Asianet Suvarna News Asianet Suvarna News

Bengaluru: ಮಲ್ಲೇಶ್ವರದಲ್ಲಿ ಮಿನಿ ಜಯದೇವ ಆಸ್ಪತ್ರೆ ಶುರು

ನಗರದ ಕೆ.ಸಿ ಜನರಲ್‌ ಹಾಸ್ಪಿಟಲ್‌ಗೆ ಮತ್ತಷ್ಟು ಸೌಲಭ್ಯ ನೀಡುವ ಮೂಲಕ ವಿಕ್ಟೋರಿಯಾ ಆಸ್ಪತ್ರೆಯಂತೆಯೇ ಸಮಗ್ರ ಅಭಿವೃದ್ಧಿ ಹೊಂದಿದ ಆರೋಗ್ಯ ಸಂಸ್ಥೆಯಾಗಿ ರೂಪಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

Jayadeva Cardiology Hospital Unit Inaugurated In KC General Hospital Bengaluru gvd
Author
First Published Oct 7, 2022, 8:29 AM IST

ಬೆಂಗಳೂರು (ಅ.07): ನಗರದ ಕೆ.ಸಿ ಜನರಲ್‌ ಹಾಸ್ಪಿಟಲ್‌ಗೆ ಮತ್ತಷ್ಟು ಸೌಲಭ್ಯ ನೀಡುವ ಮೂಲಕ ವಿಕ್ಟೋರಿಯಾ ಆಸ್ಪತ್ರೆಯಂತೆಯೇ ಸಮಗ್ರ ಅಭಿವೃದ್ಧಿ ಹೊಂದಿದ ಆರೋಗ್ಯ ಸಂಸ್ಥೆಯಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ನಗರದ ಕೆ.ಸಿ.ಜನರಲ್‌ ಆಸ್ಪತ್ರೆಯಲ್ಲಿ ಗುರುವಾರ ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ಉಪಕೇಂದ್ರ ಮತ್ತು ಇಂದಿರಾಗಾಂಧಿ ಮಕ್ಕಳ ಆಸ್ಪತೆಯ ಮಕ್ಕಳ ಐಸಿಯು ಉಪಕೇಂದ್ರ ಉದ್ಘಾಟಿಸಿ ಮಾತನಾಡಿ ಅವರು, ‘ಮಲ್ಲೇಶ್ವರ ಕೆ.ಸಿ.ಜನರಲ್‌ ಹಾಸ್ಪಿಟಲ್‌ ಆವರಣದಲ್ಲಿ 200 ಹಾಸಿಗೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಮತ್ತು 50 ಹಾಸಿಗೆಗಳ ಟ್ರಾಮಾ ಕೇರ್‌ ಸೆಂಟರ್‌ ಸ್ಥಾಪಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಈ ಮೂಲಕ ಆಸ್ಪತ್ರೆಯನ್ನು ವಿಕ್ಟೋರಿಯಾ ಆಸ್ಪತ್ರೆಯಂತೆ ಸಮಗ್ರವಾಗಿ ಅಭಿವೃದ್ಧಿ ಹೊಂದಿದ ಆರೋಗ್ಯ ಸಂಸ್ಥೆಯಾಗಲಿದೆ’ ಎಂದರು.

ಅ.11ರಿಂದ ಯಡಿಯೂರಪ್ಪ ಜತೆ ರಾಜ್ಯ ಪ್ರವಾಸ: ಸಿಎಂ ಬೊಮ್ಮಾಯಿ

ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಮಾತನಾಡಿ, ಕೆ.ಸಿ. ಜನರಲ್‌ (ಕೆಂಪು ಚಲುವಾಜಮ್ಮಣ್ಣಿ) ಆಸ್ಪತ್ರೆಯು ಮೈಸೂರು ಮಹಾರಾಜರು ಸ್ಥಾಪಿಸಿದ ಮೊದಲ ತಲೆಮಾರಿನ ಆಸ್ಪತ್ರೆ ಆಗಿದೆ. ಈಗ ಜಯದೇವ ಮತ್ತು ಇಂದಿರಾ ಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆಗಳಂತಹ ಹೊಸ ತಲೆಮಾರಿನ ಆಸ್ಪತ್ರೆಗಳು ಕೈ ಜೋಡಿಸಿವೆ. ಬೆಂಗಳೂರು ನಗರ ಅಗಾಧವಾಗಿ ಬೆಳೆದಿದೆ. ಆದರೆ, ದಕ್ಷಿಣ ಭಾಗದಲ್ಲಿ ಮಾತ್ರ ಹೆಚ್ಚಿನ ಆಸ್ಪತ್ರೆಗಳಿವೆ. ಹೃದ್ರೋಗ ಮತ್ತು ಮಕ್ಕಳ ಐಸಿಯು ಕೇಂದ್ರ ಸ್ಥಾಪನೆಯಿಂದ ಬೆಂಗಳೂರು ನಗರದ ಉತ್ತರ ಭಾಗದ ಜನರಿಗೆ ಅನುಕೂಲ ಆಗಲಿದೆ. ಮುಂದಿನ ದಿನಗಳಲ್ಲಿ ಕೆ ಸಿ ಜನರಲ್‌ ಆಸ್ಪತ್ರೆಯಲ್ಲಿ ಹಾಸಿಗೆಗಳ ಸಂಖ್ಯೆ 900ಕ್ಕೆ ಏರಲಿದೆ ಎಂದು ಮಾಹಿತಿ ನೀಡಿದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್‌ ಮಾತನಾಡಿ, ಒಂದು ಕೋಟಿಗೂ ಹೆಚ್ಚು ಜನರಿರುವ ಬೆಂಗಳೂರಿನಲ್ಲಿ ಜನರಿಗೆ ತೃತೀಯ ಸ್ತರದ ಆರೋಗ್ಯ ಸೇವೆಗಳು ಹೆಚ್ಚಾಗಿ ಸಿಗಬೇಕು. ಈ ನಿಟ್ಟಿನಲ್ಲಿ ಆರೋಗ್ಯ ವಲಯವನ್ನು ಸದೃಢವಾಗಿ ಬೆಳೆಸಲಾಗುತ್ತಿದೆ. ನಗರದ ಎಲ್ಲ ಆರೋಗ್ಯ ಕೇಂದ್ರಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಆರ್ಥಿಕ ದುರ್ಬಲರಿಗೆ ಇದರ ಲಾಭ ಸಿಗಲಿದ್ದು, ಉಚಿತವಾಗಿ ಚಿಕಿತ್ಸೆ ದೊರೆಯಲಿದೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಶಾಸಕ ದಿನೇಶ್‌ ಗುಂಡೂರಾವ್‌, ಜಯದೇವ ಹೃದ್ರೋಗ ವಿಜ್ಞಾನ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್‌.ಮಂಜುನಾಥ್‌, ಆರೋಗ್ಯ ಇಲಾಖೆ ಆಯುಕ್ತ ಡಿ.ರಂದೀಪ್‌, ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ.ಸಂಜಯ್‌, ಆರೋಗ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅನಿಲ್‌ ಕುಮಾರ್‌, ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ.ರಾಮಚಂದ್ರ, ರಾಜೀವ್‌ ಗಾಂಧಿ ಎದೆ ರೋಗಗಳ ಆಸ್ಪತ್ರೆ ಮುಖ್ಯಸ್ಥ ಡಾ.ನಾಗರಾಜ್‌ ಉಪಸ್ಥಿತರಿದ್ದರು.

ಸಚಿವ ಅಶ್ವತ್ಥ ಶ್ರಮ: ಕೆ.ಸಿ.ಜನರಲ್‌ ಆಸ್ಪತ್ರೆಯ ಅಭಿವೃದ್ಧಿಗೆ ಮಲ್ಲೇಶ್ವರ ಕ್ಷೇತ್ರದ ಶಾಸಕರಾಗಿರುವ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ನಿರಂತರ ಶ್ರಮವಹಿಸಿದ್ದಾರೆ. ಸಚಿವರು ಉತ್ತರ ಬೆಂಗಳೂರಿಗೆ ಸಮಗ್ರ ಸುಸಜ್ಜಿತ ಆಸ್ಪತ್ರೆ ನೀಡಬೇಕು ಎಂಬ ಆಶಯ ಹೊಂದಿದ್ದು, ಈ ನಿಟ್ಟಿನಲ್ಲಿ ಆಸ್ಪತ್ರೆ ಆವರಣದಲ್ಲಿ ಜಯದೇವ ಮತ್ತು ಇಂದಿರಾಗಾಂಧಿ ಆಸ್ಪತ್ರೆಗಳ ಉಪಕೇಂದ್ರಗಳು ಘೋಷಣೆಯಾಗಿ ಕೇವಲ ಒಂದೇ ವರ್ಷದಲ್ಲಿ ಸ್ಥಾಪನೆಯಾಗಿದ್ದು, ಇದರಲ್ಲಿ ಸಚಿವರ ಪಾತ್ರ ಪ್ರಮುಖವಾಗಿದೆ. ಅವರ ಉಸ್ತುವಾರಿಯಲ್ಲಿ ಆಸ್ಪತ್ರೆಯ ಹಾಸಿಗೆ ಹೆಚ್ಚಳ, ಕೃತಕ ಆಮ್ಲಜನಕ ಘಟಕ ಸ್ಥಾಪನೆ ಸೇರಿದಂತೆ ಹಲವು ಸೌಲಭ್ಯಗಳು ಲಭ್ಯವಾಗಿದ್ದು, ಆಸ್ಪತ್ರೆ ಮತ್ತಷ್ಟು ಜನಸ್ನೇಹಿಯಾಗಿದೆ.

Bengaluru: ಕೆಂಪೇಗೌಡ ಲೇಔಟ್‌ ಸೈಟ್‌ ಉಳಿಸಿಕೊಳ್ಳಲು ಮತ್ತೆ ಚಾನ್ಸ್?

ಕೆಸಿಜಿ ಆಸ್ಪತ್ರೆ ನೂತನ ಉಪಕೇಂದ್ರಗಳ ಸೌಲಭ್ಯಗಳು
*ಜಯದೇವ ಆಸ್ಪತ್ರೆಯ ಉಪ ಕೇಂದ್ರದಲ್ಲಿ 20 ಹಾಸಿಗೆ ಐಸಿಯು ಮತ್ತು 30 ಸಾಮಾನ್ಯ ಹಾಸಿಗೆಗಳು ಲಭ್ಯ
*ಹೃದ್ರೋಗ ಪತ್ತೆಗೆ ಸಹಕಾರಿಯಾದ ಎಕೋ, ಟ್ರೆಡ್‌ ಮಿಲ್‌ ಸೌಲಭ್ಯ
*ಹೃದ್ರೋಗ ಶಸ್ತ್ರಚಿಕಿತ್ಸೆಗೆ ಅಗತ್ಯವಿರುವ ಅತ್ಯಾಧುನಿಕ ಕ್ಯಾತ್‌ಲ್ಯಾಬ್‌
*ಮಕ್ಕಳ ಆರೈಕೆಗೆ ವೆಂಟಿಲೇಟರ್‌ ಸಹಿತ 50 ಹಾಸಿಗೆಗಳ ತೀವ್ರ ನಿಗಾ ಘಟಕ
*ಆಯಾ ಆರೋಗ್ಯ ಸಂಸ್ಥೆಗಳ ವೈದ್ಯರು, ಸಿಬ್ಬಂದಿಯಿಂದ ಉಪಕೇಂದ್ರ ನಿರ್ವಹಣೆ
*ಹೃದ್ರೋಗ ಉಪಕೇಂದ್ರ .15 ಕೋಟಿ, ಮಕ್ಕಳ ಐಸಿಯು ಉಪಕೇಂದ್ರ .3.53 ಕೋಟಿ ವೆಚ್ಚದಲ್ಲಿ ನಿರ್ಮಾಣ

Follow Us:
Download App:
  • android
  • ios