Asianet Suvarna News Asianet Suvarna News

Panchamasali Reservation| ಬೊಮ್ಮಾಯಿ ಸರ್ಕಾರಕ್ಕೆ ಡೆಡ್‌ಲೈನ್‌ ಕೊಟ್ಟ ಸ್ವಾಮೀಜಿ..!

*  ಪಂಚಮಸಾಲಿ ಮೀಸಲಿಗಾಗಿ ಸಿಎಂಗೆ 3 ತಿಂಗಳು ಟೈಂ: ಶ್ರೀ
*  ಗೃಹ ಕಚೇರಿಗೇ ಕರೆಸಿ ಭರವಸೆ ನೀಡಿದ ಬೊಮ್ಮಾಯಿ 
*  ಮೀಸಲಾತಿ ಸಿಗುವ ತನಕ ಹೋರಾಟ ನಿಲ್ಲಿಸಿಲ್ಲ
 

Jayamrutunjaya Swamiji Given Deadline to CM Basavaraj Bommai grg
Author
Bengaluru, First Published Nov 22, 2021, 1:36 PM IST

ಬೆಳಗಾವಿ(ನ.22): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮೂರು ತಿಂಗಳಲ್ಲಿ ಪಂಚಮಸಾಲಿ(Panchamasali) ಸಮಾಜಕ್ಕೆ 2ಎ ಮೀಸಲಾತಿ ಕೊಡುವುದಾಗಿ ಭರವಸೆ ನೀಡಿದ್ದು, ಈ ಕುರಿತು ನನಗೆ ಸಂಪೂರ್ಣ ವಿಶ್ವಾಸ ಇದೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠಾಧ್ಯಕ್ಷ ಬಸವ ಜಯಮೃತ್ಯುಂಜಯ ಸ್ವಾಮೀಜಿ(Jayamrutunjaya Swamiji) ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನ ಬೆಂಗಳೂರಿಗೆ(Bengaluru) ಹೋದ ಸಂದರ್ಭದಲ್ಲಿ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾಗೆ ಕರೆಯಿಸಿ ಪಂಚಮಸಾಲಿ ಸಮುದಾಯಕ್ಕೆ ನ್ಯಾಯ ಕೊಡಿಸುವುದಾಗಿ ಹೇಳಿದ್ದಾರೆ. ಆ ಸಂದರ್ಭದಲ್ಲಿ ಸಚಿವ ಸಿ.ಸಿ.ಪಾಟೀಲ, ಮಾಜಿ ಸಚಿವ ವಿನಯ ಕಲಕರ್ಣಿ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರು ಇದ್ದರು. ಹಾಗಾಗಿ, ಮುಖ್ಯಮಂತ್ರಿ ಮನವಿ ಮೇರೆಗೆ ಮತ್ತೆ ಮೂರು ತಿಂಗಳು ಕಾಲಾವಕಾಶ ನೀಡಿದ್ದೇವೆ ಎಂದರು.

2ಎ ಮೀಸಲಾತಿ ಸಿಗುವತನಕ ಹೋರಾಟ: ಜಯಮೃತ್ಯುಂಜಯ ಶ್ರೀ

ಹಿಂದುಳಿದ ವರ್ಗಗಳ ಆಯೋಗದ ವರದಿ ಬಂದ ತಕ್ಷಣ ಮೂರು ತಿಂಗಳೊಳಗಾಗಿ ಮೀಸಲಾತಿ(Reservation) ಸೌಲಭ್ಯ ಕೊಡುವುದಾಗಿ ಈಗಾಗಲೇ ಬೊಮ್ಮಾಯಿ ತಿಳಿಸಿದ್ದಾರೆ. ಆಯೋಗ ಬೆಳಗಾವಿ(Belagavi) ಜಿಲ್ಲೆಯಲ್ಲಿ ಡಿ.9, 10, 11 ರಂದು ಸಭೆ ನಡೆಸಲು ತೀರ್ಮಾನಿಸಿತ್ತು. ಆದರೆ, ವಿಧಾನ ಪರಿಷತ್‌ ಚುನಾವಣೆ(Vidhan Parishat Election) ಹಿನ್ನೆಲೆಯಲ್ಲಿ ಅದನ್ನು ಮುಂದೂಡಲಾಗಿದೆ. ಸಭೆಯನ್ನು ಎರಡು ಬಾರಿ ಮುಂದೂಡಲಾಗಿದೆ. ಸಿಂದಗಿ ಹಾಗೂ ಹಾನಗಲ್‌ ಉಪಚುನಾವಣೆ(Byelection) ಕಾರಣ ನೀಡಿ ಒಮ್ಮೆ, ಈಗ ವಿಧಾನ ಪರಿಷತ್‌ ಚುನಾವಣೆ ನೆಪ ನೀಡಿ ಮುಂದೂಡಿದ್ದಾರೆ. ಹೀಗಾಗಿ, ಮತ್ತೆ ಮೂರು ತಿಂಗಳ ಕಾಲಾವಕಾಶವನ್ನು ಸರ್ಕಾರಕ್ಕೆ ನೀಡಲಾಗಿದೆ ಎಂದರು.
ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ(Winter Session) ಪಂಚಮಸಾಲಿ ಸಮಾಜದ ಹೋರಾಟದ ಕಿಚ್ಚು ಹೆಚ್ಚಾಗುವ ಸಾಧ್ಯತೆ ಇದೆ. ಹಾಗಾಗಿ, ಕಿತ್ತೂರು ಕರ್ನಾಟಕದ(Kittur Karnataka) ಜನರ ಬಹುವರ್ಷಗಳ ಹಕ್ಕೊತ್ತಾಯವನ್ನು ಸರ್ಕಾರ ಈಡೇರಿಸುತ್ತದೆ ಎನ್ನುವ ವಿಶ್ವಾಸ ಇದೆ ಎಂದರು.

2012ರಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಪ್ರಯತ್ನ ಮಾಡಿದ್ದೆವು. ಆ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ(Jagadish Shettar) ವರದಿ ನೀಡಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದ ಬಳಿಕ ಬೆಳಗಾವಿಯಲ್ಲಿ ಮೊದಲ ಅಧಿವೇಶನ ನಡೆಯುತ್ತಿದೆ. ಕಳೆದ ವರ್ಷವೂ ಇದೇ ಸೌಧದ ಮುಂದೆ ಉಪವಾಸ ಸತ್ಯಾಗ್ರಹ ಮಾಡಿದ್ದೆವು. ಎಲ್ಲ ಹೋರಾಟವನ್ನು ಏಕಕಾಲಕ್ಕೆ ನೆನಪಿಸುವುದು ಬೆಳಗಾವಿ ಅಧಿವೇಶನ. ಹೀಗಾಗಿ, ಮುಖ್ಯಮಂತ್ರಿಗಳು ಚಳಿಗಾಲದ ಅಧಿವೇಶನದಲ್ಲಿ ಗಟ್ಟಿಯಾದ ನಿರ್ಧಾರ ತೆಗೆದುಕೊಂಡು ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಒದಗಿಸಬೇಕೆಂದು ಒತ್ತಾಯಿಸಿದರು.

ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಸಿಗುವ ತನಕ ಹೋರಾಟ ನಿಲ್ಲಿಸಿಲ್ಲ. ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಹಳ್ಳಿ ಹಳ್ಳಿಯಲ್ಲಿ ಅಭಿಯಾನ ನಡೆಯುತ್ತಿದೆ. ಬೆಳಗಾವಿ ಜಿಲ್ಲೆಯ ಹಳ್ಳಿಗಳಲ್ಲಿ ಈ ಅಭಿಯಾನ ಮಾಡಲಾಗಿದೆ. ವಿಧಾನ ಪರಿಷತ್‌ ಚುನಾವಣೆ ನೀತಿಸಂಹಿತೆ ಇರುವುದರಿಂದ ಅಭಿಯಾನ ಸ್ಥಗಿತಗೊಳಿಸಲಾಗಿದೆ ಎಂದರು.

ಪಂಚಮಸಾಲಿಗೆ ಮೀಸಲು ನೀಡದಂತೆ ಸರ್ಕಾರಕ್ಕೆ ಎಚ್ಚರಿಕೆ

ಪಂಚಮಸಾಲಿಗೆ ಕೂಡಲಸಂಗಮದ ಪೀಠವೊಂದೆ

ಬಾಗಲಕೋಟೆ: ರಾಜ್ಯದಲ್ಲಿ ಪಂಚಮಸಾಲಿ ಸಮುದಾಯಕ್ಕೆ ಇರುವುದು ಕೂಡಲಸಂಗಮದ ಪೀಠವೊಂದೆ ಎಂದಿರುವ ಮಾಜಿ ಶಾಸಕ ಹಾಗೂ ಪಂಚಮಸಾಲಿ ಸಮುದಾಯದ ನಾಯಕ ವಿಜಯಾನಂದ ಕಾಶಪ್ಪನವರ ಪರ್ಯಾಯವಾಗಿ ಯಾವುದೇ ಪೀಠವೂ ಇಲ್ಲ, ಒಕ್ಕೂಟವೂ ಇಲ್ಲ ಎಂದು ಹೇಳಿದ್ದಾರೆ.

ಬಾಗಲಕೋಟೆ(Bagalkot) ಜಿಲ್ಲೆಯ ಕಳ್ಳಿಗುಡ್ಡ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಪಂಚಮಸಾಲಿ ಸಮುದಾಯದ ಮೂರನೇ ಪೀಠ ರಚನೆಯಾದ ಸ್ವಾಮೀಜಿಗಳ ಒಕ್ಕೂಟದ ವಿರುದ್ಧ ಮಾತನಾಡಿದ ಅವರು, ಕೆಲವರಿಂದ ಊಹಾಪೋಹಗಳು ನಡೆಯುತ್ತಿವೆ. ಅವರಿಗೆ ಸಹಿಸಲು ಆಗುತ್ತಿಲ್ಲಾ ಎಂದರು.

ನಮ್ಮದೊಂದೆ ಪಂಚಮಸಾಲಿ ಲಿಂಗಾಯತ(Lingayat) ಒಕ್ಕೂಟವಿದೆ, ಮೀಸಲಾತಿಗಾಗಿ ಶಾಸಕ ಯತ್ನಾಳ, ಸಿದ್ದು ಸವದಿ, ಚಂದ್ರಕಾಂತ ಬೆಲ್ಲದ ಸೇರಿದಂತೆ ಎಲ್ಲರೂ ಹೋರಾಟ ಮಾಡಿದ್ದೇವೆ. ಮುಂದೆಯೂ ಒಗ್ಗಟ್ಟಾಗಿ ಮುನ್ನಡೆಯಲಿದ್ದೇವೆ ಎಂದಿದ್ದಾರೆ.
 

Follow Us:
Download App:
  • android
  • ios