ಕೊಡಗಿನ ಸಾಹಸಿ ಮಹಿಳೆ ಜಮ್ಮಡ ಪ್ರೀತ್ ಅಪ್ಪಯ್ಯ ಅವರು ಆಸ್ಟ್ರೇಲಿಯಾದ ಮೌಂಟ್ ಕೊಸ್ಸಿಯಸ್ಕೊ ಶಿಖರವನ್ನು ಕೊಡವ ಉಡುಪಿನಲ್ಲಿ ಏರಿ ಸಾಧನೆ ಮಾಡಿದ್ದಾರೆ. ಇದೇ ವೇಳೆ, ಕೊಡಗು ಸೈನಿಕ ಶಾಲೆಯಲ್ಲಿ 80ನೇ ಸ್ವಾತಂತ್ರ್ಯ ದಿನವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಮಡಿಕೇರಿ: ಕೊಡಗಿನ ಸಾಹಸಿ ಮಹಿಳೆ ಜಮ್ಮಡ ಪ್ರೀತ್ ಅಪ್ಪಯ್ಯ ಅವರು ಆಸ್ಟ್ರೇಲಿಯಾದ ಅತಿ ಎತ್ತರದ ಶಿಖರ ಮೌಂಟ್ ಕೊಸ್ಸಿಯಸ್ಕೊವನ್ನು ಯಶಸ್ವಿಯಾಗಿ ಏರಿದ್ದಾರೆ. ಆ.10ರಿಂದ 19ರವರೆಗೆ ನಡೆಯುತ್ತಿರುವ ಈ ಸಾಹಸದಲ್ಲಿ ಅವರು ಸ್ವಾತಂತ್ರ್ಯ ದಿನದಂದು ಹಿಮ ಮತ್ತು ಚಳಿ ಗಾಳಿಯ ನಡುವೆ ಶಿಖರದ ತುತ್ತ ತುದಿಯಲ್ಲಿ ಭಾರತದ ರಾಷ್ಟ್ರ ಧ್ವಜವನ್ನು ಹಾರಿಸಿದ್ದಾರೆ. ವಿಶೇಷವೆಂದರೆ ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಈ ಸಾಧನೆ ಮಾಡುವ ಮೂಲಕ ಕೊಡಗಿನ ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದ್ದಾರೆ. ಇದು ಅವರ ‘ಸೆವೆನ್ ಸಮಿಟ್ಸ್’ ಗುರಿಯತ್ತ ಮತ್ತೊಂದು ಹೆಜ್ಜೆಯಾಗಿದೆ. ಈಗಾಗಲೇ ಅವರು ಆಫ್ರಿಕಾದ ಕಿಲಿಮಂಜಾರೋ ಮತ್ತು ಯುರೋಪಿನ ಎಲ್ಬ್ರಸ್ ಶಿಖರಗಳನ್ನು ಏರಿದ್ದಾರೆ.

ಜನರಲ್ ತಿಮ್ಮಯ್ಯ ಪರೇಡ್ ಮೈದಾನದಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನ

ಕುಶಾಲನಗರ ಸಮೀಪದ ಕೊಡಗು ಸೈನಿಕ ಶಾಲೆಯ ಜನರಲ್ ತಿಮ್ಮಯ್ಯ ಪರೇಡ್ ಮೈದಾನದಲ್ಲಿ ಭಾರತದ 80ನೇ ಸ್ವಾತಂತ್ರ್ಯ ದಿನ ಅದ್ದೂರಿಯಾಗಿ ನಡೆಸಲಾಯಿತು. ದೇಶದ ಎಂಟು ದಶಕಗಳ ಸ್ವಾತಂತ್ರ್ಯದ ನೆನಪಿನಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದಲ್ಲಿ ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ಸಿಬ್ಬಂದಿ, ನಿವೃತ್ತ ಯೋಧರು ಹಾಗೂ ಗಣ್ಯ ಸಂಸ್ಥಾಪಕರು ಭಾಗವಹಿಸಿದ್ದರು.

ಬೆಂಗಳೂರಿನ ಏರ್ ಫೋರ್ಸ್ ಕೊಡಗು ಅಸೋಸಿಯೇಷನ್‌ನ ಅಧ್ಯಕ್ಷ ಏರ್ ಮಾರ್ಷಲ್ ಬಾಲ್ತಿಕಲಾಂಡ ಯು. ಚಂಗಪ್ಪ (ನಿವೃತ್ತ), ಪಿವಿ ಎಸ್ ಎಂ, ಎವಿ ಎಸ್ ಎಂ, ವಿಎಸ್ ಎಂ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

ಮುಖ್ಯ ಅತಿಥಿಗಳು ಶಾಲೆಯಲ್ಲಿನ ಯುದ್ಧ ಸ್ಮಾರಕಕ್ಕೆ ಪುಷ್ಪಗುಚ್ಛ ಸಮರ್ಪಿಸುವ ಮೂಲಕ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ನಂತರ ಜನರಲ್ ತಿಮ್ಮಯ್ಯ ಪರೇಡ್ ಮೈದಾನಕ್ಕೆ ಆಗಮಿಸಿದ ಮುಖ್ಯ ಅತಿಥಿಗಳಾದ ಚಂಗಪ್ಪ ಅವರು ದ್ವಜಾರೋಹಣ ನೆರವೇರಿಸಿದರು. ಶಾಲೆಯ ಮೆನನ್, ಕಾರ್ಯಪ್ಪ, ಕಟಾರಿ ಮತ್ತು ಸುಬ್ರತೋ ಎಂಬ ನಾಲ್ಕು ಹೌಸ್‌ಗಳ ತುಕಡಿಗಳ ಪರಿವೀಕ್ಷಣೆ ನಡೆಸಿದರು.