ಷ್ಯ ಖಂಡಿಸಿ ನಾಳೆ (ಮೇ.3) ಬೆಳಗ್ಗೆ ಸಿಎಂ ಮನೆ ಮುಂದೆ ಧರಣಿ ಮಾಡುತ್ತೇನೆ. ಬೆಳಗ್ಗೆ 9 ಗಂಟೆಯಿಂದ ಧರಣಿ ಕೂರುವೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಹೇಳಿದ್ದಾರೆ.
ಹಾಸನದಲ್ಲಿಂದು ಮಾತನಾಡಿದ ಜೆಡಿಎಸ್ ನಾಯಕ ಹೆಚ್. ಡಿ ರೇವಣ್ಣ ಕೊರೋನಾ ಹಿನ್ನೆಲೆಯಲ್ಲಿ ನಾನೊಬ್ಬನೇ ಧರಣಿ ಮಾಡುವೆ. ನನಗೆ ಕೊರೋನಾ ಬಂದರೂ ಪರವಾಗಿಲ್ಲ, ನಾನು ಈ ವಿಚಾರದಲ್ಲಿ ತಂದೆಯ ಮಾತನ್ನೂ ಕೇಳಲ್ಲ. ನನಗೆ ಜಿಲ್ಲೆಯ ಜನರ ಹಿತಮುಖ್ಯ. ಜಿಲ್ಲೆಯಲ್ಲಿ ಜನರು ತೊಂದರೆ ಪಡುತ್ತಿದ್ದಾರೆ. ಹೇಳೋರಿಲ್ಲ, ಕೇಳೋರು ಇಲ್ಲ, ಜಿಲ್ಲೆಗೆ ರೆಮಿಡಿಸಿವರ್ ಪೂರೈಸಬೇಕು ಎಂದರು.
'ತಜ್ಞರು ಮೊದಲೇ ಎಚ್ಚರಿಕೆ ನೀಡಿದ್ರು ಸರ್ಕಾರ ನೆಗ್ಲೆಕ್ಟ್ ಮಾಡಿತ್ತು' .
ಸರ್ಕಾರ ಗಂಭೀರವಾಗಿ ತೆಗೆದು ಕೊಂಡಿಲ್ಲ. ನಾನು, ದೇವೇಗೌಡರು ಪತ್ರ ಬರೆದಿದ್ದರೂ ಸ್ಪಂದನೆ ಇಲ್ಲ. ಆರೋಗ್ಯ ಸಚಿವರು ಕರೆ ಮಾಡಿದರೆ ಸ್ಚೀಕರಿಸಿಲ್ಲ. ಜಿಲ್ಲಾಧಿಕಾರಿ ಗೆ ಅನುಭವದ ಕೊರತೆ ಇದೆ. ಜಿಲ್ಲೆಯ ಹಿರಿಯ ಶಾಸಕರ ಸಭೆ ಕರೆದಿಲ್ಲ, ಕೂಡಲೇ ಸಭೆ ಕರೆಯಬೇಕು ಎಂದರು.
ಇನ್ನು ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಕೃಷ್ಣಮೂರ್ತಿ ಉತ್ತಮವಾಗಿ ಕೆಲಸ ಮಾಡುತ್ತಿದ್ದರು. ಅವರನ್ನು ಏಕಾಏಕಿ ವರ್ಗ ಮಾಡಲಾಗಿದೆ ಎಂದು ಎಚ್.ಡಿ.ರೇವಣ್ಣ ಕಿಡಿ ಕಾರಿದ್ದು, ಕೂಡಲೇ ಅವರ ವರ್ಗಾವಣೆ ರದ್ದುಪಡಿಸಬೇಕು ಎಂದು ಆಗ್ರಹಿಸಿದರು. ಇಂದು ಸಂಜೆಯೊಳಗೆ ಜಿಲ್ಲೆಗೆ ರೆಮಿಡಿ ಸಿವರ್ ಇಂಜೆಕ್ಷನ್ ಪೂರೈಸಬೇಕು. ಜಿಲ್ಲೆಗೆ ಹಣ ನೀಡಿದ್ದರೆ ಎಷ್ಟು ಎಂದು ಬಹಿರಂಗ ಪಡಿಸಲಿ ಎಂದು ಒತ್ತಾಯಿಸಿದರು.
ಕೊರೊನಾ ಪಾಸಿಟಿವ್ ಮತ್ತು ಸಾವಿನ ವಿಷಯ ಮುಚ್ಚಿಡಲಾಗುತ್ತಿದೆ ಎಂದು ದೂರುಗಳಿದೆ. ಬಡ ವ್ಯಾಪಾರಿಗಳು, ಬಡವರ ಜೀವನದ ಜೊತೆ ಚೆಲ್ಲಾಟ ಆಡುತ್ತಿದ್ದಾರೆ. ಖಾಸಗಿ ಆಸ್ಪತ್ರೆಗಳಲ್ಲಿ ಕೇವಲ ಶ್ರೀಮಂತರಿಗೆ ಚಿಕಿತ್ಸೆ ಸಿಗುತ್ತಿದೆ. ರಾಜ್ಯದಲ್ಲಿ ಪತ್ರಕರ್ತರ ಹಿತ ಕಾಯುವಂತೆ ಒತ್ತಾಯ ಮಾಡುತ್ತೇವೆ. ವಿಮೆ ಮಾಡಿಸಲು ಆಗ್ರಹಿಸಿದ್ದು, ಸಿಎಂ, ಸಂಬಂಧಪಟ್ಟ ಮಂತ್ರಿಗಳಿಗೆ ಕೈ ಮುಗಿಯುತ್ತೇನೆ. ಕೂಡಲೇ ರೆಮಿಡಿಸಿವರ್ ಇಂಜೆಕ್ಷನ್ ಕೊಡಿ ಎಂದು ಮನವಿ ಮಾಡಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
