Asianet Suvarna News Asianet Suvarna News

karnataka maharashtra border dispute: ನಾವೂ ಕರ್ನಾಟಕ ಸೇರ್ತೀವಿ: ಪಂಢರಪುರದಲ್ಲೂ ಕೂಗು!

  • ನಾವೂ ಕರ್ನಾಟಕ ಸೇರ್ತೀವಿ: ಪಂಢರಪುರದಲ್ಲೂ ಕೂಗು
  •  ಆಷಾಢ ಉತ್ಸವಕ್ಕೆ ಕರ್ನಾಟಕ ಸಿಎಂಗೆ ಆಹ್ವಾನ: ಜನರು
  •  ಜತ್‌ ಬಳಿಕ ಮಹಾದಲ್ಲಿ ಮತ್ತೆ ಕರ್ನಾಟಕ ಘೋಷಣೆ
  • ಮಹಾ ಕ್ಯಾತೆ ವಿರುದ್ಧ ಸಿಡಿದೆದ್ದ ಕನ್ನಡಿಗರು
We also join Karnataka Shout in Pandharpur too rav
Author
First Published Nov 28, 2022, 7:19 AM IST

ಶೇಷಮೂರ್ತಿ ಅವಧಾನಿ

 ಕಲಬುರಗಿ / ಬೆಳಗಾವಿ (ನ.28): 

ಮಹಾರಾಷ್ಟ್ರದ ಜತ್‌ ತಾಲೂಕಿನ ಬೆನ್ನಲ್ಲೇ ಇದೀಗ ಪ್ರಮುಖ ತೀರ್ಥಕ್ಷೇತ್ರವಾದ ಪಂಢರಪುರ ಕ್ಷೇತ್ರದ ಜನತೆಯಿಂದಲೂ ಕರ್ನಾಟಕ ಸೇರುವ ಘೋಷಣೆ ಮೊಳಗಿದೆ. ‘ನಾವು ಕರ್ನಾಟಕ ಸೇರುತ್ತೇವೆ, ಪಂಢರಪುರದ ವಿಠ್ಠಲನ ಕ್ಷೇತ್ರದಲ್ಲಿ ನಡೆಯುವ ಮುಂದಿನ ಆಷಾಢ ಉತ್ಸವಕ್ಕೆ ಕರ್ನಾಟಕ ಮುಖ್ಯಮಂತ್ರಿ ಅವರಿಗೆ ಆಹ್ವಾನ ನೀಡುತ್ತೇವೆ’ ಎಂದು ಹೇಳಿದ್ದಾರೆ.

ಮಹಾರಾಷ್ಟ್ರದ ಸೊಲ್ಲಾಪುರ, ಅಕ್ಕಲಕೋಟೆ, ಜತ್‌ ಕರ್ನಾಟಕಕ್ಕೆ ಸೇರಬೇಕು ಎಂಬ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಹೇಳಿಕೆ ಬೆನ್ನಲ್ಲೇ ಅಲ್ಲಿನ ಚಂದ್ರಭಾಗಾ ನದಿ ತೀರದ ಪಂಢರಪುರ ಜನತೆ ‘ನಾವೂ ಕರ್ನಾಟಕ ಸೇರುತ್ತೇವೆ’ ಎಂಬ ಘೋಷಣೆ ಮೊಳಗಿಸಿದ್ದಾರೆ. ಗಡಿ ವಿವಾದದಲ್ಲಿ ಹಿಂದೆಂದೂ ಪಂಢರಪುರ ಹೆಸರು ತಳಕು ಹಾಕಿಕೊಂಡಿರಲಿಲ್ಲ. ಆದರೆ, ಇದೀಗ ಮಹಾರಾಷ್ಟ್ರ ಸರ್ಕಾರ ರೂಪಿಸಿರುವ ಪಂಢರಪುರ ಕಾರಿಡಾರ್‌ ಯೋಜನೆ ವಿರೋಧಿಸಿ ಈ ಭಾಗದ ಜನ ಕರ್ನಾಟಕ ಸೇರುವ ಕೂಗು ಹಾಕಿದ್ದಾರೆ. ಇದು ಕರ್ನಾಟಕದ ಜತೆಗೆ ಪದೇ ಪದೇ ಗಡಿ ಕ್ಯಾತೆ ತೆಗೆಯುವ ಮಹಾರಾಷ್ಟ್ರಕ್ಕೆ ತೀವ್ರ ಮುಖಭಂಗವುಂಟು ಮಾಡಿದೆ.

ಕರ್ನಾಟಕಕ್ಕೆ ಸೇರುತ್ತೇವೆ: ಮರಾಠಿ ಹಳ್ಳಿಗಳ ಪಟ್ಟು..!

ಮಹಾರಾಷ್ಟ್ರ ಸರ್ಕಾರ ಪಂಢರಪುರ ಅಭಿವೃದ್ಧಿಗೆ .300 ಕೋಟಿ ಮೊತ್ತದ ಪಂಢರಪುರ ಕಾರಿಡಾರ್‌ ಯೋಜನೆ ಅನುಷ್ಠಾನಕ್ಕೆ ಮುಂದಾಗಿದ್ದು, ಈ ಸಂಬಂಧ ಟೆಂಡರ್‌ ಪ್ರಕ್ರಿಯೆಯೂ ಆರಂಭವಾಗಿದೆ. ಯೋಜನೆ ಜನಸ್ನೇಹಿಯಾಗಿಲ್ಲ, ಪಂಢರಪುರ ಕ್ಷೇತ್ರದ ಮೂಲ ಸ್ವರೂಪಕ್ಕೆ ಇದರಿಂದ ಧಕ್ಕೆ ಆಗಲಿದೆ, ಕ್ಷೇತ್ರದ ಪ್ರಾಚೀನ ಪರಂಪರೆ ಮುಕ್ಕಾಗುತ್ತದೆಂದು ಅಲ್ಲಿನ ವರ್ತಕರು, ಸಾರ್ವಜನಿಕರು, ಸಂಘಟನೆಯವರು ಅಸಮಾಧಾನ ಹೊರಹಾಕಿದ್ದಾರೆæ. ಈ ಯೋಜನೆ ಕೈ ಬಿಡುವಂತೆ ಆಗ್ರಹಿಸಿ ತೀರ್ಥಕ್ಷೇತ್ರ ಪಂಢರಪುರ ಬಚಾವ್‌ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ನ.26ರ ಶನಿವಾರ ಪಂಢರಪುರ ವಿಠ್ಠಲ ಮಂದಿರದ ಪಶ್ಚಿಮ ದ್ವಾರದ ಬಳಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ವರ್ತಕರು, ಜನತೆ, ವಿವಿಧ ಸಂಘಟನೆಗಳ ಪ್ರಮುಖರು ಪಂಢರಪುರ ಕಾರಿಡಾರ್‌ ಕೈಬಿಡಿ, ಇಲ್ಲದಿದ್ದರೆ ನಾವು ಕರ್ನಾಟಕದತ್ತ ಹೆಜ್ಜೆ ಹಾಕುತ್ತೇವೆ ಎಂದು ಗುಡುಗಿದ್ದಾರೆ. ಕರ್ನಾಟಕ ಸೇರುವ ಹಂಬಲ ಹೊರಹಾಕಿರುವ ಪಂಢರಪುರದವರ ಈ ಒಗ್ಗಟ್ಟಿನ ಹೇಳಿಕೆ ಭಾನುವಾರದ ಮಹಾರಾಷ್ಟ್ರದ ಪ್ರಮುಖ ದಿನಪತ್ರಿಕೆಗಳಲ್ಲಿ ಮುಖಪುಟದ ಸುದ್ದಿಯಾಗಿ ಗಮನ ಸೆಳೆದಿದೆ.

ವಿಠ್ಠಲ ಕನ್ನಡಿಗ-ಅಲ್ಲಿಗೇ ಹೋಗೋಣ:

ಪ್ರತಿಭಟನೆ ವೇಳೆ ಮಾತನಾಡಿರುವ ತೀರ್ಥಕ್ಷೇತ್ರ ಪಂಢರಪುರ ಬಚಾವ್‌ ಸಮಿತಿ ಅಧ್ಯಕ್ಷ ರಾಮಕೃಷ್ಣ ಮಹಾರಾಜ್‌ ವೀರ್‌, ಮುಖಂಡ ಆದಿತ್ಯ ಫತೇಪೂರಕರ್‌, ಸಂತ ಜ್ಞಾನೇಶ್ವರರ ಅಭಂಗದಲ್ಲಿ ಕಾನಡಾ (ಕನ್ನಡಿಗ) ವಿಠ್ಠಲ ಎಂದು ವಿಠ್ಠಲನ ಕುರಿತು ಉಲ್ಲೇಖವಿದೆ, ವಿಠ್ಠಲನ ಊರು ಪಂಢರಪುರ, ವಿಠ್ಠಲನ ತವರು ಕರ್ನಾಟಕ. ಪಂಢರಪುರವು ವಿಠ್ಠಲನ ತವರು ರಾಜ್ಯವಾದ ಕರ್ನಾಟಕಕ್ಕೆ ಸೇರುವುದು ಹೆಚ್ಚು ಸೂಕ್ತ ಎಂದಿದ್ದಾರೆ. ಪಂಢರಪುರ ಕಾರಿಡಾರ್‌ ಯೋಜನೆ ರದ್ದಾಗದೆ ಹೋದರೆ ಬರುವ ಆಷಾಢÜ ಉತ್ಸವಕ್ಕೆ ಕರ್ನಾಟಕದ ಮುಖ್ಯಮಂತ್ರಿಗಳನ್ನೇ ಪಂಢರಪುರಕ್ಕೆ ಆಹ್ವಾನಿಸುವ, ಅವರಿಂದಲೇ ವಿಠ್ಠಲ ದೇವರಿಗೆ ಆಷಾಢದ ವಿಶೇಷ ಪೂಜಾದಿಗಳನ್ನು ಮಾಡಿಸುವ ಇಂಗಿತ ಹೊರಹಾಕಿದ್ದಾರೆ.

ಜತ್ತ ತಾಲೂಕಿನ ಗ್ರಾಮಸ್ಥರು ಶುಕ್ರವಾರ ಸಭೆ ನಡೆಸಿ 42 ಹಳ್ಳಿಗಳ ನೀರಿನ ಸಮಸ್ಯೆ ಪರಿಹರಿಸದಿದ್ದರೆ ಕರ್ನಾಟಕ ಸೇರುವ ನಿರ್ಣಯ ತೆಗೆದುಕೊಳ್ಳುವುದಾಗಿ ಘೋಷಿಸಿದ್ದರು.

ಗಡಿ ವಿವಾದ: ಮಹಾ ಬಿಜೆಪಿ ಡಿಸಿಎಂ V/S ಕರ್ನಾಟಕ ಬಿಜೆಪಿ ಸಿಎಂ ಟಾಕ್‌ ವಾರ್‌..!

ಏನಿದು ಪಂಢರಪುರ ಕಾರಿಡಾರ್‌?

ಪಂಢರಪುರ ತೀರ್ಥ ಕ್ಷೇತ್ರ ಅಭಿವೃದ್ಧಿ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಘೋಷಿಸಿರುವ ಯೋಜನೆ ಇದು. ಈ ಯೋಜನೆಯಿಂದ ಪಂಢರಪುರದಲ್ಲಿರುವ ಸಂತ ನಾಮದೇವರ ಜನ್ಮಸ್ಥಾನ, ಸಂತ ತುಕಾರಾಂ ಮಹಾರಾಜರ ವಂಶಜರ ಮಠ, ಅಮಳನೇವರ ವಂಶಜರ ಮಠ ಸೇರಿ ಅಲ್ಲಿರುವ ಹತ್ತು ಹಲವು ಪುರಾತನ ಪರಂಪರೆ, ಸಂಸ್ಕೃತಿಯ ಕೊಂಡಿಯಂತಿರುವ ಮಠ-ಮಂದಿರಗಳು ಹಾಳಾಗಲಿವೆ. ರಸ್ತೆ ಅಗಲೀಕರಣದಿಂದಾಗಿ ಜನ ಮನೆ- ಮಠ ಕಳೆದುಕೊಂಡು ಬೀದಿಗೆ ಬರುತ್ತಾರೆ ಎಂಬುದು ಸ್ಥಳೀಯರ ಆರೋಪ. ಅಭಿವೃದ್ಧಿ ಮಾಡುವುದಾದರೆ ಚಂದ್ರಭಾಗಾ ನದಿತೀರದಲ್ಲಿ 65 ಎಕರೆ ಜಾಗದಲ್ಲಿ ಅಭಿವೃದ್ಧಿ ಮಾಡಿ ಎಂಬುದು ಅವರ ಆಗ್ರಹ.

Follow Us:
Download App:
  • android
  • ios