ಬೆಂಗಳೂರು [ಆ.23]:  ಉತ್ತರ ಕರ್ನಾಟಕ ಭಾಗದ ನೆರೆ ಸಂತ್ರಸ್ತರಿಗೆ ನೆರವಾಗಲು ಮುಂದಾಗಿರುವ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಕೈದಿಗಳು ನಾಲ್ಕು ವಾರ ಮಾಂಸಾಹಾರ ತ್ಯಜಿಸಿ, ಆದರಿಂದ ಉಳಿಕೆಯಾಗುವ ಹಣವನ್ನು ನೆರೆ ಸಂತ್ರಸ್ತರ ನಿಧಿಗೆ ನೀಡಲು ತೀರ್ಮಾನಿಸಿದ್ದಾರೆ.

ಕೇಂದ್ರ ಕಾರಾಗೃಹದಲ್ಲಿ ಒಟ್ಟು ಶಿಕ್ಷೆಗೆ ಒಳಗಾದ, ವಿಚಾರಣಾಧೀನ ಮತ್ತು ಮಹಿಳೆಯರು ಸೇರಿ 5035 ಕೈದಿಗಳಿದ್ದಾರೆ. ನಾಲ್ಕು ವಾರಗಳ ಮೂಳೆ ರಹಿತ ಕುರಿ ಮಾಂಸ, ಕೋಳಿ ಮಾಂಸಕ್ಕೆ ಒಟ್ಟು 10.47 ಲಕ್ಷ ರು. ತಗಲುತ್ತದೆ. ಈ ಸಂಬಂಧ, ಕಾರಾಗೃಹದ ಮುಖ್ಯ ಅಧೀಕ್ಷಕರ ಮೂಲಕ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಕೈದಿಗಳು ಪತ್ರ ಬರೆದಿದ್ದಾರೆ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಉತ್ತರ ಕರ್ನಾಟಕ ಭಾಗದಲ್ಲಿ ಉಂಟಾಗಿರುವ ಜಲ ಪ್ರಳಯವನ್ನು ಮಾಧ್ಯಮಗಳಲ್ಲಿ ಕಂಡು ಮನಸ್ಸಿಗೆ ತೀವ್ರ ನೋವಾಗಿದೆ. ಮನೆ ಕಳೆದುಕೊಂಡು ನಿರಾಶ್ರಿರಾದವರಿಗೆ ನಮ್ಮಿಂದ ಕೈಲಾದಷ್ಟುಸಹಾಯ ಮಾಡಬೇಕೆಂದು ಯೋಚಿಸಿದೆವು. ಈ ಕಾರಣಕ್ಕೆ ನಾವೆಲ್ಲರೂ ನಾಲ್ಕು ವಾರ ಮಾಂಸಾಹಾರ ತ್ಯಜಿಸಲು ಒಮ್ಮತದ ತೀರ್ಮಾನಕ್ಕೆ ಬಂದಿದ್ದೇವೆ. ಅದಕ್ಕೆ ತಗಲುವ ವೆಚ್ಚವನ್ನು ನೆರೆ ಪರಿಹಾರ ನಿಧಿಗೆ ಪರಿಹಾರವಾಗಿ ನೀಡಲು ತೀರ್ಮಾನಿಸಿದ್ದೇವೆ ಎಂದು ಪತ್ರದಲ್ಲಿ ಹೇಳಿದ್ದಾರೆ.