ಬೆಳಗಾವಿಗೆ ಆಗಮಿಸಿ ಮಹಾರಾಷ್ಟ್ರದ ನಿರ್ಲಕ್ಷ್ಯ ಧೋರಣೆ ಎಳೆ ಎಳೆಯಾಗಿ ಬಿಚ್ಚಿಟ್ಟ ಜತ್ತ ಕನ್ನಡಿಗರು
ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಪ್ರಕರಣದ ವಿಚಾರಣೆ ನಾಳೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಗಡಿವಿವಾದ ಮುನ್ನಲೆಗೆ ಬರುತ್ತಿದ್ದಂತೆ ಮಹಾರಾಷ್ಟ್ರದ ಜತ್ತ ತಾಲೂಕಿನ 42 ಹಳ್ಳಿಗಳ ಜನ ಕರ್ನಾಟಕಕ್ಕೆ ಸೇರಲು ಉತ್ಸುಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜತ್ತ ಕನ್ನಡಿಗರನ್ನು ಬೆಳಗಾವಿಗೆ ಕರೆಯಿಸಿ ಸುದ್ದಿಗೋಷ್ಠಿ ಮಾಡಲಾಗಿದೆ.
ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್
ಬೆಳಗಾವಿ (ನ.29): ಕರ್ನಾಟಕ ಮಹಾರಾಷ್ಟ್ರ ಗಡಿವಿವಾದ ಪ್ರಕರಣದ ವಿಚಾರಣೆ ನಾಳೆ ಸುಪ್ರೀಂಕೋರ್ಟ್‌ನಲ್ಲಿ ನಡೆಯಲಿದೆ. ಗಡಿವಿವಾದ ಮುನ್ನಲೆಗೆ ಬರುತ್ತಿದ್ದಂತೆ ಮಹಾರಾಷ್ಟ್ರದ ಜತ್ತ ತಾಲೂಕಿನ 42 ಹಳ್ಳಿಗಳ ಜನ ಕರ್ನಾಟಕಕ್ಕೆ ಸೇರಲು ಉತ್ಸುಕರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಜತ್ತ ಕನ್ನಡಿಗರನ್ನು ಬೆಳಗಾವಿಗೆ ಕರೆಯಿಸಿ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್ ಸುದ್ದಿಗೋಷ್ಠಿ ನಡೆಸಿದರು. ಜತ್ತ, ಅಕ್ಕಲಕೋಟ, ಸೊಲ್ಲಾಪುರ ಕರ್ನಾಟಕಕ್ಕೆ ಸೇರಬೇಕು ಎಂಬ ಸಿಎಂ ಬಸವರಾಜ ಬೊಮ್ಮಾಯಿ ಕೊಟ್ಟ ಒಂದು ಹೇಳಿಕೆ ಗಡಿಕನ್ನಡಿಗರಲ್ಲಿ ಕಿಚ್ಚು ಹೊತ್ತಿಸಿರುವುದು ಸುಳ್ಳಲ್ಲ, ಅವರ ಮನಸ್ಸಿನಲ್ಲಿದ್ದ ನೋವು ಹಂಚಿಕೊಳ್ಳಲು ಜತ್ತ ತಾಲೂಕಿನ ಕನ್ನಡ ಹೋರಾಟಗಾರರು ನನ್ನ ಜೊತೆಗಿದ್ದಾರೆ ಎಂದು ಭೀಮಾಶಂಕರ ಪಾಟೀಲ್ ತಿಳಿಸಿದರು. ಇದೇ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜತ್ತ ತಾಲೂಕು ಕನ್ನಡ ಹೋರಾಟ ಸಮಿತಿಯ ಅಧ್ಯಕ್ಷ ಸೋಮಲಿಂಗ ಚೌಧರಿ, ಉಪಾಧ್ಯಕ್ಷ ಗೌಡೇಶ್ ಮಾಡಳ್ಳಿ, 'ಗಡಿಭಾಗದ ಕನ್ನಡಿಗರ ಬಗ್ಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿಗೆ ಅಭಿನಂದನೆ. ಐವತ್ತು ವರ್ಷಗಳಿಂದ ಮಹಾರಾಷ್ಟ್ರ ಸರ್ಕಾರ ನಮಗಾಗಿ ಯಾವುದೇ ಕೆಲಸ ಮಾಡಿಲ್ಲ. ಮಾಚಾಳ್ ಯೋಜನೆ ನೀರು ಬರುತ್ತೆ ಬರುತ್ತೆ ಅಂತಾ ಆಶ್ವಾಸನೆ ನೀಡಿದ್ದಾರೆ ಆದ್ರೆ ಇನ್ನೂ ಬಂದಿಲ್ಲ. ಜತ್ತ ತಾಲೂಕಿನ 42 ಹಳ್ಳಿಗಳಲ್ಲಿ ಸಮರ್ಪಕ ನೀರಾವರಿ ವ್ಯವಸ್ಥೆ ಇಲ್ಲ. ರಸ್ತೆಗಳು ಸರಿ ಇಲ್ಲ, ಶಿಕ್ಷಣ,ಕೃಷಿ ಬಗ್ಗೆ ಯಾವುದೇ ಕಾಳಜಿ ಇಲ್ಲ. ಮೊದಲ ಬಾರಿಗೆ ಕರ್ನಾಟಕದ ಸಿಎಂ ಬಸವರಾಜ ಬೊಮ್ಮಾಯಿ ಅವರು ನಮ್ಮ ಪರವಾಗಿ ಮಾತನಾಡಿದ್ದಾರೆ.
50 ವರ್ಷ ಆಯ್ತು ಮಹಾರಾಷ್ಟ್ರ ಸರ್ಕಾರ, ಮಹಾರಾಷ್ಟ್ರದ ಜನಪ್ರತಿನಿಧಿಗಳು ಕೇವಲ ಭರವಸೆ ಕೊಡುತ್ತಾರೆ ಹೋಗುತ್ತಾರೆ. ಗಡಿ ಭಾಗದ ಕನ್ನಡ ಭಾಷಿಕ ಪ್ರದೇಶದಲ್ಲಿ ರಸ್ತೆಗಳು ಹಾಳಾಗಿವೆ. ಗಡಿಭಾಗದಲ್ಲಿ ಇರುವಂತಹ ಕನ್ನಡ ಶಾಲೆಗಳಲ್ಲಿ 200 ಮಕ್ಕಳಿಗೆ ಒಬ್ಬ ಕನ್ನಡ ಶಿಕ್ಷಕರಿದ್ದಾರೆ. ಹೀಗಾಗಿ ಮಹಾರಾಷ್ಟ್ರದಲ್ಲಿ ನಮಗೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ನಾವು ಮಹಾರಾಷ್ಟ್ರದಲ್ಲಿ ಇರಲ್ಲ ಕರ್ನಾಟಕಕ್ಕೆ ಸೇರ್ಪಡೆ ಆಗುತ್ತೇವೆ. ನಮ್ಮನ್ನು ಕರ್ನಾಟಕಕ್ಕೆ ಸೇರ್ಪಡೆ ಮಾಡಿಕೊಳ್ಳಿ ಎಂದು ಕರ್ನಾಟಕ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತೇವೆ. ಜತ್ತ ತಾಲೂಕಿನಲ್ಲಿ 215 ಕನ್ನಡ ಶಾಲೆಗಳಿವೆ ಆದರೆ ಯಾವುದೇ ಸೌಲಭ್ಯವಿಲ್ಲ. ವಿಜಯಪುರ ಶಾಸಕ ಎಂ.ಬಿ.ಪಾಟೀಲ್ ಅವರ ಪುಣ್ಯದಿಂದ ನಮಗೆ ನೀರು ಸಿಗುತ್ತಿದೆ. ನಾವು ಮಹಾರಾಷ್ಟ್ರ ಗಡಿಯಿಂದ ಕರ್ನಾಟಕ ವಿಜಯಪುರ ಜಿಲ್ಲೆ ಗಡಿಗೆ ಬಂದು ನೀರು ತಗೆದುಕೊಂಡು ಹೋಗುತ್ತೇವೆ.
ಕರ್ನಾಟಕ ಸರ್ಕಾರ ನೀಡುವಷ್ಟು ಸೌಲಭ್ಯ ಮಹಾರಾಷ್ಟ್ರ ಸರ್ಕಾರ ನೀಡಲ್ಲ. ನಮಗೆ ಗೊತ್ತು ಮಹಾರಾಷ್ಟ್ರ ಸರ್ಕಾರ ನಮಗಾಗಿ ಏನೂ ಮಾಡಲ್ಲ. ಹೀಗಾಗಿ ನಾವು ಕರ್ನಾಟಕಕ್ಕೆ ಸೇರಲು ನಿರ್ಧರಿಸಿದ್ದೇವೆ. ಕರ್ನಾಟಕ ನಮಗೆ ನೀರು ನೀಡುತ್ತಿರೋದ್ರಿಂದ ನಾವು ಇಂದು ಸಮಾಧಾನವಾಗಿದ್ದೇವೆ. ನಮ್ಮ ಬಗ್ಗೆ ಮಹಾರಾಷ್ಟ್ರ ಸರ್ಕಾರ ಯಾವುದೇ ಕಾಳಜಿ ವಹಿಸಲ್ಲ. ಕರ್ನಾಟಕ ಸಿಎಂಗೆ ಜತ್ತ ತಾಲೂಕನ್ನು ಕರ್ನಾಟಕಕ್ಕೆ ಸೇರಿಸಬೇಕೆಂದು ಮನವಿ ಮಾಡ್ತೇವೆ' ಎಂದು ತಿಳಿಸಿದರು. ಇನ್ನು ಬೆಳಗಾವಿಯ ಎಂಇಎಸ್‌ನವರು ಅದೇಕೆ ಮಹಾರಾಷ್ಟ್ರಕ್ಕೆ ಹೋಗಬೇಕು ಅಂತಿದ್ದಾರೋ ಗೊತ್ತಿಲ್ಲ. ಅಲ್ಲಿಯ ಸರ್ಕಾರ ಗಡಿಭಾಗದಲ್ಲಿ ಯಾವುದೇ ಮೂಲಸೌಕರ್ಯ ಒದಗಿಸಿಲ್ಲ' ಎಂದು ತಿಳಿಸಿದರು.
ರೋಹಿಂಗ್ಯಾ ರೂಪದ ಎಂಇಎಸ್‌ನವರನ್ನು ಹೊರಹಾಕಿ:
ಇನ್ನು ಎಂಇಎಸ ಮತ್ತು ಮಹಾರಾಷ್ಟ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕರ್ನಾಟಕ ನವನಿರ್ಮಾಣ ಸೇನೆ ರಾಜ್ಯಾಧ್ಯಕ್ಷ ಭೀಮಾಶಂಕರ ಪಾಟೀಲ್, 'ಮಹಾರಾಷ್ಟ್ರ ಸರ್ಕಾರದಿಂದ ಗಡಿ ಕನ್ನಡಿಗರಿಗೆ ಅನ್ಯಾಯ ಆಗುತ್ತಿದೆ. ಬಸವರಾಜ ಬೊಮ್ಮಾಯಿರನ್ನು ಫೆಬ್ರವರಿ ತಿಂಗಳಲ್ಲಿ ಮಹಾರಾಷ್ಟ್ರದ ಜತ್ತ ತಾಲೂಕಿಗೆ ಕರೆಯಿಸಿ ಅವರಿಗೆ ದಕ್ಷಿಣ ಪಥೇಶ್ವರ ಅಂತಾ ಬಿರುದು ನೀಡಿ ಗೌರವಿಸುತ್ತೇವೆ. ಕರ್ನಾಟಕ ನವ ನಿರ್ಮಾಣ ಸೇನೆಯಿಂದ ಈ ಪ್ರಶಸ್ತಿ ಕೊಡುತ್ತೇವೆ. ಈಗಾಗಲೇ ಸಿಎಂ ಕಚೇರಿ ಜೊತೆಗೆ ಪತ್ರ ಸಂಪರ್ಕ ಮಾಡಿದ್ದೇವೆ. ನಾಳೆ ಸುಪ್ರೀಂ ಕೋರ್ಟ್ ನಲ್ಲಿ ಗಡಿ ವಿವಾದ ಅರ್ಜಿ ವಿಚಾರಣೆಗೆ ಬರಲಿದೆ. ಗಡಿ ವಿವಾದ ಸುಪ್ರೀಂ ಕೋರ್ಟ್ ನಲ್ಲಿ ಏನಾಗುತ್ತದೆ ಎಂಬ ಆತಂಕ ನಮ್ಮಲ್ಲಿದೆ.
ಗಡಿ ಭಾಗವನ್ನ ಅಭಿವೃದ್ಧಿ, ಗಡಿ ಭಾಗದ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಸರ್ಕಾರದ ವಿವಿಧ ಇಲಾಖೆಗಳಿಂದ ಆಗುತ್ತಿಲ್ಲ. ಗಡಿ ಅಭಿವೃದ್ಧಿ ಪ್ರಾಧಿಕಾರದಿಂದ ಗಡಿ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದನೆ ಸಿಗುತ್ತಿಲ್ಲ. ನಾಳೆ ಏನಾದರೂ ಸುಪ್ರೀಂ ಕೋರ್ಟ್ ನಲ್ಲಿ ವ್ಯತಿರಿಕ್ತವಾದ ತೀರ್ಮಾನ ಬಂದ್ರೆ ಆಗೋ ಅನಾಹುತ ಕ್ಕೆ ಸರ್ಕಾರ ಹೊಣೆಯಾಗಲಿದೆ. ಎಂಇಎಸ್‌ನವರನ್ನು ಒದ್ದು ಬೆಳಗಾವಿಯಿಂದ ಹೊರಗೆ ಹಾಕಬೇಕು. ಹೆತ್ತ ತಾಯಿಗೆ ಲಾಡಿ ಬಿಚ್ಚುವ ಕೆಲಸವನ್ನು ನಮ್ಮ ಜನಪ್ರತಿಧಿನಿಗಳು ಮಾಡಬಾರದು. ಡಿಸೆಂಬರ್ 3ರಂದು ಮಹಾರಾಷ್ಟ್ರ ದ ಇಬ್ಬರು ಗಡಿ ಸಮನ್ವಯ ಸಚಿವರು ಬೆಳಗಾವಿ ಬರುವುದಾಗಿ ಹೇಳಿದ್ದಾರೆ. ಯಾವುದೇ ಕಾರಣಕ್ಕೂ ಅವರಿಗೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ಕೊಡಬೇಡಿ' ಎಂದು ಮನವಿ ಮಾಡಿದರು.
ಹೊರನಾಡು ಕನ್ನಡಿಗರೆಂದು ಪರಿಗಣಿಸಲ್ಪಡುವ ತಾಳವಾಡಿ ಕನ್ನಡಿಗರು
ಸುಪ್ರೀಂಕೋರ್ಟ್ ನಲ್ಲಿ ಗಡಿ ವಿವಾದ ವಿಚಾರದಲ್ಲಿ ಮಹಾಜನ್ ವರದಿ ಬಿಟ್ಟರೆ ಬೇರೆಯಾವುದೇ ದಾಖಲೆಗಳು ಕೊಟ್ಟಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ ಭೀಮಾಶಂಕರ ಪಾಟೀಲ್, 'ಈ ವಾರದಲ್ಲಿ ಜತ್ತ ಕನ್ನಡಿಗರನ್ನ ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಭೇಟಿ ಮಾಡಿಸುತ್ತೇವೆ. ಈ ಸಂಬಂಧ ಸಿಎಂ ಕಚೇರಿ ಜೊತೆ ಸಂಪರ್ಕದಲ್ಲಿ ಇದ್ದೇವೆ. ಮಹಾರಾಷ್ಟ್ರ ಸರ್ಕಾರ ಬೆಳಗಾವಿ ವಿಚಾರದಲ್ಲಿ ಠರಾವು ಹೊರಡಿಸಿ ಸುಪ್ರೀಂಕೋರ್ಟ್ ಗೆ ದಾಖಲೆ ನೀಡಿದ್ದಾರೆ. ಆದ್ರೆ ಕರ್ನಾಟಕ ಸರ್ಕಾರ ಮಹಾಜನ್ ವರದಿ ಬಿಟ್ರೆ ಯಾವುದೇ ದಾಖಲಾತಿ ಸುಪ್ರೀಂಕೋರ್ಟ್‌ಗೆ ನೀಡಿಲ್ಲ ಎಂಬ ಮಾಹಿತಿ ಇದೆ. ಕೇವಲ ಬೆಳಗಾವಿ ನಮ್ಮದು ನಮ್ಮದು ಎಂದು ಭಾಷಣ ಮಾಡಿದ್ರೆ ಸಾಲದು. ಸುಪ್ರೀಂಕೋರ್ಟ್ ಗೆ ಭಾವನಾತ್ಮಕ ಭಾಷಣ ಬೇಕಾಗಿಲ್ಲ ದಾಖಲೆ ಬೇಕಾಗುತ್ತೆ.
karnataka maharashtra border dispute: ನಾವೂ ಕರ್ನಾಟಕ ಸೇರ್ತೀವಿ: ಪಂಢರಪುರದಲ್ಲೂ ಕೂಗು!
ಆದ್ರೆ ಕರ್ನಾಟಕ ಸರ್ಕಾರ ಈ ನಿಟ್ಟಿನಲ್ಲಿ ಯಾವುದೇ ದಾಖಲಾತಿ ನೀಡಿಲ್ಲ ಎಂಬ ಮಾಹಿತಿ ನಮಗೆ ಬಂದಿದೆ. ಗಡಿ ಭಾಗದಲ್ಲಿ ಭಾಷಾ ಜನಗಣತಿ ಮಾಡಿ ಎಂದು ಆಗ್ರಹಿಸಿದರೂ ಮಾಡಿಲ್ಲ. ಹತ್ತು ದಿನಗಳಾದರೂ ಗಡಿ ಅಭಿವೃದ್ಧಿ ಪ್ರಾಧಿಕಾರದವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕನ್ನಡಿಗರ ವಿರುದ್ಧ ತೀರ್ಪು ಬಂದ್ರೆ ನಾಳೆ ದೊಡ್ಡ ಕ್ರಾಂತಿ ಆಗುತ್ತೆ. ಎಂಇಎಸ್ ಪುಂಡಾಟಿಕೆ, ಪುಂಡರನ್ನು ಸಲುಹಲು ನಮ್ಮ ಸರ್ಕಾರ ಇದೆ ಅನಿಸುತ್ತೆ. ರೋಹಿಂಗ್ಯಾ ರೂಪದ ಎಂಇಎಸ್‌ನವರನ್ನು ಬೆಳಗಾವಿಯಿಂದ ಹೊರಹಾಕಿ. ಮಹಾರಾಷ್ಟ್ರದ ಮಂತ್ರಿಗಳು ಬೆಳಗಾವಿಗೆ ಬರ್ತಾರೆ ಎಂಬ ಬಗ್ಗೆ ಮಾಧ್ಯಮಗಳಲ್ಲಿ ನೋಡಿದೆ. ಯಾವುದೇ ಕಾರಣಕ್ಕೂ ಅವರನ್ನು ಬೆಳಗಾವಿ ನೆಲಕ್ಕೆ ಕಾಲಿಡಲು ಅವಕಾಶ ನೀಡಬಾರದು. ಒಂದು ವೇಳೆ ಅವರು ಬಂದ್ರೆ ಅವರ ಕಾಲು ಮುರಿದು ಕಲಿಸಬೇಕಾಗುತ್ತೆ.