ಮಂಡ್ಯ(ಅ.04): ನಾವು ಕಾಂಗ್ರೆಸ್‌ ಮೂವರು ನಿರ್ದೇಶಕರ ಬೆಂಬಲದಿಂದಲೇ ಮನ್ಮುಲ್‌ನಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು. ಅದೃಷ್ಟಲಕ್ಷ್ಮಿ ನಮ್ಮ ಕಡೆ ಇದ್ದಾಳೆ. ಜೆಡಿಎಸ್‌ ಮತ್ತೆ ಧೂಳಿನಿಂದ ಮೇಲೆದ್ದು ಬರುತ್ತದೆ ಎನ್ನುವುದಕ್ಕೆ ಈ ಚುನಾವಣೆಯ ಗೆಲವೊಂದೇ ಸಾಕು ಎಂದು ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು ಗುರುವಾರ ಹೇಳಿದ್ದಾರೆ.

ಮನ್‌ಮುಲ್‌ ಅಧ್ಯಕ್ಷ - ಉಪಾಧ್ಯಕ್ಷರ ಚುನಾವಣೆಯಲ್ಲಿ ಲಾಟರಿ ಮೂಲಕ ಜೆಡಿಎಸ್‌ ರಾಮಚಂದ್ರು ಹಾಗೂ ರಘುನಂದನ್‌ ಆಯ್ಕೆಯಾದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಪುಟ್ಟರಾಜು, ಕಾಂಗ್ರೆಸ್‌ ಕೆಲವು ಹಾಗೂ ಬಿಜೆಪಿಯ ನಾಯಕರಿಗೆ ಭಾರಿ ಮುಖ ಭಂಗ ಉಂಟಾಗಿದೆ. ಯಾವುದೇ ಅಧಿಕಾರಿಗಳು ನಮಗೆ ಚುನಾವಣೆಯಲ್ಲಿ ಸಹಾಯ ಮಾಡಿಲ್ಲ. ಆದರೆ ಕಾಂಗ್ರೆಸ್‌ ನಿರ್ದೇಶಕರಾದ ಬೋರೇಗೌಡ, ಶಿವಕುಮಾರ್‌ ಹಾಗೂ ಡಾಲು ರವಿ ಮಾಡಿದ ಸಹಾಯದಿಂದಲೇ ಅಧಿಕಾರ ಚುಕ್ಕಾಣಿ ಹಿಡಿಯಲು ಸಾಧ್ಯವಾಯಿತು ಎಂದಿದ್ದಾರೆ.

ಕಾಂಗ್ರೆಸ್‌ನವರು ಕೈ ಬಿಟ್ಟಿಲ್ಲ:

ಕಾಂಗ್ರೆಸ್‌ನವರು ನಮ್ಮನ್ನು ಕೈ ಬಿಟ್ಟಿಲ್ಲ. ಮೇಲಿನ ಹಂತದಲ್ಲಿ ಹೊಂದಾಣಿಕೆ ಇಲ್ಲದೇ ಹೋದರೂ ಜಿಲ್ಲಾ ಮಟ್ಟದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಸಹಾಯ ಮಾಡಿದ್ದಾರೆ. ಇನ್ನು ಮುಂದೆಯೂ ಆಡಳಿತದಲ್ಲಿ ಕಾಂಗ್ರೆಸ್‌ ನಿರ್ದೇಶಕ ನೆರವನ್ನು ನಾವು ಸದಾ ಬಯಸುತ್ತೇವೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದಿದ್ದಾರೆ.

ಮಂಡ್ಯ: JDSಗೆ ಒಲಿದ ಮನ್ಮುಲ್‌ ಅಧ್ಯಕ್ಷಗಿರಿ, ಲಾಟರಿ ಮೂಲಕ ಜಯಭೇರಿ

ಮನ್ಮುಲ್‌ ಚುನಾವಣೆಯಲ್ಲಿ ನಾವು ಬಹುಮತ ಸಾಧಿಸಿದ್ದರೂ ಬಿಜೆಪಿಯವರು ಕುತಂತ್ರದಿಂದ ಆಡಳಿತ ಮಂಡಳಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಹುನ್ನಾರ ಮಾಡಿದ್ದರು. ಸ್ಥಳೀಯ ಕಾಂಗ್ರೆಸ್‌ ಕೆಲವು ನಾಯಕರೂ ಕೂಡ ಬಿಜೆಪಿಗೆ ಸಾಥ್‌ ನೀಡಿದ್ದರು. ಆದರೆ ದೇವರು ನಮ್ಮ ಕಡೆ ಇದ್ದಾನೆ. ಲಾಟರಿಯಲ್ಲೂ ಕೂಡ ಜೆಡಿಎಸ್‌ ಕೈ ಬಿಡಲು ಇಷ್ಟವಿಲ್ಲದ ದೇವರು ನಮಗೆ ಸಹಾಯ ಮಾಡಿದ್ದಾನೆ. ಇದು ಮಂಡ್ಯಜನರ ಗೆಲವು ಎಂದು ಪುಟ್ಟರಾಜು ಹೇಳಿದ್ದಾರೆ.

ಬೊಕ್ಕಸದಲ್ಲಿ ಹಣ ಇಲ್ಲ - ಸಿಎಂ, ಹಣ ಇದೆ - ಆರ್ ಅಶೋಕ್