Asianet Suvarna News Asianet Suvarna News

Peenya Flyover ನಲ್ಲಿ ಭಾರೀ ವಾಹನಕ್ಕೆ ನಿಷೇಧ

  • 20 ಟನ್‌ಗಿಂತ ಅಧಿಕ ಭಾರದ ವಾಹನ ಸಂಚಾರಕ್ಕೆ ವಿರೋಧ
  • ಹೆದ್ದಾರಿ ಪ್ರಾಧಿಕಾರಕ್ಕೆ ಐಐಎಸ್ಸಿ ತಜ್ಞ ವರದಿ
  • ಈ ಹಿನ್ನೆಲೆಯಲ್ಲಿ 4-6 ತಿಂಗಳು ಭಾರೀ ವಾಹನ ಸಂಚಾರಕ್ಕಿಲ್ಲ ಅವಕಾಶ
  • ವಿಸ್ತೃತ ವರದಿ ನೀಡಲು ಐಐಎಸ್ಸಿಗೆ ಪ್ರಾಧಿಕಾರ ಸೂಚನೆ

 

Peenya flyover is not open for heavy vehicles gow
Author
Bengaluru, First Published Jul 11, 2022, 12:48 PM IST

ಸಿದ್ದು ಚಿಕ್ಕಬಳ್ಳೇಕೆರೆ

ಬೆಂಗಳೂರು (ಜು.11): ತುಮಕೂರು ರಸ್ತೆಯ ಪೀಣ್ಯ ಮೇಲ್ಸೇತುವೆಯು ಎಲ್ಲ ಬಗೆಯ ವಾಹನಗಳ ಸಂಚಾರಕ್ಕೆ ಯೋಗ್ಯವೇ ಎಂಬುದನ್ನು ಪರಿಶೀಲಿಸಿ ವಿಸ್ತೃತ ವರದಿ ನೀಡಲು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ(ಎನ್‌ಎಚ್‌ಎಐ)ವು ತಜ್ಞರಿಗೆ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಇನ್ನೂ ಮೂರ್ನಾಲ್ಕು ತಿಂಗಳು ಈ ಫ್ಲೈ ಓವರ್‌ನಲ್ಲಿ ಭಾರೀ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ.

ಮೇಲ್ಸೇತುವೆಯ ಪರಿಶೀಲನೆ ನಡೆಸಿದ್ದ ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್‌ಸಿ)ಯ ತಜ್ಞರು, ದೆಹಲಿಯಿಂದ ಆಗಮಿಸಿದ್ದ ಎನ್‌ಎಚ್‌ಎಐ ಅಧಿಕಾರಿಗಳಿಗೆ ವರದಿ ನೀಡಿದ್ದಾರೆ. ‘20 ಟನ್‌ಗಿಂತ ಅಧಿಕ ತೂಕವಿರುವ ವಾಹನಗಳನ್ನು ಹೊರತುಪಡಿಸಿ ಉಳಿದ ಎಲ್ಲ ಬಗೆಯ ವಾಹನಗಳಿಗೆ ಮೇಲ್ಸೇತುವೆಯನ್ನು ಮುಕ್ತಗೊಳಿಸಬಹುದು. ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ’ ಎಂದು ತಿಳಿಸಿದ್ದರು.

ಶಿವಾನಂದ ವೃತ್ತದ ಮೇಲ್ಸೇತುವೆ ಬಳಿಯಲ್ಲಿ ಫುಟ್‌ಪಾತ್‌ ಒತ್ತುವರಿ

ಲಾರಿ, ಟ್ರಕ್‌ ಅಥವಾ ಮಲ್ಟಿವ್ಹೀಲ್‌ ವೆಹಿಕಲ್‌ (ಹೆಚ್ಚು ಟೈರ್‌ ಹೊಂದಿರುವ ಭಾರೀ ವಾಹನ)ಗಳಲ್ಲಿ 20 ಟನ್‌ಗಿಂತ ಅಧಿಕ ತೂಕ ಇದೆ ಎಂಬುದನ್ನು ಪರಿಶೀಲಿಸುವುದು ಹೇಗೆ, ತೂಕ ಮಾಡುವುದು ಕಾರ್ಯ ಸಾಧ್ಯವೇ, 20 ಟನ್‌ಗಿಂತ ಕಡಿಮೆ ತೂಕ ಇದೆ ಎಂದು ವಾಹನಗಳ ಮಾಲಿಕರು ವಾಗ್ದಾದಕ್ಕೆ ಇಳಿದರೆ ಅದನ್ನು ಬಗೆಹರಿಸುವುದು ಹೇಗೆ ಎಂಬುದು ಸೇರಿದಂತೆ ಹಲವು ಪ್ರಶ್ನೆಗಳು ಎನ್‌ಎಚ್‌ಎಐ ಅಧಿಕಾರಿಗಳನ್ನು ಕಾಡಿವೆ.

ವರದಿ ಜಾರಿಗೆ ಹಿಂದೇಟು: ಆದ್ದರಿಂದ ಈ ವರದಿ ಅನುಷ್ಠಾನಗೊಳಿಸುವುದು ಕಾರ್ಯಸಾಧ್ಯವಲ್ಲ. ಮೇಲ್ಸೇತುವೆಯ ಎರಡೂ ಬದಿ ಇರುವ ಸಂಚಾರ ಪೊಲೀಸರೂ ಇದರಿಂದ ಸಂಕಷ್ಟಅನುಭವಿಸಬೇಕಾಗುತ್ತದೆ ಎಂದು ಹಿಂದೇಟು ಹಾಕಿದ ಎನ್‌ಎಚ್‌ಎಐ, ‘ಇದೆಲ್ಲಾ ಗೊಂದಲ ಬೇಡ. ಆದಷ್ಟುಬೇಗ ವಿಸ್ತೃತ ವರದಿ ನೀಡಿ’ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ತಜ್ಞರಿಗೆ ಸೂಚನೆ ನೀಡಿದೆ ಎಂದು ಮೂಲಗಳು ತಿಳಿಸಿವೆ.

ಕೈಕೊಟ್ಟ ಬೇರಿಂಗ್, ಹತ್ತೇ ವರ್ಷದಲ್ಲಿ ನಮ್ಮ ಮೆಟ್ರೋ ನಿಜ ಬಣ್ಣ ಬಯಲು

ವಿಸ್ತೃತ ವರದಿ ನೀಡುವಂತೆ ಎನ್‌ಎಚ್‌ಎಐ ಸೂಚಿಸಿರುವುದರಿಂದ ಮೇಲ್ಸೇತುವೆಯ ವಿಸ್ತೃತ ಅಧ್ಯಯನ, ಕೇಬಲ್‌ಗಳ ಪರಿಶೀಲನೆ, ವಿಫಲತೆ ಪರೀಕ್ಷೆ, ಕಂಪ್ಯೂಟರ್‌ನಲ್ಲಿ ಮಾದರಿ ರಚಿಸಿ ಪರಿಶೀಲನೆ ನಡೆಸಬೇಕಿದೆ. ಇದಕ್ಕೆ ಮೂರ್ನಾಲ್ಕು ತಿಂಗಳು ಕಾಲಾವಕಾಶ ಬೇಕಾಗಲಿದೆ. ರಾಜ್ಯದ 18 ಜಿಲ್ಲೆಗಳನ್ನು ಸಂಪರ್ಕಿಸುವ ಮೇಲ್ಸೇತುವೆ ಇದಾಗಿದ್ದು, ಅಲ್ಲಿಯವರೆಗೂ ಭಾರೀ ವಾಹನಗಳು ಮೇಲ್ಸೇತುವೆ ಪ್ರವೇಶಿಸಲು ಸಾಧ್ಯವಿಲ್ಲ.

8ನೇ ಮೈಲಿ ಜಂಕ್ಷನ್‌ ಬಳಿ 102 ಮತ್ತು 103ನೇ ಪಿಲ್ಲರ್‌ಗಳ ಮಧ್ಯೆ ಸೆಗ್ಮೆಂಟ್‌ ಒಳಗಡೆ ಸಂಪರ್ಕ ಕಲ್ಪಿಸಲು 6 ಕೇಬಲ್‌ ಅಳವಡಿಸಿದ್ದು, ಇವು ಸೆಗ್ಮೆಂಟ್‌ಗಳು ಜಾರದಂತೆ ಹಿಡಿದಿಡುತ್ತವೆ. ಇದರಲ್ಲಿ ಎರಡು ಕೇಬಲ್‌ ಬಾಗಿದ್ದರಿಂದ ಸಮಸ್ಯೆ ಉಂಟಾಗಿ ಡಿ.25ರಿಂದ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ಬಳಿಕ ಹಲವು ಪರೀಕ್ಷೆ ನಡೆಸಿ ಇದೀಗ ಹಗಲಿನಲ್ಲಿ ಮಾತ್ರ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು: ಶಿವಾನಂದ ಫ್ಲೈಓವರ್‌ ಆ.15ರ ವೇಳಗೆ ಸಿದ್ಧ

ಕಾಲಾವಕಾಶ ಬೇಕು: 20 ಟನ್‌ಗಿಂತ ಕಡಿಮೆ ತೂಕದ ವಾಹನಗಳು ಮೇಲ್ಸೇತುವೆಯಲ್ಲಿ ಸಂಚಾರ ಮಾಡಬಹುದು ಎಂದು ವರದಿ ನೀಡಲಾಗಿತ್ತು. ಬಳಿಕ ಮೇಲ್ಸೇತುವೆಯ ಕ್ಷಮತೆ ಪರಿಶೀಲಿಸಿ ವಿಸ್ತೃತ ವರದಿ ನೀಡುವಂತೆ ಎನ್‌ಎಚ್‌ಎಐ ಅಧಿಕಾರಿಗಳು ಸೂಚಿಸಿದ್ದಾರೆ. ಇದಕ್ಕೆ ಮೂರ್ನಾಲ್ಕು ತಿಂಗಳ ಕಾಲಾವಕಾಶ ಬೇಕಾಗಲಿದೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ಎಂಜಿನಿಯರಿಂಗ್‌ ವಿಭಾಗದ ಪ್ರೊ.ಚಂದ್ರಕಿಶನ್‌ ಸ್ಪಷ್ಟಪಡಿಸಿದ್ದಾರೆ.

Follow Us:
Download App:
  • android
  • ios