ಅ.11ರಿಂದ ಯಡಿಯೂರಪ್ಪ ಜತೆ ರಾಜ್ಯ ಪ್ರವಾಸ: ಸಿಎಂ ಬೊಮ್ಮಾಯಿ
1 ತಿಂಗಳು ಯಾತ್ರೆ, 6 ಕಡೆ ರ‍್ಯಾಲಿ, ‘ಭಾರತ್ ಜೋಡೋ’ಗೆ ಇದು ತಿರುಗೇಟಲ್ಲ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು(ಅ.07): ಪಕ್ಷದ ಬಲವರ್ಧನೆ ಹಾಗೂ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ತಿಳಿಸುವ ಸಲುವಾಗಿ ಅ.11ರಿಂದ ಒಂದು ತಿಂಗಳ ಕಾಲ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜತೆ ರಾಜ್ಯ ಪ್ರವಾಸ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ್ ಜೋಡೋ ಅಭಿಯಾನಕ್ಕೂ ಮುನ್ನವೇ ರಾಜ್ಯದಲ್ಲಿ ಬಿಜೆಪಿ ಆರು ರ‍್ಯಾಲಿಗಳನ್ನು ಆಯೋಜಿಸಲು ನಿರ್ಧರಿಸಿತ್ತು. ಆದರೆ ದಸರಾ ಹಾಗೂ ವಿಧಾನಸಭಾ ಅಧಿವೇಶನಗಳ ಹಿನ್ನೆಲೆಯಲ್ಲಿ ರ‍್ಯಾಲಿಗಳನ್ನು ನಡೆಸುವುದು ವಿಳಂಬವಾಯಿತು ಎಂದರು.
ಭಾರತ್ ಜೋಡೋ ಯಾತ್ರೆಗೆ ಪರ್ಯಾಯವಾಗಿ ನಾವು ರ‍್ಯಾಲಿ ಆಯೋಜಿಸುತ್ತಿದ್ದೇವೆ ಎಂಬುದು ತಪ್ಪು ಕಲ್ಪನೆ. ನಮಗೆ ಅದರ ಅಗತ್ಯವೂ ಇಲ್ಲ. ನಮ್ಮ ಸರ್ಕಾರದ ಯೋಜನೆಗಳ ಆಧಾರದ ಮೇಲೆ ಸಮಾವೇಶವನ್ನು ಸಂಘಟಿಸುತ್ತೇವೆ. ನಾಲ್ಕು ತಿಂಗಳ ಹಿಂದೆಯೇ ರಾಜ್ಯ ಪ್ರವಾಸ ನಿಗದಿಯಾಗಿತ್ತು. ಈಗ ಪೂರ್ವ ನಿಗದಿಯಂತೆ ಅ.11ರಿಂದ ಒಂದು ತಿಂಗಳು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ನಾನು ಜಂಟಿ ರಾಜ್ಯ ಪ್ರವಾಸ ಆರಂಭಿಸುತ್ತೇವೆ. ಜನರಿಗೆ ಸರ್ಕಾರದ ಯೋಜನೆಗಳ ಬಗ್ಗೆ ತಿಳಿಸುತ್ತೇವೆ. ಫಲಾನುಭವಿಗಳ ಜತೆ ಸಂವಾದ ನಡೆಸುತ್ತೇವೆ. ಬಿಜೆಪಿ ಪಕ್ಷಕ್ಕೆ ಜನರ ಬೆಂಬಲ ಸಿಗಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.
ನಕಲಿ ಗಾಂಧಿಗಳು ಬೇಲ್ ಮೇಲೆ ಹೊರಗಿದ್ದಾರೆ: ಸಿಎಂ ಬೊಮ್ಮಾಯಿ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವ ಭಾರತ್ ಜೋಡೋ ಅಭಿಯಾನವು ಸರ್ಕಾರ ಹಾಗೂ ಬಿಜೆಪಿ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ಯಾತ್ರೆಯಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಅರ್ಧ ಕಿ.ಮೀ ನಡೆದು ಮರಳಿದ್ದಾರೆ. ಇದೇ ಅಭಿಯಾನದಲ್ಲಿ ಪ್ರಿಯಾಂಕಾ ಗಾಂಧಿ ಸೇರಿದಂತೆ ಯಾರೇ ಭಾಗವಹಿಸಿದರೂ ಏನೂ ಪ್ರಯೋಜನವಿಲ್ಲ. ಕಾಂಗ್ರೆಸ್ಸಿಗರಷ್ಟೇ ಪಾದಯಾತ್ರೆ ಮಾಡುತ್ತಿದ್ದಾರೆ. ಇದರಿಂದ ತೊಂದರೆ ಇಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದರು.