Asianet Suvarna News Asianet Suvarna News

2ಎ ಮೀಸಲಾತಿ ಸಿಗುವತನಕ ಹೋರಾಟ: ಜಯಮೃತ್ಯುಂಜಯ ಶ್ರೀ

*  ಪ್ರತಿಜ್ಞಾ ಪಂಚಾಯತ್‌ ಅಭಿಯಾನದಲ್ಲಿ ಬಸವಜಯ ಮೃತ್ಯುಂಜಯ ಶ್ರೀಗಳ ಘೋಷಣೆ
*  ಪಂಚಮಸಾಲಿ 3ನೇ ಪೀಠಕ್ಕೆ ಹುನ್ನಾರ ನಡೆಯುತ್ತಿದ್ದು, ಅದಕ್ಕೆ ಯಾರೂ ತಲೆ ಕೆಡಿಸಿಕೊಳ್ಳಬಾರದು
*  ಈ ಹೋರಾಟ ಅಥವಾ ಮೀಸಲಾತಿಯಲ್ಲಿ ನಮ್ಮದು ಯಾವುದೇ ಸ್ವಾರ್ಥವಿಲ್ಲ 

Jayamrutunjaya Swamiji Talks Over Reservation to Panchamasali grg
Author
Bengaluru, First Published Oct 31, 2021, 8:39 AM IST
  • Facebook
  • Twitter
  • Whatsapp

ಜಮಖಂಡಿ(ಅ.31): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommai) ಅವರು ಮೀಸಲಾತಿ ನೀಡುತ್ತೇವೆ. ಮೂರು ತಿಂಗಳ ಕಾಲಾವಕಾಶ ನೀಡಿ ಎಂದು ಹೇಳಿದ್ದಾರೆ. ಈಗಾಗಲೇ ಒಂದು ತಿಂಗಳು ಮುಗಿದಿದೆ. ಮೀಸಲಾತಿ ನೀಡುವ ವಿಶ್ವಾಸವಿದೆ. ಗಡುವು ಮುಗಿಯುತ್ತಿದ್ದಂತೆ ಹಿಂದಿನ ಹೋರಾಟ ಮಾದರಿಯಲ್ಲೇ ನಮ್ಮ ಹೋರಾಟ ಮುಂದುವರಿಯಲಿದ್ದು ಮೀಸಲಾತಿ ಸಿಗುವವರೆಗೂ ಹೋರಾಟ ಬಿಡುವ ಪ್ರಶ್ನೆಯೇ ಇಲ್ಲ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ(Jayamrutunjaya Swamiji) ಹೇಳಿದ್ದಾರೆ.

ತಾಲೂಕಿನ ಮರೆಗುದ್ದಿ ಗ್ರಾಮದಲ್ಲಿ ತಾಲೂಕು ಲಿಂಗಾಯತ ಪಂಚಮಸಾಲಿ(Lingayat Panchamasali) ಸಮಾಜ ಹಾಗೂ ಮರೆಗುದ್ದಿ ಪಂಚಮಸಾಲಿ ಗ್ರಾಮ ಘಟಕದ ಸಹಯೋಗದಲ್ಲಿ ಶನಿವಾರ ನಡೆದ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ(2A Reservation) ನೀಡುವಂತೆ ಒತ್ತಾಯಿಸಿ ಪಂಚಮಸಾಲಿ ಪ್ರತಿಜ್ಞಾ ಪಂಚಾಯತ್‌ ಅಭಿಯಾನ(Campaign) ಹಾಗೂ ವೀರರಾಣಿ ಕಿತ್ತೂರು ಚನ್ನಮ್ಮನ 243ನೇ ಜಯಂತಿ ಹಾಗೂ 198ನೇ ವಿಜಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೊಟ್ಟ ಮಾತಿನಂತೆ ಮೀಸಲಾತಿ ನೀಡದಿದ್ದರೆ ಈ ಬಾರಿ ಸುಮಾರು 25 ಲಕ್ಷ ಜನರನ್ನು ಸೇರಿಸಿ ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ(Government Of Karnataka) ಎಚ್ಚರಿಕೆ ನೀಡಿದರು.

ಪಂಚಮಸಾಲಿಗೆ ಮೀಸಲು ನೀಡದಂತೆ ಸರ್ಕಾರಕ್ಕೆ ಎಚ್ಚರಿಕೆ

ಈ ಸಮಾಜದ ಒಕ್ಕಟ್ಟನ್ನು ಒಡೆಯಲು ಮತ್ತು ಹೋರಾಟ ಹತ್ತಿಕ್ಕಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ನಾವು ಸ್ವಾಭಿಮಾನಿಗಳು. ಯತ್ನಾಳ ಈ ಹೋರಾಟದಿಂದ ಹಿಂದೆ ಸರಿದಿದ್ದರೆ ಮುಖ್ಯಮಂತ್ರಿಯಾಗುತ್ತಿದ್ದರು. ವಿಜಯಾನಂದ ಹಿಂದೆ ಸರಿದಿದ್ದರೆ ಕೆಪಿಸಿಸಿ ಕಾರ್ಯದರ್ಶಿ ಆಗುತ್ತಿದ್ದರು. ನಾನು ಹಿಂದೆ ಸರಿದಿದ್ದರೆ ಬಂಗಾರದ ಮಠವನ್ನು ಕಟ್ಟಬಹುದಿತ್ತು. ಆದರೆ ನಾವು ಯಾವುದಕ್ಕೂ ಆಸೆ ಪಡದೆ ಸಮಾಜದ ಕಟ್ಟಕಡೆಯ ವ್ಯಕ್ತಿಯ ಅನುಕೂಲಕ್ಕಾಗಿ ನಿಸ್ವಾರ್ಥದಿಂದ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಮಾಜಿ ಶಾಸಕ, ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಕಾಶಪ್ಪನವರ ಮಾತನಾಡಿ, ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಒತ್ತಾಯಿಸಿ ಕೂಡಲಸಂಗಮ ಶ್ರೀಗಳನ್ನು 712 ಕಿಮೀ ದೂರದವರೆಗೆ ನಡೆಸಿದ ಪಾಪ ತಟ್ಟಿದೆ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮೂರು ತಿಂಗಳು ಕಾಲಾವಕಾಶ ಕೇಳಿದ್ದು, ಈಗಾಗಲೇ ಒಂದು ತಿಂಗಳು ಕಳೆದಿದೆ ಎಂದು ಹೇಳಿದರು.

ತೇರದಾಳ ಶಾಶಕ ಸಿದ್ದು ಸವದಿ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ(Democracy) ಪ್ರತಿಯೊಬ್ಬರಿಗೂ ಮೀಸಲಾತಿ ಪಡೆದುಕೊಳ್ಳುವ ಹಕ್ಕಿದೆ. ಈ ಹಿಂದೆ ಬಲಾಢ್ಯ ಸಮಾಜದವರು ಮೀಸಲಾತಿ ತೆಗೆದುಕೊಂಡಿದ್ದಾರೆ. ಈಗ ನಾವು ಕೇಳುತ್ತಿದ್ದೇವೆ. ಅದನ್ನು ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ನೀವು ಇನ್ನು ಹೆಚ್ಚಿನ ಮೀಸಲಾತಿ ಪಡೆದುಕೊಳ್ಳಿ, ಆದರೆ ನಾವು ನಮ್ಮ ಹಕ್ಕನ್ನು ಕೇಳಲು ಅಡ್ಡಿಪಡಿಸಬಾರದು ಎಂದಿದ್ದಾರೆ.

ಈ ವೇಳೆ ಶಿವಲಿಂಗ ಸ್ವಾಮಿಗಳು, ಗುರುಮಹಾಂತ ಶ್ರೀಗಳು, ಪ್ರಭುತೋಂಟ ದಾರ್ಯ ಶ್ರೀಗಳು, ವೀಣಾ ಕಾಶಪ್ಪನವರ, ಯೋಗಪ್ಪ ಸವದಿ, ತಾಲೂಕಾಧ್ಯಕ್ಷ ಮಹಾದೇವ ಇಟ್ಟಿ, ಧರೆಪ್ಪ ಸಾಂಗ್ಲಿಕರ, ಹಂಪ್ಪನಗೌಡರ, ಜಿ.ಬಿ.ಕೌಜಲಗಿ, ಸುಭಾಸ ಕೊಪ್ಪದ, ಗುರುಪಾದ ಚಿನ್ನಾಮಲ್ಲ, ಬಸಪ್ಪ ಬಾರಿಕಾಯಿ, ಬಸವರಾಜ ಸಿಂಧೂರ, ಸದಾಶಿವ ಶಿರಗುಪ್ಪಿ, ಸಿದ್ದು ಬಿಳ್ಳೂರ ಅನೇಕರಿದ್ದರು. ಪ್ರದೀಪ ನಂದೆಪ್ಪನವರ ಸ್ವಾಗತಿಸಿದರು. ಎನ್‌.ವಿ ಅಸ್ಕಿ ನಿರೂಪಿಸಿದರು. ಮಲ್ಲು ಬಾರಿಕಾಯಿ ವಂದಿಸಿದರು.

ಮೀಸಲಾತಿ ಸಿಕ್ರೆ ನನಗೆ ಸಿಎಂ ಹುದ್ದೆ ಸಿಕ್ಕಷ್ಟೇ ಖುಷಿ: ಯತ್ನಾಳ

ನನಗೆ ಯಾವುದೇ ಸಚಿವ ಸ್ಥಾನ ಬೇಡ, ರಾಜ್ಯದ ಪಂಚಮಸಾಲಿ ಸಮಾಜದ ಮಕ್ಕಳಿಗೆ 2ಎ ಮೀಸಲಾತಿ ನೀಡಿದರೆ ನಾನು ಮುಖ್ಯಮಂತ್ರಿಯಾದಷ್ಟು(Chief Minister) ಸಂತೋಷ ಪಡುತ್ತೇನೆ ಎಂದು ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ(Basanagouda Patil Yatnal) ಹೇಳಿದರು.

ಮಾಜಿ ಸಿಎಂಗಳಿಂದ ಪಂಚಮಸಾಲಿಗೆ ಅನ್ಯಾಯ: ಸ್ವಪಕ್ಷದವರ ವಿರುದ್ಧ ಗುಡುಗಿದ ಯತ್ನಾಳ್‌

ತಾಲೂಕಿನ ಮರೇಗುದ್ದಿ ಗ್ರಾಮದಲ್ಲಿ ಶನಿವಾರ ನಡೆದ ವೀರರಾಣಿ ಕಿತ್ತೂರು ಚನ್ನಮ್ಮನವರ 243ನೇ ಜಯಂತ್ಯುತ್ಸವ ಹಾಗೂ 198ನೇ ವಿಜಯೋತ್ಸವ ಆಚರಣೆ ಸಮಾರಂಭ ಉದ್ಘಾಟಿಸಿ ಅವರು ಮತನಾಡಿದರು. ಸಮಾಜದವರು ಒಗ್ಗಟ್ಟಾಗಿ ಹೋರಾಡಿ ಬೇಡಿಕೆ ಈಡೇರಿಸಿಕೊಳ್ಳುವ ಕಾಲ ಬಂದಿದೆ. ಕೆಲವರು ಈ ಹೋರಾಟ ಕೆಡಿಸುವ ಹೊಂಚು ಹಾಕುತ್ತಿದ್ದಾರೆ. ಇದರಿಂದ ಸಮಾಜಕ್ಕೆ ಯಾವುದೇ ಹಾನಿ ಉಂಟಾಗುವುದಿಲ್ಲ ಎಂದು ಹೇಳಿದರು.

ಸಮಾಜ ಒಡೆಯುವ ಕಾರ್ಯದಲ್ಲಿ ಯಾರೂ ಮುಂದಾಗಬೇಡಿ. ಶಾಸಕ-ಮಂತ್ರಿ-ಮುಖ್ಯಮಂತ್ರಿ ಸ್ಥಾನಕ್ಕೆ ಸಮಾಜದ ಹೆಸರು ಹೇಳಿ ಸ್ಥಾನ ಪಡೆದುಕೊಳ್ಳಲು ಮುಂದಾಗಿ ಸಮಾಜಕ್ಕೆ ಮೋಸ ಮಾಡುವ ಜನರನ್ನು ಸಮಾಜದ ಜನ ನಂಬುವುದಿಲ್ಲ ಎಂದ ಅವರು, ಕೂಡಲಸಂಗಮ ಶ್ರೀಗಳ ಪಾದಯಾತ್ರೆ(Padayatra) ವೇಳೆಯಲ್ಲಿ ನಮ್ಮ ಸಮಾಜದ ಕೆಲವರು ಪಾದಯಾತ್ರೆಯನ್ನು ಹತ್ತಿಕ್ಕಲು ಹುನ್ನಾರ ನಡೆಸಿದ್ದರು ಎಂದರು.

ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿದ್ದು ಸವದಿ ಹಾಗೂ ನನ್ನನ್ನು ಕರೆಯಿಸಿ ಇನ್ನು ಮೂರು ತಿಂಗಳಲ್ಲಿ ಮೀಸಲಾತಿ ನೀಡುವುದಾಗಿ ಭರವಸೆ ನೀಡಿದ್ದು, ಅಲ್ಲಿಯವರೆಗೆ ಕಾದು ನೋಡೋಣ. ಇಲ್ಲದಿದ್ದರೆ ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಂಡು ಸುಮಾರು 25 ಲಕ್ಷ ಜನರನ್ನು ಸೇರಿಸಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಬೆಂಗಳೂರಲ್ಲಿ(Bengaluru) ನಡೆದ ಪಂಚಮಸಾಲಿ ಸಮಾಜದ ರಾರ‍ಯಲಿ ಬಗ್ಗೆ ಕೇಂದ್ರ ಸರ್ಕಾರ ಗುಪ್ತ ವರದಿ ತರಿಸಿಕೊಂಡಿದೆ. ವಿಧಾನಸಭೆಯಲ್ಲಿ 24 ಶಾಸಕರಿದ್ದು, ಅವರೆಲ್ಲರನ್ನೂ ಸೇರಿಸಿ ಮುಂದಿನ ಅಧಿವೇಶನದಲ್ಲಿ(Session)ಸದನದ ಬಾವಿಗೆ ಇಳಿದಾದರೂ ಹೋರಾಟ ನಡೆಸಿ, ಮೀಸಲಾತಿ ಪಡೆಯುವುದು ನಿಶ್ಚಿತ. ಇದು ಕೊನೆ ಹೋರಾಟವಾಗಿದೆ. ಈ ಹೋರಾಟ ಅಥವಾ ಮೀಸಲಾತಿಯಲ್ಲಿ ನಮ್ಮದು ಯಾವುದೇ ಸ್ವಾರ್ಥವಿಲ್ಲ ಎಂದು ಹೇಳಿದರು.

ಪಂಚಮಸಾಲಿ 3ನೇ ಪೀಠಕ್ಕೆ ಹುನ್ನಾರ ನಡೆಯುತ್ತಿದ್ದು, ಅದಕ್ಕೆ ಯಾರೂ ತಲೆ ಕೆಡಿಸಿಕೊಳ್ಳಬಾರದು. ನಮ್ಮ ಹೋರಾಟ ಕೇವಲ 2ಎ ಮೀಸಲಾತಿ ಪಡೆಯುವುದಾಗಿದೆ ಎಂದರು.
 

Follow Us:
Download App:
  • android
  • ios