Asianet Suvarna News Asianet Suvarna News

'2023ಕ್ಕೆ ರಾಜ್ಯದಲ್ಲಿ ಜೆಡಿಎಸ್‌ಗೆ ಅಧಿಕಾರ ' : ಒಳಿತಿಗೆ ಇದು ಅನಿವಾರ್ಯ'

ರಾಜ್ಯದಲ್ಲಿ ಅಭಿವೃದ್ಧಿ ದೃಷ್ಟಿಯಿಂದ ಜೆಡಿಎಸ್ ಅಧಿಕಾರಕ್ಕೆ ಬರುವುದು ಅನಿವಾರ್ಯ ಈ ನಿಟ್ಟಿನಲ್ಲಿ ಅಧಿಕಾರ ನೀಡಲಿ ಎಂದು ಜೆಡಿಎಸ್ ಮುಖಂಡ ಹೇಳಿದ್ದಾರೆ

JDS Leader HD Kumaraswamy Visits Shira snr
Author
Bengaluru, First Published Oct 6, 2020, 10:04 AM IST

 ಶಿರಾ (ಅ.06):  ಈ ರಾಜ್ಯದ ಬಡವರ, ರೈತರ ಹಿತ ಕಾಯಲು ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಬೇಕಾದ ಅನಿವಾರ್ಯತೆ ಇದೆ. 2023ರ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷ ಅಧಿಕಾರಕ್ಕೆ ಬರಲು ಈಗಿನ ಉಪಚುನಾವಣೆಯೇ ಮುನ್ನುಡಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಹೇಳಿದರು.

ಅವರು ತಾಲೂಕಿನ ದೊಡ್ಡ ಆಲದಮರ ಗ್ರಾಮದಲ್ಲಿ ಏರ್ಪಡಿಸಿದ್ದ ಹೋಬಳಿಮಟ್ಟದ ಜೆಡಿಎಸ್‌ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಈ ರಾಜ್ಯದ ರೈತರ, ಬಡವರ ಒಳಿತಿಗಾಗಿ ರಾಜ್ಯದಲ್ಲಿ ಜೆಡಿಎಸ್‌ ಪಕ್ಷ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಆದ್ದರಿಂದ ಶಿರಾ ಉಪಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವನ್ನು ಗೆಲ್ಲಿಸುವ ಮೂಲಕ ರಾಜ್ಯದ ಜನರ ಹಿತ ಕಾಯಲು ಸಹಕಾರ ಮಾಡಿ ನನ್ನದೇ ಆದ ಹಲವಾರು ಕನಸು ಇಟ್ಟುಕೊಂಡಿದ್ದೇನೆ. ಅದಕ್ಕಾಗಿ 2023ಕ್ಕೆ ಜೆಡಿಎಸ್‌ ಸರಕಾರ ಅಧಿಕಾರಕ್ಕೆ ಬರಬೇಕು. ಅದಕ್ಕೆ ಶಿರಾದಿಂದಲೇ ಮುನ್ನುಡಿ ಬರೆಯಬೇಕು ಎಂದರು.

ಶಿರಾ ಜೆಡಿಎಸ್ ಟಿಕೆಟ್ ಇವರಿಗೆ ಖಚಿತ : ಎಚ್‌ಡಿಕೆ ಸುಳಿವು ..

ಪ್ರತಾಪ್‌ ಸಿಂಹ ಕೊಡುಗೆ ಏನು? ಕಳೆದ ವಾರ ನಾನು ಗ್ರಾಮೀಣ ಶೈಲಿಯಲ್ಲಿ ಶಿರಾದ ಜನ ಹಾಲನ್ನಾದರೂ ಕೊಡಿ, ವಿಷವನ್ನಾದರೂ ಕೊಡಿ ಎಂದು ಹೇಳಿದ್ದೆ. ನಾನೇನು ಕಣ್ಣೀರು ಹಾಕಿಲ್ಲ. ಆದರೆ, ಮೈಸೂರಿನ ಪೇಪರ್‌ ಟೈಗರ್‌ ಮಹಾನುಭವ ಕುಮಾರಸ್ವಾಮಿಗೆ ಕಷಾಯ ಕೊಡಿ ಎಂದು ಹೇಳಿದ್ದಾರೆ. ರಾಜ್ಯಕ್ಕೆ ಅವರ ಕೊಡುಗೆ ಏನೆಂಬುದು ಗೊತ್ತಿದೆ. ಕೊರೋನಾ ಸಂದರ್ಭದಲ್ಲಿ ರಾಜ್ಯ ಸರಕಾರ ಕಷಾಯ ಕೊಡುವುದಕ್ಕೂ ಸಾಧ್ಯವಾಗದ ಪರಿಸ್ಥಿತಿಗೆ ತಲುಪಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ವಿಧಾನಸಭೆ ಚುನಾವಣಾ ಸಮಯದಲ್ಲಿ ನರೇಂದ್ರಮೋದಿಯವರು ಬಂದು ಸಿದ್ದರಾಮಯ್ಯ ಅವರದು 10 ಪರ್ಸೆಂಟ್‌ ಸರಕಾರ ಎಂದು ಟೀಕಿಸಿದ್ದರು. ನಾನು ಸಹ 14 ತಿಂಗಳು ಆಡಳಿತ ನಡೆಸಿದೆ. ಆ ಸಂದರ್ಭದಲ್ಲಿ ಈ ದೇಶದಲ್ಲಿ ಯಾರಾದರೂ ನನ್ನನ್ನು 10 ಪರ್ಸೆಂಟ್‌ ಸರಕಾರ ಎಂದಿದ್ದಾರಾ ಎಂದು ಪ್ರಶ್ನಿಸಿದರು?

ಪರ್ಸೆಂಟೇಜ್‌ ಸರಕಾರ ಆಗಲು ನಾವು ಬಿಡಲಿಲ್ಲ. ರೈತರ ಸಾಲ ಮನ್ನಾಕ್ಕಾಗಿ 25000 ಕೋಟಿಯನ್ನು ಖರ್ಚು ಮಾಡಿದೆ. ಅದೇ ಹಣವನ್ನು ರಸ್ತೆ, ಕಟ್ಟಡಕ್ಕೆ ಕೊಟ್ಟಿದ್ದರೆ ಅದರಲ್ಲಿ 10 ಪರ್ಸೆಂಟ್‌ ಎಂದರೆ 2500 ಕೋಟಿ ರು. ಆಗುತ್ತದೆ. ಅದೇ ಹಣವನ್ನು ತಂದು ನಾನು ಚುನಾವಣೆ ಮಾಡಬಹುದಿತ್ತಲ್ಲ. ನಾನು ಪರ್ಸೆಂಟೇಜ್‌ ಸರಕಾರ ಮಾಡಲು ಬಿಡಲಿಲ್ಲ. ಹಣವನ್ನು ತಂದು ಚುನಾವಣೆಯಲ್ಲಿ ಒಬ್ಬೊಬ್ಬರಿಗೆ ಹಣ ಕೊಟ್ಟು ಮತ ಹಾಕಿಸಿಕೊಳ್ಳಬಹುದಿತ್ತು ಎಂದರು.

ಶಿರಾ ಉಪಚುನಾವಣೆಗೆ ಆರ್‌ಎಸ್‌ಎಸ್‌ ಕಾರ್ಯಕರ್ತರು ಬರುತ್ತಾರೆ. ಅವರು ಹಣಕ್ಕೆ ಯೋಚಿಸುವುದಿಲ್ಲ. ನಿಮ್ಮ ಹಣವನ್ನೇ ಲೂಟಿ ಮಾಡಿ ತಂದು ಹಂಚುತ್ತಾರೆ. ಸುಮಾರು 30ರಿಂದ 50 ಕೋಟಿ ಖರ್ಚು ಮಾಡಲು ತಯಾರಿದ್ದಾರೆ. ನಿಮ್ಮ ದುಡ್ಡು ಲೂಟಿ ಹೊಡೆದು ನಿಮಗೆ ಕೊಡಲು ಬರುತ್ತಿದ್ದಾರೆ. ಅದಕ್ಕೆ ನೀವು ಮರುಳಾಗಬೇಡಿ ಎಂದರು.

ಜಿಪಂ ಮಾಜಿ ಸದಸ್ಯ ಸಿ.ಆ.ಉಮೇಶ್‌ ಮಾತನಾಡಿ, ಬಿಜೆಪಿಯವರು ವಾಮ ಮಾರ್ಗದಲ್ಲಿ ಬೂತ್‌ ಮಟ್ಟದಲ್ಲಿ ಕಾರ್ಯಕ್ರಮವನ್ನು ಹಾಕಿಕೊಂಡಿದ್ದಾರೆ. ಅವರು ಏನೇ ಮಾಡಿದರೂ ನಾವು ಗೆದ್ದೆಗೆಲ್ಲುತ್ತೇವೆ ಎಂಬ ವಿಶ್ವಾಸ ಇದೆ. ನಮ್ಮಲ್ಲಿ ಹಣ ಇಲ್ಲ, ಪಕ್ಷದಲ್ಲಿನ ಕಾರ್ಯಕರ್ತರಿಗೆ ನಿಯತ್ತು, ತಾಕತ್ತು, ಪಕ್ಷ ನಿಷ್ಠೆ ಇದೆ. ಇಂದು ಶಿರಾ ಕ್ಷೇತ್ರದಲ್ಲಿನ ಚುನಾವಣೆ ಧರ್ಮ ಮತ್ತು ಅಧರ್ಮದ ನಡುವಿನ ಯುದ್ಧ, ಸ್ವಾಭಿಮಾನ ಮತ್ತು ಹಣ ಬಲದ ಚುನಾವಣೆಯಾಗಿದೆ. ಬಿಜೆಪಿಯವರು ಹಣದ ಆಮಿಷ ಒಡ್ಡುತ್ತಾರೆ. ಅದಕ್ಕೆ ಯಾರು ಬಗ್ಗಬೇಡಿ ಎಂದರು.

ಕಾರ್ಯಕ್ರಮದಲ್ಲಿ ವಿಧಾನಪರಿಷತ್‌ ಸದಸ್ಯ ತಿಪ್ಪೇಸ್ವಾಮಿ, ಮಾಜಿ ಶಾಸಕ ಸುಧಾಕರ್‌ ಲಾಲ್‌, ಮಾಜಿ ಜಿಪಂ ಉಪಾಧ್ಯಕ್ಷ ಮುದಿಮಡು ರಂಗಶಾಮಯ್ಯ, ಜಿಪಂ ಸದಸ್ಯ ರಾಮಕೃಷ್ಣ, ಜಯಪ್ರಕಾಶ್‌, ಎಪಿಎಂಸಿ ಅಧ್ಯಕ್ಷ ಚಂದ್ರೇಗೌಡ, ಮಾಜಿ ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಟಿ.ಡಿ.ಮಲ್ಲೇಶ್‌, ಜಿಲ್ಲೇ ಜೆಡಿಎಸ್‌ ಅಧ್ಯಕ್ಷ ಅಂಜನಪ್ಪ, ಮಾಜಿ ನಗರಸಭಾ ಸದಸ್ಯ ಆರ್‌.ರಾಮು, ಹೊನ್ನೇನಹಳ್ಳಿ ನಾಗರಾಜು, ಬಂಡೇ ರಾಮಕೃಷ್ಣ, ಸೀಗಲಹಳ್ಳಿ ವೀರೇಂದ್ರ, ಕೋಟೆ ಮಹದೇವ್‌ ಇದ್ದರು

Follow Us:
Download App:
  • android
  • ios