Asianet Suvarna News Asianet Suvarna News

Bengaluru: ಹೊಸ ವರ್ಷಕ್ಕೆ ಪೀಣ್ಯ ಮೇಲ್ಸೇತುವೆ ಭಾರಿ ವಾಹನಗಳಿಗೆ ಮುಕ್ತ?

ನಗರದಿಂದ ರಾಜ್ಯದ 22ಕ್ಕೂ ಅಧಿಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯಲ್ಲಿ ಹೊಸ ವರ್ಷದ ವೇಳೆಗೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಬಿ.ಎಸ್‌.ಪ್ರಹ್ಲಾದ್‌ ತಿಳಿಸಿದ್ದಾರೆ.

January 1st heavy vehicles likely to be allowed on peenya flyover at bengaluru gvd
Author
First Published Sep 29, 2022, 6:46 AM IST

ಬೆಂಗಳೂರು (ಸೆ.29): ನಗರದಿಂದ ರಾಜ್ಯದ 22ಕ್ಕೂ ಅಧಿಕ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯಲ್ಲಿ ಹೊಸ ವರ್ಷದ ವೇಳೆಗೆ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಬಿಬಿಎಂಪಿ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಬಿ.ಎಸ್‌.ಪ್ರಹ್ಲಾದ್‌ ತಿಳಿಸಿದ್ದಾರೆ. ಈ ಕುರಿತು ಬುಧವಾರ ವಿವರಣೆ ನೀಡಿದ ಅವರು, ರಾಷ್ಟ್ರೀಯ ಹೆದ್ದಾರಿ-4 ಪೀಣ್ಯ ಎಲಿವೇಟೆಡ್‌ ಫ್ಲೈಓವರ್‌ ಕಳೆದ ವರ್ಷ ಡಿಸೆಂಬರ್‌ನಲ್ಲಿ ಪಿಲ್ಲರ್‌ ಸಂಖ್ಯೆ 102-103ರ ನಡುವಿನ ಪ್ರೆಸ್‌ಟ್ರೆಸ್‌ ಕೇಬಲ್‌ಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. 

ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಂಡಿದ್ದ ಹೆದ್ದಾರಿ ಪ್ರಾಧಿಕಾರ ಫೆ.16ರಿಂದ ಲಘು ವಾಹನಗಳ ಸಂಚಾರಕ್ಕೆ ಮುಕ್ತಗೊಳಿಸಿತ್ತು. ಆದರೆ, ಭಾರೀ ವಾಹನಗಳ ಸಂಚಾರಕ್ಕೆ ಮುನ್ನವಾಗಿ ಡಿಸ್ಟೆ್ರಸ್ಡ್‌ ಕೇಬಲ್‌ಗಳಲ್ಲಿ ಉಂಟಾಗಿರುವ ನ್ಯೂನತೆಗಳನ್ನು ಸರಿಪಡಿಸುವ ಕಾರ್ಯ ಮಾಡಬೇಕಿದೆ. ಇದಕ್ಕೆ ಅಗತ್ಯವಿರುವ ಕೇಬಲ್‌ ಸ್ಟ್ರಾಂಡ್ಸ್‌ಗಳನ್ನು ತರಿಸಲಾಗಿದ್ದು, ಕಾಮಗಾರಿಯು ಒಂದೂವರೆ ತಿಂಗಳಲ್ಲಿ ಪೂರ್ಣಗೊಳ್ಳುವ ಸಾಧ್ಯತೆಯಿದೆ. ನಂತರ ಭಾರಿ ವಾಹನಗಳ ಸಂಚಾರಕ್ಕೂ ಅವಕಾಶ ನೀಡುವ ಬಗ್ಗೆ ಹೆದ್ದಾರಿ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಗಿದೆ. ಇದರಿಂದ ಈ ಭಾಗದಲ್ಲಿ ಉಂಟಾಗುತ್ತಿದ್ದ ಟ್ರಾಫಿಕ್‌ ಸಮಸ್ಯೆಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.

Peenya Flyover ನಲ್ಲಿ ಭಾರೀ ವಾಹನಕ್ಕೆ ನಿಷೇಧ

ರಾಷ್ಟ್ರೀಯ ಹೆದ್ದಾರಿ-4ರ ಮೇಲ್ಸೇತುವೆಯ ಕೇಬಲ್‌ ದುರಸ್ತಿಗೆ 53 ದಿನಗಳ ಕಾಲಾವಕಾಶ (ಡಿ.25- ಫೆ.16) ಸಮಯ ತೆಗೆದುಕೊಂಡಿತ್ತು. ನಂತರ ತಲಾ 30 ಟನ್‌ ಭಾರವನ್ನು ಹೊಂದಿದ 6 ಟಿಪ್ಪರ್‌ಗಳನ್ನು ಪರೀಕ್ಷಾರ್ಥ ಸಂಚಾರಕ್ಕೆ ಬಿಟ್ಟು ಸಾಮರ್ಥ್ಯ ತಾಳ್ವಿಕೆ ದತ್ತಾಂಶ ಸಂಗ್ರಹಿಸಲಾಯಿತು. ಈ ವೇಳೆ ಭಾರಿ ಗಾತ್ರದ ವಾಹನಗಳ ಸಂಚಾರ ನಿಷೇಧಿಸಿ ಕೇವಲ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಬಗ್ಗೆ ತೀರ್ಮಾನಿಸಲಾಯಿತು. ನಂತರ, 6 ತಿಂಗಳು ತಾಳ್ವಿಕೆ ಸಾಮರ್ಥ್ಯದ ಬಗ್ಗೆ ನಿಗಾ ವಹಿಸಿದ್ದು, ಸದೃಢತೆ ಬಗ್ಗೆ ಸಮಸ್ಯೆಯಿಲ್ಲ ಎಂಬ ಮಾಹಿತಿ ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಡಿಸ್ಟೆ್ರಸ್ಡ್‌ ಕೇಬಲ್‌ಗಳನ್ನು ದುರಸ್ತಿಗೊಳಿಸಿ ನಂತರ ಭಾರಿ ವಾಹನಗಳ ಸಂಚಾರಕ್ಕೂ ಮುಕ್ತಗೊಳಿಸಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

Bengaluru: ಪೀಣ್ಯ ಮೇಲ್ಸೇತುವೆ ಮೇಲೆ ಶೀಘ್ರ ಭಾರಿ ವಾಹನಗಳ ಸಂಚಾರ

ಪೀಣ್ಯ ಮೇಲ್ಸೇತುವೆಯ ರಚನಾತ್ಮಕ ಸುಸ್ಥಿತಿ ಬಗ್ಗೆ ರಾಜ್ಯ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಕೇಳಿ ಕೊಂಡಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಧಿಕಾರದ ಅಧಿಕಾರಿಗಳು ಮೇಲ್ಸೇತುವೆಯ ರಚನಾತ್ಮಕ ಸುಸ್ಥಿತಿ (ಸೌಂಡ್‌ನೆಸ್‌ ಆಫ್‌ ಸ್ಟ್ರಕ್ಚರ್‌) ನಿರ್ಧರಿಸಲು ಹೆಚ್ಚುವರಿ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಈ ಎಲ್ಲ ಪರೀಕ್ಷೆಗಳ ವರದಿ ಆಧರಿಸಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಆದರೆ, ಮೇಲ್ಸೇತುವೆಗೆ ಬದಲಿಯಾಗಿ ಭಾರಿ ಗಾತ್ರದ ವಾಹನಗಳ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯನ್ನು ಮಾಡಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯಾವುದೇ ಯೋಜನೆ ರೂಪಿಸಿಲ್ಲ ಎಂದು ಸ್ಪಷ್ಟಪಡಿಸಿದೆ.

Follow Us:
Download App:
  • android
  • ios