Asianet Suvarna News Asianet Suvarna News

Charukeerthi Bhattaraka Swamiji: ಬೆಳಗೊಳದ ಭಟ್ಟಾರಕ ಶ್ರೀಗಳವರ ನೆನಪಲ್ಲಿ ಜೈನಕಾಶಿ ಮೂಡುಬಿದಿರೆ

2012ರ ಫೆಬ್ರವರಿಯಲ್ಲಿ ಮೂಡುಬಿದಿರೆಗೆ ಪುರಪ್ರವೇಶ ಮಾಡಿದ್ದ ಶ್ರೀಗಳು ಜನತೆಯ ಗೌರವ ಸಮ್ಮಾನ ಸ್ವೀಕರಿಸಿ ವಿದ್ವಾಂಸ, ಗಣ್ಯರನ್ನೂ ಗೌರವಿಸಿ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಹರಸಿದ್ದರು.

Jainakashi charukeerthi bhattaraka swamiji death shravanabelagola rav
Author
First Published Mar 24, 2023, 2:39 PM IST

ಗಣೇಶ್‌ ಕಾಮತ್‌

ಮೂಡುಬಿದಿರೆ (ಮಾ.24) : ಶ್ರವಣಬೆಳಗೊಳದ ಕರ್ಮಯೋಗಿ ಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀಗಳವರಿಗೂ ಜೈನಕಾಶಿ ಮೂಡುಬಿದಿರೆಗೂ ಅನನ್ಯ ನಂಟಿದೆ. ಅವಿಭಜಿತ ದ.ಕ. ಜಿಲ್ಲೆಯನ್ನು ಪರಿಗಣಿಸಿದರೆ ಪೂರ್ವಾಶ್ರಮದಲ್ಲಿ ಆಗಿನ ಕಾರ್ಕಳ ತಾಲೂಕಿನ ವರಂಗದ ಇಲ್ಲಿನ ಜೈನಮಠದ ಭಟ್ಟಾರಕ ಶ್ರೀಗಳವರ ದೀಕ್ಷಾ ಗುರುಗಳಾಗಿದ್ದವರು ಕರ್ಮಯೋಗಿ ಶ್ರೀಗಳವರು. ಮೂಡುಬಿದಿರೆಯ ಸಾವಿರ ಕಂಬದ ಬಸದಿ ಸಹಿತ ಜೈನಕಾಶಿಯ ಬಸದಿಗಳು, ಸಿದ್ಧಾಂತ, ದರ್ಶನ, ಗ್ರಂಥ ಭಂಡಾರಗಳ ಕುರಿತು ದೂರದರ್ಶಿತ್ವ, ತಮ್ಮದೇ ಚಿಂತನೆಗಳನ್ನು ಹೊಂದಿದ್ದರು.

1999ರಲ್ಲಿ ಮೂಡುಬಿದಿರೆ(Mudubidere)ಯ ಪೀಠಕ್ಕೆ ತಮ್ಮ ಪ್ರೀತಿಯ ಶಿಷ್ಯರನ್ನು ಪಟ್ಟಾಭಿಷಿಕ್ತರನ್ನಾಗಿಸುವ ಸಂದರ್ಭದಲ್ಲಿ ಸ್ವತಃ ಉಪಸ್ಥಿತರಿದ್ದು ಹರಸಿದ್ದು ಇಲ್ಲಿನ ಶ್ರಾವಕರಿಗೆ ಅವಿಸ್ಮರಣೀಯ ಕ್ಷಣಗಳಾಗಿದ್ದವು. ಮೂಡುಬಿದಿರೆಯ ಶ್ರೀಗಳವರು ಮತ್ತು ಇಲ್ಲಿನ ಧವಲತ್ರಯ ಗ್ರಂಥಗಳ ಬಗ್ಗೆ ಅವರ ಒಲವು 2006 ಮಹಾಮಸ್ತಕಾಭಿಷೇಕದ ವೇಳೆಗೆ ಸ್ಪಷ್ಟವಾಗಿತ್ತು. ಧವಲತ್ರಯ ಗ್ರಂಥಗಳ ಕನ್ನಡ ಅನುವಾದ ಕೃತಿಗಳ ಲೋಕಾರ್ಪಣೆಯ ಐತಿಹಾಸಿಕ ಸಮಾರಂಭವನ್ನು ಪ್ರಮುಖ ಆಚಾರ್ಯರು, ಮುನಿಸಂಘದ ಉಪಸ್ಥಿತಿಯಲ್ಲಿ ನಡೆಸಿದ್ದ ಕರ್ಮಯೋಗಿ ಶ್ರೀಗಳವರು ಮೂಡುಬಿದಿರೆಯ ಭಟ್ಟಾರಕರ ಜತೆ ಧವಲತ್ರಯ ಮೂಲ ತಾಡಪ್ರತಿಯನ್ನು ಆನೆ ಮೇಲೆ ಮೆರವಣಿಗೆಯೊಂದಿಗೆ ಬರಮಾಡಿಕೊಂಡು ಜೈನಕಾಶಿ ಮೂಡುಬಿದಿರೆಯನ್ನೇ ಗೌರವಿಸಿ ಆ ಸಂದರ್ಭ ಭಾವುಕರಾಗಿದ್ದರು.

Breaking: ಶ್ರವಣಬೆಳಗೊಳದ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಜಿನೈಕ್ಯ

2012ರ ಫೆಬ್ರವರಿಯಲ್ಲಿ ಮೂಡುಬಿದಿರೆಗೆ ಪುರಪ್ರವೇಶ ಮಾಡಿದ್ದ ಅವರು, ಜನತೆಯ ಗೌರವ ಸಮ್ಮಾನ ಸ್ವೀಕರಿಸಿ ವಿದ್ವಾಂಸ, ಗಣ್ಯರನ್ನೂ ಗೌರವಿಸಿ ಸಭಾ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಹರಸಿದ್ದರು. ಇದೇ ಸಂದರ್ಭದಲ್ಲಿ ಮೂಡುಬಿದಿರೆಯ ಮಹಾಕವಿ ರತ್ನಾಕರವರ್ಣಿಯ ಬೆಟ್ಕೇರಿಯಲ್ಲಿನ ನಗರೇಶ್ವರ ಮನೆಗೂ ಭೇಟಿ ನೀಡಿದ್ದ ಕಲ್ಲಿನ ಕೋಣೆಯ ಕವಿಯ ಪ್ರೀತಿಯ ತೂಗು ಮಂಚವನ್ನೂ ವೀಕ್ಷಿಸಿ ರತ್ನಾಕರವಣಿರ್ಯ ಪರಮ ಪರಂಜ್ಯೋತಿ.. ನಿರಂಜನ ಸ್ತುತಿಯನ್ನು ಸ್ವತಃ ಹಾಡಿ ಭಾವಪರವಶರಾದದ್ದು ಮೂಡುಬಿದಿರೆಯ ಈ ಹಿಂದಿನ ಭಟ್ಟಾರಕ ಶ್ರೀಗಳವರ ಪೂರ್ವಾಶ್ರಮದ ಸಹೋದರ ಎನ್‌. ರವಿರಾಜ ಶೆಟ್ಟಿ, ಕುಟುಂಬದವರು, ಮತ್ತಿತರರ ಜತೆ ಕಳೆದ ಕ್ಷಣಗಳನ್ನು ಉಪಸ್ಥಿತರಿದ್ದ ಶ್ರೀಪಾಲ್‌ ಎಸ್‌. ನೆನಪಿಸಿಕೊಂಡಿದ್ದಾರೆ.

ಕರ್ಮಯೋಗಿ ಶ್ರೀಗಳವರ ಅಗಲಿಕೆಯ ಸುದ್ದಿ ತಿಳಿಯುತ್ತಿದ್ದಂತೆ ಶಾಸಕ ಉಮಾನಾಥ ಕೋಟ್ಯಾನ್‌ ತಮ್ಮ ಸಂತಾಪ ವ್ಯಕ್ತ ಪಡಿಸಿದ್ದು, ಮೂಡುಬಿದಿರೆ ಪುರಸಭೆ ತನ್ನ ಸಭಾ ಕಲಾಪದಲ್ಲಿ ಮೌನಪ್ರಾರ್ಥನೆ, ಸಂತಾಪ ಸೂಚಿಸಿ ಗೌರವಿಸಿದೆ.

ಗಣ್ಯರ ನುಡಿ ಸಂತಾಪ

ಜೈನಕಾಶಿ(Jain kaashi) ಮೂಡುಬಿದಿರೆ ತೀರ್ಥ ಕ್ಷೇತ್ರದ ಬಗ್ಗೆ ತಮ್ಮ ದೀಕ್ಷಾ ಗುರುಗಳಾದ ಶ್ರವಣಬೆಳಗೊಳ(Shravanabelagola)ದ ಕರ್ಮಯೋಗಿ ಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀ(Shri Charukeerthi Bhattaraka swamiji)ಗಳವರಿಗೆ ವಿಶೇಷ ಆಸ್ಥೆ, ಕಾಳಜಿ ಇತ್ತು. ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ದ್ರವ್ಯ ಸಂಗ್ರಹ ಸಹಿತ ಅವರ ಕೊಡುಗೆ ಬಹಳಷ್ಟಿದೆ. ರಮಾರಾಣಿ ಶೋಧ ಸಂಸ್ಥಾನದಲ್ಲಿ ಪ್ರಾಚೀನ ತಾಳೆಗರಿ, ಸಾಹಿತ್ಯ ಭಂಡಾರದ ರಕ್ಷಣೆ, ಸಾಹಿತ್ಯ ಅನುವಾದ ಕಾರ್ಯ, ಸಿದ್ಧಾಂತ ದರ್ಶನ ಮಂದಿರ, ನಿರ್ಮಾಣದ ಬಗ್ಗೆ ಒಲವು ಮಾರ್ಗದರ್ಶನ ನೀಡುತ್ತಿದ್ದರು. ವಾರದ ಹಿಂದೆ ಗುರುಗಳ ಹೆಸರಲ್ಲಿ ಪೂಜೆ ಮಾಡಿದ್ದೆವು. ನಿನ್ನೆಯಷ್ಟೇ ಅವರ ಜತೆ ಮಾತನಾಡಿದ್ದೆವು ಎಂದು ಮೂಡುಬಿದಿರೆ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದ್ದಾರೆ. ಶ್ರವಣಬೆಳಗೊಳಕ್ಕೆ ಗುರುಗಳ ಅಂತಿಮ ದರ್ಶನ ಕಾರ್ಯಗಳಿಗಾಗಿ ಹೊರಟಿದ್ದ ಅವರು ಕನ್ನಡಪ್ರಭದ ಜತೆ ಗುರುಗಳ ಕುರಿತು ಅನುಭವ ಹಂಚಿಕೊಂಡರು.

ಮಠ, ಜಿನ ಮಂದಿರಗಳ ರಕ್ಷಣೆ, ವಿದ್ವಾಂಸರಿಗೆ ಪ್ರೋತ್ಸಾಹ, ಅಧ್ಯಯನ ಕುರಿತು ಇತ್ತೀಚಿಗಷ್ಟೇ ಮತ್ತೆ ಗುರುಗಳ ಮಾರ್ಗದರ್ಶನ ದೊರೆತಿತ್ತು. ವಿದೇಶಿ ಧಾರ್ಮಿಕ ಪ್ರವಾಸಗಳನ್ನು ಮೊಟಕುಗೊಳಿಸಿ ಅಧ್ಯಯನ ನಿರತರಾಗಿ ವಿದ್ವಾಂಸರ ಜತೆ ಧಾರ್ಮಿಕ ಸಾಹಿತ್ಯ ಸಂವಾದಗಳಿಗೆ ಒತ್ತು ನೀಡುವಂತೆ ಗುರುಗಳು ನೀಡಿದ್ದ ಸಲಹೆಯನ್ನು ಅನುಷ್ಠಾನಗೊಳಿಸುತ್ತಿದ್ದೇವೆ ಎಂದು ಭಟ್ಟಾರಕ ಶ್ರೀಗಳವರು ಹೇಳಿದರು. ಗುರುಗಳ ಅಗಲಿಕೆಯಿಂದ ವಿಶೇಷವಾಗಿ ಕರ್ನಾಟಕವೇ ಬಡವಾಗಿದೆ. ತಪಸ್ವಿ ಸಂತ, ಮೌನ ಸಾಧಕ ಅಪರೂಪದ ಶಕ್ತಿ, ಅವತಾರ ಪುರುಷನೋರ್ವನನ್ನು ಕಳಕೊಂಡಂತಾಗಿದೆ ಎಂದವರು ಹೇಳಿದರು.

ಶ್ರವಣಬೆಳಗೊಳದ ಕರ್ಮಯೋಗಿ ಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀಗಳವರು ರಾಜ್ಯದ ಎಲ್ಲ ಜೈನಮಠಗಳಿಗೆ ಪೀಠಾಧಿಪತಿಗಳನ್ನು ಒದಗಿಸಿಕೊಟ್ಟವರು. ಸಚ್ಚಾರಿತ್ರ್ಯದ ಶ್ರೇಷ್ಠ ಗುರುಗಳು. ಐದು ದಶಕಗಳಿಗೂ ಮಿಕ್ಕಿದ ಅವರ ಸನ್ಯಾಸ ಜೀವನದಲ್ಲಿ ಶ್ರವಣಬೆಳಗೊಳದಲ್ಲಿ ನಾಲ್ಕು ಮಹಾಮಸ್ತಕಾಭಿಷೇಕಗಳನ್ನು ವ್ಯವಸ್ಥಿತವಾಗಿ ನಡೆಸಿ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದರು. ಕಳೆದ ಮಸ್ತಕಾಭಿಷೇಕ ಸಂದರ್ಭದಲ್ಲಿ ರಾಜ್ಯ ಸರ್ಕಾರದಿಂದ ಉತ್ಸವದ ಪದಾಧಿಕಾರಿಯಾಗಿ ಗುರುಗಳ ಕಾರ್ಯವೈಖರಿ, ಮಾರ್ಗದರ್ಶನವನ್ನು ಪಡೆಯುವ ಸೌಭಾಗ್ಯ ತನ್ನದಾಗಿತ್ತು ಎಂದು ಮಾಜಿ ಸಚಿವ ಕೆ. ಅಭಯಚಂದ್ರ ಜೈನ್‌ ಹೇಳಿದ್ದಾರೆ.

ಮೂಡುಬಿದಿರೆ ಸೇರಿದಂತೆ ಬಹುತೇಕ ನಾಡಿನ ಎಲ್ಲ ಜೈನ ಕ್ಷೇತ್ರಗಳ ಭಟ್ಟಾರಕರ ದೀಕ್ಷಾ ಗುರುಗಳಾಗಿರುವ ಶ್ರವಣಬೆಳಗೊಳದ ಕರ್ಮಯೋಗಿ ಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀಗಳವರು ಪುಣ್ಯ ತುಂಬಿದ ಕಲಶದಂತೆ. ಜಿನ ಭಕ್ತಿಯ ವೈಭವದಲ್ಲೇ ಖುಷಿ ಕಂಡವರು. ನಾಲ್ಕು ಮಹಾಮಸ್ತಕಾಭಿಷೇಕವನ್ನು ಬೆಳಗೊಳದಲ್ಲಿ ಅದ್ಧೂರಿಯಾಗಿ ಅರ್ಥಪೂರ್ಣವಾಗಿ ನಡೆಸಿದ ಭಾಗ್ಯವಂತರು ಎಂದು ಪಟ್ನಶೆಟ್ಟಿಸುಧೇಶ್‌ ಕುಮಾರ್‌ ನುಡಿನಮನ ಸಲ್ಲಿಸಿದ್ದಾರೆ.

ದಕ್ಷಿಣ ಭಾರತದಲ್ಲೂ ಜೈನ ಧರ್ಮದ ಮಹತ್ವ ಎತ್ತಿ ಹಿಡಿದು ಜಗತ್ತಿಗೇ ಸಂದೇಶ ನೀಡಿದ ಕರ್ಮಯೋಗಿ ಶ್ರೀಗಳವರು ಸಹಸ್ರಾಬ್ಧಿ ಮಹಾಮಸ್ತಕಾಭಿಷೇಕವನ್ನು ಅವಿಸ್ಮರಣೀಯವನ್ನಾಗಿಸಿದವರು. ಶ್ರವಣಬೆಳಗೊಳದ ಜತೆಗೆ ಧರ್ಮವನ್ನು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದವರು ಎಂದು ಸಮಾಜದ ಪ್ರಮುಖರಾದ ಕೆ.ಕೃಷ್ಣರಾಜ ಹೆಗ್ಡೆ ನುಡಿನಮನ ಸಲ್ಲಿಸಿದ್ದಾರೆ.

ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಎಲ್ಲ ಸಮುದಾಯವನ್ನು ವಿಶ್ವಾಸಕ್ಕೆ ತೆಗೆದುಕೊಂಡು ದೇಶ, ಸಮಾಜಕ್ಕೆ ಶಾಂತಿಯ ಪ್ರಭಾವ ಪಸರಿಸಿದವರು ಎಂದು ಕೆ.ಪಿ.ಜಗದೀಶ ಅಧಿಕಾರಿ ಹೇಳಿದ್ದಾರೆ.

ತನ್ನ ಸಾತ್ವಿಕ ಸ್ವಭಾವ, ಆತ್ಮೀಯತೆ, ದೊಡ್ಡ ಪೀಠದಲ್ಲಿದ್ದರೂ ಸರಳತೆ, ಸಮತೋಲನದ ಭಾವದಿಂದ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದ ಗುರುಗಳ ಸೂಕ್ಷ್ಮ ಚಿಂತನೆ, ಸಭೆ ಸಮಾರಂಭಗಳ ಅನುಷ್ಠಾನದಲ್ಲಿಯೂ ಅವರಿಂದ ಕಲಿಯುವ ಅವಕಾಶಗಳು ವೇಣೂರು ಮಸ್ತಕಾಭಿಷೇಕ, ಮೂಡುಬಿದಿರೆ ಶ್ರೀಗಳವರ ಪಟ್ಟಾಭಿಷೇಕ ಹೀಗೆ ಹಲವು ಸಂದರ್ಭದಲ್ಲಿ ದೊರೆತಿದ್ದವು ಎಂದು ವಿಶ್ರಾಂತ ಶಿಕ್ಷಕ ಅಂಡಾರು ಗುಣಪಾಲ ಹೆಗ್ಡೆ ನೆನಪಸಿಕೊಂಡಿದ್ದಾರೆ.

ಶ್ರವಣಬೆಳಗೊಳದ ಕರ್ಮಯೋಗಿ ಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀಗಳವರು ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಕ್ಷೇತ್ರಕ್ಕೆ ವಿಶೇಷವಾಗಿ ಜೈನ ಸಮಾಜಕ್ಕೆ ಅನನ್ಯ ಕೊಡುಗೆ ನೀಡಿ ರಾಷ್ಟ್ರಮಟ್ಟದಲ್ಲಿ ಹೆಸರಾದವರು. ಅವರ ಅಗಲಿಕೆ ನಿಜಕ್ಕೂ ತುಂಬಲಾಗದ ನಷ್ಟಎಂದು ಹಿರಿಯ ನ್ಯಾಯವಾದಿ, ಎಂ.ಸಿ.ಎಸ್‌.ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಜೈನ ಸಮಾಜದ ಪ್ರಮುಖ ಎಂ.ಬಾಹುಬಲಿ ಪ್ರಸಾದ್‌ ಹೇಳಿದ್ದಾರೆ.

ಕರ್ನಾಟಕದ ಏಳು ಅದ್ಭುತಗಳ ಪಟ್ಟಿಯಲ್ಲಿ ಶ್ರವಣಬೆಳಗೊಳದ ಗೊಮ್ಮಟೇಶ್ವರ...

ಜೈನ ಸಮಾಜದ ಸೌಮ್ಯ ಸ್ವಭಾವದ ಅಜಾತ ಶತ್ರು, ಅವರ ಅಗಲಿಕೆ ಜೈನ ಸಮಾಜಕ್ಕೆ ನಿಜವಾದ ನಷ್ಟಎಂದು ಕಲಾವಿದ, ಪ್ರಾಧ್ಯಾಪಕ ಡಾ. ಪ್ರಭಾತ್‌ ಕುಮಾರ್‌ ಹೇಳಿದ್ದಾರೆ.

ಶ್ರವಣಬೆಳಗೊಳದ ಕರ್ಮಯೋಗಿ ಶ್ರೀ ಚಾರುಕೀರ್ತಿ ಭಟ್ಟಾರಕ ಶ್ರೀಗಳವರು ಜೈನ ಸಮಾಜಕ್ಕೆ ಗುರುವಾಗಿ, ಗುರುಪೀಠಗಳಿಗೆ ಶಿಷ್ಯರನ್ನೂ ರೂಪಿಸಿ, ಪ್ರಾಕೃತವನ್ನು ಪೋಷಿಸಿ, ಅಮೂಲ್ಯ ಗ್ರಂಥಗಳ ಸಂರಕ್ಷಣೆ, ಅನುವಾದ ಕಾರ್ಯಗಳ ಮೂಲಕ ಆಧಾರ ಸ್ತಂಭವಾಗಿದ್ದರು ಎಂದು ಬಸದಿಗಳ ಮೊಕ್ತೇಸರ ಆನಡ್ಕ ದಿನೇಶ್‌ ಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಗುರುಪೀಠಗಳ ಗುರುಗಳ ಗುರುವಾಗಿ ಶ್ರವಣ ಬೆಳಗೊಳದಲ್ಲೂ ನಿರಂತರ ಮುನಿಸಂಘಗಳಿಗೆ ಯಾವುದೇ ಕೊರತೆಯಾಗದಂತೆ ದೇವರ ಪೂಜೆಯ ರೀತಿಯಲ್ಲಿ ಆ ಕಾರ್ಯವನ್ನು ಶ್ರದ್ಧೆ ಮತ್ತು ಅಚ್ಚುಕಟ್ಟುತನದಿಂದ ಕೈಗೊಳ್ಳುತ್ತಾ ಗುರುಗಳು ಸಮಾಜಕ್ಕೆ ಮಾದರಿಯಾಗಿದ್ದರು. ಎಂದು ಚೌಟರ ಅರಮನೆಯ ಕುಲದೀಪ್‌ ಎಂ. ಹೇಳಿದರು.

Follow Us:
Download App:
  • android
  • ios